Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ಯೋಷೀಯನು ಸರ್ವೇಶ್ವರನಿಗೆ ಜೆರುಸಲೇಮಿನಲ್ಲಿ ಪಾಸ್ಕಹಬ್ಬವನ್ನು ಆಚರಿಸುವಂತೆ ಮಾಡಿದನು. ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಾಸ್ಕದ ಕುರಿಮರಿಗಳನ್ನು ವಧಿಸಿದರು.
2 : ಯೋಷೀಯನು ಯಾಜಕರನ್ನು ಅವರವರ ಕೆಲಸಕ್ಕೆ ನೇಮಿಸಿ, ಸರ್ವೇಶ್ವರನ ಸೇವೆ ಮಾಡುವಂತೆ ಪ್ರೋತ್ಸಾಹಿಸಿದನು.
3 : ಎಲ್ಲ ಇಸ್ರಯೇಲರಿಗೆ ಉಪದೇಶಿಸತಕ್ಕವರೂ ಸರ್ವೇಶ್ವರನಿಗೆ ಪ್ರತಿಷ್ಠರೂ ಆದ ಲೇವಿಯರಿಗೆ, “ದಾವೀದನ ಮಗನೂ ಇಸ್ರಯೇಲ್ ಅರಸನೂ ಆದ ಸೊಲೊಮೋನನು ಕಟ್ಟಿಸಿದ ಮಹಾದೇವಾಲಯದಲ್ಲಿ ಪವಿತ್ರ ಮಂಜೂಷವನ್ನು ಇಟ್ಟುಬಿಡಿ; ಅದನ್ನು ಹೆಗಲ ಮೇಲೆ ಹೊತ್ತುಕೊಳ್ಳುವುದು ಅವಶ್ಯವಿಲ್ಲ; ಇನ್ನು ಮುಂದೆ ನಿಮ್ಮ ದೇವರಾದ ಸರ್ವೇಶ್ವರನಿಗೂ ಅವರ ಪ್ರಜೆಗಳಾದ ಇಸ್ರಯೇಲರಿಗೂ ಸೇವೆಸಲ್ಲಿಸಿರಿ.
4 : ಇಸ್ರಯೇಲರ ಅರಸ ದಾವೀದನೂ ಅವನ ಮಗ ಸೊಲೊಮೋನನೂ ಲಿಖಿತವಾಗಿ ನೇಮಿಸಿದಂತೆ ನಿಮ್ಮ ನಿಮ್ಮ ಗೋತ್ರವರ್ಗಗಳ ಪ್ರಕಾರ ಸಿದ್ಧರಾಗಿದ್ದು,
5 : ನಿಮ್ಮ ಸಹೋದರರಾದ ಇಸ್ರಯೇಲರ ಒಂದೊಂದು ಗೋತ್ರ ಶಾಖೆಯ ಪರವಾಗಿ, ನಿಮ್ಮಲ್ಲಿ ಒಂದೊಂದು ಗುಂಪಿನವರು ಪವಿತ್ರ ಸ್ಥಾನದಲ್ಲಿ ನಿಂತು ಪಾಸ್ಕದ ಕುರಿಮರಿಯನ್ನು ವಧಿಸಲಿ.
6 : ಮೋಶೆಯಿಂದ ಪ್ರಕಟವಾದ ಸರ್ವೇಶ್ವರನ ವಿಧಿಗನುಸಾರ ನಿಮ್ಮ ಸಹೋದರರು ಪಾಸ್ಕ ಭೋಜನ ಮಾಡುವಂತೆ ನೀವು ನಿಮ್ಮನ್ನು ಶುದ್ಧಿಪಡಿಸಿಕೊಂಡು ಅವರಿಗಾಗಿ ಎಲ್ಲವನ್ನೂ ಸಿದ್ಧಮಾಡಿರಿ,” ಎಂದು ಆಜ್ಞಾಪಿಸಿದನು.
7 : ಯೋಷೀಯನು, ಹಬ್ಬಕ್ಕೆ ಬಂದ ಜನರಿಗೆ ಪಾಸ್ಕ ಬಲಿಗಾಗಿ ಆಸ್ಥಾನದ ಸೊತ್ತಿನಿಂದ ಮೂವತ್ತು ಸಾವಿರ ಆಡುಮರಿಗಳನ್ನೂ ಕುರಿಮರಿಗಳನ್ನೂ ಮೂರು ಸಾವಿರ ಹೋರಿಗಳನ್ನೂ ದಾನ ಮಾಡಿದನು.
