Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ಆಸನಿಗೆ ಅನಂತರ ಅವನ ಮಗ ಯೆಹೋಷಾಫಾಟನು ಅರಸನಾದನು. ಇಸ್ರಯೇಲರಿಂದ ಅಪಾಯವಾಗದಂತೆ ಇವನು ತನ್ನನ್ನೇ ಭದ್ರಪಡಿಸಿಕೊಂಡನು.
2 : ಜುದೇಯದ ಕೋಟೆಕೊತ್ತಲುಗಳುಳ್ಳ ಎಲ್ಲ ಪಟ್ಟಣಗಳಲ್ಲೂ ಸೈನ್ಯವನ್ನಿರಿಸಿದನು. ಜುದೇಯ ನಾಡಿನಲ್ಲೂ ಹಾಗೂ ತನ್ನ ತಂದೆ ಆಸನು ಕಿತ್ತುಕೊಂಡಿದ್ದ ಎಫ್ರಯಿಮರ ಪಟ್ಟಣಗಳಲ್ಲೂ ಅಧಿಕಾರಿಗಳನ್ನು ನೇಮಿಸಿದನು.
3 : ಬಾಳ್‍ದೇವರುಗಳನ್ನು ಅವಲಂಬಿಸದೆ, ತನ್ನ ಪೂರ್ವಿಕನಾದ ದಾವೀದನ ಮೊದಲನೇ ನಡತೆಯ ಪ್ರಕಾರ ಇವನು ನಡೆಯುತ್ತಿದ್ದುದರಿಂದ ಸರ್ವೇಶ್ವರ ಇವನ ಸಂಗಡ ಇದ್ದರು.
4 : ಇವನು ಇಸ್ರಯೇಲರಂತೆ ನಡೆಯದೆ, ತನ್ನ ಪಿತೃವಿನ ದೇವರಲ್ಲಿ ಭಕ್ತಿಯಿಟ್ಟು ಅವರ ಆಜ್ಞೆಗಳನ್ನು ಅನುಸರಿಸಿದನು.
5 : ಆದುದರಿಂದ ಸರ್ವೇಶ್ವರ ಇವನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿದರು; ಯೆಹೂದ್ಯರೆಲ್ಲರೂ ಯೆಹೋಷಾಫಾಟನಿಗೆ ಕಾಣಿಕೆ ಕೊಡುತ್ತಿದ್ದುದರಿಂದ ಇವನ ಧನಘನತೆಗಳು ಹೆಚ್ಚಾದವು.
6 : ಇವನು ಸರ್ವೇಶ್ವರನ ಮಾರ್ಗದಲ್ಲಿ ನಡೆದು, ಧೈರ್ಯದಿಂದ ಜುದೇಯ ನಾಡಿನಲ್ಲಿದ್ದ ಪೂಜಾಸ್ಥಳಗಳನ್ನೂ ಅಶೇರ ವಿಗ್ರಹಸ್ತಂಭಗಳನ್ನೂ ತೆಗೆದು ಹಾಕಿಸಿದನು.
7 : ಇವನು ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ತನ್ನ ಸರದಾರರಾದ ಬೆನ್ಹೈಲ್, ಓಬದ್ಯ, ಜೆಕರ್ಯ, ನೆತನೇಲ್, ಮೀಕಾಯ ಇವರನ್ನೂ
8 : ಇವರ ಜೊತೆಯಲ್ಲಿ ಶೆಮಾಯ, ನೆತನ್ಯ, ಜೆಬದ್ಯ, ಅಸಾಹೇಲ್, ಶೆಮೀರಾಮೋತ್, ಯೆಹೋನಾತಾನ್, ಅದೋನೀಯ, ಟೋಬೀಯ, ಟೋಬದೋನೀಯ ಎಂಬ ಲೇವಿಯರನ್ನೂ ಎಲೀಷಾಮಾ, ಯೆಹೋರಾಮ್ ಎಂಬ ಯಾಜಕರನ್ನೂ ಧರ್ಮೋಪದೇಶ ಮಾಡುವುದಕ್ಕಾಗಿ ಜುದೇಯ ನಾಡಿನ ಪಟ್ಟಣಗಳಿಗೆ ಕಳುಹಿಸಿದನು.
9 : ಇವರು ಸರ್ವೇಶ್ವರನ ಧರ್ಮಶಾಸ್ತ್ರವನ್ನು ತೆಗೆದುಕೊಂಡು ಜುದೇಯ ನಾಡಿನಲ್ಲೆಲ್ಲಾ ಸಂಚಾರಮಾಡಿ ಜನರಿಗೆ ಬೋಧಿಸಿದರು.
