1 : ಸ್ವಲ್ಪ ಕಾಲವಾದ ಮೇಲೆ ಮೋವಾಬ್ಯರು, ಅಮ್ಮೋನಿಯರು ಹಾಗು ಮೆಗೂನ್ಯರಲ್ಲಿ ಕೆಲವರು ಯೆಹೋಷಾಫಾಟನಿಗೆ ವಿರುದ್ಧ ಯುದ್ಧಕ್ಕೆ ಬಂದರು.
2 : ದೂತರು ಬಂದು ಯೆಹೋಷಾಫಾಟನಿಗೆ, “ಮಹಾಸೈನ್ಯ ಸಮೂಹವೊಂದು ನಿನಗೆ ವಿರೋಧವಾಗಿ ಲವಣ ಸಮುದ್ರದ ಆಚೆಯಲ್ಲಿರುವ ಆರಾಮ್ ಪ್ರಾಂತ್ಯದ ಕಡೆಯಿಂದ ಬಂದು ಈಗ ಏಂಗೆದಿಯೆನಿಸಿಕೊಳ್ಳುವ ಹಚೆಚೋನ್ ತಾಮಾರಿನಲ್ಲಿ ಇರುತ್ತಾರೆ,” ಎಂದು ತಿಳಿಸಿದರು.
3 : ಯೆಹೋಷಾಫಾಟನು ಇದನ್ನು ಕೇಳಿ ಭಯಪಟ್ಟು, ಸರ್ವೇಶ್ವರನನ್ನೇ ಆಶ್ರಯಿಸಿಕೊಳ್ಳಬೇಕೆಂದು ನಿರ್ಣಯಿಸಿಕೊಂಡನು. ಯೆಹೂದ್ಯರೆಲ್ಲರೂ ಉಪವಾಸ ಮಾಡಬೇಕೆಂದು ಪ್ರಕಟಿಸಿದನು.
4 : ಆಗ ಯೆಹೂದ್ಯರು ಸರ್ವೇಶ್ವರನ ಸಹಾಯವನ್ನು ಕೇಳಿಕೊಳ್ಳುವುದಕ್ಕಾಗಿ ತಮ್ಮ ಎಲ್ಲಾ ಪಟ್ಟಣಗಳಿಂದ ಆತನ ಸನ್ನಿಧಿಯಲ್ಲಿ ಕೂಡಿಬಂದರು.
5 : ಯೆಹೂದ್ಯರೂ ಜೆರುಸಲೇಮಿನವರೂ ಸರ್ವೇಶ್ವರನ ಆಲಯದ ಹೊಸ ಪ್ರಾಕಾರದಲ್ಲಿ ಸಭೆಯಾಗಿ ನೆರೆದುಬಂದಾಗ, ಯೆಹೋಷಾಫಾಟನು ಅದರ ಮುಂದೆ ನಿಂತು,
6 : “ಸರ್ವೇಶ್ವರಾ, ನಮ್ಮ ಪಿತೃಗಳ ದೇವರೇ, ಪರಲೋಕದಲ್ಲಿ ದೇವರಾಗಿ ಇರುವವರು ನೀವಲ್ಲವೇ? ನೀವು ಜನಾಂಗಗಳ ಎಲ್ಲ ರಾಜ್ಯಗಳನ್ನೂ ಆಳುತ್ತಿದ್ದೀರಿ. ನಿಮ್ಮ ಹಸ್ತದಲ್ಲಿ ಬಲ ಪರಾಕ್ರಮಗಳಿವೆ; ನಿಮ್ಮೆದುರಿನಲ್ಲಿ ಯಾರೂ ನಿಲ್ಲಲಾರರು.
