Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ಈ ಧಾರ್ಮಿಕ ಸುಧಾರಣೆಗಳಾದ ನಂತರ ಅಸ್ಸೀರಿಯಾದ ಅರಸನಾದ ಸನ್ಹೇರೀಬನು ಯುದ್ಧಕ್ಕೆ ಹೊರಟು ಜುದೇಯಕ್ಕೆ ನುಗ್ಗಿದನು. ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಸ್ವಾಧೀನಮಾಡಿ ಕೊಳ್ಳಬೇಕೆಂದು ಮುತ್ತಿಗೆ ಹಾಕಿದನು.
2 : ನಾಡಿನೊಳಗೆ ನುಗ್ಗಿದ ಸನ್ಹೇರೀಬನು ಜೆರುಸಲೇಮಿನ ಮೇಲೂ ಯುದ್ಧಕ್ಕೆ ಬರಲು ನಿಶ್ಚಯಿಸಿದ್ದಾನೆಂದು ಹಿಜ್ಕೀಯನಿಗೆ ಗೊತ್ತಾಯಿತು.
3 : ಅವನು ಪಟ್ಟಣದ ಹೊರಗಿರುವ ಎಲ್ಲಾ ಬಾವಿಗಳನ್ನು ಮುಚ್ಚಿಸಬೇಕೆಂದು ಮನಸ್ಸುಮಾಡಿ ತನ್ನ ಪ್ರಮುಖರ ಮತ್ತು ಶೂರರ ಮುಂದೆ ಆ ಪ್ರಸ್ತಾಪವೆತ್ತಿ ಅವರ ಸಹಾಯವನ್ನು ಪಡೆದುಕೊಂಡನು.
4 : ಆಗ ಅನೇಕರು ಸೇರಿ, “ಇಲ್ಲಿಗೆ ಬರುವ ಅಸ್ಸೀರಿಯದ ರಾಜರಿಗೆ ಬೇಕಾದಷ್ಟು ನೀರು ಏಕೆ ಸಿಕ್ಕಬೇಕು?,” ಎಂದುಕೊಂಡು ಎಲ್ಲಾ ಬಾವಿಗಳನ್ನೂ ನಾಡಿನ ಮಧ್ಯದಲ್ಲಿ ಹರಿಯುವ ಹಳ್ಳವನ್ನೂ ಮುಚ್ಚಿಬಿಟ್ಟರು.
5 : ಇದರಿಂದ ಅರಸನು ಧೈರ್ಯಗೊಂಡು, ಅಲ್ಲಲ್ಲಿ ಬಿದ್ದುಹೋಗಿದ್ದ ಪೌಳಿಗೋಡೆಯನ್ನು ದುರಸ್ತಿ ಮಾಡಿಸಿ, ಅದರ ಮೇಲೆ ಬುರುಜುಗಳನ್ನೂ ಹೊರಗೆ ಇನ್ನೊಂದು ಗೋಡೆಯನ್ನೂ ಕಟ್ಟಿಸಿದನು. ದಾವೀದ ನಗರದ ಮಿಲ್ಲೋ ಕೋಟೆಯನ್ನು ಭದ್ರಪಡಿಸಿದನು. ಅನೇಕ ಆಯುಧಗಳನ್ನೂ ಗುರಾಣಿಗಳನ್ನೂ ಮಾಡಿಸಿದನು.
6 : ಅನಂತರ ಅವನು ಜನರ ಮೇಲೆ ಸೇನಾಪತಿಗಳನ್ನು ನೇಮಿಸಿ ಅವರನ್ನು ಊರುಬಾಗಿಲಿನ ಬಯಲಿನಲ್ಲಿ ಕೂಡಿಸಿದನು. ಅವರಿಗೆ, “ಶೂರರಾಗಿರಿ, ಧೈರ್ಯದಿಂದಿರಿ;
7 : ಅಸ್ಸೀರಿಯದ ಅರಸನಿಗೂ ಅವನೊಂದಿಗಿರುವ ಆ ದೊಡ್ಡ ಸೈನ್ಯಕ್ಕೂ ಅಂಜಬೇಡಿ, ಕಳವಳ ಪಡಬೇಡಿ. ಅವನಿಗಿರುವ ಸಹಾಯಕ್ಕಿಂತ ನಮಗಿರುವ ಸಹಾಯ ದೊಡ್ಡದು.
