Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ಸೊಲೊಮೋನನು ಸರ್ವೇಶ್ವರನ ಹೆಸರಿಗಾಗಿ ಒಂದು ಆಲಯವನ್ನೂ ತನಗಾಗಿ ಒಂದು ಅರಮನೆಯನ್ನೂ ಕಟ್ಟಿಸಬೇಕೆಂದು ಮನಸ್ಸು ಮಾಡಿದನು.
2 : ಎಪ್ಪತ್ತು ಸಾವಿರ ಮಂದಿ ಹೊರೆಹೊರುವವರನ್ನೂ ಎಂಬತ್ತು ಸಾವಿರ ಮಂದಿ ಕಲ್ಲುಗಣಿಯಲ್ಲಿ ಕೆಲಸಮಾಡುವವರನ್ನೂ ಇವರ ಮೇಲ್ವಿಚಾರಣೆಗಾಗಿ ಮೂರು ಸಾವಿರದ ಆರುನೂರು ಮಂದಿ ಮೇಸ್ತ್ರಿಗಳನ್ನೂ ಎಣಿಸಿ ನೇಮಿಸಿದನು
3 : ಇದಲ್ಲದೆ, ಟೈರಿನ ಅರಸ ಹೂರಾಮನಿಗೆ ದೂತರ ಮುಖಾಂತರ, “ನನ್ನ ತಂದೆ ದಾವೀದ ತಮ್ಮ ವಾಸಕ್ಕೆ ಅರಮನೆಯನ್ನು ಕಟ್ಟಿಸಿಕೊಳ್ಳುವುದಕ್ಕಾಗಿ ನೀನು ದೇವದಾರುಮರಗಳನ್ನು ಕಳುಹಿಸಿದೆ.
4 : ಈಗ ನಾನು ನನ್ನ ದೇವರಾದ ಸರ್ವೇಶ್ವರನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಿಸಬೇಕೆಂದಿದ್ದೇನೆ. ಇಸ್ರಯೇಲರಿಗಿರುವ ಶಾಶ್ವತ ನಿಯಮದ ಪ್ರಕಾರ ಅವರ ಸನ್ನಿಧಿಯಲ್ಲಿ ಸುಗಂಧ ದ್ರವ್ಯಗಳಿಂದ ಧೂಪಾರತಿ ಎತ್ತಬೇಕಾಗಿದೆ. ಪ್ರತಿನಿತ್ಯ ನೈವೇದ್ಯದ ರೊಟ್ಟಿಗಳನ್ನಿಡಬೇಕಾಗಿದೆ; ಬೆಳಿಗ್ಗೆ, ಸಂಜೆ, ಸಬ್ಬತ್‍ದಿನ, ಅಮಾವಾಸ್ಯೆ ಹಾಗೂ ನಮ್ಮ ದೇವರಾದ ಸರ್ವೇಶ್ವರನ ಜಾತ್ರೆಯ ವೇಳೆಗಳಲ್ಲಿ ದಹನಬಲಿಗಳನ್ನು ಅರ್ಪಿಸಬೇಕಾಗಿದೆ. ಇದಕ್ಕಾಗಿ ಒಂದು ಆಲಯವನ್ನು ಅವರಿಗೆ ಪ್ರತಿಷ್ಠಿಸಬೇಕೆಂದಿದ್ದೇನೆ.
5 : ನಮ್ಮ ದೇವರು ಎಲ್ಲಾ ದೇವರುಗಳಿಗಿಂತ ದೊಡ್ಡವರು! ನಾನು ಕಟ್ಟಿಸುವ ಆಲಯವೂ ದೊಡ್ಡದಾಗಿರಬೇಕು.
6 : ಅವರಿಗೆ ಆಲಯವನ್ನು ಕಟ್ಟುವುದಕ್ಕೆ ಯಾರೂ ಶಕ್ತರಲ್ಲ; ಆಕಾಶವೂ ಉನ್ನತೋನ್ನತವಾದ ಆಕಾಶವೂ ಅವರ ವಾಸಕ್ಕೆ ಸಾಲದಿರುವಲ್ಲಿ ಅವರಿಗಾಗಿ ಆಲಯವನ್ನು ಕಟ್ಟುವುದಕ್ಕೆ ಯಾರು ತಾನೆ ಶಕ್ತರು? ನಾನು ಅವರ ಸನ್ನಿಧಿಯಲ್ಲಿ ಧೂಪಾರತಿ ಎತ್ತುವ ಒಂದು ಸ್ಥಳವನ್ನು ಕಟ್ಟಿಸಬಲ್ಲೆನೇ ಹೊರತು, ಅವರ ವಾಸಕ್ಕಾಗಿ ಆಲಯವನ್ನು ಕಟ್ಟಿಸುವುದಕ್ಕೆ ನಾನು ಎಷ್ಟು ಮಾತ್ರಕ್ಕೂ ಶಕ್ತನಲ್ಲ.
