1 : ಅನಂತರ ಎಲ್ಲ ಯೆಹೂದ್ಯರೂ ಕೂಡಿ ಹದಿನಾರು ವರ್ಷದವನಾಗಿದ್ದ ಉಜ್ಜೀಯನನ್ನು ಅವನ ತಂದೆ ಅಮಚ್ಯನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು.
2 : ಅರಸನು ಏಲೋತ್ ಪಟ್ಟಣವನ್ನು ಮತ್ತೆ ಜುದೇಯ ರಾಜ್ಯಕ್ಕೆ ಸೇರಿಸಿಕೊಂಡು ಭದ್ರಪಡಿಸಿದನು.
3 : ಉಜ್ಜೀಯನು ಪಟ್ಟಕ್ಕೆ ಬಂದಾಗ ಅವನಿಗೆ ಹದಿನಾರು ವರ್ಷ ವಯಸ್ಸು. ಅವನು ಜೆರುಸಲೇಮಿನಲ್ಲಿ ಐವತ್ತ ಎರಡು ವರ್ಷ ಆಳಿದನು. ಜೆರುಸಲೇಮಿನವಳಾದ ಯೆಕೊಲ್ಯ ಎಂಬಾಕೆ ಅವನ ತಾಯಿ.
4 : ಅವನು ತನ್ನ ತಂದೆ ಅಮಚ್ಯನಂತೆ ಸರ್ವೇಶ್ವರನ ಚಿತ್ತಾನುಸಾರವಾಗಿ ನಡೆದನು.
5 : ದೇವಭಕ್ತಿಯನ್ನು ಬೋಧಿಸುತ್ತಿದ್ದ ಜೆಕರ್ಯನ ಜೀವಮಾನ ಕಾಲದಲ್ಲಿ ಅವನು ದೇವರನ್ನು ಅವಲಂಬಿಸಿ ನಡೆದನು; ಹೀಗೆ ಅವಲಂಬಿಸಿದ್ದ ಕಾಲಾವಧಿಯಲ್ಲೇ ದೇವರಾದ ಸರ್ವೇಶ್ವರ ಅವನನ್ನು ಅಭಿವೃದ್ಧಿಗೆ ತಂದದ್ದು.
6 : ಉಜ್ಜೀಯನು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೊರಟು ಗತ್‍ಊರು, ಯಬ್ನೆ, ಅಷ್ಡೋದ್ ಎಂಬ ಪಟ್ಟಣಗಳ ಗೋಡೆಗಳನ್ನು ಕೆಡವಿಬಿಟ್ಟು ಅಷ್ಟೋದಿನ ಮತ್ತು ಫಿಲಿಷ್ಟಿಯರ ಪ್ರಾಂತಗಳಲ್ಲಿ ಪಟ್ಟಣಗಳನ್ನು ಕಟ್ಟಿಸಿದನು.
7 : ಫಿಲಿಷ್ಟಿಯರೊಡನೆ ಗೂರ್‍ಬಾಳಿನಲ್ಲಿರುವ ಅರೇಬಿಯರೊಡನೆ ಹಾಗು ಮೆಗೂನ್ಯರೊಡನೆ ಯುದ್ಧಮಾಡುವಾಗ ಅವನಿಗೆ ದೇವರ ಸಹಾಯ ದೊರೆಯಿತು.
8 : ಅಮ್ಮೋನಿಯರೂ ಉಜ್ಜೀಯನಿಗೆ ಕಪ್ಪವನ್ನು ಕೊಡುತ್ತಿದ್ದರು. ಅವನು ಅಧಿಕ ಬಲ ಉಳ್ಳವನಾಗಿ ಅವನ ಹೆಸರು ಈಜಿಪ್ಟಿನ ಗಡಿಗಳವರೆಗೂ ಹಬ್ಬಿತು.
9 : ಉಜ್ಜೀಯನು ಜೆರುಸಲೇಮಿನಲ್ಲಿ ಮೂಲೆ ಬಾಗಿಲು, ತಗ್ಗಿನ ಬಾಗಿಲು, ಗೋಡೆ ತಿರುಗುವ ಭಾಗ, ಇವುಗಳ ಮೇಲೆ ಬುರುಜುಗಳನ್ನು ಕಟ್ಟಿಸಿ ಭದ್ರಗೊಳಿಸಿದನು.
