Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ಯೆಹೋಷಾಫಾಟನಿಗೆ ಧನಘನತೆ ಬಹಳವಾಗಿತ್ತು. ಅವನು ಅಹಾಬನೊಡನೆ ಬೀಗತನಮಾಡಿ ಕೆಲವು ವರ್ಷಗಳಾದ ನಂತರ ಅವನ ಬಳಿಗೆ ಸಮಾರಿಯಕ್ಕೆ ಹೋದನು.
2 : ಅಹಾಬನು ಅವನಿಗೂ ಅವನೊಡನೆ ಬಂದ ಜನರಿಗೂ ಅನೇಕಾನೇಕ ದನಕುರಿಗಳನ್ನು ವಧಿಸಿ ಔತಣವನ್ನೇರ್ಪಡಿಸಿದನು. ರಾಮೋತ್ ಗಿಲ್ಯಾದಿಗೆ ಮುತ್ತಿಗೆ ಹಾಕಲು ತನ್ನ ಸಂಗಡ ಬರಬೇಕೆಂದು ಅವನನ್ನು ಪ್ರೇರಿಸಿದನು.
3 : ಇಸ್ರಯೇಲರ ಅರಸ ಅಹಾಬನು ಯೆಹೂದ್ಯರ ಅರಸ ಯೆಹೋಷಾಫಾಟನನ್ನು, “ನನ್ನ ಜೊತೆಯಲ್ಲಿ ರಾಮೋತ್‍ಗಿಲ್ಯಾದಿಗೆ ಬರುತ್ತೀಯಾ?” ಎಂದು ಕೇಳಿದನು. ಅವನು, “ನಾನೂ ನೀನೂ ನನ್ನ ಜನರೂ ನಿನ್ನ ಜನರೂ ಒಂದೆ ಅಲ್ಲವೇ? ನಿನ್ನ ಜೊತೆಯಲ್ಲಿ ಯುದ್ಧಕ್ಕೆ ಖಂಡಿತ ಬರುತ್ತೇನೆ,” ಎಂದು ಉತ್ತರ ಕೊಟ್ಟನು.
4 : ಅನಂತರ, “ಸರ್ವೇಶ್ವರನ ಸನ್ನಿಧಿಯಲ್ಲಿ ಈ ಬಗ್ಗೆ ವಿಚಾರಿಸು,” ಎಂದು ಇಸ್ರಯೇಲರ ಅರಸನನ್ನು ಕೇಳಿಕೊಂಡನು.
5 : ಆಗ ಇಸ್ರಯೇಲರ ಅರಸನು ತನ್ನ ರಾಜ್ಯದಲ್ಲಿದ್ದ ನಾನೂರು ಮಂದಿ ಪ್ರವಾದಿಗಳನ್ನು ಸೇರಿಸಿ, “ನಾವು ರಾಮೋತ್‍ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೋಗಬಹುದೋ? ಬಾರದೋ?”, ಎಂದು ಕೇಳಿದನು. ಅವರು, “ಹೋಗಬಹುದು, ದೇವರು ಅದನ್ನು ಅರಸನ ಕೈಗೆ ಒಪ್ಪಿಸುವರು,” ಎಂದರು.
6 : ಆದರೆ ಯೆಹೋಷಾಫಾಟನು ಇಸ್ರಯೇಲರ ಅರಸನನ್ನು, “ಸರ್ವೇಶ್ವರನ ಪ್ರವಾದಿಗಳಲ್ಲಿ ಇವರ ಹೊರತಾಗಿ ನಾವು ವಿಚಾರಿಸಬಹುದಾದ ಬೇರೆ ಪ್ರವಾದಿ ಇಲ್ಲವೇ?” ಎಂದು ಕೇಳಿದನು. ಅವನು,
7 : “ನಮಗಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸಬಲ್ಲವನಾದ ಇನ್ನೊಬ್ಬ ಪ್ರವಾದಿ ಇರುತ್ತಾನೆ; ಅವನು ಇಮ್ಲನ ಮಗನಾದ ಮೀಕಾಯೆಹು ಎಂಬವನು. ಆದರೆ ನಾನು ಅವನನ್ನು ದ್ವೇಷಿಸುತ್ತೇನೆ; ಅವನು ನನ್ನನ್ನು ಕುರಿತು ಯಾವಾಗಲೂ ಶುಭವನ್ನಲ್ಲ, ಅಶುಭವನ್ನೇ ಮುಂತಿಳಿಸುತ್ತಾನೆ,” ಎಂದು ಉತ್ತರಕೊಟ್ಟನು. ಅದಕ್ಕೆ ಯೆಹೋಷಾಫಾಟನು, “ಅರಸರು ಹಾಗೆನ್ನಬಾರದು,” ಎಂದನು.
