1 : ಸೊಲೊಮೋನನು ಜೆರುಸಲೇಮ್ ಪಟ್ಟಣದಲ್ಲಿ, ತನ್ನ ತಂದೆ ದಾವೀದನಿಗೆ ದೇವದರ್ಶನ ಉಂಟಾದ ಮೋರೀಯಾ ಗುಡ್ಡದಲ್ಲಿ, ಸರ್ವೇಶ್ವರನ ಆಲಯವನ್ನು ಕಟ್ಟಿಸತೊಡಗಿದನು. ಈ ಮೊದಲು, ಯೆಬೂಸಿಯನಾದ ಒರ್ನಾನನ ಕಣವಾಗಿದ್ದ ಆ ಸ್ಥಳವನ್ನು, ದಾವೀದನು ಇದಕ್ಕಾಗಿ ಸಿದ್ಧ ಮಾಡಿದ್ದನು.
2 : ಸೊಲೊಮೋನನು ತನ್ನ ಆಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿನದಲ್ಲಿ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದನು.
3 : ಅವನು ಕಟ್ಟಿಸಿದ ದೇವಾಲಯದ ಅಸ್ತಿವಾರದ ಉದ್ದ ಇಪ್ಪತ್ತೇಳು ಮೀಟರ್ ಹಾಗೂ ಅಗಲ ಒಂಬತ್ತು ಮೀಟರ್.
4 : ದೇವಾಲಯದ ಮುಂದುಗಡೆಯಲ್ಲಿದ್ದ ಮಂಟಪದ ಉದ್ದ ಆಲಯದ ಅಗಲಕ್ಕೆ ಸರಿಯಾಗಿ ಒಂಬತ್ತು ಮೀಟರ್, ಎತ್ತರ ಇಪ್ಪತ್ತನಾಲ್ಕು ಮೀಟರ್. ಸೊಲೊಮೋನನು ದೇವಾಲಯದ ಒಳಮೈಯನ್ನು ಚೊಕ್ಕಬಂಗಾರದ ತಗಡಿನಿಂದ ಹೊದಿಸಿದನು.
5 : ದೊಡ್ಡ ಕೋಣೆಯನ್ನು ತುರಾಯಿ ಮರದ ಹಗೆಗಳಿಂದಲೂ ಆ ಹಲಗೆಗಳನ್ನು ತೋರಣ ಖರ್ಜೂರಗಳ ಚಿತ್ರಗಳುಳ್ಳ ಚೊಕ್ಕ ಬಂಗಾರದ ತಗಡಿನಿಂದಲೂ ಹೊದಿಸಿ, ಅದನ್ನು ರತ್ನಗಳಿಂದ ಅಲಂಕರಿಸಿದನು.
6 : ಆ ಬಂಗಾರ ಪರ್ವಯಿಮ್ ದೇಶದ್ದು.
7 : ಹೀಗೆ ಆಲಯದಲ್ಲಿನ ತೊಲೆ, ಹೊಸ್ತಿಲು, ಗೋಡೆ, ಕದ ಇವುಗಳನ್ನು ಬಂಗಾರದ ತಗಡಿನಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳ ಚಿತ್ರಗಳನ್ನು ಕೆತ್ತಿಸಿದನು.
8 : ಇದಲ್ಲದೆ, ಅವನು ‘ಮಹಾಪರಿಶುದ್ಧ ಸ್ಥಳವನ್ನು’ ಮಾಡಿಸಿದನು. ಅದರ ಉದ್ದ ಆಲಯದ ಅಗಲಕ್ಕೆ ಸರಿಯಾಗಿ ಒಂಬತ್ತು ಮೀಟರ್; ಅದರ ಅಗಲ ಒಂಬತ್ತು ಮೀಟರ್. ಅದನ್ನು ಸುಮಾರು 20 ಮೆಟ್ರಿಕ್ ಟನ್ ಚೊಕ್ಕ ಬಂಗಾರದ ತಗಡಿನಿಂದ ಹೊದಿಸಿದನು.
9 : ಬಂಗಾರದ ಮೊಳೆಗಳ ತೂಕ 570 ಕಿಲೋಗ್ರಾಂ. ಮೇಲುಪ್ಪರಿಗೆಗಳನ್ನು ಬಂಗಾರದ ತಗಡಿನಿಂದ ಹೊದಿಸಿದನು.
