Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ಯೆಹೋವಾಷನು ಅರಸನಾದಾಗ ಅವನಿಗೆ ಏಳು ವರ್ಷ ವಯಸ್ಸು. ಅವನು ಜೆರುಸಲೇಮಿನಲ್ಲಿ ನಲವತ್ತು ವರ್ಷ ಆಳಿದನು. ಬೇರ್ಷೆಬದವಳಾದ ಚಿಬ್ಯಳು ಅವನ ತಾಯಿ.
2 : ಯಾಜಕ ಯೆಹೋಯಾದನ ಜೀವಮಾನದಲ್ಲೆಲ್ಲಾ ಅವನು ಸರ್ವೇಶ್ವರನ ಚಿತ್ತಾನುಸಾರ ನಡೆದುಕೊಳ್ಳುತ್ತಿದ್ದನು.
3 : ಯೆಹೋಯಾದನು ಅರಸನಿಗೆ ಇಬ್ಬರು ಕನ್ಯೆಯರನ್ನು ಮದುವೆ ಮಾಡಿಕೊಟ್ಟನು; ಅವರಿಂದ ಗಂಡು ಹೆಣ್ಣು ಮಕ್ಕಳು ಜನಿಸಿದರು.
4 : ಕ್ರಮೇಣ ಯೆಹೋವಾಷನು ಸರ್ವೇಶ್ವರನ ಆಲಯವನ್ನು ದುರಸ್ತಿಮಾಡಿಸುವುದಕ್ಕೆ ಮನಸ್ಸು ಮಾಡಿದನು.
5 : ಯಾಜಕರನ್ನೂ ಲೇವಿಯರನ್ನೂ ಕೂಡಿಸಿ ಅವರಿಗೆ, “ನೀವು ಜುದೇಯದ ಪಟ್ಟಣಗಳಿಗೆ ಹೋಗಿ ನಿಮ್ಮ ದೇವರಾದ ಸರ್ವೇಶ್ವರನ ಆಲಯದ ವಾರ್ಷಿಕ ದುರಸ್ತಿಯ ಖರ್ಚಿಗಾಗಿ ಎಲ್ಲ ಇಸ್ರಯೇಲರಿಂದ ಹಣ ಕೂಡಿಸಿರಿ; ಈ ಕಾರ್ಯವನ್ನು ಶೀಘ್ರವಾಗಿ ನೆರವೇರಿಸಿರಿ,” ಎಂದು ಆಜ್ಞಾಪಿಸಿದನು.
6 : ಆದರೂ ಆ ಲೇವಿಯರು ಅವಸರಪಡಲಿಲ್ಲ. ಆದುದರಿಂದ ಅರಸನು ಅವರ ಮುಖ್ಯಸ್ಥನಾದ ಯೆಹೋಯಾದನನ್ನು ಕರೆಯಿಸಿ, “ಸರ್ವೇಶ್ವರನ ದಾಸನಾದ ಮೋಶೆಯ ವಿಧಿಗನುಸಾರ ಇಸ್ರಯೇಲ್ ಸಮಾಜದವರೆಲ್ಲರು ದೇವದರ್ಶನದ ಗುಡಾರಕ್ಕೆ ಕೊಡಬೇಕಾದ ಕಾಣಿಕೆಯನ್ನು ಈ ಲೇವಿಯರು ಯೆಹೂದ್ಯರಿಂದಲೂ ಜೆರುಸಲೇಮಿನ ಜನರಿಂದಲೂ ವಸೂಲಿ ಮಾಡುವಂತೆ ನೀನೇಕೆ ನೋಡಿಕೊಳ್ಳಲಿಲ್ಲ?
7 : ಅತಿದುಷ್ಟಳಾದ ಅತಲ್ಯಳ ಮನೆಯವರು ದೇವಾಲಯವನ್ನು ಹಾಳುಮಾಡಿ, ಸರ್ವೇಶ್ವರನ ಆಲಯದ ಪ್ರತಿಷ್ಠಿತ ವಸ್ತುಗಳನ್ನು ಬಾಳ್ ದೇವತೆಗಳಿಗಾಗಿ ಕೊಟ್ಟು ಬಿಟ್ಟಿದ್ದಾರಲ್ಲವೇ?,” ಎಂದು ಹೇಳಿದನು.
8 : ಅನಂತರ ಅರಸನು ಒಂದು ಪೆಟ್ಟಿಗೆಯನ್ನು ಮಾಡಿಸಿ ಅದನ್ನು ಸರ್ವೇಶ್ವರನ ಆಲಯದ ಬಾಗಿಲಿನ ಹೊರಗೆ ಇರಿಸಿದನು.
