1 : ಯೆಹೋಷಾಫಾಟನು ಮೃತನಾಗಿ ಪಿತೃಗಳ ಬಳಿಗೆ ಸೇರಿ ದಾವೀದನಗರದಲ್ಲಿದ್ದ ಪೂರ್ವಿಕರ ಸ್ಮಶಾನಭೂಮಿಯಲ್ಲಿ ಸಮಾಧಿಹೊಂದಿದ ಮೇಲೆ, ಅವನ ಸ್ಥಾನದಲ್ಲಿ ಅವನ ಮಗ ಯೆಹೋರಾಮನು ಅರಸನಾದನು.
2 : ಇವನಿಗೆ ಅಜರ್ಯ, ಯೆಹೀಯೇಲ್, ಜೆಕರ್ಯ, ಅಜರ್ಯ, ಮೀಕಾಯೇಲ್, ಶೆಫಟ್ಯ ಎಂಬ ತಮ್ಮಂದಿರಿದ್ದರು. ಇವರೆಲ್ಲರು ಯೆಹೂದ್ಯರ ಅರಸ ಯೆಹೋಷಾಫಾಟನ ಮಕ್ಕಳು.
3 : ಇವರ ತಂದೆ ಇವರಿಗೆ ಜುದೇಯದ ಕೋಟೆಕೊತ್ತಲಗಳುಳ್ಳ ಪಟ್ಟಣಗಳನ್ನು ಅಲ್ಲದೆ, ಬೆಳ್ಳಿಬಂಗಾರ, ಅಮೂಲ್ಯ ವಸ್ತು ಇತ್ಯಾದಿ ವಿಶೇಷ ದಾನಗಳನ್ನು ಕೊಟ್ಟನು. ಆದರೆ ಯೆಹೋರಾಮನು ಹಿರಿಯ ಮಗನಾಗಿದ್ದುದರಿಂದ ಅವನಿಗೆ ರಾಜ್ಯವನ್ನು ಕೊಟ್ಟನು.
4 : ಯೆಹೋರಾಮನು ತನ್ನ ತಂದೆಯ ರಾಜ್ಯವನ್ನು ಪಡೆದುಕೊಂಡು, ತನ್ನ ಆಳ್ವಿಕೆಯನ್ನು ಸ್ಥಿರಗೊಳಿಸಿಕೊಂಡ ಮೇಲೆ, ತನ್ನ ಎಲ್ಲ ಸಹೋದರರನ್ನೂ ಕೆಲವು ಮಂದಿ ಇಸ್ರಯೇಲ್ ಪ್ರಮುಖರನ್ನೂ ಕತ್ತಿಯಿಂದ ಸಂಹರಿಸಿದನು.
5 : ಯೆಹೋರಾಮನು ಪಟ್ಟಕ್ಕೆ ಬಂದಾಗ ಇವನಿಗೆ ಮೂವತ್ತೆರಡು ವರ್ಷ ವಯಸ್ಸು. ಇವನು ಜೆರುಸಲೇಮಿನಲ್ಲಿ ಎಂಟು ವರ್ಷ ಆಳಿದನು.
6 : ಅಹಾಬನ ಮಗಳನ್ನು ಇವನು ಮದುವೆಮಾಡಿ ಕೊಂಡದ್ದರಿಂದ ಅಹಾಬನ ಕುಟುಂಬದವರಾದ ಇಸ್ರಯೇಲ್ ಅರಸರ ಹೆಜ್ಜೆಯಲ್ಲೇ ನಡೆದು ಸರ್ವೇಶ್ವರನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.
7 : ಆದರೂ ಸರ್ವೇಶ್ವರ ದಾವೀದನಿಗೆ, “ನಿನ್ನ ಮತ್ತು ನಿನ್ನ ಸಂತಾನದವರ ದೀಪವನ್ನು ಎಂದೂ ನಂದಿಸುವುದಿಲ್ಲ,” ಎಂದು ಪ್ರಮಾಣ ಮಾಡಿ ಹೇಳಿದ್ದರಿಂದ ಆ ದಾವೀದನ ಮನೆತನದವರನ್ನು ನಾಶಮಾಡುವುದಕ್ಕೆ ಇಷ್ಟಪಡಲಿಲ್ಲ.
