Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ಹಿಜ್ಕೀಯನು ಪಟ್ಟಕ್ಕೆ ಬಂದಾಗ ಅವನಿಗೆ ಇಪ್ಪತ್ತೈದು ವರ್ಷ ಪ್ರಾಯ. ಅವನು ಜೆರುಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಜೆಕರ್ಯನ ಮಗಳಾದ ಅಬೀಯ ಎಂಬಾಕೆ ಅವನ ತಾಯಿ.
2 : ಅವನು ಎಲ್ಲಾ ವಿಷಯಗಳಲ್ಲೂ, ತನ್ನ ಪೂರ್ವಜ ದಾವೀದನಂತೆ ಸರ್ವೇಶ್ವರನ ಚಿತ್ತಾನುಸಾರ ನಡೆದನು.
3 : ಹಿಜ್ಕೀಯನು ತನ್ನ ಆಳ್ವಿಕೆಯ ಮೊದಲನೆಯ ವರ್ಷದ ಮೊದಲನೆಯ ತಿಂಗಳಲ್ಲಿ ಸರ್ವೇಶ್ವರನ ಆಲಯದ ಬಾಗಿಲುಗಳನ್ನು ತೆರೆಯಿಸಿ ಅವುಗಳನ್ನು ಭದ್ರಪಡಿಸಿದನು.
4 : ಆಮೇಲೆ ಯಾಜಕರನ್ನೂ ಲೇವಿಯರನ್ನೂ ದೇವಾಲಯದ ಪೂರ್ವದಿಕ್ಕಿನ ಬಯಲಿನಲ್ಲಿ ಕೂಡಿಸಿ ಅವರಿಗೆ,
5 : “ಲೇವಿಯರೇ, ನನ್ನ ಮಾತನ್ನು ಕೇಳಿರಿ; ಈಗ ನಿಮ್ಮನ್ನೇ ಶುದ್ಧಪಡಿಸಿಕೊಂಡು, ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರನ ಪವಿತ್ರಾಲಯದಿಂದ ಹೊಲಸನ್ನೆಲ್ಲಾ ಹೊರಗೆ ಹಾಕಿ, ಆಲಯವನ್ನು ಶುದ್ಧೀಕರಿಸಿರಿ.
6 : ನಮ್ಮ ಪೂರ್ವಜರು ನಮ್ಮ ದೇವರಾದ ಸರ್ವೇಶ್ವರನಿಗೆ ದ್ರೋಹಮಾಡಿ ಅವರ ಚಿತ್ತಕ್ಕೆ ವಿರುದ್ಧ ನಡೆದು ಅವರನ್ನು ತೊರೆದುಬಿಟ್ಟರು; ಅವರ ನಿವಾಸ ಸ್ಥಳಕ್ಕೆ ಬೆನ್ನುಕೊಟ್ಟು ವಿಮುಖರಾದರು.
7 : ಅದರ ಮಂಟಪದ ಬಾಗಿಲುಗಳನ್ನು ಮುಚ್ಚಿ, ದೀಪಗಳನ್ನು ನಂದಿಸಿದರು. ಇಸ್ರಯೇಲ್ ದೇವರ ಪವಿತ್ರ ಸ್ಥಾನದಲ್ಲಿ ಧೂಪಾರತಿ ಎತ್ತುವುದನ್ನೂ ದಹನಬಲಿ ಸಮರ್ಪಿಸುವುದನ್ನೂ ನಿಲ್ಲಿಸಿಬಿಟ್ಟರು.
8 : ಆದುದರಿಂದ ಸರ್ವೇಶ್ವರ, ಜುದೇಯ ನಾಡಿನ ಮೇಲೂ ಜೆರುಸಲೇಮಿನ ಮೇಲೂ ಕೋಪಗೊಂಡು ಅವುಗಳನ್ನು ಭಯಭೀತಿಗೂ ಹಾಸ್ಯ ಪರಿಹಾಸ್ಯಗಳಿಗೂ ಆಸ್ಪದವಾಗಿಸಿದ್ದಾರೆ. ಇದಕ್ಕೆ ನೀವೇ ಸಾಕ್ಷಿಗಳು.