9 : ದೇವರ ದಾಸ ಮೋಶೆಯು ಮರುಭೂಮಿಯಲ್ಲಿ ವಿಧಿಸಿದಂತೆ ಇಸ್ರಯೇಲರು ಸರ್ವೇಶ್ವರನಿಗೆ ಕೊಡಬೇಕಾದ ಕಾಣಿಕೆಯನ್ನು ತಂದುಕೊಡಬೇಕು ಎಂಬುದಾಗಿ ಜುದೇಯದಲ್ಲೂ ಜೆರುಸಲೇಮಿನಲ್ಲೂ ಪ್ರಕಟಿಸಿದನು.
10 : ಎಲ್ಲ ಮುಖ್ಯಸ್ಥರೂ ಜನಸಾಮಾನ್ಯರೂ ಸಂತೋಷದಿಂದ, ಬೇಕಾಗುವಷ್ಟು ಹಣವನ್ನು ತಂದು ಪೆಟ್ಟಿಗೆಯಲ್ಲಿ ಹಾಕಿದರು.
11 : ಪೆಟ್ಟಿಗೆ ತುಂಬಾ ಹಣವಿರುತ್ತದೆಂದು ಕಂಡು ಬಂದಾಗಲೆಲ್ಲಾ ಲೇವಿಯರು ಪೆಟ್ಟಿಗೆಯನ್ನು ಆಸ್ಥಾನದ ಅಧಿಕಾರಿಗಳ ಬಳಿಗೆ ತರುತ್ತಿದ್ದರು. ಆಗ ಅರಸನ ಕಾರ್ಯದರ್ಶಿಯೂ ಮಹಾಯಾಜಕನ ಪ್ರತಿನಿಧಿಯೂ ಬಂದು ಅದನ್ನು ತೆರವು ಮಾಡಿ ಮತ್ತೆ ಅದರ ಸ್ಥಳದಲ್ಲಿಡುತ್ತಿದ್ದರು. ಅವರು ಪ್ರತಿದಿನವೂ ಈ ಪ್ರಕಾರ ಮಾಡುತ್ತಿದ್ದುದರಿಂದ ಬಹಳ ಹಣವನ್ನು ಸಂಗ್ರಹಿಸಲಾಯಿತು.
12 : ಅರಸನೂ ಯೆಹೋಯಾದನೂ ಅದನ್ನು ಸರ್ವೇಶ್ವರನ ಆಲಯದ ಕೆಲಸವನ್ನು ನಡೆಸುವವರಿಗೆ ಒಪ್ಪಿಸಿದರು. ಇವರು ಸರ್ವೇಶ್ವರನ ಆಲಯದ ದುರಸ್ತಿ ಕೆಲಸಕ್ಕಾಗಿ, ಶಿಲ್ಪಿಗಾರರನ್ನೂ ಬಡಗಿಯರನ್ನೂ ಅದನ್ನು ಭದ್ರಪಡಿಸುವುದಕ್ಕಾಗಿ ಕಮ್ಮಾರರನ್ನೂ ಕಂಚುಗಾರರನ್ನೂ ಹಚ್ಚಿದರು.
13 : ಕೆಲಸಮಾಡುವವರು ಬಹು ಶ್ರಮವಹಿಸಿದ್ದರಿಂದ ದುರಸ್ತಿ ಕೆಲಸ ಮುಂದುವರೆಯಿತು. ಅವರು ದೇವಾಲಯವನ್ನು ಭದ್ರಪಡಿಸಿ ಪೂರ್ವಸ್ಥಿತಿಗೆ ತಂದರು.
14 : ಕೆಲಸ ಮುಗಿದಾಗ ಅವರು ಉಳಿದ ಹಣವನ್ನು ಅರಸನಿಗೂ ಯೆಹೋಯಾದನಿಗೂ ಒಪ್ಪಿಸಿದರು. ಇವರು ಅದರಿಂದ ಸರ್ವೇಶ್ವರನ ಆಲಯದಲ್ಲಿ ನಡೆವ ಆರಾಧನೆಗೆ ಹಾಗು ಬಲಿಯರ್ಪಣೆಗೆ ಉಪಯೋಗವಾಗುವ ಧೂಪಾರತಿ, ¨ ಬೆಳ್ಳಿಬಂಗಾರದ ಪಾತ್ರೆ, ಮೊದಲಾದ ಸಾಮಾನುಗಳನ್ನು ಮಾಡಿಸಿದರು. ಯೆಹೋಯಾದನ ಜೀವಮಾನದಲ್ಲೆಲ್ಲಾ ಸರ್ವೇಶ್ವರನ ಆಲಯದಲ್ಲಿ ಪ್ರತಿನಿತ್ಯವೂ ದಹನ ಬಲಿ ಸಮರ್ಪಣೆ ಆಗುತ್ತಿತ್ತು.