7 : ನಮ್ಮ ದೇವರಾದ ನೀವು ನಿಮ್ಮ ಪ್ರಜೆಗಳಾದ ಇಸ್ರಯೇಲರ ಎದುರಿನಿಂದ ಈ ನಾಡಿನ ನಿವಾಸಿಗಳನ್ನು ಹೊರದೂಡಿಸಿ, ಇದನ್ನು ಮಿತ್ರ ಅಬ್ರಹಾಮನ ಸಂತಾನದವರಿಗೆ ಶಾಶ್ವತ ಸೊತ್ತಾಗಿ ಕೊಟ್ಟಿರಲ್ಲವೆ?
8 : ಅವರು ಈ ನಾಡಿನಲ್ಲಿ ನೆಲೆಗೊಂಡು ಇದರಲ್ಲಿ ನಿಮ್ಮ ಹೆಸರಿಗಾಗಿ ಒಂದು ಪವಿತ್ರಾಲಯವನ್ನು ಕಟ್ಟಿದರು.
9 : ತಮ್ಮ ಮೇಲೆ ಖಡ್ಗವಿಧಿ, ಘೋರವ್ಯಾಧಿ, ಕ್ಷಾಮಡಾಮರ, ಮೊದಲಾದ ಆಪತ್ತುಗಳು ಬರುವಾಗ, ನಿಮ್ಮ ನಾಮಮಹಿಮೆ ಇರುವ ಈ ಆಲಯದ ಮುಂದೆಯೂ ನಿಮ್ಮ ಮುಂದೆಯೂ ನಿಂತು, ತಮ್ಮ ಇಕ್ಕಟ್ಟಿನಲ್ಲಿ ನಿಮಗೆ ಮೊರೆ ಇಡುವುದಾದರೆ ನೀವು ಆಲಿಸಿ ರಕ್ಷಿಸುವಿರಿ ಎಂದುಕೊಂಡರಷ್ಟೆ.
10 : ಈ ಅಮ್ಮೋನಿಯರನ್ನು, ಮೋವಾಬ್ಯರನ್ನು ಹಾಗೂ ಸೇಯಿರ ಪರ್ವತ ಪ್ರದೇಶದವರನ್ನು ನೋಡಿರಿ; ಇಸ್ರಯೇಲರು ಈಜಿಪ್ಟ್ ದೇಶದಿಂದ ಬರುತ್ತಿದ್ದಾಗ, ಇವರ ದೇಶದಲ್ಲಿ ನುಗ್ಗಬಾರದೆಂದು ನಿಮ್ಮಿಂದ ಅಪ್ಪಣೆ ಹೊಂದಿ, ಇವರನ್ನು ಸಂಹರಿಸದೆ ಬೇರೆ ಮಾರ್ಗವಾಗಿ ಹೋದರಲ್ಲವೆ?
11 : ಈಗ ಅವರು ಉಪಕಾರಕ್ಕೆ ಅಪಕಾರಮಾಡಿ, ನೀವು ನಮಗೆ ಅನುಗ್ರಹಿಸಿದ ಸೊತ್ತಿನಿಂದ ನಮ್ಮನ್ನು ಹೊರತಳ್ಳುವುದಕ್ಕಾಗಿ, ನಮ್ಮ ಮೇಲೆ ಯುದ್ಧಕ್ಕೆ ಬಂದಿರುತ್ತಾರೆ.
12 : ನಮ್ಮ ದೇವರೇ, ಅವರನ್ನು ದಂಡಿಸದೆ ಬಿಡುವಿರೋ? ನಮ್ಮ ಮೇಲೆ ಬಂದಿರುವ ಈ ಮಹಾಸಮೂಹದ ಮುಂದೆ ನಿಲ್ಲುವುದಕ್ಕೆ ನಮ್ಮಲ್ಲಿ ಬಲವಿಲ್ಲ; ಏನು ಮಾಡಬೇಕೆಂದೂ ತಿಳಿಯದು; ನಮ್ಮ ಕಣ್ಣುಗಳು ನಿಮ್ಮನ್ನೇ ನೋಡುತ್ತಿವೆ,” ಎಂದು ಪ್ರಾರ್ಥಿಸಿದನು.