8 : ಯೆಹೋರಾಮನ ಕಾಲದಲ್ಲಿ ಎದೋಮ್ಯರು ಯೆಹೂದ್ಯರಿಗೆ ವಿರುದ್ಧ ದಂಗೆಯೆದ್ದರು; ಸ್ವತಂತ್ರರಾಗಿ ತಾವೇ ತಮಗೊಬ್ಬ ಅರಸನನ್ನು ನೇಮಿಸಿಕೊಂಡರು.
9 : ಆಗ ಯೆಹೋರಾಮನು ತನ್ನ ಸರದಾರರನ್ನೂ ಎಲ್ಲ ರಥಬಲವನ್ನೂ ಕೂಡಿಸಿಕೊಂಡು ಜೋರ್ಡನ್ ನದಿಯನ್ನು ದಾಟಿದನು. ಎದೋಮ್ಯರು ಬಂದು ಅವನನ್ನು ಸುತ್ತಿಕೊಳ್ಳಲು ಅವನು ರಾತ್ರಿಯಲ್ಲೇ ದಂಡೆತ್ತಿ ಹೋಗಿ ಅವರನ್ನೂ ಅವರ ರಥಬಲದ ಅಧಿಪತಿಗಳನ್ನೂ ಸೋಲಿಸಿ ಪಾರಾದನು.
10 : ಯೆಹೂದ್ಯರಿಗೆ ವಿರುದ್ಧ ದಂಗೆಯೆದ್ದ ಎದೋಮ್ಯರು ಅಂದಿನಿಂದ ಇಂದಿನವರೆಗೂ ಸ್ವತಂತ್ರರಾಗಿದ್ದಾರೆ. ಆ ಕಾಲದಲ್ಲೇ ಲಿಬ್ನದವರೂ ಅವನ ಕೈಯಿಂದ ತಪ್ಪಿಸಿಕೊಂಡು ಸ್ವತಂತ್ರರಾದರು. ಯೆಹೋರಾಮನು ತನ್ನ ಪಿತೃಗಳ ದೇವರಾದ ಸರ್ವೇಶ್ವರನನ್ನು ಬಿಟ್ಟದ್ದೇ ಇದಕ್ಕೆ ಕಾರಣ.
11 : ಅವನು ಜುದೇಯದ ಗುಡ್ಡಗಳಲ್ಲಿ ಪೂಜಾಸ್ಥಳಗಳನ್ನು ಏರ್ಪಡಿಸಿ, ಜೆರುಸಲೇಮಿನವರು ದೇವದ್ರೋಹ ಮಾಡುವಂತೆ ಪ್ರೇರೇಪಿಸಿ, ಯೆಹೂದ್ಯರನ್ನು ಸನ್ಮಾರ್ಗದಿಂದ ತಪ್ಪಿಸಿದನು.
12 : ಹೀಗಿರಲು, ಪ್ರವಾದಿ ಎಲೀಯನು ಪತ್ರದ ಮೂಲಕ ಅವನಿಗೆ, “ನಿನ್ನ ಪೂರ್ವಜ ದಾವೀದನ ದೇವರಾಗಿರುವ ಸರ್ವೇಶ್ವರನ ಮಾತನ್ನು ಕೇಳು: ನೀನು ನಿನ್ನ ತಂದೆ ಯೆಹೋಷಾಫಾಟನ ಮಾರ್ಗದಲ್ಲಿ ಹಾಗು ಯೆಹೂದ್ಯರ ಅರಸ ಆಸನ ಮಾರ್ಗದಲ್ಲಿ ನಡೆಯಲಿಲ್ಲ;
13 : ಇಸ್ರಯೇಲ್ ಅರಸರ ಹೆಜ್ಜೆಯಲ್ಲೇ ನಡೆದು, ಅಹಾಬನ ಮನೆಯವರಲ್ಲಿ ಪ್ರಬಲವಾಗಿದ್ದ ದೇವ ದ್ರೋಹವನ್ನು ಮಾಡುವಂತೆ ಯೆಹೂದ್ಯರನ್ನೂ ಜೆರುಸಲೇಮಿನವರನ್ನೂ ಪ್ರೇರೇಪಿಸಿದೆ; ಮತ್ತು ನಿನ್ನ ತಂದೆಯ ಕುಟುಂಬದವರೂ ನಿನಗಿಂತ ಉತ್ತಮರೂ ನಿನ್ನ ಸಹೋದರರೂ ಆಗಿದ್ದವರನ್ನು ವಧಿಸಿದೆ;
14 : ಆದುದರಿಂದ ಸರ್ವೇಶ್ವರ ನಿನ್ನ ಪ್ರಜೆಯನ್ನೂ ಮಡದಿಮಕ್ಕಳನ್ನೂ ಸರ್ವಸ್ವವನ್ನೂ ಮಹಾ ಆಪತ್ತಿಗೆ ಗುರಿಮಾಡುವರು.