10 : ಮಹಾಪರಿಶುದ್ಧ ಸ್ಥಳದಲ್ಲಿ ಎರಡು ಕೆರೂಬಿಗಳ ಪ್ರತಿಮೆಗಳನ್ನು ಮಾಡಿಸಿಟ್ಟು ಅವುಗಳನ್ನೂ ಬಂಗಾರದ ತಗಡಿನಿಂದ ಹೊದಿಸಿದನು.
11 : ಕೆರೂಬಿಗಳ ರೆಕ್ಕೆಗಳು ಒಟ್ಟಾಗಿ ಒಂಬತ್ತು ಮೀಟರ್ ಉದ್ದವಿದ್ದವು. (ಮೊದಲನೆಯ ಕೆರೂಬಿಯ) ಒಂದು ರೆಕ್ಕೆ 2.2 ಮೀಟರ್ ಉದ್ದವಾಗಿದ್ದು ಮನೆಯ ಗೋಡೆಗೆ ತಗಲುತ್ತಿತ್ತು. 2.2 ಮೀಟರ್ ಉದ್ದವಾದ ಇನ್ನೊಂದು ರೆಕ್ಕೆಯು ಎರಡನೆಯ ಕೆರೂಬಿಯ ರೆಕ್ಕೆಗೆ ತಗಲುತ್ತಿತ್ತು.
12 : ಅದರಂತೆಯೇ ಎರಡನೆಯ ಕೆರೂಬಿಯ 2.2 ಮೀಟರ್ ಉದ್ದವಾದ ಒಂದು ರೆಕ್ಕೆ ಮನೆಯ ಗೋಡೆಗೂ ಇನ್ನೊಂದು ರೆಕ್ಕೆ ಮೊದಲನೆಯ ಕೆರೂಬಿಯ ರೆಕ್ಕೆಗೂ ತಗಲುತ್ತಿದ್ದವು.
13 : ಈ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಒಂಬತ್ತು ಮೀಟರ್ ಉದ್ದಕ್ಕೆ ಚಾಚಿ ಕಾಲೂರಿ ನಿಂತುಕೊಂಡು ಪರಿಶುದ್ಧ ಸ್ಥಳದ ಕಡೆಗೆ ಮುಖ ಮಾಡಿದ್ದವು.
14 : ಸೊಲೊಮೋನನು ಪರದೆಯನ್ನು ನೀಲಿ, ಊದಾ, ಕೆಂಪು ವರ್ಣಗಳುಳ್ಳ ನಾರಿನಿಂದ ಮಾಡಿಸಿದನು. ಅದರಲ್ಲಿ ಕೆರೂಬಿಗಳನ್ನು ಕಸೂತಿ ಹಾಕಿಸಿದನು.
15 : ಇದಲ್ಲದೆ ಸೊಲೊಮೋನನು ದೇವಾಲಯದ ಮುಂದೆ ಎರಡು ಕಂಬಗಳನ್ನು ನಿಲ್ಲಿಸಿದನು. ಅವು 5.5 ಮೀಟರ್ ಎತ್ತರ ಇದ್ದವು. ಅವುಗಳ ತಲೆಗಳ ಮೇಲಣ ಕುಂಭಗಳು 2.2 ಮೀಟರ್ ಎತ್ತರವಿದ್ದವು.
16 : ಗರ್ಭಗುಡಿಯ ಸರಪಣಿಯಂಥ ಸರಪಣಿಗಳನ್ನು ಮಾಡಿಸಿ, ಆ ಕಂಬಗಳ ಮೇಲಣ ಕುಂಭಗಳಿಗೆ ಸಿಕ್ಕಿಸಿ, ಆ ಸರಪಣಿಗಳಲ್ಲಿ ನೂರು ನೂರು ತಾಮ್ರದ ದಾಳಿಂಬೆ ಹಣ್ಣುಗಳನ್ನು ಕಟ್ಟಿಸಿದನು.
17 : ಆ ಕಂಬಗಳನ್ನು, ದೇವಾಲಯದ ಮುಂಭಾಗದಲ್ಲಿ ಒಂದನ್ನು ಬಲಗಡೆಗೂ, ಇನ್ನೊಂದನ್ನು ಎಡಗಡೆಗೂ ನಿಲ್ಲಿಸಿ, ಬಲಗಡೆಯದಕ್ಕೆ ‘ಯಾಕೀನ್’ ಎಂದೂ ಎಡಗಡೆಯದಕ್ಕೆ ‘ಬೋವಜ್’ ಎಂದೂ ಹೆಸರಿಟ್ಟನು.