10 : ಅವನಿಗೆ ಇಳಕಲ್ಲಿನ ಪ್ರದೇಶದಲ್ಲೂ ತಪ್ಪಲ ಸೀಮೆಯಲ್ಲೂ ಅಲ್ಲದೆ ಅಡವಿಯಲ್ಲೂ ಪಶುಪ್ರಾಣಿಗಳ ದೊಡ್ಡಮಂದೆಗಳು ಇದ್ದವು. ಆದುದರಿಂದ ಆ ಅಡವಿಯಲ್ಲಿ ಬುರುಜುಗಳನ್ನು ಕಟ್ಟಿಸಿ ಹಲವು ಬಾವಿಗಳನ್ನು ತೋಡಿಸಿದನು. ವ್ಯವಸಾಯದಲ್ಲಿ ಅವನಿಗೆ ಅಭಿರುಚಿ ಇದ್ದುದರಿಂದ ಗುಡ್ಡ, ಫಲವತ್ತಾದ ಬಯಲು, ಇವುಗಳಲ್ಲಿ ಹೊಲ ಹಾಗು ದ್ರಾಕ್ಷಿ ತೋಟಗಳ ಕೆಲಸಗಾರರನ್ನು ನೇಮಿಸಿದನು.
11 : ಇದಲ್ಲದೆ, ಯುದ್ಧಕ್ಕೆ ಬೇಕಾದ ಸೈನ್ಯವೂ ಉಜ್ಜೀಯನಿಗಿತ್ತು. ಲೇಖಕನಾದ ಯೆಗೀಯೇಲ್, ಅಧಿಕಾರಿಯಾದ ಮಾಸೇಯ, ಇವರು ಅರಸನ ಸರದಾರರಲ್ಲಿ ಒಬ್ಬನಾದ ಹನನ್ಯನ ಆಜ್ಞಾನುಸಾರ, ಅವನ ಪಟ್ಟಿಯನ್ನು ಬರೆದಿದ್ದರು. ಆಯಾ ಗುಂಪುಗಳು ಪಟ್ಟಿಯ ಕ್ರಮಾನುಸಾರ ಯುದ್ಧಕ್ಕೆ ಹೊರಡುತ್ತಿದ್ದವು.
12 : ರಣವೀರರು ಆಗಿದ್ದ ಎಲ್ಲ ಗೋತ್ರಪ್ರಧಾನರ ಸಂಖ್ಯೆ ಎರಡು ಸಾವಿರದ ಆರುನೂರು.
13 : ಇವರ ಕೈಕೆಳಗಿದ್ದ ಯೋಧರ ಸಂಖ್ಯೆ, ಮೂರು ಲಕ್ಷದ ಏಳು ಸಾವಿರದ ಐನೂರು; ಇವರು ಅರಸನ ಸೇವೆಯಲ್ಲಿದ್ದು, ಅವನ ವೈರಿಗಳಿಗೆ ವಿರುದ್ಧ, ಪರಾಕ್ರಮದಿಂದ ಯುದ್ಧಮಾಡುತ್ತಿದ್ದರು.
14 : ಉಜ್ಜೀಯನು ಈ ಎಲ್ಲ ಸೈನ್ಯದವರಿಗೆ ಬೇಕಾದ ಗುರಾಣಿ, ಬರ್ಜಿ, ಶಿರಸ್ತ್ರಾಣ, ಕವಚ, ಬಿಲ್ಲು, ಕವಣೆಯಕಲ್ಲು ಇವುಗಳನ್ನು ಒದಗಿಸಿಕೊಟ್ಟನು.
15 : ಇದಲ್ಲದೆ, ಅವನು ಬಾಣಗಳನ್ನೂ ದೊಡ್ಡ ಕಲ್ಲುಗಳನ್ನೂ ಎಸೆಯುವುದಕ್ಕಾಗಿ, ತಜ್ಞರ ಕಲ್ಪನೆಯ ಮೇರೆಗೆ ಯಂತ್ರಗಳನ್ನು ಮಾಡಿಸಿ, ಅವುಗಳನ್ನು ಜೆರುಸಲೇಮಿನ ಬುರುಜುಗಳ ಮೇಲೆಯೂ ಆಳುವ್ಭೆರಿಗಳ ಮೇಲೆಯೂ ಇಡಿಸಿದ್ದನು. ಬಲಿಷ್ಠನಾಗುವವರೆಗೂ ಅವನು ದೇವರ ಸಹಾಯವನ್ನು ಆಶ್ಚರ್ಯಕರವಾದ ರೀತಿಯಲ್ಲಿ ಪಡೆಯುತ್ತಿದ್ದನು; ಅವನ ಕೀರ್ತಿ ಬಲು ದೂರದವರೆಗೆ ಹಬ್ಬಿತ್ತು.
ಉಜ್ಜೀಯನ ಗರ್ವಕ್ಕೆ ಶಿಕ್ಷೆ
16 : ಆದರೆ ಅವನು ಬಲಿಷ್ಠನಾದ ಮೇಲೆ, ಗರ್ವಿಷ್ಠನೂ ಭ್ರಷ್ಟನೂ ಆದನು. ತನ್ನ ದೇವರಾದ ಸರ್ವೇಶ್ವರನಿಗೆ ದ್ರೋಹಿಯಾಗಿ, ಧೂಪವೇದಿಯ ಮೇಲೆ ತಾನೇ ಧೂಪಾರತಿ ಎತ್ತಬೇಕೆಂದು ಸರ್ವೇಶ್ವರನ ಆಲಯದ ಒಳಕ್ಕೆ ಹೋದನು.