9 : ಅದೇ ಕಾರಣದಿಂದ ನಮ್ಮ ಹಿರಿಯರು ಕತ್ತಿಗೆ ತುತ್ತಾಗಿದ್ದಾರೆ. ನಮ್ಮ ಗಂಡು ಹೆಣ್ಣುಮಕ್ಕಳೂ ಹೆಂಡತಿಯರೂ ಸೆರೆಯಾಳುಗಳಾಗಿ ಹೋಗಬೇಕಾಯಿತು.
10 : ಈಗ ನಮ್ಮ ಮೇಲಿರುವ ದೈವಕೋಪಾಗ್ನಿ ತೊಲಗಿಹೋಗುವಂತೆ ಇಸ್ರಯೇಲ್ ದೇವರಾದ ಸರ್ವೇಶ್ವರನೊಡನೆ ಒಡಂಬಡಿಕೆ ಮಾಡಿಕೊಳ್ಳುವುದಕ್ಕೆ ತೀರ್ಮಾನಿಸಿದ್ದೇನೆ.
11 : ಹೀಗಿರಲಾಗಿ ನನ್ನ ಮಕ್ಕಳೇ, ಉದಾಸೀನರಾಗಿರಬೇಡಿ; ಸರ್ವೇಶ್ವರ ತಮ್ಮನ್ನು ಆರಾಧಿಸುವುದಕ್ಕೂ ತಮಗೆ ಧೂಪಾರತಿ ಎತ್ತುವುದಕ್ಕೂ ನಿಮ್ಮನ್ನು ತಮ್ಮ ಸಾನ್ನಿಧ್ಯ ಸೇವಕರನ್ನಾಗಿ ಆರಿಸಿಕೊಂಡರಲ್ಲವೇ?” ಎಂದು ಹೇಳಿದನು.
12 : ಕೂಡಲೆ ಕೆಹಾತ್ಯರಲ್ಲಿ ಅಮಾಸ್ಕೆಯ ಮಗ ಮೆಹತ್, ಅಜರ್ಯನ ಮಗ ಯೋವೇಲ್, ಮೆರಾರೀಯರಲ್ಲಿ ಅಬ್ದೀಯ ಮಗ ಕೀಷ್, ಯೆಹಲ್ಲೆಲೇಲನ ಮಗ ಅಜರ್ಯ, ಗೆರ್ಷೋನ್ಯರಲ್ಲಿ ಜಿಮ್ಮನ ಮಗ ಯೋವಾಹ,
13 : ಯೋವಾಹನ ಮಗ ಏದೆನ್, ಎಲೀಚಾಫಾನ್ಯರಲ್ಲಿ ಶಿಮ್ರೀ, ಯೆಗೀಯೇಲ್, ಅಸಾಫ್ಯರಲ್ಲಿ ಜೆಕರ್ಯ,
14 : ಮತ್ತನ್ಯ, ಹೇಮಾನ್ಯರಲ್ಲಿ ಯೆಹೀಯೇಲ್, ಶಿಮ್ಮೀ, ಯೆದೂತೂನ್ಯರಲ್ಲಿ ಶೆಮಾಯ ಹಾಗು ಉಜ್ಜೀಯೇಲ್
15 : ಎಂಬ ಲೇವಿಯರು ಮುಂದೆ ಬಂದು ತಮ್ಮ ಸಹೋದರರನ್ನು ಒಂದುಗೂಡಿಸಿದರು. ಅವರು ಅರಸನ ಆಜ್ಞಾಧಾರಕರಾಗಿ ಸರ್ವೇಶ್ವರನ ಧರ್ಮಶಾಸ್ತ್ರ ವಿಧಿಯ ಮೇರೆಗೆ ತಮ್ಮನ್ನು ಶುದ್ಧಪಡಿಸಿಕೊಂಡು ಸರ್ವೇಶ್ವರನ ಆಲಯವನ್ನು ಶುದ್ಧೀಕರಿಸುವುದಕ್ಕೆ ಸಿದ್ಧರಾದರು.
16 : ಯಾಜಕರು ಸರ್ವೇಶ್ವರನ ಆಲಯವನ್ನು ಶುದ್ಧಮಾಡುವುದಕ್ಕೆ ಒಳಗೆ ಹೋಗಿ ಪವಿತ್ರ ಸ್ಥಾನದಲ್ಲಿದ್ದ ಹೊಲಸನ್ನೆಲ್ಲಾ ಹೊರಗೆ ತಂದು ಪ್ರಾಕಾರದಲ್ಲಿ ಹಾಕಿದರು. ಲೇವಿಯರು ಅದನ್ನು ಕೂಡಿಸಿ ಹೊರಗೆ ಒಯ್ದು ಕಿದ್ರೋನ್ ಹಳ್ಳದಲ್ಲಿ ಹಾಕಿದರು.