8 : ಆಗ ಇಸ್ರಯೇಲರ ಅರಸನು ಒಬ್ಬ ಕಂಚುಕಿಯನ್ನು ಕರೆದು, “ಬೇಗ ಹೋಗಿ ಇಮ್ಲನ ಮಗ ಮೀಕಾಯೆಹುವನ್ನು ಕರೆದುಕೊಂಡು ಬಾ,” ಎಂದು ಆಜ್ಞಾಪಿಸಿದನು.
9 : ಇಸ್ರಯೇಲರ ಅರಸನೂ ಯೆಹೂದ್ಯರ ಅರಸ ಯೆಹೋಷಾಫಾಟನೂ ರಾಜವಸ್ತ್ರಗಳನ್ನು ಧರಿಸಿಕೊಂಡು ಸಮಾರಿಯ ಪಟ್ಟಣದ ಹೆಬ್ಬಾಗಿಲಿನ ಹತ್ತಿರವಿರುವ ಬಯಲಿನಲ್ಲಿ ತಮ್ಮ ತಮ್ಮ ಆಸನಗಳ ಮೇಲೆ ಕುಳಿತುಕೊಂಡರು; ಎಲ್ಲ ಪ್ರವಾದಿಗಳು ಅವರ ಮುಂದೆ ಪರವಶರಾಗಿ ಮಾತಾಡತೊಡಗಿದರು.
10 : ಅವರಲ್ಲಿ ಕೆನಾನನ ಮಗ ಚಿದ್ಕೀಯ ಎಂಬವನು ಕಬ್ಬಿಣದ ಕೊಂಬುಗಳನ್ನು ಮಾಡಿಸಿ ತಲೆಗೆ ಕಟ್ಟಿಕೊಂಡು ಬಂದು, “ಕೊಂಬುಗಳಿಂದಲೋ ಎಂಬಂತೆ ನೀವು ಸಿರಿಯಾದವರನ್ನು ಇರಿದು ಕೊಂದು ಹಾಕುವಿರಿ, ಎಂಬುದಾಗಿ ಸರ್ವೇಶ್ವರ ಹೇಳುತ್ತಾರೆ,” ಎಂದನು.
11 : ಉಳಿದ ಪ್ರವಾದಿಗಳೂ ಇದೇ ತರದ ಮಾತುಗಳನ್ನು ನುಡಿದು, “ರಾಮೋತ್‍ಗಿಲ್ಯಾದಿಗೆ ಹೋಗಿ, ನೀವು ಕೃತಾರ್ಥರಾಗಿ ಬರುವಿರಿ; ಸರ್ವೇಶ್ವರ ಅದನ್ನು ಅರಸರ ಕೈಗೆ ಒಪ್ಪಿಸುವರು,” ಎಂದರು.
12 : ಇತ್ತ ಮೀಕಾಯೆಹುವನ್ನು ಕರೆಯಲು ಬಂದಿದ್ದ ದೂತನು, “ನೋಡಿ ಎಲ್ಲ ಪ್ರವಾದಿಗಳು ಏಕ ಮನಸ್ಸಿನಿಂದ ಅರಸರಿಗೆ ಶುಭವನ್ನೇ ಮುಂತಿಳಿಸುತ್ತಿರುತ್ತಾರೆ. ದಯವಿಟ್ಟು ನೀವೂ ಅವರಂತೆ ಶುಭವನ್ನೇ ಮುಂತಿಳಿಸಿ,” ಎಂದು ಹೇಳಿದನು.
13 : ಅದಕ್ಕೆ ಮೀಕಾಯೆಹುವು, “ಸರ್ವೇಶ್ವರನಾಣೆ, ನನ್ನ ದೇವರು ಹೇಳುವುದನ್ನು ಮಾತ್ರ ನುಡಿಯುತ್ತೇನೆ,” ಎಂದು ಉತ್ತರ ಕೊಟ್ಟನು.