7 : ಹೀಗಿರಲು, ಬಂಗಾರ, ಬೆಳ್ಳಿ, ತಾಮ್ರ ಕಬ್ಬಿಣ ಇವುಗಳ ಕೆಲಸ ಮಾಡುವುದರಲ್ಲಿ, ಊದಾ, ಕೆಂಪು, ನೀಲವರ್ಣಗಳ ಬಟ್ಟೆಯನ್ನು ನೇಯುವುದರಲ್ಲಿ ಹಾಗೂ ಚಿತ್ರ ಕೆತ್ತುವುದರಲ್ಲಿ ನಿಫುಣನಾದ ಒಬ್ಬ ವ್ಯಕ್ತಿಯನ್ನು ನನ್ನ ಬಳಿಗೆ ಕಳುಹಿಸು; ನನ್ನ ತಂದೆ ಗೊತ್ತುಮಾಡಿದಂಥ ಮತ್ತು ನನ್ನೊಡನೆ ಜುದೇಯದಲ್ಲೂ ಜೆರುಸಲೆಮಿನಲ್ಲೂ ಇರುವಂಥ ಕಲಾ ಕುಶಲರೊಂದಿಗೆ ಅವನು ಕೆಲಸ ಮಾಡಲಿ.
8 : ಅಂತೆಯೇ ಲೆಬನೋನಿನಿಂದ ದೇವದಾರು ಮರವನ್ನೂ ತುರಾಯಿಮರವನ್ನೂ ಸುಗಂಧದ ಮರವನ್ನೂ ನನಗೆ ಕಳುಹಿಸಬೇಕು. ನಿನ್ನ ಆಳುಗಳು ಲೆಬನೋನಿನ ಮರಗಳನ್ನು ಕಡಿಯುವುದರಲ್ಲಿ ಜಾಣರೆಂದು ನನಗೆ ಗೊತ್ತಿದೆ. ನಿನ್ನ ಆಳುಗಳ ಜೊತೆಯಲ್ಲಿ ನನ್ನ ಆಳುಗಳೂ ಕೆಲಸಮಾಡುವರು.
9 : ಬೃಹದಾಕಾರವಾದ ಹಾಗೂ ಭವ್ಯವಾದ ದೇವಾಲಯವನ್ನು ನಾನು ಕಟ್ಟಿಸಬೇಕಾಗಿದೆ. ಆದುದರಿಂದ ಹೆಚ್ಚು ಮರವನ್ನು ಸಿದ್ಧಪಡಿಸಬೇಕು.
10 : ಮರಕಡಿಯುವ ನಿನ್ನ ಆಳುಗಳಿಗಾಗಿ ಎರಡು ಸಾವಿರ ಮೆಟ್ರಿಕ್ ಟನ್ ಜವೆಗೋದಿ, ನಾಲ್ಕು ಲಕ್ಷ ಲೀಟರ್ ದ್ರಾಕ್ಷಾರಸ ಹಾಗೂ ನಾಲ್ಕು ಲಕ್ಷ ಲೀಟರ್ ಎಣ್ಣೆ ಇವುಗಳನ್ನು ಕೊಡುವೆನು,” ಎಂದು ಹೇಳಿಸಿದನು.
11 : ಟೈರಿನ ಅರಸ ಹೂರಾಮನು ಪತ್ರದ ಮೂಲಕ ಸೊಲೊಮೋನನಿಗೆ, “ಸರ್ವೇಶ್ವರ ತಮ್ಮ ಪ್ರಜೆಗಳನ್ನು ಪ್ರೀತಿಸುವವರು. ಆದುದರಿಂದ ನಿನ್ನನ್ನು ಆ ಜನರ ಅರಸನನ್ನಾಗಿ ನೇಮಿಸಿದ್ದಾರೆ.
12 : ಭೂಮ್ಯಾಕಾಶಗಳನ್ನು ಉಂಟುಮಾಡಿದ ಇಸ್ರಯೇಲ್ ದೇವರಾದ ಸರ್ವೇಶ್ವರ ತಮಗಾಗಿ ಒಂದು ದೇವಾಲಯವನ್ನೂ ರಾಜನಿಗೋಸ್ಕರ ಒಂದು ಅರಮನೆಯನ್ನೂ ಕಟ್ಟಿಸತಕ್ಕ ಬುದ್ಧಿ, ಜ್ಞಾನ ಹಾಗೂ ವಿವೇಕಗಳುಳ್ಳ ಒಬ್ಬ ಮಗನನ್ನು ಅರಸನಾದ ದಾವೀದನಿಗೆ ಕೊಟ್ಟಿದ್ದಾರೆ; ಅವರಿಗೆ ಸ್ತೋತ್ರವಾಗಲಿ!
