Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ಏಳನೆಯ ವರ್ಷದಲ್ಲಿ ಯೆಹೋಯಾದನು ಧೈರ್ಯತಂದುಕೊಂಡು ಯೆರೋಹಾಮನ ಮಗ ಅಜರ್ಯ, ಯೆಹೋಹಾನನ ಮಗ ಇಷ್ಮಾಯೇಲ್, ಓಬೇದನ ಮಗ ಅಜರ್ಯ, ಅದಾಯನ ಮಗ ಮಾಸೇಯ, ಜಿಕ್ರಿಯ ಮಗ ಎಲೀಷಾಫಾಟ್ ಎಂಬ ಶತಾಧಿಪತಿಗಳೊಡನೆ ಒಂದು ಒಪ್ಪಂದ ಮಾಡಿಕೊಂಡನು.
2 : ಇವರು ಜುದೇಯದಲ್ಲೆಲ್ಲಾ ಸಂಚರಿಸಿ ಎಲ್ಲ ಪಟ್ಟಣಗಳಿಂದ ಲೇವಿಯರನ್ನೂ ಇಸ್ರಯೇಲರ ಗೋತ್ರಪ್ರಧಾನರನ್ನೂ ಕೂಡಿಸಿದರು. ಅವರೆಲ್ಲರು ಜೆರುಸಲೇಮಿಗೆ ಬಂದರು.
3 : ಹೀಗೆ ಕೂಡಿಬಂದವರೆಲ್ಲರು ದೇವಾಲಯದಲ್ಲಿ ಅರಸನೊಂದಿಗೆ ಒಪ್ಪಂದ ಮಾಡಿಕೊಂಡರು. ಯೆಹೋಯಾದನು ಅವರಿಗೆ, “ಇಗೋ, ರಾಜಪುತ್ರನು; ಸರ್ವೇಶ್ವರಸ್ವಾಮಿ ದಾವೀದನ ಸಂತಾನದವರಿಗೆ ಮಾಡಿದ ವಾಗ್ದಾನಕ್ಕನುಸಾರ ಅರಸನಾಗತಕ್ಕವನು ಇವನೇ.
4 : ಈಗ ನೀವು ಮಾಡತಕ್ಕದ್ದೇನೆಂದರೆ - ಸಬ್ಬತ್‍ದಿನ ದೇವಾಲಯದ ಸೇವೆಗೆ ಬರಬೇಕಾದ ಲೇವಿಯರಲ್ಲೂ ಯಾಜಕರಲ್ಲೂ ಮೂರರಲ್ಲೊಂದು ಭಾಗದವರು ದೇವಸ್ಥಾನದ ದ್ವಾರಪಾಲಕರಾಗಿ ನಿಲ್ಲಬೇಕು.
5 : ಇನ್ನೊಂದು ಭಾಗದವರು ಅರಮನೆಯನ್ನೂ ಮತ್ತೊಂದು ಭಾಗದವರು ಯೆಸೋದ್ ಬಾಗಿಲನ್ನೂ ಕಾಯಬೇಕು. ಇತರ ಜನರೆಲ್ಲರು ಸರ್ವೇಶ್ವರನ ಆಲಯದ ಪ್ರಾಕಾರದಲ್ಲೇ ಇರಬೇಕು.
6 : ಯಾಜಕರು ಹಾಗು ಸೇವೆಯಲ್ಲಿರುವ ಲೇವಿಯರು ಇವರನ್ನು ಬಿಟ್ಟು ಬೇರೆ ಯಾರೂ ಸರ್ವೇಶ್ವರನ ಆಲಯದೊಳಗೆ ಬರಬಾರದು. ಇವರು ಪರಿಶುದ್ಧರಾಗಿರುವುದರಿಂದ ಬರಬಹುದು. ಉಳಿದ ಜನರೆಲ್ಲರು ಸರ್ವೇಶ್ವರನ ಆಜ್ಞಾನುಸಾರ ಹೊರಗಿರಬೇಕು.
7 : ಲೇವಿಯರು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅರಸನ ಸುತ್ತಲೂ ನಿಂತು ಆಲಯದೊಳಕ್ಕೆ ನುಗ್ಗುವವರನ್ನು ಸಂಹರಿಸಬೇಕು. ಅರಸನು ಹೋಗಿ ಬರುವಾಗಲೆಲ್ಲಾ ಅವರು ಅವನ ಜೊತೆಯಲ್ಲೇ ಇರಬೇಕು,” ಎಂದು ಹೇಳಿದನು.