15 : ನಿನಗಾದರೋ ಕರುಳುಬೇನೆಯ ಕಠಿಣರೋಗ ಬರುವುದು. ಅದು ಬಹುದಿನಗಳವರೆಗೂ ವಾಸಿ ಆಗದು; ಕಡೆಯಲ್ಲಿ ನಿನ್ನ ಕರುಳುಗಳು ಹೊರಗೆ ಬೀಳುವುವು,” ಎಂದು ತಿಳಿಸಿದನು.
16 : ಸರ್ವೇಶ್ವರ ಫಿಲಿಷ್ಟಿಯರನ್ನೂ ಸುಡಾನಿನ ನೆರೆಯವರಾದ ಅರೇಬಿಯರನ್ನೂ ಯೆಹೋರಾಮನಿಗೆ ವಿರೋಧಿಗಳಾಗುವಂತೆ ಪ್ರಚೋದಿಸಿದರು.
17 : ಅವರು ಜುದೇಯದ ಮೇಲೆ ಯುದ್ಧಕ್ಕೆ ಬಂದು, ನಾಡಿನೊಳಗೆ ನುಗ್ಗಿ, ಅರಮನೆಯಲ್ಲಿ ಸಿಕ್ಕಿದ ಎಲ್ಲ ಸೊತ್ತನ್ನೂ ಅರಸನ ಮಡದಿ ಮಕ್ಕಳನ್ನೂ ಸೆರೆಗೆ ಒಯ್ದರು. ಅವನಿಗೆ ಕಿರಿಯ ಮಗ ಯೆಹೋವಾಹಾಜನ ಹೊರತು ಮಕ್ಕಳೇ ಉಳಿಯಲಿಲ್ಲ.
18 : ಇಷ್ಟೆಲ್ಲಾ ಆದ ಮೇಲೆ, ಸರ್ವೇಶ್ವರ ಅವನ ಕರುಳುಗಳಲ್ಲಿ ವಾಸಿಯಾಗಲಾರದ ರೋಗವನ್ನು ಉಂಟುಮಾಡಿದರು.
19 : ಕಾಲಾಂತರದಲ್ಲಿ ಅಂದರೆ, ಸುಮಾರು ಎರಡು ವರ್ಷಗಳಾದ ಮೇಲೆ, ಅದೇ ರೋಗದ ನಿಮಿತ್ತ ಕರುಳುಗಳು ಹೊರಬಿದ್ದವು. ಅವನು ಕಡುಬೇನೆಯಿಂದ ಸತ್ತನು. ಅವನ ಪೂರ್ವಿಕರಿಗೆ ಧೂಪಹಾಕಿದಂತೆ ಅವನ ಪ್ರಜೆಗಳು ಅವನಿಗೆ ಹಾಕಲಿಲ್ಲ.
20 : ಅವನು ಪಟ್ಟಕ್ಕೆ ಬಂದಾಗ ಮೂವತ್ತ ಎರಡು ವರ್ಷದವನಾಗಿದ್ದನು. ಜೆರುಸಲೇಮಿನಲ್ಲಿ ಎಂಟು ವರ್ಷ ಆಳಿದನು. ಅವನು ತೀರಿಹೋದಾಗ ಯಾರೂ ಶೋಕಿಸಲಿಲ್ಲ. ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು; ಆದರೆ ರಾಜಸ್ಮಶಾನದಲ್ಲಿ ಮಾಡಲಿಲ್ಲ.