8 : ಅವನಿಗಿರುವ ಸಹಾಯ ಮೂಳೆ ಮಾಂಸದ ತಡಿಕೆಯ ಬಲ; ನಮಗಿದ್ದಾರೆ ನಮ್ಮ ದೇವರಾದ ಸರ್ವೇಶ್ವರ. ಅವರೇ ನಮಗೆ ನೆರವಾಗಿ, ಯುದ್ಧಗಳಲ್ಲಿ ನಮ್ಮ ಪರವಾಗಿ ಕಾದಾಡುವರು,” ಎಂದು ಹೇಳಿ ಹುರಿದುಂಬಿಸಿದನು. ಜನರು ಜುದೇಯದ ಅರಸ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸೆಯುಳ್ಳವರಾದರು.
9 : ಇದಾದ ಮೇಲೆ, ಸರ್ವಸೇನೆಯೊಡನೆ ಲಾಕೀಷಿನ ಎದುರಿನಲ್ಲಿ ಪಾಳೆಯಮಾಡಿಕೊಂಡು ಇದ್ದ ಅಸ್ಸೀರಿಯದ ಅರಸ ಸನ್ಹೇರೀಬನು ತನ್ನ ಸೇವಕರನ್ನು ಜೆರುಸಲೇಮಿಗೆ ಕಳುಹಿಸಿದನು. ಅವರ ಮುಖಾಂತರ ಜುದೇಯದ ಅರಸ ಹಿಜ್ಕೀಯನಿಗೂ ಜೆರುಸಲೇಮಿನಲ್ಲಿದ್ದ ಎಲ್ಲಾ ಯೆಹೂದ್ಯರಿಗೂ ಹೀಗೆಂದು ಹೇಳಿಸಿದನು:
10 : ಅಸ್ಸೀರಿಯದ ಅರಸ ಸನ್ಹೇರೀಬನ ಮಾತಿಗೆ ಕಿವಿಗೊಡಿ; ನೀವು ಯಾವುದರ ಮೇಲೆ ಭರವಸೆಯಿಟ್ಟು ಮುತ್ತಿಗೆಗೆ ಗುರಿಯಾಗಲಿರುವ ಜೆರುಸಲೇಮಿನಲ್ಲಿ ನಿಂತಿದ್ದೀರಿ?
11 : ಹಿಜ್ಕೀಯನು, ‘ನಮ್ಮ ದೇವರಾದ ಸರ್ವೇಶ್ವರಸ್ವಾಮಿ ಅಸ್ಸೀರಿಯಾದ ಅರಸನ ಕೈಯಿಂದ ನಮ್ಮನ್ನು ರಕ್ಷಿಸುವನು,’ ಎಂಬ ನಂಬಿಕೆಯನ್ನು ನಿಮ್ಮಲ್ಲಿ ಹುಟ್ಟಿಸುವುದಕ್ಕೆ ಪ್ರಯತ್ನಿಸುತ್ತಿರುವುದು ನಿಮ್ಮನ್ನು ಹಸಿವೆ ನೀರಡಿಕೆಗಳಿಂದ ಸಾಯಿಸುವುದಕ್ಕೇ ಅಲ್ಲದೆ ಮತ್ತೇನಕ್ಕೂ ಅಲ್ಲ.
12 : ಹಿಜ್ಕೀಯನು ಒಂದೇ ಬಲಿಪೀಠದ ಮುಂದೆ ಆರಾಧನೆಮಾಡಿ ಅದರ ಮೇಲೆಯೇ ಧೂಪಹಾಕಬೇಕೆಂಬುದಾಗಿ ಯೆಹೂದ್ಯರಿಗೂ ಜೆರುಸಲೇಮಿಗೂ ಆಜ್ಞಾಪಿಸಿ, ದೇವರ ಬೇರೆ ಎಲ್ಲ ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಹಾಳು ಮಾಡಿದನು ಅಲ್ಲವೆ?
13 : ನಾನೂ ನನ್ನ ತಂದೆತಾತಂದಿರೂ ಎಲ್ಲಾ ದೇಶಗಳ ಜನಾಂಗಗಳಿಗೆ ಮಾಡಿದ್ದನ್ನು ನೀವು ಕೇಳಲಿಲ್ಲವೋ? ಆ ಜನಾಂಗಗಳ ದೇವತೆಗಳಿಗೆ ಅವರ ದೇಶವನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸುವುದಕ್ಕೆ ಶಕ್ತಿಯಿತ್ತೋ?
