Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ಮನಸ್ಸೆ ಅರಸನಾದಾಗ ಹನ್ನೆರಡು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಐವತ್ತೈದು ವರ್ಷ ಆಳಿದನು.
2 : ಸರ್ವೇಶ್ವರ ಇಸ್ರಯೇಲರ ನಾಡಿನಿಂದ ಹೊರಡಿಸಿ ಬಿಟ್ಟ ಅನ್ಯಜನಾಂಗಗಳ ಅಸಹ್ಯಕಾರ್ಯಗಳನ್ನು ಅವನು ಅನುಸರಿಸಿ ಆ ಸರ್ವೇಶ್ವರನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.
3 : ತನ್ನ ತಂದೆ ಹಿಜ್ಕೀಯನು ತೆಗೆದುಹಾಕಿದ್ದ ಪೂಜಾಸ್ಥಳಗಳನ್ನು ಮತ್ತೆ ಸ್ಥಾಪಿಸಿದನು. ಬಾಳ್‍ದೇವತೆಗಳಿಗಾಗಿ ಬಲಿಪೀಠಗಳನ್ನು ಕಟ್ಟಿಸಿದನು; ಆಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿ, ನಕ್ಷತ್ರ ಮಂಡಲಕ್ಕೆ ಕೈಮುಗಿದು ಆರಾಧಿಸಿದನು.
4 : ಸರ್ವೇಶ್ವರ ಜೆರುಸಲೇಮಿನಲ್ಲಿ ತನ್ನ ಹೆಸರನ್ನು ಸದಾಕಾಲ ಸ್ಥಾಪಿಸುವುದಕ್ಕಾಗಿ
5 : ಆರಿಸಿಕೊಂಡ ಆಲಯದ ಎರಡು ಪ್ರಾಕಾರಗಳಲ್ಲಿಯೂ ಸರ್ವ ನಕ್ಷತ್ರ ಮಂಡಲಕ್ಕಾಗಿ ಬಲಿಪೀಠಗಳನ್ನು ಕಟ್ಟಿಸಿದನು.
6 : ಇದಲ್ಲದೆ, ಅವನು ತನ್ನ ಮಕ್ಕಳನ್ನು ಬೆನ್‍ಹಿನ್ನೋಮ್ ಕಣಿವೆಯಲ್ಲಿ ಬಲಿಯಗ್ನಿ ಪರೀಕ್ಷೆಗೆ ಗುರಿ ಪಡಿಸಿದನು; ಕಣಿ ಹೇಳಿಸುವುದು, ಶಕುನ ನೋಡಿಸುವುದು, ತಂತ್ರ ಮಂತ್ರಗಳನ್ನು ಮಾಡಿಸುವುದು, ಭೂತಪ್ರೇತಗಳನ್ನು ವಿಚಾರಿಸುವವರನ್ನು ಸಂಪರ್ಕಿಸುವುದು ಇವೇ ಮೊದಲಾದ ದುಷ್ಕøತ್ಯಗಳಿಂದ ಸರ್ವೇಶ್ವರನಿಗೆ ಕೋಪ ಬರಿಸಿದನು.