13 : ಎಲ್ಲ ಯೆಹೂದ್ಯರೂ ಅವರ ಮಡದಿಮಕ್ಕಳೂ ಸರ್ವೇಶ್ವರನ ಸನ್ನಿಧಿಯಲ್ಲಿ ನಿಂತಿದ್ದರು.
14 : ಆಗ ಆ ಸಮೂಹದೊಳಗೆ ಆಸಾಫನ ವಂಶದವನೂ ಲೇವಿಯನೂ ಆದ ಯಹಜೀಯೇಲನ ಮೇಲೆ ಸರ್ವೇಶ್ವರನ ಆತ್ಮ ಇಳಿದು ಬಂದಿತು. ಇವನು ಮತ್ತನ್ಯನಿಗೆ ಹುಟ್ಟಿದ ಯೆಗೀಯೇಲನ ಮರಿಮಗ, ಬೆನಾಯನ ಮೊಮ್ಮಗ, ಹಾಗೂ ಜೆಕರ್ಯನ ಮಗ.
15 : ಅವನು, “ಜುದೇಯದ ಹಾಗು ಜೆರುಸಲೇಮಿನ ಎಲ್ಲ ಜನರೇ, ಅರಸ ಯೆಹೋಷಾಫಾಟನೇ, ಸರ್ವೇಶ್ವರ ಸ್ವಾಮಿ ಹೇಳುವುದನ್ನು ಕೇಳಿರಿ: ಈ ಮಹಾ ಸೈನ್ಯಸಮೂಹದ ನಿಮಿತ್ತ ಕಳವಳಗೊಳ್ಳಬೇಡಿ; ಹದರಬೇಡಿ. ಈ ಯುದ್ಧ ನಿಮ್ಮದಲ್ಲ, ದೇವರದೇ.
16 : ನಾಳೆ ಬೆಳಿಗ್ಗೆ ಅವರಿಗೆ ವಿರೋಧವಾಗಿ ಹೊರಡಿರಿ; ಇಗೋ ಅವರು ಹಚ್ಚೀಚ್‍ಗಟ್ಟದ ಮಾರ್ಗವಾಗಿ ಬರುತ್ತಾರೆ. ಯೆರುವೇಲ್ ಮರುಭೂಮಿಯ ಮುಂದಿರುವ ಕಣಿವೆಯ ತುದಿಯಲ್ಲಿ ಅವರನ್ನು ಸಂಧಿಸುವಿರಿ.
17 : ಈ ಸಾರಿ ನೀವು ಯುದ್ಧಮಾಡುವುದು ಅವಶ್ಯವಿಲ್ಲ. ಯೆಹೂದ್ಯರೇ, ಜೆರುಸಲೇಮಿನವರೇ, ಸುಮ್ಮನೆ ನಿಂತುಕೊಂಡು ಸರ್ವೇಶ್ವರ ನಿಮಗಾಗಿ ನಡೆಸುವ ರಕ್ಷಣಾಕಾರ್ಯವನ್ನು ನೋಡಿರಿ; ಹೆದರಬೇಡಿ, ಕಳವಳಗೊಳ್ಳಬೇಡಿ. ನಾಳೆ ಅವರೆದುರಿಗೆ ಹೊರಡಿರಿ; ಸರ್ವೇಶ್ವರ ನಿಮ್ಮೊಂದಿಗೆ ಇರುವರು!” ಎಂದು ಹೇಳಿದನು.
18 : ಆಗ ಯೆಹೋಷಾಫಾಟನು ನೆಲದ ಮಟ್ಟಿಗೂ ತಲೆಬಾಗಿದನು. ಎಲ್ಲಾ ಯೆಹೂದ್ಯರೂ ಜೆರುಸಲೇಮಿನವರೂ ಸರ್ವೇಶ್ವರನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು.