8 : ಲೇವಿಯರೂ ಎಲ್ಲ ಯೆಹೂದ್ಯರೂ ಯಾಜಕ ಯೆಹೋಯಾದನ ಆಜ್ಞೆಯಂತೆ ನಡೆದುಕೊಂಡರು. ಅವನು ಸಬ್ಬತ್ ದಿನದಲ್ಲಿ ಸೇವಾವಿಮುಕ್ತರಾದ ವರ್ಗದವರನ್ನು ಕಳುಹಿಸಿಬಿಡಲಿಲ್ಲ; ಆದುದರಿಂದ ಪ್ರತಿಯೊಬ್ಬನುಸಬ್ಬತ್‍ದಿನ ಮನೆಗೆ ಹೋಗಬೇಕಾಗಿದ್ದ ಮತ್ತು ಬರಬೇಕಾಗಿದ್ದ ತನ್ನ ಕೈ ಕೆಳಗಿನವರನ್ನು ಕೂಡಿಸಿಕೊಂಡನು.
9 : ದೇವಾಲಯದಲ್ಲಿಟ್ಟಿದ್ದ ದಾವೀದ ಅರಸನ ಬರ್ಜಿ, ಗುರಾಣಿ, ಖೇಡ್ಯಗಳೇ ಮುಂತಾದ ಆಯುಧಗಳನ್ನು ಯಾಜಕ ಯೆಹೋಯಾದನು ಶತಾಧಿಪತಿಗಳಿಗೆ ಕೊಟ್ಟನು.
10 : ಆಯುಧ ಪಾಣಿಗಳಾದ ಎಲ್ಲ ಜನರನ್ನು ಅರಸನ ಸುತ್ತಲು ದೇವಾಲಯದ ದಕ್ಷಿಣದಿಕ್ಕಿನ ಮೂಲೆಯಿಂದ ಬಲಿಪೀಠದವರೆಗೂ ಅಲ್ಲಿಂದ ಉತ್ತರದಿಕ್ಕಿನ ಮೂಲೆಯವರೆಗೂ ಅಲ್ಲಿಂದ ಉತ್ತರದಿಕ್ಕಿನ ಮೂಲೆಯವರೆಗೂ ಸಾಲಾಗಿ ನಿಲ್ಲಿಸಿದನು.
11 : ಆಮೇಲೆ ಅವನೂ ಅವನ ಮಕ್ಕಳೂ ರಾಜ ಪುತ್ರನನ್ನು ಹೊರಗೆ ಕರೆದುಕೊಂಡು ಬಂದು ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ಧರ್ಮಶಾಸ್ತ್ರವನ್ನು ಕೊಟ್ಟು, ಅವನಿಗೆ ರಾಜಾಭಿಷೇಕ ಮಾಡಿದರು. ಕೂಡಲೆ ಜನರು, “ಅರಸನು ಚಿರಂಜೀವಿಯಾಗಿರಲಿ!” ಎಂದು ಹರಸಿದರು.
12 : ಜನರು ಅತ್ತಿತ್ತ ಓಡಾಡುತ್ತಾ ಅರಸನನ್ನು ಹರಸುವ ಗದ್ದಲವನ್ನು ಅತಲ್ಯಳು ಕೇಳಿ ಅವರು ಕೂಡಿದ್ದ ಸರ್ವೇಶ್ವರನ ಆಲಯಕ್ಕೆ ಬಂದಳು
13 : ಅಲ್ಲಿ ಅರಸನು ಬಾಗಿಲಿನ ಬಳಿಯಲ್ಲಿರುವ ರಾಜಸ್ತಂಭದ ಹತ್ತಿರ ನಿಂತಿದ್ದನು. ಅಧಿಪತಿಗಳು ಹಾಗೂ ತುತೂರಿಗಳನ್ನು ಊದುವವರು ಅರಸನ ಹತ್ತಿರವಿದ್ದರು; ಜನಸಾಮಾನ್ಯರೆಲ್ಲರೂ ಸಂತೋಷದಿಂದ ಕೊಂಬೂದುತ್ತಿದ್ದರು. ಗಾಯಕರು ವಾದ್ಯಗಳನ್ನು ಬಾರಿಸುತ್ತಾ ಜನಪದ ಕೀರ್ತನೆಗಳನ್ನು ನುಡಿಸುತ್ತಿದ್ದರು. ಇದನ್ನು ಕಂಡಕೂಡಲೆ ಆಕೆ ಸಿಟ್ಟಿನಿಂದ ಬಟ್ಟೆಗಳನ್ನು ಹರಿದುಕೊಂಡು, “ದ್ರೋಹ! ದ್ರೋಹ!” ಎಂದು ಕೂಗಿದಳು.