17 : ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಈ ಶುದ್ಧೀಕರಣವನ್ನು ಪ್ರಾರಂಭಿಸಿದರು. ಎಂಟನೆಯ ದಿನದಲ್ಲಿ ಸರ್ವೇಶ್ವರನ ಆಲಯದ ಮಂಟಪಕ್ಕೆ ಕೈ ಹಾಕಿದರು; ಹೀಗೆ ಸರ್ವೇಶ್ವರನ ಆಲಯವನ್ನು ಶುದ್ಧ ಪಡಿಸುವುದರಲ್ಲಿ ಎಂಟು ದಿನಗಳು ಕಳೆದವು. ಮೊದಲನೆಯ ತಿಂಗಳಿನ ಹದಿನಾರನೆಯ ದಿನದಲ್ಲಿ ಕೆಲಸವೆಲ್ಲಾ ಮುಗಿಯಿತು.
18 : ಆಮೇಲೆ ಅವರು ಅರಮನೆಗೆ ಹೋಗಿ, ಅರಸ ಹಿಜ್ಕೀಯನಿಗೆ, “ನಾವು ಸರ್ವೇಶ್ವರನ ಆಲಯವನ್ನು ಪೂರ್ತಿಯಾಗಿ ಶುದ್ಧೀಕರಿಸಿದೆವು. ಬಲಿಪೀಠವನ್ನು, ಅದರ ಉಪಕರಣಗಳನ್ನು, ನೈವೇದ್ಯ ರೊಟ್ಟಿಗಳನ್ನಿಡತಕ್ಕ ಮೇಜನ್ನು ಹಾಗು ಅದರ ಸಾಮಗ್ರಿಗಳನ್ನೂ ಶುದ್ಧಮಾಡಿದೆವು.
19 : ಅರಸ ಅಹಾಜನು, ತನ್ನ ಆಳ್ವಿಕೆಯಲ್ಲಿ ದೇವದ್ರೋಹಿಯಾಗಿ ತಳ್ಳಿಬಿಟ್ಟಿದ್ದ ಪಾತ್ರೆಗಳನ್ನು ಮತ್ತೆ ತಂದು ಇಟ್ಟು ಪ್ರತಿಷ್ಠಿಸಿದ್ದೇವೆ; ಅವು ಈಗ ಸರ್ವೇಶ್ವರನ ಬಲಿಪೀಠದ ಮುಂದಿರುತ್ತವೆ,” ಎಂದು ವರದಿ ಮಾಡಿದರು.
20 : ಅರಸ ಹಿಜ್ಕೀಯನು ಮರುದಿನ ಬೆಳಗಿನ ಜಾವದಲ್ಲೆದ್ದು ಪಟ್ಟಣದ ಮುಖಂಡರನ್ನು ಕೂಡಿಸಿ ಅವರೊಡನೆ ಸರ್ವೇಶ್ವರನ ಆಲಯಕ್ಕೆ ಹೋದನು.
21 : ಅವರು ಸರಕಾರಿ, ದೇವಾಲಯ ಹಾಗು ಯೆಹೂದಪ್ರಜೆ ಇವುಗಳಿಗಾಗಿ ದೋಷಪರಿಹಾರಕ ಬಲಿಯರ್ಪಿಸುವುದಕ್ಕಾಗಿ ಹೋರಿ, ಟಗರು, ಕುರಿಮರಿ, ಹೋತ, ಇವುಗಳಲ್ಲಿ ಏಳೇಳನ್ನು ತಂದರು. ಅರಸನು ಯಾಜಕ ಆರೋನನ ಸಂತಾನದವರಿಗೆ ಸರ್ವೇಶ್ವರನ ಬಲಿಪೀಠದ ಮೇಲೆ ದಹನಬಲಿ ಮಾಡಬೇಕೆಂದು ಆಜ್ಞಾಪಿಸಿದನು.