14 : ಅವನು ಅರಸನ ಬಳಿಗೆ ಬಂದಾಗ ಅರಸನು, “ಮೀಕಾ ಯೆಹುವೇ, ನಾವು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೋಗಬಹುದೋ? ಬಾರದೋ?” ಎಂದು ಕೇಳಿದನು. ಅವನು “ಹೋಗಬಹುದು, ಕೃತಾರ್ಥರಾಗಿ ಬರುವಿರಿ; ವೈರಿಗಳು ನಿಮ್ಮ ಕೈವಶವಾಗುವರು,” ಎಂದು ಹೇಳಿದನು.
15 : ಆಗ ಅರಸನು ಅವನಿಗೆ, “ಸತ್ಯವನ್ನೇ ತಿಳಿಸಬೇಕೆಂದು ಸರ್ವೇಶ್ವರನ ಹೆಸರಿನಲ್ಲಿ ನಾನು ನಿನ್ನಿಂದ ಎಷ್ಟು ಸಾರಿ ಪ್ರಮಾಣ ಮಾಡಿಸಬೇಕು?” ಎಂದನು.
16 : ಆಗ ಅವನು, “ಇಸ್ರಯೇಲರೆಲ್ಲರೂ ಕುರುಬನಿಲ್ಲದ ಕುರಿಗಳಂತೆ ಬೆಟ್ಟಗಳಲ್ಲಿ ಚದರಿ ಹೋದದ್ದನ್ನು ಕಂಡೆ; ಆಗ ಸರ್ವೇಶ್ವರ ಇವರು ಒಡೆಯನಿಲ್ಲದವರಾಗಿ ಇರುತ್ತಾರೆ; ಸಮಾಧಾನದಿಂದ ತಮ್ಮತಮ್ಮ ಮನೆಯೊಳಗೆ ಹೋಗಲಿ ಎಂದರು,” ಎಂಬುದಾಗಿ ಉತ್ತರ ಕೊಟ್ಟನು.
17 : ಆಗ ಇಸ್ರಯೇಲರ ಅರಸು ಯೆಹೋಷಾಫಾಟನಿಗೆ, “ಇವನು ನನಗೆ ಯಾವಾಗಲೂ ಶುಭವನ್ನಲ್ಲ, ಅಶುಭವನ್ನೇ ಮುಂತಿಳಿಸುತ್ತಾನೆಂದು ನಾನು ನಿನಗೆ ಹೇಳಲಿಲ್ಲವೇ?” ಎಂದನು.
18 : ಅದಕ್ಕೆ ಮೀಕಾಯೆಹುವು, “ಅದಿರಲಿ, ಸರ್ವೇಶ್ವರನ ವಾಕ್ಯವನ್ನು ಕೇಳಿರಿ: ಸರ್ವೇಶ್ವರ ತಮ್ಮ ಸಿಂಹಾಸನದ ಮೇಲೆ ಕುಳಿತುಕೊಂಡದ್ದನ್ನೂ ಪರಲೋಕಸೈನ್ಯಗಳು ಅವರ ಎಡಬಲಗಡೆಗಳಲ್ಲಿ ನಿಂತದ್ದನ್ನೂ ಕಂಡೆ.
19 : ಸರ್ವೇಶ್ವರ ತಮ್ಮ ಹತ್ತಿರ ನಿಂತವರನ್ನು, ‘ಇಸ್ರಯೇಲರ ಅರಸ ಅಹಾಬನು ಹತನಾಗಿ ಬೀಳುವಂತೆ ಅವನನ್ನು ರಾಮೋತ್ ಗಿಲ್ಯಾದಿನ ಯುದ್ಧಕ್ಕೆ ಯಾರು ಪ್ರೇರೇಪಿಸಬಲ್ಲಿರಿ?’ ಎಂದು ಕೇಳಿದಾಗ ಒಬ್ಬನು ಒಂದು ವಿಧವಾಗಿಯೂ ಇನ್ನೊಬ್ಬನು ಇನ್ನೊಂದು ವಿಧವಾಗಿಯೂ ಉತ್ತರಕೊಟ್ಟರು.