17 : ಆಗ ಮಹಾಯಾಜಕ ಅಜರ್ಯನು ಹಾಗು ಧೈರ್ಯಶಾಲಿಗಳಾದ ಎಂಬತ್ತು ಮಂದಿ ಇತರ ಯಾಜಕರು, ಅರಸ ಉಜ್ಜೀಯನ ಹಿಂದೆಯೇ ಹೋಗಿ ಅವನೆದುರಿಗೆ ನಿಂತು,
18 : “ಉಜ್ಜೀಯರೇ, ಸರ್ವೇಶ್ವರನಿಗೆ ಧೂಪಾರತಿ ಎತ್ತುವುದು ನಿಮ್ಮ ಕೆಲಸವಲ್ಲ; ಅದಕ್ಕೆ ಆರೋನನ ಸಂತಾನದವರ ಯಾಜಕರು ಪ್ರತಿಷ್ಠಿತರಾಗಿದ್ದಾರೆ. ಪವಿತ್ರಾಲಯವನ್ನು ಬಿಟ್ಟು ಹೋಗಿ; ನೀವು ಮಾಡುತ್ತಿರುವುದು ದ್ರೋಹ. ಇದಕ್ಕೆ ದೇವರಾದ ಸರ್ವೇಶ್ವರನಿಂದ ನಿಮಗೆ ಮರ್ಯಾದೆ ದೊರಕಲಾರದು,” ಎಂದರು.
19 : ಧೂಪಾರತಿ ಎತ್ತಬೇಕೆಂದು ಕೈಯಲ್ಲಿ ಧೂಪಕಳಸವನ್ನು ಹಿಡಿದಿದ್ದ ಉಜ್ಜೀಯನು ಕೋಪಗೊಂಡನು. ಸರ್ವೇಶ್ವರನ ಆಲಯದ ಧೂಪವೇದಿಯ ಬಳಿಯಲ್ಲಿ ನಿಂತು, ಯಾಜಕರೊಡನೆ ಅವನು ಸಿಟ್ಟಿನಿಂದ ಮಾತಾಡುತ್ತಿರುವಾಗಲೆ ಯಾಜಕರ ಸಮಕ್ಷಮದಲ್ಲೇ, ಅವನ ಹಣೆಯಲ್ಲಿ ಕುಷ್ಠಹುಟ್ಟಿತು.
20 : ಮಹಾಯಾಜಕನಾದ ಅಜರ್ಯನೂ ಎಲ್ಲ ಯಾಜಕರೂ ಅವನನ್ನು ದೃಷ್ಟಿಸಿ ನೋಡಿದಾಗ, ಅವನ ಹಣೆಯಲ್ಲಿ ಕುಷ್ಠ ಕಂಡುಬಂದ ಕಾರಣ, ಅವನನ್ನು ಶೀಘ್ರವಾಗಿ ಅಲ್ಲಿಂದ ಹೊರಗಟ್ಟಿದರು. ಸರ್ವೇಶ್ವರ, ತನ್ನನ್ನು ದಂಡಿಸಿದ್ದಾರೆಂದು ಅವನಿಗೆ ತಿಳಿಯಿತು. ಎಂದೇ ಅವನು ಶೀಘ್ರವಾಗಿ ಹೊರಗೆಹೋದನು.
21 : ಉಜ್ಜೀಯನು ಜೀವದಿಂದಿರುವವರೆಗೂ ಕುಷ್ಠರೋಗಿಯಾಗಿದ್ದು, ಸರ್ವೇಶ್ವರನ ಆಲಯಕ್ಕೆ ಬಾರದಂತೆ ಬಹಿಷ್ಕøತನಾದನು. ಕುಷ್ಠದ ನಿಮಿತ್ತ ಅವನು ಪ್ರತ್ಯೇಕವಾದ ಮನೆಯಲ್ಲಿ ವಾಸಿಸಬೇಕಾಯಿತು. ರಾಜಗೃಹಾಧಿಪತ್ಯವನ್ನೂ ಪ್ರಜಾಪಾಲನೆಯನ್ನೂ ಅವನ ಮಗ ಯೋತಾಮನು ನೋಡಿಕೊಳ್ಳುತ್ತಿದ್ದನು.
22 : ಉಜ್ಜೀಯನ ಉಳಿದ ಪೂರ್ವೋತ್ತರ ಚರಿತ್ರೆಯನ್ನು ಅಮೋಚನ ಮಗ ಯೆಶಾಯನೆಂಬ ಪ್ರವಾದಿ ಬರೆದಿದ್ದಾನೆ.
23 : ಉಜ್ಜೀಯನು ಸತ್ತು ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ಕುಷ್ಠರೋಗಿಯದೆಂದು, ರಾಜಕುಟುಂಬ ಸ್ಮಶಾನವಿದ್ದ ಹೊಲದಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗ ಯೋತಾಮನು ಅರಸನಾದನು.