7 : ತಾನು ಮಾಡಿಸಿದ್ದ ವಿಗ್ರಹಸ್ತಂಭವನ್ನು ದೇವಾಲಯದಲ್ಲಿಡಿಸಿದನು; ಸರ್ವೇಶ್ವರ ಆ ಆಲಯದ ವಿಷಯದಲ್ಲಿ ದಾವೀದನಿಗೂ ಅವನ ಮಗ ಸೊಲೊಮೋನನಿಗೂ, “ಇಸ್ರಯೇಲರು, ತಮಗೆ ಮೋಶೆಯ ಮುಖಾಂತರ ಕೊಡಲಾದ, ನನ್ನ ಎಲ್ಲ ಧರ್ಮಶಾಸ್ತ್ರ ವಿಧಿನ್ಯಾಯಗಳನ್ನು ಅನುಸರಿಸಿ ನಡೆಯುವುದಾದರೆ, ನನ್ನ ನಾಮ ಮಹತ್ತು ಈ ದೇವಾಲಯದಲ್ಲಿ, ಇಸ್ರಯೇಲರ ಎಲ್ಲ ಊರುಗಳಲ್ಲಿ ಹಾಗು ನನಗೆ ಪ್ರಿಯವಾದ ಜೆರುಸಲೇಮಿನಲ್ಲಿ ಸದಾಕಾಲ ಇರುವುದು;
8 : ಅದು ಮಾತ್ರವಲ್ಲ, ಇಸ್ರಯೇಲರು ಇನ್ನು ಮುಂದೆ ದೇಶಭ್ರಷ್ಟರಾಗಿರದೆ ತಮ್ಮ ಪಿತೃಗಳಿಗೆ ಕೊಡಲಾದ ನಾಡಿನಲ್ಲಿಯೇ ವಾಸವಾಗಿರುವಂತೆ ಮಾಡುವೆನು,” ಎಂದು ಹೇಳಿದ್ದರು.
9 : ಆದರೆ ಯೆಹೂದ್ಯರೂ ಜೆರುಸಲೇಮಿನವರೂ ಮನಸ್ಸೆಯಿಂದ ಪ್ರಚೋದಿತರಾಗಿ ಇಸ್ರಯೇಲರ ಮುಂದೆಯೇ ಸರ್ವೇಶ್ವರನಿಂದ ನಾಶಹೊಂದಿದ ಅನ್ಯಜನಾಂಗಗಳಿಗಿಂತಲೂ ದುಷ್ಟರಾದರು.
10 : ಸರ್ವೇಶ್ವರಸ್ವಾಮಿ ಮನಸ್ಸೆಯನ್ನೂ ಅವನ ಪ್ರಜೆಗಳನ್ನೂ ಎಚ್ಚರಿಸಿದರೂ ಅವರು ಲಕ್ಷಿಸಲಿಲ್ಲ.
11 : ಆದುದರಿಂದ ಅಸ್ಸೀರಿಯದ ಅರಸನ ಸೈನ್ಯಾಧಿಪತಿಗಳನ್ನು ಅವನ ಮೇಲೆ ಬರಮಾಡಿದರು. ಆ ಸೇನಾಧಿಪತಿಗಳು ಮನಸ್ಸೆಯನ್ನು ಹಿಡಿದು ಅವನನ್ನು ಬಂಧಿಸಿ, ಬೇಡಿಹಾಕಿ, ಬಾಬಿಲೋನಿಗೆ ಒಯ್ದರು.
12 : ಆದರೆ ಆ ಕಷ್ಟದಲ್ಲಿ ಮನಸ್ಸೆ ತನ್ನ ದೇವರಾದ ಸರ್ವೇಶ್ವರನ ಪ್ರಸನ್ನತೆಯನ್ನು ಬೇಡಿಕೊಂಡನು; ತನ್ನ ಪಿತೃಗಳ ದೇವರ ಮುಂದೆ ತನ್ನನ್ನೇ ಬಹಳವಾಗಿ ತಗ್ಗಿಸಿಕೊಂಡು ಅವರನ್ನು ಪ್ರಾರ್ಥಿಸಿದನು.
13 : ಅವರು ಆಲಿಸಿ, ಅವನಿಗೆ ಸದುತ್ತರವನ್ನು ದಯಪಾಲಿಸಿದರು. ಅವನನ್ನು ಮರಳಿ ಜೆರುಸಲೇಮಿಗೆ ಬರಮಾಡಿ ಅರಸುತನವನ್ನು ಕೊಟ್ಟರು. ಆಗ ಸರ್ವೇಶ್ವರ ಸ್ವಾಮಿಯೇ ದೇವರು ಎಂಬುದು ಅವನಿಗೆ ಮನದಟ್ಟಾಯಿತು.
