Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ಜೆರುಸಲೇಮಿನವರು ಯೆಹೋರಾಮನಿಗೆ ಬದಲಾಗಿ ಅವನ ಕಿರಿಯ ಮಗ ಅಹಜ್ಯನನ್ನು ಅರಸನನ್ನಾಗಿ ಮಾಡಿದರು. ಅರೇಬಿಯರೊಡನೆ ಯೆಹೋರಾಮನ ಪಾಳೆಯಕ್ಕೆ ಬಂದ ಕೊಳ್ಳೆಗಾರರು ಅವನ ಹಿರಿಯ ಮಕ್ಕಳನ್ನೆಲ್ಲಾ ಕೊಂದುಬಿಟ್ಟಿದ್ದರು. ಆದುದರಿಂದ ಜುದೇಯದ ಅರಸ ಯೆಹೋರಾಮನ ಮಗ ಅಹಜ್ಯನು ಅರಸನಾದನು.
2 : ಪಟ್ಟಕ್ಕೆ ಬಂದಾಗ ಇವನಿಗೆ ನಲ್ವತ್ತೆರಡು ವರ್ಷ ಪ್ರಾಯ. ಇವನು ಜೆರುಸಲೇಮಿನಲ್ಲಿ ಒಂದು ವರ್ಷ ಆಳಿದನು; ಒಮ್ರಿಯ ಮೊಮ್ಮಗಳಾದ ಅತಲ್ಯ ಎಂಬಾಕೆ ಇವನ ತಾಯಿ;
3 : ತನ್ನ ತಾಯಿಯ ದುರ್ಬೋಧನೆಗೆ ಕಿವಿಗೊಟ್ಟು ಇವನೂ ದುರಾಚಾರಿಯಾಗಿ ಅಹಾಬನ ಮನೆಯವರ ಹೆಜ್ಜೆಜಾಡಿನಲ್ಲೇ ನಡೆದನು.
4 : ಇವನ ತಂದೆ ತೀರಿಹೋದ ಮೇಲೆ ಅಹಾಬನ ಕುಟುಂಬದವರೇ ಇವನಿಗೆ ಸಲಹೆಕೊಟ್ಟು ಇವನನ್ನು ಕೆಡಿಸುತ್ತಾ ಬಂದರು. ಈ ಕಾರಣ ಸರ್ವೇಶ್ವರನಿಗೆ ದ್ರೋಹಿಯಾಗಿ ನಡೆದನು.
5 : ಆ ಪ್ರೇರಣೆಯಿಂದಲೇ ಇಸ್ರಯೇಲರ ಅರಸನೂ ಅಹಾಬನ ಮಗನೂ ಆದ ಯೋರಾಮನ ಜೊತೆಯಲ್ಲಿ ಸಿರಿಯಾದ ಅರಸ ಹಜಾಯೇಲನಿಗೆ ವಿರುದ್ಧ ಯುದ್ಧಮಾಡುವುದಕ್ಕೆ ರಾಮೋತ್ ಗಿಲ್ಯಾದಿಗೆ ಹೋದನು. ಸಿರಿಯಾದವರು ಯೋರಾಮನನ್ನು ಯುದ್ಧದಲ್ಲಿ ಗಾಯಪಡಿಸಿದರು.
6 : ಆ ಗಾಯಗಳನ್ನು ಮಾಯಿಸಿಕೊಳ್ಳುವುದಕ್ಕಾಗಿ ಅವನು ಜೆಸ್ರೀಲಿಗೆ ಬಂದನು. ಅವನು ಅಸ್ವಸ್ಥನಾಗಿದ್ದುದರಿಂದ ಯೆಹೂದ್ಯರ ಅರಸ ಯೆಹೋರಾಮನ ಮಗನಾದ ಅಹಜ್ಯನು ಅವನನ್ನು ನೋಡುವುದಕ್ಕೆ ಅಲ್ಲಿಗೆ ಹೋದನು.
7 : ಅಹಜ್ಯನು ಯೋರಾಮನ ಬಳಿಗೆ ಹೋಗಿ ನಾಶವಾದದ್ದು ದೈವಸಂಕಲ್ಪದಿಂದಲೇ. ಅವನು ಆ ಸ್ಥಳವನ್ನು ಮುಟ್ಟಿದ ಕೂಡಲೆ ಯೋರಾಮನ ಜೊತೆಯಲ್ಲಿ ನಿಂಷಿಯ ಮಗ ಯೇಹುವನ್ನು ಎದುರುಗೊಳ್ಳುವುದಕ್ಕೆ ಹೋದನು. ಸರ್ವೇಶ್ವರ ಅಹಾಬನ ಮನೆಯನ್ನು ನಿರ್ನಾಮಮಾಡುವುದ ಕ್ಕಾಗಿಯೇ ಯೇಹುವಿಗೆ ರಾಜಾಭಿಷೇಕ ಮಾಡಿಸಿ ಇದ್ದರು.