8 : ಅವನ ಪದಾಧಿಕಾರಿಗಳು ಕೂಡ ಜನರಿಗೂ ಯಾಜಕರಿಗೂ ಲೇವಿಯರಿಗೂ ಬಲಿ ಪಶುಗಳನ್ನು ಸಂತೋಷವಾಗಿ ದಾನಕೊಟ್ಟರು. ದೇವಾಲಯದ ಪ್ರಧಾನರಾದ ಹಿಲ್ಕೀಯ, ಜೆಕರ್ಯ, ಯೆಹೀಯೇಲ್ ಎಂಬುವರು ಯಾಜಕರಿಗೆ ಎರಡು ಸಾವಿರದ ಆರು ನೂರು ಪಾಸ್ಕದ ಕುರಿಮರಿಗಳನ್ನೂ ಮುನ್ನೂರು ಹೋರಿಗಳನ್ನೂ ಕೊಟ್ಟರು.
9 : ಲೇವಿಯರಲ್ಲಿ ಮುಖ್ಯಸ್ಥರಾದ ಕೋನನ್ಯ, ಸೆಮಾಯ, ನೆತನೇಲ್ ಎಂಬ ಅಣ್ಣತಮ್ಮಂದಿರೂ ಹಷಲ್ಯ, ಯೆಗೀಯೇಲ್, ಯೋಜಾಬಾದ್ ಎಂಬವರೂ ಲೇವಿಯರಿಗೆ ಐದು ಸಾವಿರ ಪಾಸ್ಕದ ಕುರಿಮರಿಗಳನ್ನೂ ಐನೂರು ಹೋರಿಗಳನ್ನೂ ದಾನಮಾಡಿದರು.
10 : ಸೇವೆಯ ಸಂಬಂಧವಾದುದ್ದೆಲ್ಲವನ್ನೂ ಏರ್ಪಡಿಸಿದ ನಂತರ ಯಾಜಕರು ತಮ್ಮ ತಮ್ಮ ಸ್ಥಳಗಳಲ್ಲಿಯೂ ಲೇವಿಯರು ಅರಸನ ಅಪ್ಪಣೆಯಂತೆ ವರ್ಗವರ್ಗಗಳಾಗಿಯೂ ನಿಂತರು;
11 : ಲೇವಿಯರು ಪಾಸ್ಕದ ಪಶುಗಳನ್ನು ವಧಿಸಿದರು. ಯಾಜಕರು ಇವರ ಕೈಯಿಂದ ರಕ್ತವನ್ನು ತೆಗೆದು ಕೊಂಡು ಪ್ರೋಕ್ಷಿಸಿದರು.
12 : ಲೇವಿಯರು, ಚರ್ಮ ಸುಲಿದು ಹೋಮಕ್ಕಾಗಿ ತೆಗೆದಿಟ್ಟಿದ್ದನ್ನು ಪ್ರತ್ಯೇಕಿಸಿ, ಜನರಿಗೆ ಆಯಾ ಗೋತ್ರಶಾಖೆಗಳಿಗನುಸಾರ, ಕೊಟ್ಟರು. ಇವರು ಅದನ್ನು ಮೋಶೆಯ ಧರ್ಮಶಾಸ್ತ್ರ ವಿಧಿಯ ಮೇರೆಗೆ ಸರ್ವೇಶ್ವರನಿಗೆ ಸಮರ್ಪಿಸಬೇಕಾಯಿತು. ಹೋರಿಗಳ ವಿಷಯದಲ್ಲೂ ಅದೇ ಕ್ರಮವನ್ನು ಅನುಸರಿಸಿದರು.
13 : ಆಮೇಲೆ ಲೇವಿಯರು ಪಾಸ್ಕದ ಮಾಂಸವನ್ನು ನಿಯಮದ ಪ್ರಕಾರ ಬೆಂಕಿಯಲ್ಲಿ ಸುಟ್ಟರು; ದೇವರಿಗೆ ಕಾಣಿಕೆಯಾಗಿ ಸಮರ್ಪಿತವಾದ ಪಶುಗಳ ಮಾಂಸವನ್ನು ಕೊಪ್ಪರಿಗೆ, ಬಾನೆ, ಹಂಡೆಗಳಲ್ಲಿ ಬೇಯಿಸಿ, ಬೇಗನೆ ತಂದು ಜನರಿಗೆ ಬಡಿಸಿದರು.
14 : ತರುವಾಯ ತಮಗೆ ಹಾಗು ಯಾಜಕರಿಗೆ ಭೋಜನವನ್ನು ಸಿದ್ಧಮಾಡಿದರು. ಆರೋನನ ಮಕ್ಕಳಾದ ಯಾಜಕರು ರಾತ್ರಿಯವರೆಗೂ ದಹನಬಲಿಗಳನ್ನೂ ಕೊಬ್ಬನ್ನೂ ಸಮರ್ಪಿಸುತ್ತಾ ಇದ್ದುದರಿಂದ ಲೇವಿಯರು ತಮಗೆ ಹೇಗೋ ಹಾಗೆ ಆರೋನನ ಮಕ್ಕಳಾದ ಯಾಜಕರಿಗೂ ಭೋಜನವನ್ನು ಸಿದ್ಧಮಾಡಿದರು.