20 : ಕಡೆಗೆ ಒಂದು ಆತ್ಮ ಸರ್ವೇಶ್ವರನ ಮುಂದೆ ಬಂದು ನಿಂತು, ‘ನಾನು ಹೋಗಿ ಅವನನ್ನು ಪ್ರೇರೇಪಿಸುವೆನು’ ಎಂದಿತು. ‘ಹೇಗೆ ಪ್ರೇರೇಪಿಸುವೆ?’ ಎಂದು ಸರ್ವೇಶ್ವರ ಕೇಳಿದರು. ಅದು,
21 : ‘ನಾನು ಅಸತ್ಯವನ್ನಾಡುವ ಆತ್ಮವಾಗಿ ಅವನ ಎಲ್ಲ ಪ್ರವಾದಿಗಳಲ್ಲಿ ಸೇರುವೆನು’, ಎಂದು ಉತ್ತರ ಕೊಟ್ಟಿತು. ಆಗ ಸರ್ವೇಶ್ವರ ಅದಕ್ಕೆ, ‘ಹೋಗಿ ಅದರಂತೆಯೇ ಮಾಡು; ಅವನನ್ನು ಪ್ರೇರೇಪಿಸಿ ಸಫಲನಾಗುವೆ’, ಎಂದರು.
22 : ನೋಡು, ಸರ್ವೇಶ್ವರ ನಿನ್ನ ವಿಷಯದಲ್ಲಿ ಕೇಡು ನುಡಿದು, ನಿನ್ನ ಪ್ರವಾದಿಗಳಲ್ಲಿ ಅಸತ್ಯವನ್ನಾಡುವ ಆತ್ಮವನ್ನೇ ಕಳುಹಿಸಿದ್ದಾರೆ,” ಎಂದು ಹೇಳಿದನು.
23 : ಆಗ ಕೆನಾನನ ಮಗ ಚಿದ್ಕೀಯನು ಮೀಕಾಯೆಹುವಿನ ಬಳಿಗೆ ಬಂದು ಅವನ ಕೆನ್ನೆಗೆ ಒಂದು ಪೆಟ್ಟುಕೊಟ್ಟು, “ಸರ್ವೇಶ್ವರನ ಆತ್ಮ ನನ್ನನ್ನು ಬಿಟ್ಟು ನಿನ್ನೊಂದಿಗೆ ಮಾತಾಡುವುದಕ್ಕೆ ಯಾವ ಮಾರ್ಗವಾಗಿ ಬಂದಿತು?” ಎಂದನು. ಮೀಕಾಯೆಹುವು,
24 : ನೀನು ಅಡಗಿಕೊಳ್ಳುವುದಕ್ಕೆ ಒಳಗಿನ ಕೋಣೆಗೆ ಹೋಗುವ ದಿನದಲ್ಲಿ ಅದು ನಿನಗೆ ಗೊತ್ತಾಗುವುದು,” ಎಂದು ಉತ್ತರ ಕೊಟ್ಟನು.
25 : ಆಗ ಇಸ್ರಯೇಲರ ಅರಸನು ಸೇವಕರಿಗೆ, “ಮೀಕಾಯೆಹುವನ್ನು ಹಿಡಿದುಕೊಂಡು ಹೋಗಿ ಪುರಾಧಿಕಾರಿಯಾದ ಆಮೋನನಿಗೂ ರಾಜಪುತ್ರನಾದ ಯೋವಾಷನಿಗೂ ಒಪ್ಪಿಸಿರಿ; ಅವರಿಗೆ,
26 : ನಾನು, ಸಉರಕ್ಷಿತನಾಗಿ ಹಿಂದಿರುಗುವವರೆಗೂ ಇವನನ್ನು ಸೆರೆಯಲ್ಲಿಟ್ಟು ಸೆರೆಮನೆಯ ಅನ್ನಪಾನ ಗಳನ್ನೇ ಕೊಟ್ಟು ಕುಗ್ಗಿಸಬೇಕೆಂದು ಅರಸರು ಹೇಳಿದ್ದಾರೆ’ ಎಂದು ತಿಳಿಸಿರಿ,” ಎಂದು ಆಜ್ಞಾಪಿಸಿದನು.
27 : ಮೀಕಾಯೆಹುವು ಅರಸನಿಗೆ, “ನೀನು ಸುರಕ್ಷಿತವಾಗಿ ಬರುವುದಾದರೆ, ನಾನು ನುಡಿದದ್ದು ಸರ್ವೇಶ್ವರನ ಮಾತಲ್ಲ,” ಎಂದು ಹೇಳಿ, “ಮಹಾಜನರೇ, ನನ್ನ ಮಾತನ್ನು ಗಮನದಲ್ಲಿಡಿ,” ಎಂದು ಕೂಗಿದನು.
28 : ಇಸ್ರಯೇಲರ ಅರಸನು ಹಾಗೂ ಯೆಹೂದ್ಯರ ಅರಸ ಯೆಹೋಷಾಫಾಟನೂ ರಾಮೋತ್ ಗಿಲ್ಯಾದಿಗೆ ವಿರುದ್ಧ ಯುದ್ಧಕ್ಕೆ ಹೊರಟರು.