14 : ನನ್ನ ತಂದೆ ತಾತಂದಿರು ನಾಶಮಾಡಿಬಿಟ್ಟ ಆ ರಾಜ್ಯಗಳ ದೇವರುಗಳಲ್ಲಿ ಯಾವನು ತಾನೆ ತನ್ನ ಪ್ರಜೆಯನ್ನು ನನ್ನ ಕೈಯಿಂದ ಬಿಡಿಸುವುದಕ್ಕೆ ಸಮರ್ಥ ನಾಗಿದ್ದನು? ಹೀಗಿರುವಲ್ಲಿ ನಿಮ್ಮ ದೇವರು ನಿಮ್ಮನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡುವುದಕ್ಕೆ ಶಕ್ತನಾಗಿರುತ್ತಾನೋ?
15 : ನೀವು ಹಿಜ್ಕೀಯನಿಂದ ಮರುಳಾಗಿ ಮೋಸಹೋಗಬೇಡಿ; ಅವನನ್ನು ನಂಬಲೂ ಬೇಡಿ. ಯಾವ ರಾಜ್ಯಜನಾಂಗಗಳ ದೇವತೆಯೂ ತನ್ನ ಪ್ರಜೆಯನ್ನು ನನ್ನ ಮತ್ತು ನನ್ನ ಪೂರ್ವಿಕರ ಕೈಯಿಂದ ಬಿಡಿಸಲಾರದೆ ಹೋದರು. ಅಂದ ಮೇಲೆ, ನಿಮ್ಮ ದೇವರಂಥವನು ನಿಮ್ಮನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಬಲ್ಲನೇ?”.
16 : ದೇವರಾದ ಸರ್ವೇಶ್ವರನಿಗೂ ಅವರ ಸೇವಕನಾದ ಹಿಜ್ಕೀಯನಿಗೂ ವಿರೋಧವಾದ ಈ ಮೊದಲಾದ ಮಾತುಗಳನ್ನು ಸನ್ಹೇರೀಬನು ತನ್ನ ಸೇವಕರ ಮುಖಾಂತರ ಹೇಳಿಕಳುಹಿಸಿದ್ದನು;
17 : ಅಷ್ಟು ಮಾತ್ರವಲ್ಲ, ಇಸ್ರಯೇಲ್ ದೇವರಾದ ಸರ್ವೇಶ್ವರನನ್ನು ನಿಂದಿಸಿ ದೂಷಿಸುವುದಕ್ಕಾಗಿ ‘ಅನ್ಯದೇಶಗಳವರ ದೇವರುಗಳು ತಮ್ಮ ಜನರನ್ನು ನನ್ನ ಕೈಯಿಂದ ಬಿಡಿಸಲಾರದೆ ಹೋದಂತೆ ಹಿಜ್ಕೀಯನ ದೇವರೂ ತನ್ನ ಪ್ರಜೆಯನ್ನು ನನ್ನ ಕೈಯಿಂದ ಬಿಡಿಸಲಾರನು’ ಎಂಬುದಾಗಿ ಪತ್ರದಲ್ಲಿ ಬರೆದುಕಳುಹಿಸಿದ್ದನು.
18 : ಜೆರುಸಲೇಮಿಗೆ ಬಂದ ಆ ಅಸ್ಸೀರಿಯದವರು ಗೋಡೆಯ ಮೇಲಿದ್ದ ಜನರನ್ನು ಬೆದರಿಸಿ, ಅಂಜಿಸಿ ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳಲು
19 : ಜೆರುಸಲೇಮಿನ ದೇವರು ಮನುಷ್ಯರ ಕೈಕೆಲಸವಾಗಿರುವ ಅನ್ಯದೇಶಗಳ ಜನರ ದೇವತೆಗಳಿಗೆ ಸಮಾನನಾಗಿರುತ್ತಾನೆ, ಎಂಬ ಅರ್ಥದಲ್ಲಿ ಅವರ ಬಗ್ಗೆ ಗಟ್ಟಿಯಾಗಿ ಕೂಗಿ ಹೇಳಿದರು; ಆ ಜನರೊಡನೆ ಹಿಬ್ರು ಭಾಷೆಯಲ್ಲೆ ಮಾತಾಡಿದರು.