15 : ಅವನು ಮುಪ್ಪಿನ ಮುದುಕನಾಗಿ ಮರಣಹೊಂದಿದನು. ಸಾಯುವಾಗ ಅವನಿಗೆ ನೂರಮೂವತ್ತು ವರ್ಷವಾಗಿತ್ತು.
16 : ಅವನು ಇಸ್ರಯೇಲರ ವಿಷಯದಲ್ಲೂ ದೇವರ ಮತ್ತು ದೇವಾಲಯದ ವಿಷಯದಲ್ಲೂ ಹಲವಾರು ಸತ್ಕಾರ್ಯಗಳನ್ನು ಮಾಡಿದ್ದರಿಂದ ಅವನ ಶವವನ್ನು ದಾವೀದ ನಗರದೊಳಗೆ ರಾಜಸ್ಮಶಾನದಲ್ಲಿ ಸಮಾಧಿ ಮಾಡಿದರು.
17 : ಯೆಹೋಯಾದನು ಮೃತನಾದ ಮೇಲೆ, ಜುದೇಯದ ಪದಾಧಿಕಾರಿಗಳು ಅರಸ ಯೆಹೋವಾಷನ ಬಳಿಗೆ ಬಂದು, ಅವನಿಗೆ ಅಡ್ಡಬಿದ್ದು ಅವನನ್ನು ಒಲಿಸಿಕೊಂಡರು.
18 : ಅಂದಿನಿಂದ ಅವರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನ ಆಲಯವನ್ನು ನಿರಾಕರಿಸಿ, ಅಶೇರ ಸ್ತಂಭಗಳನ್ನೂ ವಿಗ್ರಹಗಳನ್ನೂ ಪೂಜಿಸತೊಡಗಿದರು. ಅವರ ಈ ಅಪರಾಧದಿಂದ ಜುದೇಯದ ಮೇಲೂ ಜೆರುಸಲೇಮಿನ ಮೇಲೂ ದೈವಕೋಪ ಎರಗಿತು.
19 : ಸರ್ವೇಶ್ವರ ಅವರನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳುವುದಕ್ಕಾಗಿ ಅವರ ಬಳಿಗೆ ಪ್ರವಾದಿಗಳನ್ನು ಕಳುಹಿಸಿದರು. ಇವರ ಮುಖಾಂತರ ಎಷ್ಟು ಎಚ್ಚರಿಸಿದರೂ ಅವರು ಕಿವಿಗೊಡಲಿಲ್ಲ.
20 : ಆಗ ಯಾಜಕ ಯೆಹೋಯಾದನ ಮಗ ಜೆಕರ್ಯನು ದೇವಾತ್ಮನಿಂದ ಆವೇಶ ಉಳ್ಳವನಾದನು. ಅವನು ಜನರ ಎದುರಿಗೆ ಉನ್ನತ ಸ್ಥಾನದಲ್ಲಿ ನಿಂತು, “ದೇವರ ಮಾತನ್ನು ಕೇಳಿರಿ; ನೀವೇಕೆ ಸರ್ವೇಶ್ವರನ ಆಜ್ಞೆಗಳನ್ನು ಮೀರಿ, ನಿಮ್ಮನ್ನೆ ನಾಶಮಾಡಿಕೊಳ್ಳುತ್ತೀರಿ? ನೀವು ಸರ್ವೇಶ್ವರಸ್ವಾಮಿಯನ್ನು ಬಿಟ್ಟದ್ದರಿಂದ ಅವರೂ ನಿಮ್ಮನ್ನು ಬಿಟ್ಟು ಬಿಟ್ಟಿದ್ದಾರೆ,” ಎಂದನು.
21 : ಆಗ ಅವರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ, ಸರ್ವೇಶ್ವರನ ಆಲಯದ ಪ್ರಾಕಾರದಲ್ಲಿ ಅವನನ್ನು ಕಲ್ಲೆಸೆದು ಕೊಂದರು. ಇದು ಅರಸ ಯೆಹೋವಾಷನ ಅಪ್ಪಣೆಯಿಂದಲೇ ಆಯಿತು.