10 : ಜುದೇಯದ ಸುತ್ತಲಿನ ದೇಶಗಳ ರಾಜ್ಯಗಳವರೆಗೆ ಸರ್ವೇಶ್ವರನ ಭಯವಿತ್ತು. ಆದುದರಿಂದ ಅವರು ಯೆಹೋಷಾಫಾಟನೊಡನೆ ಯುದ್ಧಕ್ಕೆ ಬರಲಿಲ್ಲ.
11 : ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಯನ್ನೂ ಕಪ್ಪವನ್ನಾಗಿ ಬೆಳ್ಳಿಯನ್ನೂ ತಂದುಕೊಡುತ್ತಿದ್ದರು. ಅರೇಬಿಯರು ತಮ್ಮ ಪಶುಪ್ರಾಣಿಗಳಲ್ಲಿ ಏಳು ಸಾವಿರದ ಏಳುನೂರು ಟಗರುಗಳನ್ನೂ ಏಳು ಸಾವಿರದ ಏಳುನೂರು ಹೋತಗಳನ್ನೂ ಕೊಡುತ್ತಿದ್ದರು.
12 : ಹೀಗೆ ಯೆಹೋಷಾಫಾಟನು ಅತ್ಯಧಿಕವಾಗಿ ಅಭಿವೃದ್ಧಿಹೊಂದು ಜುದೇಯ ನಾಡಿನಲ್ಲಿ ಕೋಟೆಗಳನ್ನು ಮತ್ತು ಉಗ್ರಾಣದ ಪಟ್ಟಣಗಳನ್ನು ಕಟ್ಟಿಸಿದನು.
13 : ಜುದೇಯದ ಪಟ್ಟಣಗಳಲ್ಲಿ ದವಸಧಾನ್ಯಗಳ ದೊಡ್ಡ ಮಳಿಗೆಯಿತ್ತು. ಜೆರುಸಲೇಮಿನಲ್ಲಿ ರಣವೀರರಾದ ಯೋಧರಿ ಇದ್ದರು:
14 : ಗೋತ್ರಗಳ ಪ್ರಕಾರ ಲೆಕ್ಕಿತರಾದ ಈ ಸೇನಾನಾಯಕರ ಕ್ರಮಬದ್ಧ ಪಟ್ಟಿಯಿದು: ಅದ್ನ - ಇವನು ಯೆಹೂದ್ಯರಲ್ಲಿ ಮೂರು ಲಕ್ಷ ಮಂದಿ ರಣವೀರರ ಅಧಿಪತಿ;
15 : ಯೆಹೋಹಾನಾನ್ - ಇವನು ಎರಡು ಲಕ್ಷದ ಎಂಬತ್ತು ಸಾವಿರ ಮಂದಿ ರಣವೀರರ ಅಧಿಪತಿ;
16 : ಅಮಸ್ಯ - ಜಿಕ್ರಿಯ ಮಗನಾದ ಇವನು ಎರಡು ಲಕ್ಷ ಮಂದಿ ರಣವೀರರೊಡನೆ ಸ್ವೇಚ್ಛೆಯಿಂದ ತನ್ನನ್ನೇ ಸರ್ವೇಶ್ವರನಿಗೆ ಪ್ರತಿಷ್ಠಿಸಿಕೊಂಡಿದ್ದನು;
17 : ಎಲ್ಯಾದ - ಇವನು ಬೆನ್ಯಾಮೀನ್ಯರಲ್ಲಿ ಬಿಲ್ಲುಗುರಾಣಿಗಳನ್ನು ಹಿಡಿದುಕೊಂಡ ಎರಡು ಲಕ್ಷ ಸೈನಿಕರ ನಾಯಕ ಹಾಗೂ ರಣವೀರ;
18 : ಯೆಹೋಜಾಬಾದ್ - ಇವನು ಒಂದು ಲಕ್ಷ ಎಂಬತ್ತು ಸಾವಿರ ಮಂದಿ ಯುದ್ಧಸನ್ನದ್ಧರ ನಾಯಕ.
19 : ಅರಸನಿಗೆ ತನ್ನ ಸನ್ನಿಧಿಯಲ್ಲಿ ಸೇವೆ ಮಾಡುತ್ತಿದ್ದ ಈ ಯೋಧರಲ್ಲದೆ ಕೋಟೆ ಕೊತ್ತಲಗಳಿದ್ದ ಬೇರೆ ಪಟ್ಟಣಗಳಲ್ಲಿಯೂ ಸೈನಿಕರಾಗಿ ಇದ್ದರು.

· © 2017 kannadacatholicbible.org Privacy Policy