20 : ಈ ಕಾರಣ ಅರಸ ಹಿಜ್ಕೀಯನು ಹಾಗು ಆಮೋಚನ ಮಗ ಯೆಶಾಯನೆಂಬ ಪ್ರವಾದಿಯು ಪರಲೋಕಕ್ಕೆ ಮೊರೆಯಿಟ್ಟು ಪ್ರಾರ್ಥಿಸಿದರು. ಸರ್ವೇಶ್ವರಸ್ವಾಮಿ ದೂತನನ್ನು ಕಳುಹಿಸಿ
21 : ಅಸ್ಸೀರಿಯದ ಅರಸನ ದಂಡಿನಲ್ಲಿದ್ದ ಎಲ್ಲ ಶೂರರನ್ನೂ ನಾಯಕರನ್ನೂ ಅಧಿಪತಿಗಳನ್ನೂ ಸಂಹರಿಸಿದರು; ಆ ಅರಸನು ನಾಚಿಕೆಯಿಂದ ತನ್ನ ದೇಶಕ್ಕೆ ಹಿಂದಿರುಗಬೇಕಾಯಿತು. ಅಲ್ಲಿ ಅವನು ತನ್ನ ದೇವರ ಗುಡಿಗೆ ಹೋಗಿದ್ದಾಗ ಅವನ ಸ್ವಂತ ಮಕ್ಕಳೇ ಅವನನ್ನು ಕತ್ತಿಯಿಂದ ಕೊಂದರು.
22 : ಹೀಗೆ ಸರ್ವೇಶ್ವರ, ಹಿಜ್ಕೀಯನನ್ನೂ ಜೆರುಸಲೇಮಿನವರನ್ನೂ ಅಸ್ಸೀರಿಯದ ಅರಸ ಸನ್ಹೇರೀಬನ ಕೈಗೂ ಸುತ್ತಲಿನ ಎಲ್ಲ ಶತ್ರುಗಳ ಕೈಗೂ ಸಿಕ್ಕದಂತೆ ತಪ್ಪಿಸಿ ಕಾಪಾಡುತ್ತಿದ್ದರು.
23 : ಅನೇಕರು ಸರ್ವೇಶ್ವರನಿಗೆ ಕಾಣಿಕೆಗಳನ್ನೂ ಜುದೇಯದ ಅರಸ ಹಿಜ್ಕೀಯನಿಗೆ ಶ್ರೇಷ್ಠ ವಸ್ತುಗಳನ್ನೂ ತೆಗೆದುಕೊಂಡು ಬಂದರು. ಅಂದಿನಿಂದ ಎಲ್ಲ ರಾಷ್ಟ್ರಗಳವರು ಹಿಜ್ಕೀಯನನ್ನು ಮಹಾನ್ ವ್ಯಕ್ತಿಯೆಂದು ಸನ್ಮಾನಿಸುತ್ತಿದ್ದರು.
24 : ಕ್ರಮೇಣ ಹಿಜ್ಕೀಯನು ಮರಣಕರ ರೋಗಕ್ಕೆ ಗುರಿಯಾದನು. ಆಗ ಅವನು ದೇವರನ್ನು ಪ್ರಾರ್ಥಿಸಲು ಅವರು ಸದುತ್ತರವನ್ನು ದಯಪಾಲಿಸಿ ಅವನಿಗೆ ಒಂದು ಗುರುತನ್ನು ಅನುಗ್ರಹಿಸಿದರು.
25 : ಆದರೆ ಹಿಜ್ಕೀಯನು ಈ ಉಪಕಾರಕ್ಕೆ ತಕ್ಕಂತೆ ನಡೆಯದೆ ಅಹಂಕಾರಿಯಾದನು. ಆದ್ದರಿಂದ ಜುದೇಯದ ಮೇಲೂ ಜೆರುಸಲೇಮಿನವರ ಮೇಲೂ ದೇವರ ಕೋಪವೆರಗಿತು.
26 : ಆಗ ಹಿಜ್ಕೀಯನ ಗರ್ವ ಇಳಿಯಿತು; ಜೆರುಸಲೇಮಿನವರೊಡನೆ ಅವನು ದೀನಮನಸ್ಕನಾದನು. ಈ ಕಾರಣ ಅವನ ಜೀವಮಾನದಲ್ಲಿ ಸರ್ವೇಶ್ವರನ ಕೋಪ ಅವರ ಮೇಲೆ ಬರಲಿಲ್ಲ.
27 : ಹಿಜ್ಕೀಯನಿಗೆ ಅತ್ಯಧಿಕವಾಗಿ ಧನ ಘನತೆಗಳು ಒದಗಿದವು; ಅವನು ಬೆಳ್ಳಿಬಂಗಾರ, ರತ್ನ, ಪರಿಮಳ ದ್ರವ್ಯ, ಗುರಾಣಿ ಮುಂತಾದ ಶ್ರೇಷ್ಠಾಯುಧಗಳನ್ನು ಇಡುವುದಕ್ಕಾಗಿ ಭಂಡಾರಗಳನ್ನು ಏರ್ಪಡಿಸಿದನು. ಧಾನ್ಯ, ದ್ರಾಕ್ಷಾರಸ, ಎಣ್ಣೆ, ಇವುಗಳನ್ನು ಸಂಗ್ರಹಿಸುವುದಕ್ಕಾಗಿ ಉಗ್ರಾಣಗಳನ್ನು ಕಟ್ಟಿಸಿದನು;
28 : ಆಯಾಜಾತಿಯ ಪಶುಗಳಿಗಾಗಿ ಕೊಟ್ಟಿಗೆಗಳನ್ನೂ ಆಡುಕುರಿಗಳಿಗಾಗಿ ಹಟ್ಟಿಗಳನ್ನೂ ಸಿದ್ಧಮಾಡಿಸಿಕೊಂಡನು.