14 : ಆಗ ಯಾಜಕ ಯೆಹೋಯಾದನು ಸೇನಾನಿಗಳಾದ ಶತಾಧಿಪತಿಗಳನ್ನು ಹೊರಗೆ ಕರೆದುಕೊಂಡು ಹೋಗಿ ಅವರಿಗೆ, “ಈಕೆಯನ್ನು ಸರ್ವೇಶ್ವರನ ಆಲಯದಲ್ಲಿ ಕೊಲ್ಲಬೇಡಿ; ಎರಡು ಸಾಲು ಸಿಪಾಯಿಗಳು ಈಕೆಯನ್ನು ನಡುವೆ ಸಾಗಿಸಿಕೊಂಡು ಹೊರಗೆ ತಳ್ಳಲಿ; ಮತ್ತು ಈಕೆಯನ್ನು ಹಿಂಬಾಲಿಸುವವರನ್ನು ಕತ್ತಿಯಿಂದ ಕೊಲ್ಲಿರಿ,” ಎಂದು ಆಜ್ಞಾಪಿಸಿದನು.
15 : ಅವರು ಆಕೆಯನ್ನು ಹಿಡಿದು ಅರಮನೆಗೆ ಹೋಗುವ ಕುದುರೆಬಾಗಿಲಿನ ತನಕ ಒಯ್ದು, ಅಲ್ಲಿ ಕೊಂದರು.
16 : ಅನಂತರ ಯೆಹೋಯಾದನು ಎಲ್ಲ ಜನರನ್ನೂ ಅರಸನನ್ನೂ ಪ್ರೇರಿಸಿ ತಾವೆಲ್ಲರೂ ಸರ್ವೇಶ್ವರನ ಪ್ರಜೆಗಳಾಗಿರುವೆವೆಂದು ಅವರೊಡನೆ ಪ್ರಮಾಣಮಾಡಿದನು.
17 : ತರುವಾಯ ಜನರೆಲ್ಲರೂ ಬಾಳ್‍ದೇವಸ್ಥಾನಕ್ಕೆ ಹೋಗಿ ಪೂಜಾರಿಯಾದ ಮತ್ತಾನನನ್ನು ಬಲಿಪೀಠಗಳ ಮುಂದೆಯೇ ಕೊಂದರು; ಆ ದೇವಸ್ಥಾನವನ್ನೂ ಅದರಲ್ಲಿದ್ದ ಪೀಠ ಹಾಗೂ ವಿಗ್ರಹಗಳನ್ನೂ ಹಾಳು ಮಾಡಿಬಿಟ್ಟರು.
18 : ಯೆಹೋಯಾದನು ಲೇವಿಯರಾದ ಯಾಜಕರ ಕೈಕೆಳಗೆ ಸರ್ವೇಶ್ವರನ ಆಲಯದ ಕಾವಲುಗಾರರನ್ನು ನೇಮಿಸಿದನು. ದಾವೀದನು ಆ ಯಾಜಕರನ್ನು ಸರ್ವೇಶ್ವರನ ಆಲಯದ ಸೇವೆಗಾಗಿ ವರ್ಗವರ್ಗಗಲಾಗಿ ವಿಭಾಗಿಸಿದ್ದನು. ದಾವೀದನು ನೇಮಿಸಿದ್ದ ಉತ್ಸಾಹ ಗಾಯನದೊಡನೆ, ಮೋಶೆಯ ಧರ್ಮಶಾಸ್ತ್ರಾನುಸಾರ ಸರ್ವೇಶ್ವರನಿಗೆ ದಹನಬಲಿ ಸಮರ್ಪಣೆ ಮಾಡುವುದು ಅವರ ಕರ್ತವ್ಯವಾಗಿ ಇತ್ತು.
19 : ಯಾವ ವಿಧದಲ್ಲಾದರೂ ಅಶುದ್ಧನಾದವನು ಸರ್ವೇಶ್ವರನ ಆಲಯವನ್ನು ಪ್ರವೇಶಿಸದಂತೆ ಯೆಹೋಯಾದನು ಆಯಾ ಬಾಗಿಲುಗಳಲ್ಲಿ ದ್ವಾರಪಾಲಕರನ್ನಿರಿಸಿದನು.
20 : ಆಮೇಲೆ ಅವನು ಶತಾಧಿಪತಿಗಳು, ಶ್ರೀಮಂತರು, ಜನನಾಯಕರು ಹಾಗೂ ಶ್ರೀಸಾಮಾನ್ಯರು ಇವರೊಡನೆ ಅರಸನನ್ನು ಸರ್ವೇಶ್ವರನ ಆಲಯದಿಂದ ಮೇಲಣ ಬಾಗಿಲಿನ ಮಾರ್ಗವಾಗಿ ಅರಮನೆಗೆ ಕರೆದುಕೊಂಡು ಹೋಗಿ ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು.
21 : ನಾಡಿನವರೆಲ್ಲರೂ ಬಹಳವಾಗಿ ಸಂತೋಷಪಟ್ಟರು; ಪಟ್ಟಣವು ಶಾಂತವಾಯಿತು; ಅತಲ್ಯಳನ್ನು ಕತ್ತಿಯಿಂದ ಸಂಹರಿಸಿದರು.

· © 2017 kannadacatholicbible.org Privacy Policy