29 : ಇಸ್ರಯೇಲರ ಅರಸನು ಯೆಹೋಷಾಫಾಟನಿಗೆ, ‘ ‘ನಾನು ವೇಷಹಾಕಿಕೊಂಡು ರಣರಂಗಕ್ಕೆ ಬರುತ್ತೇನೆ; ನೀನಾದರೋ ನಿನ್ನ ರಾಜವಸ್ತ್ರಗಳನ್ನು ಧರಿಸಿಕೊಂಡೇ ಬಾ,” ಎಂದು ಹೇಳಿ ವೇಷಹಾಕಿಕೊಂಡನು; ತರುವಾಯ ರಣರಂಗಕ್ಕೆ ಹೋದರು.
30 : ಸಿರಿಯಾದವರ ಅರಸನು ತನ್ನ ರಥಬಲದ ಅಧಿಪತಿಗಳಿಗೆ, “ನೀವು ಶತ್ರುಗಳ ಸಾಧಾರಣ ಸೈನಿಕರನ್ನೂ ಅಧಿಪತಿಗಳನ್ನೂ ಬಿಟ್ಟು ಇಸ್ರಯೇಲರ ಅರಸನಿಗೇ ಗುರಿಯಿಡಿ”, ಎಂದು ಆಜ್ಞಾಪಿಸಿದನು.
31 : ರಥಬಲದ ಅಧಿಪತಿಗಳು ಯೆಹೋಷಾಫಾಟನನ್ನು ಕಂಡಾಗ ಅವನೇ ಇಸ್ರಯೇಲರ ಅರಸನೆಂದು ನೆನಸಿ, ಅವನಿಗೆ ವಿರುದ್ಧ ಯುದ್ಧಮಾಡುವುದಕ್ಕೆ ಅವನನ್ನು ಸುತ್ತಿಕೊಂಡರು. ಯೆಹೋಷಾಫಾಟನು ಕೂಗಿ ಕೊಂಡನು. ಆಗ ದೇವರಾದ ಸರ್ವೇಶ್ವರ ಅವನಿಗೆ ನೆರವಾಗಿ, ಶತ್ರುಗಳನ್ನು ಅವನ ಕಡೆಯಿಂದ ತೊಲಗಿಸಿದರು.
32 : ಅವನು ಇಸ್ರಯೇಲರ ಅರಸನಲ್ಲ ವೆಂಬುದು ರಥಬಲದ ಅಧಿಪತಿಗಳಿಗೆ ಗೊತ್ತಾದಾಗ ಅವರು ಅವನನ್ನು ಬಿಟ್ಟು ಹಿಂದಿರುಗಿದರು.
33 : ಸಿರಿಯಾದವರ ಒಬ್ಬ ಸೈನಿಕನು ಯಾರಿಗೂ ಗುರಿಯಿಡದೆ ಬಾಣವನ್ನೆಸೆದನು. ಆ ಬಾಣ ಇಸ್ರಯೇಲರ ಅರಸನಿಗೆ, ಅವನ ಕವಚದ ಸಂದಿನಲ್ಲಿ ತಾಕಿತು. ಆಗ ಅವನು ತನ್ನ ಸಾರಥಿಗೆ, “ರಥವನ್ನು ತಿರುಗಿಸಿ ನನ್ನನ್ನು ರಣರಂಗದಿಂದ ಆಚೆಗೆ ತೆಗೆದುಕೊಂಡು ಹೋಗು; ನನಗೆ ದೊಡ್ಡ ಗಾಯವಾಗಿ ಇದೆ,” ಎಂದು ಹೇಳಿದನು.
34 : ಆ ದಿವಸ ಯುದ್ಧ ಬಹು ಘೋರವಾಗಿತ್ತು. ಆದ್ದರಿಂದ ಇಸ್ರಯೇಲರ ಅರಸನು ಸಾಯಂಕಾಲದವರೆಗೂ ಸಿರಿಯಾದವರ ಎದುರಿಗೆ ತನ್ನ ರಥದಲ್ಲೇ ಆತುಕೊಂಡಿರಬೇಕಾಯಿತು. ಸೂರ್ಯಾಸ್ತಮಾನವಾದಾಗ ಅವನು ಸತ್ತನು.

· © 2017 kannadacatholicbible.org Privacy Policy