29 : ಇದಲ್ಲದೆ, ಪಟ್ಟಣಗಳನ್ನು ಕಟ್ಟಿಸಿ ದನಕುರಿಗಳ ದೊಡ್ಡ ಹಿಂಡುಗಳನ್ನು ಸಂಪಾದಿಸಿಕೊಂಡನು. ದೇವರು ಅವನಿಗೆ ಕೊಟ್ಟ ಸಂಪತ್ತು ಅವರಿಮಿತವಾಗಿದ್ದು.
30 : ಮೇಲಣ ಗೀಹೋನ್ ಎಂಬ ಬುಗ್ಗೆಗೆ ಕಟ್ಟೆಕಟ್ಟಿಸಿ ಅದರ ನೀರು ನೆಟ್ಟಗೆ ದಾವೀದನಗರದ ಪೂರ್ವ ದಿಕ್ಕಿನ ಕಣಿವೆಗೆ ಹರಿಯುವಂತೆಮಾಡಿದನು ಹಿಜ್ಕೀಯನೇ. ಅವನು ತನ್ನ ಎಲ್ಲ ಕಾರ್ಯಗಳಲ್ಲೂ ಯಶಸ್ವಿ ಆದನು.
31 : ಆದುದರಿಂದ ಅವನ ನಾಡಿನಲ್ಲಾದ ಅದ್ಭುತಕರವಾದ ಮಾರ್ಪಾಟುಗಳನ್ನು ಪರಿಶೀಲಿಸುವುದಕ್ಕಾಗಿ ಬಾಬಿಲೋನಿಯದ ಅಧಿಪತಿಗಳು ರಾಹಭಾರಿಗಳನ್ನು ಅವನ ಬಳಿಗೆ ಕಳುಹಿಸಿದರು. ಅವರು ಬಂದಾಗ, ಅವನನ್ನು ಪರೀಕ್ಷಿಸುವುದಕ್ಕಾಗಿ ಹಾಗು ಅವನ ಅಂತರಾಳವನ್ನೂ ತಿಳಿದುಕೊಳ್ಳುವುದಕ್ಕಾಗಿ ದೇವರು ಅವನನ್ನು ಕೈಬಿಟ್ಟರು
32 : ಹಿಜ್ಕೀಯನ ಉಳಿದ ಚರಿತ್ರೆಯನ್ನೂ ಅವನ ಭಕ್ತಿಕಾರ್ಯಗಳನ್ನೂ ಆಮೋಚನ ಮಗ ಯೆಶಾಯನ ದರ್ಶನಗ್ರಂಥದಲ್ಲಿ ಹಾಗು ಯೆಹೂದ್ಯರ ಮತ್ತು ಇಸ್ರಯೇಲರ ರಾಜ ಗ್ರಂಥದಲ್ಲಿ ಬರೆಯಲಾಗಿದೆ.
33 : ಹಿಜ್ಕೀಯನು ಮೃತನಾಗಿ ಪಿತೃಗಳ ಬಳಿಗೆ ಸೇರಲು, ಅವನ ಶವವನ್ನು ದಾವೀದ ವಂಶದವರ ಕುಟುಂಬದ ಸ್ಮಶಾನ ಭೂಮಿಯ ದಿಬ್ಬದ ಮೇಲೆ ಸಮಾಧಿ ಮಾಡಿದರು. ಅವನ ಶವಸಂಸ್ಕಾರ ನಡೆಯುವಾಗ ಎಲ್ಲಾ ಯೆಹೂದ್ಯರೂ ಜೆರುಸಲೇಮಿನವರೂ ಅವನನ್ನು ಬಹಳವಾಗಿ ಸನ್ಮಾನಿಸಿದರು. ಅವನಿಗೆ ಬದಲಾಗಿ ಅವನ ಮಗ ಮನಸ್ಸೆ ಅರಸನಾದನು.

· © 2017 kannadacatholicbible.org Privacy Policy