13 : ನಾನು ಈಗ ಜ್ಞಾನಿಯೂ ಕಲಾ ಪ್ರವೀಣನೂ ಆದ ಒಬ್ಬ ವ್ಯಕ್ತಿಯನ್ನು ಕಳುಹಿಸುತ್ತೇನೆ; ಇವನ ಹೆಸರು ಹೂರಾಮಾಬೀ.
14 : ಇವನು ದಾನ್ ಕುಲದ ಒಬ್ಬ ಸ್ತ್ರೀಯ ಮಗ; ಅವನ ತಂದೆ ಟೈರಿನವನು. ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣ, ಕಲ್ಲು, ಮರ ಇವುಗಳ ಕೆಲಸವನ್ನು ಮಾಡುವುದಕ್ಕೂ ಊದಾ, ನೀಲಿ, ಕೆಂಪುವರ್ಣಗಳುಳ್ಳ ನಾರುಬಟ್ಟೆಗಳನ್ನು ನೇಯುವುದಕ್ಕೂ ಎಲ್ಲಾ ತರದ ಕೆತ್ತನೆಯ ಕೆಲಸ ಮಾಡುವುದಕ್ಕೂ ತನಗೆ ಒಪ್ಪಿಸಲಾಗುವ ಎಲ್ಲ ಕಲಾತ್ಮಕ ಕೆಲಸಗಳನ್ನು ನಡೆಸುವುದಕ್ಕೂ ಇವನು ಸಮರ್ಥನು. ನೀನೂ ನಿನ್ನ ತಂದೆ ದಾವೀದನೂ ಗೊತ್ತುಮಾಡಿದ ಕಲಾ ಕುಶಲರೊಡನೆ ಇವನು ಕೆಲಸಮಾಡಲಿ.
15 : ಈಗ ನನ್ನ ಒಡೆಯರಾದ ತಾವು ಮಾತುಕೊಟ್ಟ ಮೇರೆಗೆ ಗೋದಿ, ಜವೆಗೋದಿ, ಎಣ್ಣೆ, ದ್ರಾಕ್ಷಾರಸ ಇವುಗಳನ್ನು ತನ್ನ ಸೇವಕರಿಗೆ ಕಳುಹಿಸಬೇಕು.
16 : ನಾವಾದರೋ ತಮಗೆ ಬೇಕಾದ ಎಲ್ಲಾ ಮರಗಳನ್ನು ಲೆಬನೋನಿನಲ್ಲಿ ಕಡಿದು, ತೆಪ್ಪಗಳಾಗಿ ಕಟ್ಟಿ, ಸಮುದ್ರಮಾರ್ಗವಾಗಿ ಜೊಪ್ಪಕ್ಕೆ ಕಳುಹಿಸುವೆವು; ಅಲ್ಲಿಂದ ನೀವು ಅವುಗಳನ್ನು ಜೆರುಸಲೇಮಿಗೆ ತರಿಸಿಕೊಳ್ಳಬಹುದು,” ಎಂದು ಉತ್ತರ ಕೊಟ್ಟನು.
17 : ಸೊಲೊಮೋನನು, ತನ್ನ ತಂದೆ ದಾವೀದನು ಮಾಡಿಸಿದ ಜನಗಣತಿಯ ಆಧಾರದಿಂದ, ಇಸ್ರಯೇಲ್ ನಾಡಿನಲ್ಲಿ ಪ್ರವಾಸಿಗಳಾಗಿದ್ದ ಎಲ್ಲಾ ಅನ್ಯಜನರನ್ನು ಲೆಕ್ಕಿಸಿದನು. ಅವರು ಒಂದು ಲಕ್ಷ ಐವತ್ತ ಮೂರು ಸಾವಿರದ ಆರುನೂರು ಮಂದಿ ಇದ್ದರು.
18 : ಅವರಲ್ಲಿ ಹೊರೆಹೊರುವುದಕ್ಕಾಗಿ ಎಪ್ಪತ್ತು ಸಾವಿರ ಮಂದಿಯನ್ನೂ ಕಲ್ಲುಗಣಿಗಳಲ್ಲಿ ಕೆಲಸಮಾಡುವುದಕ್ಕಾಗಿ ಎಂಬತ್ತು ಸಾವಿರ ಮಂದಿಯನ್ನೂ ಕೆಲಸದವರ ಮೇಲ್ವಿಚಾರಣೆಗಾಗಿ ಮೂರು ಸಾವಿರದ ಆರುನೂರು ಮಂದಿಯನ್ನೂ ನೇಮಿಸಿದನು.

· © 2017 kannadacatholicbible.org Privacy Policy