19 : ಆಮೇಲೆ ಲೇವಿಯರಲ್ಲಿ ಕೆಹಾತ್ಯರೂ ಕೋರಹಿಯರೂ ಎದ್ದು, ಇಸ್ರಯೇಲ್ ದೇವರಾದ ಸರ್ವೇಶ್ವರನನ್ನು ಮಹಾಸ್ವರದಿಂದ ಕೀರ್ತಿಸಿದರು.
20 : ಅವರು ಮರುದಿನ ಬೆಳಿಗ್ಗೆ ಎದ್ದು ತೆಕೋವ ಮರುಭೂಮಿಗೆ ಹೊರಟರು. ಹೊರಡುವಾಗ ಯೆಹೋಷಾಫಾಟನು ಎದ್ದು ನಿಂತು, “ಯೆಹೂದ್ಯರೇ, ಜೆರುಸಲೇಮಿನವರೇ, ನನ್ನ ಮಾತನ್ನು ಕೇಳಿರಿ; ಸರ್ವೇಶ್ವರನಲ್ಲಿ ಭರವಸೆ ಇಡಿ, ಆಗ ಸುರಕ್ಷಿತರಾಗುವಿರಿ; ಸರ್ವೇಶ್ವರನ ಪ್ರವಾದಿಗಳನ್ನು ನಂಬಿರಿ, ಆಗ ಸಾರ್ಥಕರಾಗುವಿರಿ,” ಎಂದು ಹೇಳಿದನು.
21 : ಆಮೇಲೆ ಜನರ ಸಮ್ಮತಿಯಿಂದ ಸರ್ವೇಶ್ವರನಿಗಾಗಿ ಗಾಯನ ಮಾಡುವುದಕ್ಕಾಗಿ ಕೆಲವರನ್ನು ಆರಿಸಿಕೊಂಡನು. ಅವರಿಗೆ, “ಪರಿಶುದ್ಧತ್ವವೆಂಬ ಭೂಷಣದೊಡನೆ ಯೋಧರ ಮುಂದೆ ಹೋಗುತ್ತಾ, ‘ಸರ್ವೇಶ್ವರನಿಗೆ ಕೃತಜ್ಞತಾ ಸ್ತುತಿಮಾಡಿರಿ, ಅವರ ಅಚಲಪ್ರೀತಿ ಶಾಶ್ವತ’ ಎಂದು ಭಜಿಸಿರಿ,” ಎಂಬುದಾಗಿ ಆಜ್ಞಾಪಿಸಿದನು.
22 : ಅವರು ಉತ್ಸಾಹಧ್ವನಿಯಿಂದ ಕೀರ್ತಿಸುವುದಕ್ಕೆ ಪ್ರಾರಂಭಿಸಿದರು. ಆಗ ಸರ್ವೇಶ್ವರ ಯೆಹೂದ್ಯರಿಗೆ ವಿರುದ್ಧ ಬಂದ ಅಮ್ಮೋನಿಯರನ್ನೂ ಮೋವಾಬ್ಯರನ್ನೂ ಸೇಯೀರ್ ಪರ್ವತದವರನ್ನೂ ನಶಿಸುವುದಕ್ಕಾಗಿ ಅವರಲ್ಲಿ ಹೊಂಚು ಹಾಕುವವರನ್ನು ಇರಿಸಿದ್ದರು. ಅಮ್ಮೋನಿಯರೂ ಮೋವಾಬ್ಯರೂ ಸೇಯೀರ್ ಪರ್ವತದವರ ಮೇಲೆ ಬಿದ್ದು ಅವರನ್ನು ಪೂರ್ಣವಾಗಿ ಸಂಹರಿಸಿಬಿಟ್ಟರು.
23 : ಅವರನ್ನು ಮುಗಿಸಿಬಿಟ್ಟ ಮೇಲೆ ತಾವೇ ಒಬ್ಬರನ್ನೊಬ್ಬರು ಕೊಲ್ಲುವುದಕ್ಕೆ ಪ್ರಾರಂಭಿಸಿದರು.