22 : ಜೆಕರೀಯನ ತಂದೆ ಯೆಹೋಯಾದನಿಂದ ತನಗಾದ ಉಪಕಾರವನ್ನು ನೆನಪುಮಾಡಿಕೊಳ್ಳದೆ ಈ ಯೆಹೋವಾಷನು ಅವನ ಮಗನನ್ನು ಕೊಲ್ಲಿಸಿದನು. ಜೆಕರೀಯನು ಸಾಯುವಾಗ, “ಸರ್ವೇಶ್ವರ ಸ್ವಾಮಿಯೇ ಇದನ್ನು ನೋಡಿ ತಕ್ಕ ಶಾಸ್ತಿಮಾಡಲಿ” ಎಂದನು.
23 : ವರ್ಷಾಂತ್ಯದಲ್ಲಿ ಸಿರಿಯಾದ ಸೈನ್ಯ ಯೆಹೋವಾಷನ ಮೇಲೆ ದಾಳಿಮಾಡಲು ಹೊರಟಿತು. ಆ ಸೈನ್ಯದವರು ಜುದೇಯ ನಾಡಿನೊಳಗೆ ನುಗ್ಗಿ ಜೆರುಸಲೇಮಿಗೆ ಬಂದು, ಇಸ್ರಯೇಲರ ಎಲ್ಲ ಜನಾಧಿಪತಿಗಳನ್ನು ನಿರ್ನಾಮ ಮಾಡಿ ಅವರಲ್ಲಿ ಸಿಕ್ಕಿದ ಕೊಳ್ಳೆಯನ್ನೆಲ್ಲಾ ದಮಸ್ಕದ ಅರಸನಿಗೆ ಕಳುಹಿಸಿದರು.
24 : ಸಿರಿಯಾದ ಸೈನ್ಯದಿಂದ ಬಂದ ಗುಂಪು ಚಿಕ್ಕದಾಗಿದ್ದರೂ ಯೆಹೂದ್ಯರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನನ್ನು ಬಿಟ್ಟು ಬಿಟ್ಟದ್ದರಿಂದ ಶಿಕ್ಷೆಗೆ ಗುರಿಯಾದರು. ತಮ್ಮದು ಮಹಾಸೈನ್ಯವಾಗಿದ್ದರೂ ಸಿರಿಯಾದವರ ಕೈಯಲ್ಲಿ ಸೋಲನ್ನು ಅನುಭವಿಸಿದರು; ಯೆಹೋವಾಷನಿಗೆ ದಂಡನೆಯಾಯಿತು.
25 : ಕಠಿಣವಾಗಿ ಗಾಯಗೊಂಡಿದ್ದ ಅವನನ್ನು ಸಿರಿಯಾದವರು ಬಿಟ್ಟುಹೋದರು. ಅವನ ಸೇವಕರೇ, ಯಾಜಕ ಯೆಹೋಯಾದನ ಮಗನ ವಧೆಯ ನಿಮಿತ್ತ, ಅವನಿಗೆ ವಿರೋಧವಾಗಿ ಒಳಸಂಚುಮಾಡಿ ಅವನನ್ನು ಹಾಸಿಗೆಯಲ್ಲೇ ಕೊಂದುಹಾಕಿದರು. ಅವನ ಶವವನ್ನು ದಾವೀದ ನಗರದೊಳಗೆ ಸಮಾಧಿಮಾಡಿದರು; ಆದರೆ ರಾಜಸ್ಮಶಾನದಲ್ಲಿ ಮಾಡಲಿಲ್ಲ.
26 : ಅಮ್ಮೋನ್ ದೇಶದ ಶಿಮ್ಯಾ ತೆಂಬಾಕೆಯ ಮಗ ಜಾಬಾದ್, ಮೋವಾಬ್ ದೇಶದ ಶಿಮ್ರೀತೆಂಬಾಕೆಯ ಮಗ ಯೆಹೋಜಾ ಬಾದ್ ಎಂಬವರೇ ಅವನಿಗೆ ವಿರೋಧವಾಗಿ ಒಳಸಂಚು ಮಾಡಿದವರು.
27 : ಅವನ ಮಕ್ಕಳ ವಿವರ, ಅವನಿಗೆ ವಿರುದ್ಧ ಹೇಳಲಾದ ಅನೇಕ ದೈವೋಕ್ತಿಗಳು ಹಾಗು ದೇವಾಲಯದ ದುರಸ್ತಿಯ ವೃತ್ತಾಂತ ಇವು ರಾಜರ ಗ್ರಂಥದ ವ್ಯಾಖ್ಯಾನದಲ್ಲಿ ಬರೆದಿರುತ್ತವೆ. ಅವನಿಗೆ ಬದಲಾಗಿ ಅವನ ಮಗ ಅಮಚ್ಯನು ಅರಸನಾದನು.

· © 2017 kannadacatholicbible.org Privacy Policy