15 : ಆಸಾಫ್ಯರಾದ ಗಾಯಕರು, ಅರಸನಾದ ದಾವೀದನ ಮತ್ತು ಆಸಾಫ್, ಹೇಮಾನ್ ಹಾಗು ಅರಸನ ದರ್ಶಿಯಾದ ಯೆದುತೂನ್ ಇವರ ಆಜ್ಞಾನುಸಾರ ತಮ್ಮ ಸ್ಥಳದಲ್ಲಿ ನಿಂತಿದ್ದರು; ದ್ವಾರಪಾಲಕರು ಆಯಾ ಬಾಗಿಲುಗಳನ್ನು ಕಾಯುತ್ತಿದ್ದರು. ಅವರ ಸಹೋದರರಾದ ಲೇವಿಯರು ಅವರ ಭೋಜನಕ್ಕೆ ಸಿದ್ಧಮಾಡುತ್ತಿದ್ದುದರಿಂದ ಅವರು ತಮ್ಮ ತಮ್ಮ ಸೇವೆಯನ್ನು ಬಿಡುವುದಕ್ಕೆ ಕಾರಣ ಇರಲಿಲ್ಲ.
16 : ಈ ಪ್ರಕಾರ ಅರಸ ಯೋಷೀಯನ ಅಪ್ಪಣೆಯಂತೆ ಪಾಸ್ಕವನ್ನು ಆಚರಿಸುವುದಕ್ಕೂ ಸರ್ವೇಶ್ವರನ ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸುವುದಕ್ಕೂ ಸರ್ವೇಶ್ವರನ ಸೇವೆಗೆ ಸಂಬಂಧವಾದುದೆಲ್ಲವೂ ಆ ದಿವಸವೇ ಸಿದ್ಧವಾಯಿತು.
17 : ಕೂಡಿಬಂದಿದ್ದ ಇಸ್ರಯೇಲರು ಆ ಸಂದರ್ಭದಲ್ಲಿ ಪಾಸ್ಕಹಬ್ಬವನ್ನು ಹಾಗು ಹುಳಿಯಿಲ್ಲದ ರೊಟ್ಟಿಗಳ ಜಾತ್ರೆಯನ್ನು ಏಳು ದಿನಗಳವರೆಗೆ ಆಚರಿಸಿದರು.
18 : ಇಂಥಾ ಪಾಸ್ಕಹಬ್ಬ ಪ್ರವಾದಿ ಸಮುವೇಲನ ದಿವಸಗಳಿಂದ ಇಸ್ರಯೇಲರಲ್ಲಿ ನಡೆದಿರಲಿಲ್ಲ. ಯೋಷೀಯನು, ಯಾಜಕರು, ಲೇವಿಯರು, ಕೂಡಿಬಂದಿದ್ದ ಇಸ್ರಯೇಲರು, ಯೆಹೂದ್ಯರು, ಹಾಗು ಜೆರುಸಲೇಮಿನವರು ಈ ಪಾಸ್ಕಹಬ್ಬವನ್ನು ಆಚರಿಸಿದಂತೆ ಇಸ್ರಯೇಲ್ ಅರಸರಲ್ಲಿ ಒಬ್ಬನೂ ಆಚರಿಸಿರಲಿಲ್ಲ.
19 : ಈ ಪಾಸ್ಕಹಬ್ಬ ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ನಡೆಯಿತು.
20 : ಯೋಷೀಯನು ಮಹಾದೇವಾಲಯದ ವಿಷಯದಲ್ಲಿ ಈ ಎಲ್ಲ ವ್ಯವಸ್ಥೆಯನ್ನು ಮಾಡಿದ ನಂತರ, ಈಜಿಪ್ಟಿನ ರಾಜ ನೆಕೋ ಎಂಬುವನು ಯುದ್ಧಮಾಡುವುದಕ್ಕಾಗಿ ಯೂಫ್ರೆಟಿಸ್ ನದಿಯ ತೀರದಲ್ಲಿದ್ದ ಕರ್ಕೆಮೀಷಿಗೆ ಬಂದನು.