24 : ಯೆಹೂದ್ಯರು ಮರುಭೂಮಿಯ ಬುರುಜಿಗೆ ಬಂದು ಆ ಸೈನ್ಯಸಮೂಹವಿದ್ದ ಕಡೆಗೆ ನೋಡಿದಾಗ ನೆಲದ ಮೇಲೆ ಬಿದ್ದಿರುವ ಹೆಣಗಳು ಹೊರತಾಗಿ ಜೀವದಿಂದುಳಿದವರು ಯಾರೂ ಕಾಣಿಸಲಿಲ್ಲ.
25 : ಯೆಹೋಷಾಫಾಟನೂ ಅವನ ಜನರೂ ಸುಲಿಗೆಮಾಡುವುದಕ್ಕಾಗಿ ಅಲ್ಲಿಗೆ ಹೋದರು. ಅವರಿಗೆ ದ್ರವ್ಯ, ವಸ್ತ್ರ, ಶ್ರೇಷ್ಠಾಯುಧ, ಇವುಗಳು ರಾಶಿರಾಶಿಯಾಗಿ ಸಿಕ್ಕಿದವು. ಅವರು ಹೊರಲಾರದಷ್ಟನ್ನೂ ಸುಲಿದುಕೊಂಡರು. ಕೊಳ್ಳೆಯ ಮೊತ್ತ ಹೆಚ್ಚಾಗಿದ್ದುದರಿಂದ ಅವರು ಮೂರು ದಿನಗಳವರೆಗೂ ಕೂಡಿಸುತ್ತಿದ್ದರು.
26 : ನಾಲ್ಕನೆಯ ದಿನದಲ್ಲಿ ಬೆರಾಕ ಕಣಿವೆಗೆ ಕೂಡಿಬಂದರು. ಅಲ್ಲಿ ಅವರು ಸರ್ವೇಶ್ವರನನ್ನು ಸ್ತುತಿಸಿದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ ‘ಬೆರಾಕ ಕಣಿವೆ’ ಎಂಬ ಹೆಸರಿದೆ.
27 : ಆಮೇಲೆ ಯೆಹೂದ್ಯರು, ಜೆರುಸಲೇಮಿನವರು, ಅವರ ಮುಂಗಡೆಯಲ್ಲಿ ಯೆಹೋಷಾಫಾಟನು, ಸರ್ವೇಶ್ವರ ತಮಗೆ ಶತ್ರುಗಳ ಮೇಲೆ ಜಯವನ್ನು ಅನುಗ್ರಹಿಸಿದ್ದಾರೆಂದು ಜಯಘೋಷ ಮಾಡುತ್ತಾ ಜೆರುಸಲೇಮಿಗೆ ಹಿಂದಿರುಗಿದರು.
28 : ಸ್ವರಮಂಡಲ, ಕಿನ್ನರಿ, ತುತೂರಿ ಇವುಗಳೊಡನೆ ಜೆರುಸಲೇಮಿನಲ್ಲಿರುವ ಸರ್ವೇಶ್ವರನಾಲಯಕ್ಕೆ ಬಂದರು.
29 : ಸರ್ವೇಶ್ವರಾ ಸ್ವಾಮಿಯೇ ಇಸ್ರಯೇಲರ ಪರವಾಗಿ ಶತ್ರುಗಳೊಡನೆ ಯುದ್ಧ ಮಾಡಿದರೆಂಬ ಸುದ್ದಿ ಅನ್ಯದೇಶಗಳ ರಾಜ್ಯಗಳವರೆಗೆ ಮುಟ್ಟಿದಾಗ, ಅವರೆಲ್ಲರು ಬಹಳ ಭಯಭೀತರಾದರು.