22 : ಹೋರಿಗಳನ್ನು ವಧಿಸಿದ ಮೇಲೆ ಯಾಜಕರು ರಕ್ತವನ್ನು ಕೂಡಿಸಿ ಬಲಿಪೀಠಕ್ಕೆ ಪ್ರೋಕ್ಷಿಸಿದರು. ಅನಂತರ ಟಗರುಗಳನ್ನು ವಧಿಸಿ ಅವುಗಳ ರಕ್ತವನ್ನು ಬಲಿಪೀಠಕ್ಕೆ ಪ್ರೋಕ್ಷಿಸಿದರು. ಆಮೇಲೆ ಕುರಿದನಗಳನ್ನು ವಧಿಸಿ ಅವುಗಳ ರಕ್ತವನ್ನೂ ಬಲಿಪೀಠಕ್ಕೆ ಪ್ರೋಕ್ಷಿಸಿದರು.
23 : ಡೆಯಲ್ಲಿ ದೋಷಪರಿಹಾರಕ ಬಲಿಗಾಗಿ ತಂದ ಹೋತಗಳನ್ನು ಅರಸನ ಮುಂದೆಯೂ ಸಮಾಜದವರ ಮುಂದೆಯೂ ನಿಲ್ಲಿಸಿದರು. ಅವರು ಅವುಗಳ ಮೇಲೆ ತಮ್ಮ ಕೈಗಳನ್ನು ಚಾಚಿದರು.
24 : ಅನಂತರ ಯಾಜಕರು ಅವುಗಳನ್ನು ವಧಿಸಿ ಅವುಗಳ ರಕ್ತವನ್ನು ಸಮಸ್ತ ಇಸ್ರಯೇಲರ ದೋಷ ಪರಿಹಾರಕ್ಕಾಗಿ ಬಲಿಪೀಠದ ಮೇಲೆ ಸುರಿದರು. ಆ ದಹನಬಲಿಗಳೂ ದೋಷಪರಿಹಾರಕ ಬಲಿಗಳೂ ಎಲ್ಲ ಇಸ್ರಯೇಲರ ಪರವಾಗಿ ಆಗಬೇಕೆಂದು ಅರಸನು ಆಜ್ಞಾಪಿಸಿದ್ದನು.
25 : ಇದಲ್ಲದೆ, ಅವನು ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಭಜಿಸುವುದಕ್ಕಾಗಿ ಲೇವಿಯರನ್ನು ನೇಮಿಸಿದನು. ದಾವೀದನ ರಾಜದರ್ಶಿಯಾದ ಗಾದ್ ಹಾಗು ಪ್ರವಾದಿ ನಾತಾನ್ ಇವರ ಆಜ್ಞಾನುಸಾರ ಸರ್ವೇಶ್ವರನ ಆಲಯದಲ್ಲಿ ಈ ಗಾಯಕರನ್ನು ಇರಿಸಿದ್ದನು. ಸರ್ವೇಶ್ವರ ಸ್ವಾಮಿಯೇ ಪ್ರವಾದಿಗಳ ಮುಖಾಂತರ ಹೀಗೆ ಆಜ್ಞಾಪಿಸಿದ್ದರು.
26 : ಆ ಲೇವಿಯರು ದಾವೀದನ ವಾದ್ಯಗಳನ್ನೂ ಯಾಜಕರು ತುತೂರಿಗಳನ್ನೂ ಹಿಡಿದು ನಿಂತಿರಲು ಹಿಜ್ಕೀಯನು ಬಲಿಪೀಠದ ಮೇಲೆ ದಹನಬಲಿಯನ್ನು ಸಮರ್ಪಿಸುವುದಕ್ಕೆ ಆಜ್ಞಾಪಿಸಿದನು.
27 : ಹೀಗೆ ದಹನಬಲಿ ಸಮರ್ಪಣೆ ಪ್ರಾರಂಭಿಸಿದೊಡನೆ ಇಸ್ರಯೇಲ್ ಅರಸ ದಾವೀದನ ವಾದ್ಯಗಳಿಂದ ಸರ್ವೇಶ್ವರನನ್ನು ಭಜಿಸುವುದೂ ತುತೂರಿ ಊದುವುದೂ ಆರಂಭವಾಯಿತು.