14 : ಇದಾದ ಮೇಲೆ, ಅವನು ಗೀಹೋನ್ ಬುಗ್ಗೆಯ ದಕ್ಷಿಣದ ಕಡೆಯಿಂದ ಮೀನುಬಾಗಿಲಿನ ಮಾರ್ಗದವರೆಗಿರುವ ಕಣಿವೆಯಲ್ಲಿ, ಓಫೆಲ್ ಗುಡ್ಡದ ಸುತ್ತಲೂ ಇದ್ದ ದಾವೀದನಗರದ ಹೊರಗಿನ ಗೋಡೆಯನ್ನು ಇನ್ನೂ ಎತ್ತರವಾಗಿ ಕಟ್ಟಿಸಿದನು. ಜುದೇಯನಾಡಿನ ಕೋಟೆ ಕೊತ್ತಲುಗಳುಳ್ಳ ಎಲ್ಲ ಪಟ್ಟಣಗಳಲ್ಲಿ ಸೇನಾಪತಿಗಳನ್ನು ಇರಿಸಿದನು.
15 : ಅನ್ಯದೇವತಾ ಪ್ರತಿಮೆಗಳನ್ನು ಹಾಗು ತಾನು ಮಾಡಿಸಿದ್ದ ಸ್ತಂಭವನ್ನು ಸರ್ವೇಶ್ವರನ ಆಲಯದಿಂದ ತೆಗಿಸಿದನು. ಸರ್ವೇಶ್ವರನ ಮಂದಿರವಿರುವ ಗುಡ್ಡದಲ್ಲೂ ಜೆರುಸಲೇಮಿನಲ್ಲೂ ಕಟ್ಟಿಸಿದ್ದ ಎಲ್ಲ ಯಜ್ಞವೇದಿಗಳನ್ನು ಕೆಡವಿ, ಅವುಗಳನ್ನು ಪಟ್ಟಣದ ಹೊರಗೆ ಹಾಕಿಸಿದನು.
16 : ಸರ್ವೇಶ್ವರನ ಬಲಿಪೀಠವನ್ನು ಪುನಃ ಕಟ್ಟಿಸಿ, ಅದರ ಮೇಲೆ ಶಾಂತಿಸಮಾಧಾನ ಬಲಿಗಳನ್ನೂ ಕೃತಜ್ಞತಾಬಲಿಗಳನ್ನೂ ಅರ್ಪಿಸಿದನು. ಇಸ್ರಯೇಲ್ ದೇವರಾದ ಸರ್ವೇಶ್ವರನನ್ನೇ ಅವಲಂಬಿಸಬೇಕೆಂದು ಯೆಹೂದ್ಯರಿಗೆ ಆಜ್ಞಾಪಿಸಿದನು.
17 : ವರು ಈ ಪ್ರಕಾರ ದೇವರಾದ ಸರ್ವೇಶ್ವರಸ್ವಾಮಿಯೊಬ್ಬರಿಗೇ ಬಲಿಯನ್ನು ಅರ್ಪಿಸುವವರಾದರು. ಅವರು ಆ ಬಲಿಗಳನ್ನು ಇನ್ನೂ ಪೂಜಾಸ್ಥಳಗಳಲ್ಲಿಯೇ ಸಮರ್ಪಿಸುತ್ತಿದ್ದರು.
18 : ಮನಸ್ಸೆಯ ಉಳಿದ ಚರಿತ್ರೆ ಅವನು ತನ್ನ ದೇವರಿಗೆ ಮಾಡಿದ ಪ್ರಾರ್ಥನೆ, ಹಾಗು ದರ್ಶಿಗಳು ಇಸ್ರಯೇಲ್ ದೇವರಾದ ಸರ್ವೇಶ್ವರನ ಹೆಸರಿನಲ್ಲಿ ಅವನಿಗೆ ಹೇಳಿದ ಮಾತುಗಳು, ಇವು ಇಸ್ರಯೇಲ್ ರಾಜರ ಇತಿಹಾಸದಲ್ಲಿ ದಾಖಲಾಗಿ ಇವೆ.