30 : ಹೀಗೆ ದೇವ ಅನುಗ್ರಹದಿಂದ ಸುತ್ತಮುತ್ತಲಿನ ವೈರಿಗಳ ಭಯ ತಪ್ಪಿ, ಯೆಹೋಷಾಫಾಟನ ರಾಜ್ಯಕ್ಕೆ ಸಮಾಧಾನ ಉಂಟಾಯಿತು.
31 : ಯೆಹೂದ್ಯರ ಅರಸ ಯೆಹೋಷಾಫಾಟನು ಪಟ್ಟಕ್ಕೆ ಬಂದಾಗ ಮೂವತ್ತೈದು ವರ್ಷದವನಾಗಿದ್ದನು. ಇವನು ಜೆರುಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಶಿಲ್ಹಿಯ ಮಗಳಾದ ಅಜೂಬಳೆಂಬಾಕೆ ಇವನ ತಾಯಿ.
32 : ತಂದೆ ಆಸನ ಮಾರ್ಗದಲ್ಲಿ ಇವನು ತಪ್ಪದೆ ನಡೆಯುತ್ತಾ ಸರ್ವೇಶ್ವರನ ದೃಷ್ಟಿಯಲ್ಲಿ ಒಳ್ಳೆಯವನಾಗಿ ಇದ್ದನು.
33 : ಆದರೂ ಪೂಜಾಸ್ಥಳಗಳನ್ನು ಹಾಳು ಮಾಡಲ್ಲಿ. ಜನರ ಮನಸ್ಸು ಇನ್ನೂ ತಮ್ಮ ಪಿತೃಗಳ ದೇವರ ಮೇಲೆ ನಾಟಿರಲಿಲ್ಲ.
34 : ಯೆಹೋಷಾಫಾಟನ ಉಳಿದ ಪೂರ್ವೋತ್ತರ ಚರಿತ್ರೆ ಇಸ್ರಯೇಲ್ ರಾಜರ ಗ್ರಂಥದಲ್ಲಿ ಹನಾನೀಯನ ಮಗ ಯೇಹುವಿನ ವೃತ್ತಾಂತದಲ್ಲಿ ದಾಖಲಾಗಿದೆ.
35 : ಒಮ್ಮೆ ಯೆಹೂದ್ಯರ ಅರಸ ಯೆಹೋಷಾಫಾಟನು, ಬಹು ದುರಾಚಾರಿಯಾದ ಇಸ್ರಯೇಲರ ಅರಸ ಅಹಜ್ಯನೊಡನೆ ಒಂದು ಒಪ್ಪಂದ ಮಾಡಿಕೊಂಡನು.
36 : ಅವರು ತಾರ್ಷಿಷಿಗೆ ಹೋಗುವುದಕ್ಕಾಗಿ ಹಡಗುಗಳನ್ನು ಕಟ್ಟಬೇಕೆಂದು ಒಪ್ಪಂದಮಾಡಿಕೊಂಡು ಅವುಗಳನ್ನು ಎಚ್ಯೋನ್ಗೆ ಬೆರಿನಲ್ಲಿ ಕಟ್ಟಿಸಿದರು.
37 : ಆಗ ಮಾರೇಷಾ ಊರಿನ ದೋದಾವಾಹುವಿನ ಮಗ ಎಲೀಯೆಜರನು ಯೆಹೋಷಾಪಾಟನಿಗೆ ವಿರೋಧವಾಗಿ, “ನೀನು ಅಹಜ್ಯನೊಡನೆ ಒಪ್ಪಂದಮಾಡಿಕೊಂಡದ್ದರಿಂದ ಸರ್ವೇಶ್ವರ ನಿನ್ನ ಕೆಲಸವನ್ನು ಹಾಳು ಮಾಡುವರು,” ಎಂದು ಪ್ರವಾದಿಸಿದನು. ಆ ಹಡಗುಗಳು ಒಡೆದು ಹೋದುದರಿಂದ ತಾರ್ಷಿಷಿಗೆ ಹೊರಡಲೇ ಇಲ್ಲ.