8 : ಯೇಹುವು, ಅಹಾಬನ ಮನೆಯವರ ಮೇಲೆ ಆ ನಿರ್ಣಯವನ್ನು ನೆರವೇರಿಸುತ್ತಿರುವಾಗ ತನಗೆ ಸಿಕ್ಕಿದ ಯೆಹೂದ್ಯ ಪ್ರಮುಖರನ್ನೂ ಅಹಜ್ಯನಿಗೆ ಸೇವೆಮಾಡುತ್ತಿದ್ದ ಅವನ ಅಣ್ಣ ತಮ್ಮಂದಿರ ಮಕ್ಕಳನ್ನೂ ಕೊಲ್ಲಿಸಿದನು;
9 : ಆಮೇಲೆ ಅಹಜ್ಯನನ್ನು ಹುಡುಕಿಸಿದನು; ಅವನು ಸಮಾರಿಯದಲ್ಲಿ ಅಡಗಿಕೊಂಡಿದ್ದನು. ಜನರು ಅವನನ್ನು ಯೇಹುವಿನ ಬಳಿಗೆ ಹಿಡಿದು ತಂದು, ವಧಿಸಿದರು. “ಇವನು ಸರ್ವೇಶ್ವರನ ನೈಜಭಕ್ತನಾದ ಯೆಹೋಷಾಫಾಟನ ಮೊಮ್ಮಗನಲ್ಲವೇ?” ಎಂದುಕೊಂಡು ಅವನನ್ನು ಸಮಾಧಿಮಾಡಿದರು. ರಾಜ್ಯಾಧಿಕಾರವನ್ನು ವಹಿಸಿಕೊಳ್ಳಲು ಅಹಜ್ಯನ ಮನೆಯವರಲ್ಲಿ ಸಮರ್ಥರಾರೂ ಉಳಿಯಲಿಲ್ಲ.
10 : ಅಹಜ್ಯನು ಮರಣಹೊಂದಿದನೆಂಬುದನ್ನು ಅವನ ತಾಯಿ ಅತಲ್ಯಳು ಕೇಳಿದ ಕೂಡಲೆ ಜುದೇಯರ ರಾಜಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟಳು.
11 : ಆದರೆ ರಾಜಪುತ್ರಿಯಾದ ಯೆಹೋಷಬತ್ ಎಂಬಾಕೆ, ಹತರಾಗುವುದಕ್ಕಿದ್ದ ರಾಜಪುತ್ರರ ಮಧ್ಯೆಯಿಂದ ಅಹಜ್ಯನ ಮಗ ಯೆಹೋವಾಷನನ್ನು, ಯಾರಿಗೂ ತಿಳಿಯದಂತೆ ಅವನ ದಾದಿಯೊಡನೆ ತೆಗೆದುಕೊಂಡು ಹೋಗಿ ಮಲಗುವ ಕೋಣೆಯಲ್ಲಿ ಅಡಗಿಸಿಟ್ಟಳು. ಅರಸ ಯೆಹೋರಾಮನ ಮಗಳೂ ಅಹಜ್ಯನ ಸಹೋದರಿಯರೂ ಯಾಜಕ ಯೆಹೋಯಾದನ ಹೆಂಡತಿಯೂ ಆಗಿದ್ದ ಯೆಹೋಷಬತಳು ಹೀಗೆ ಅವನನ್ನು ಅತಲ್ಯಳಿಂದ ಹತನಾಗದಂತೆ ರಕ್ಷಿಸಿದಳು.
12 : ಅವನು ಆರು ವರ್ಷಗಳವರೆಗೂ ಅವರೊಡನೆ ಗುಪ್ತವಾಗಿ ದೇವಾಲಯದಲ್ಲಿ ಇದ್ದನು. ಆಗ ಅತಲ್ಯಳೇ ದೇಶವನ್ನಾಳುತ್ತಿದ್ದಳು.

· © 2017 kannadacatholicbible.org Privacy Policy