19 : ಅವನು ದೇವರಿಗೆ ಮಾಡಿದ ಪ್ರಾರ್ಥನೆ, ಅದಕ್ಕೆ ದೊರೆತ ಸದುತ್ತರ ಹಾಗು ಅವನು ದೀನಮನಸ್ಕನಾಗುವುದಕ್ಕೆ ಮುಂಚೆ ಮಾಡಿದ ಅಪರಾಧ, ದ್ರೋಹಗಳು, ಹಾಗು ಅವನು ಅಲ್ಲಲ್ಲಿ ಪೂಜಾಸ್ಥಳಗಳನ್ನು ಏರ್ಪಡಿಸಿ, ಆಶೇರಸ್ತಂಭ ವಿಗ್ರಹ, ಇವುಗಳನ್ನು ನಿಲ್ಲಿಸಿದ್ದು, ಇವುಗಳು ದರ್ಶಿಗಳ ಚರಿತ್ರೆಯಲ್ಲಿ ಲಿಖಿತವಾಗಿವೆ.
20 : ಮನಸ್ಸೆ ಮೃತನಾಗಿ ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ಅರಮನೆಯ ನಿವೇಶನದಲ್ಲಿ ಸಮಾಧಿಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ಆಮೋನನು ಅರಸನಾದನು.
21 : ಆಮೋನನು ಅರಸನಾದಾಗ ಅವನಿಗೆ ಇಪ್ಪತ್ತೆರಡು ವರ್ಷ ವಯಸ್ಸು. ಅವನು ಜೆರುಸಲೇಮಿನಲ್ಲಿ ಎರಡು ವರ್ಷ ಆಳಿದನು.
22 : ತನ್ನ ತಂದೆ ಮನಸ್ಸೆಯ ಹಾಗೆಯೇ ಸರ್ವೇಶ್ವರನ ಚಿತ್ತಕ್ಕೆ ವಿರುದ್ಧವಾಗಿ ನಡೆದನು. ತನ್ನ ತಂದೆ ಮನಸ್ಸೆ ಮಾಡಿಸಿದ ಎಲ್ಲಾ ವಿಗ್ರಹಗಳಿಗೆ ಬಲಿ ಅರ್ಪಿಸಿ ಅವುಗಳನ್ನು ಪೂಜಿಸಿದನು.
23 : ಆಮೋನನ ತಂದೆ ಮನಸ್ಸೆ ಸರ್ವೇಶ್ವರನ ಮುಂದೆ ತನ್ನನ್ನೇ ತಗ್ಗಿಸಿಕೊಂಡಿದ್ದನು. ಆಮೋನನಾದರೋ ತನ್ನನ್ನೇ ತಗ್ಗಿಸಿಕೊಳ್ಳದೆ ಮಹಾಪರಾಧಿಯಾದನು.
24 : ಅವನ ಸೇವಕರು ಅವನಿಗೆ ವಿರುದ್ಧ ಒಳಸಂಚುಮಾಡಿ ಅವನನ್ನು ಅರಮನೆಯಲ್ಲಿಯೇ ಕೊಂದರು.
25 : ಆದರೆ ನಾಡಿನ ಜನರು ಅರಸ ಆಮೋನನಿಗೆ ವಿರುದ್ಧ ಒಳಸಂಚು ಮಾಡಿದವರನ್ನೆಲ್ಲಾ ಕೊಂದು ಹಾಕಿ, ಆಮೋನನಿಗೆ ಬದಲಾಗಿ ಅವನ ಮಗ ಯೋಷೀಯನನ್ನು ಅರಸನನ್ನಾಗಿ ಮಾಡಿದರು.

· © 2017 kannadacatholicbible.org Privacy Policy