28 : ದಹನಬಲಿಸಮರ್ಪಣೆಯು ಮುಗಿಯುವವರೆಗೆ ಸಭೆಸೇರಿದವರು ಸಾಷ್ಟಾಂಗ ನಮಸ್ಕಾರಮಾಡುತ್ತಾ ಇದ್ದರು; ಗಾಯಕರು ಗಾನ ಮಾಡುತ್ತಾ ಇದ್ದರು; ತುತೂರಿ ಊದುವವರು ಊದುತ್ತಾ ಇದ್ದರು.
29 : ದಹನಬಲಿ ಸಮರ್ಪಣೆ ತೀರಿದ ಮೇಲೆ ಅರಸನೂ ಅವನ ಜೊತೆಯಲ್ಲಿದ್ದವರೆಲ್ಲರೂ ಸಾಷ್ಟಾಂಗ ನಮಸ್ಕಾರ ಮಾಡಿದರು.
30 : ಅರಸ ಹಿಜ್ಕೀಯನೂ ಪದಾಧಿಕಾರಿಗಳೂ ದಾವೀದನ ಮತ್ತು ದರ್ಶಿಯಾದ ಆಸಾಫನ ಕೀರ್ತನೆಗಳಿಂದ ಸರ್ವೇಶ್ವರನನ್ನು ಸ್ತುತಿಸಬೇಕೆಂದು ಲೇವಿಯರಿಗೆ ಆಜ್ಞಾಪಿಸಿದರು. ಅವರು ಉತ್ಸಾಹದಿಂದ ಸ್ತುತಿಸುತ್ತಾ ತಲೆಬಾಗಿ ನಮಸ್ಕರಿಸಿದರು.
33 : ಹೀಗೆ ದೇವರಿಗೆ ಕಾಣಿಕೆಯಾಗಿ ತರಲಾದ ಹೋರಿಗಳು ಆರುನೂರು, ಕುರಿಗಳು ಮೂರು ಸಾವಿರ.
34 : ಈ ಎಲ್ಲಾ ಪ್ರಾಣಿಗಳನ್ನು ವಧಿಸುವ ಕೆಲಸಕ್ಕೆ ಯಾಜಕರು ಸಾಲದೆಹೋದುದರಿಂದ ಆ ಕಾರ್ಯ ಮುಗಿವ ತನಕ, ಅವರ ಬಂಧುಗಳಾದ ಲೇವಿಯರು ಅವರಿಗೆ ಸಹಾಯ ಮಾಡುತ್ತಿದ್ದರು; ಅಷ್ಟರಲ್ಲಿ ಮಿಕ್ಕ ಯಾಜಕರು ತಮ್ಮನ್ನೇ ಶುದ್ಧಿಪಡಿಸಿಕೊಳ್ಳುತ್ತಿದ್ದರು. ತಮ್ಮನ್ನು ಶುದ್ಧಪಡಿಸಿಕೊಳ್ಳುವುದರಲ್ಲಿ ಯಾಜಕರಿಗಿಂತ ಲೇವಿಯರೇ ಹೆಚ್ಚು ಶ್ರದ್ಧೆಯುಳ್ಳವರಾಗಿದ್ದರು.
35 : ಇದಲ್ಲದೆ, ಯಾಜಕರು ಸಮರ್ಪಿಸಬೇಕಾಗಿದ್ದ ದಹನಬಲಿ, ಶಾಂತಿ ಸಮಾಧಾನಬಲಿಗಳ ಕೊಬ್ಬು ಹಾಗು ದಹನಬಲಿ ಸಂಬಂಧವಾದ ಪಾನದ್ರವ್ಯ ಇವೂ ಅಪಾರವಾಗಿ ಇದ್ದವು.
36 : ಹೀಗೆ ಸರ್ವೇಶ್ವರನ ಆಲಯದ ಸೇವಾಕ್ರಮವು ಪುನಃ ಸ್ಥಾಪಿತವಾಯಿತು. ಯಾರೂ ಗಮನಿಸುವುದಕ್ಕೆ ಮುಂಚೆಯೇ, ದೇವರು ತಾವೇ ತಮ್ಮ ಪ್ರಜೆಗಳಿಗಾಗಿ ಈ ಕಾರ್ಯವನ್ನು ನೆರವೇರಿಸಿದ್ದರಿಂದ ಹಿಜ್ಜೀಯನೂ ಎಲ್ಲ ಜನರೂ ಸಂತೋಷಪಟ್ಟರು.

· © 2017 kannadacatholicbible.org Privacy Policy