21 : ಯೋಷೀಯನು ಅವನಿಗೆ ವಿರುದ್ಧ ಹೊರಟನು. ನೆಕೋವನು ಅವನ ಬಳಿಗೆ ದೂತರನ್ನು ಕಳುಹಿಸಿ, “ಜುದೇಯದ ಅರಸನೇ, ನನ್ನ ಗೊಡವೆ ನಿನಗೇಕೆ? ನಾನು ಈ ಸಾರಿ ಯುದ್ಧಕ್ಕೆ ಹೊರಟಿದ್ದು ನಿನಗೆ ವಿರೋಧವಾಗಿ ಅಲ್ಲ, ನನ್ನ ಶತ್ರುವಂಶಕ್ಕೆ ವಿರೋಧವಾಗಿಯೇ, ನಾನು ಮುನ್ನುಗ್ಗಬೇಕೆಂದು ದೇವರ ಅಪ್ಪಣೆ ಆಗಿದೆ. ನನ್ನೊಂದಿಗಿರುವ ದೇವರಿಗೆ ವಿರೋಧವಾಗಿ ನೀನು ಕೈಯೆತ್ತುವುದನ್ನು ಬಿಡು. ಇಲ್ಲವಾದರೆ, ಅವರು ನಿನ್ನನ್ನು ನಾಶಮಾಡುವರು,” ಎಂದು ಹೇಳಿಸಿದನು.
22 : ಆದರೆ ಯೋಷೀಯನು ಅವನನ್ನು ಬಿಟ್ಟು ಹಿಂದಿರುಗಲಿಲ್ಲ. ದೇವೋಕ್ತಿಯಾಗಿದ್ದ ನೆಕೋವಿನ ಮಾತಿಗೆ ಕಿವಿಗೊಡನೆ, ವೇಷಹಾಕಿಕೊಂಡು ಅವನೊಡನೆ ಕಾದಾಡುವುದಕ್ಕೆ ಮೆಗಿದ್ದೋ ಬಯಲಿಗೆ ಹೋದನು.
23 : ಅಲ್ಲಿ ಬಿಲ್ಲುಗಾರರು ಅರಸ ಯೋಷೀಯನಿಗೆ ಬಾಣವನ್ನೆಸೆದಾಗ ಅವನು ತನ್ನ ಸೇವಕರಿಗೆ, “ನನಗೆ ದೊಡ್ಡ ಗಾಯವಾಯಿತು. ನನ್ನನ್ನು ಆಚೆಗೆ ತೆಗೆದುಕೊಂಡು ಹೋಗಿ,” ಎಂದನು.
24 : ಸೇವಕರು ಅವನನ್ನು ಯುದ್ಧ ರಥದಿಂದಿಳಿಸಿ, ಅವನ ಎರಡನೆಯ ರಥದಲ್ಲಿ ಮಲಗಿಸಿ, ಜೆರುಸಲೇಮಿಗೆ ತೆಗೆದುಕೊಂಡು ಹೋದರು. ಅಲ್ಲಿ ಅವನು ಸತ್ತನು. ಅವನ ಶವವನ್ನು ಅವನ ಪೂರ್ವಿಕರ ಸ್ಮಶಾನದಲ್ಲಿ ಸಮಾಧಿ ಮಾಡಿದರು. ಎಲ್ಲ ಯೆಹೂದ್ಯರೂ ಜೆರುಸಲೇಮಿನವರೂ ಯೋಷೀಯನ ಮರಣಕ್ಕಾಗಿ ಶೋಕಿಸಿದರು.
25 : ಯೆರೆಮೀಯನು ಯೋಷೀಯನನ್ನು ಕುರಿತು ಶೋಕಗೀತೆಯನ್ನು ರಚಿಸಿದನು. ಎಲ್ಲ ಗಾಯಕರೂ ಗಾಯಕಿಯರೂ ಅವನನ್ನು ಇಂದಿನವರೆಗು ತಮ್ಮ ಶೋಕಗೀತೆಗಳಲ್ಲಿ ವರ್ಣಿಸುತ್ತಿರುತ್ತಾರೆ. ಆ ಗೀತೆಗಳನ್ನು ಹಾಡುವುದು ಇಸ್ರಯೇಲರಲ್ಲಿ ಒಂದು ಪದ್ಧತಿಯಾಗಿದೆ. ಅವು ಶೋಕಗೀತೆ ಗ್ರಂಥದಲ್ಲಿ ಲಿಖಿತವಾಗಿವೆ.
26 : ಯೋಷೀಯನ ಉಳಿದ ಚರಿತ್ರೆ, ಸರ್ವೇಶ್ವರನ ಧರ್ಮಶಾಸ್ತ್ರ ಅನುಸಾರವಾಗಿ ಅವನು ಸಾಧಿಸಿದ ಧಾರ್ಮಿಕ ಸುಧಾರಣೆ ಹಾಗು
27 : ಅವನ ಪೂರ್ವೋತ್ತರ ವೃತ್ತಾಂತ ಇವು, ಇಸ್ರಯೇಲರ ಮತ್ತು ಯೆಹೂದ್ಯರ ರಾಜಗ್ರಂಥದಲ್ಲಿ ದಾಖಲಾಗಿವೆ.

· © 2017 kannadacatholicbible.org Privacy Policy