Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ಆಸನ ಆಳ್ವಿಕೆಯ ಮೂವತ್ತಾರನೆಯ ವರ್ಷದಲ್ಲಿ ಇಸ್ರಯೇಲ್ ರಾಜ ಬಾಷನು ಯೆಹೂದ್ಯರಿಗೆ ವಿರೋಧವಾಗಿ ಹೊರಟು ಬಂದನು. ಯಾರೂ ಯೆಹೂದ್ಯರ ಅರಸ ಆಸನ ಬಳಿಗೆ ಹೋಗಿಬರುವುದಕ್ಕಾಗದಂತೆ ರಾಮಕೋಟೆಯನ್ನು ಕಟ್ಟಿಸಿದನು.
2 : ಆಗ ಆಸನು ಸರ್ವೇಶ್ವರನಾಲಯದ ಮತ್ತು ಅರಮನೆಯ ಭಂಡಾರಗಳಿಂದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ದಮಸ್ಕದಲ್ಲಿದ್ದ ಸಿರಿಯಾದ ಅರಸ ಬೆನ್ಹದದನಿಗೆ ಕಳುಹಿಸಿ,
3 : “ನನಗೂ ನಿನಗೂ ನನ್ನ ತಂದೆಗೂ ನಿನ್ನ ತಂದೆಗೂ ಒಂದು ಒಪ್ಪಂದ ಇದೆಯಲ್ಲವೆ? ಇಗೋ, ನಿನಗೆ ಬೆಳ್ಳಿಬಂಗಾರವನ್ನು ಕಳುಹಿಸಿದ್ದೇನೆ; ಇಸ್ರಯೇಲರ ಅರಸ ಬಾಷನು ನನ್ನನ್ನು ಬಿಟ್ಟುಹೋಗುವಂತೆ ಮಾಡು; ಅವನ ಸಂಗಡ ನೀನು ಮಾಡಿಕೊಂಡಿರುವ ಒಪ್ಪಂದವನ್ನು ಮುರಿದುಬಿಡು,” ಎಂದು ಹೇಳಿಕಳುಹಿಸಿದನು.
4 : ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ, ತನ್ನ ಸೈನ್ಯಾಧಿಪತಿಗಳನ್ನು ಇಸ್ರಯೇಲರ ಪಟ್ಟಣಗಳಿಗೆ ವಿರುದ್ಧ ಕಳುಹಿಸಿದನು; ಅವರು ಇಯ್ಯೋನ್, ದಾನ್, ಆಬೇಲ್ಮಯಿಮ್ ಇವುಗಳನ್ನೂ ನಫ್ತಾಲ್ಯರ ಪಟ್ಟಣಗಳ ಎಲ್ಲ ಉಗ್ರಾಣಗಳನ್ನೂ ಹಾಳುಮಾಡಿದರು.
5 : ಬಾಷನು ಈ ಸುದ್ದಿಯನ್ನು ಕೇಳಿದಾಗ ರಾಮಕೋಟೆ ಕಟ್ಟಿಸುವ ಕೆಲಸವನ್ನು ನಿಲ್ಲಿಸಿಬಿಟ್ಟನು.
6 : ಅನಂತರ ಅರಸ ಆಸನು ಎಲ್ಲಾ ಯೆಹೂದ್ಯರನ್ನು ಕರೆಸಿ ಬಾಷನು ರಾಮಕೋಟೆಗಾಗಿ ತರಿಸಿದ್ದ ಕಲ್ಲುಮರಗಳನ್ನು ಇವರ ಮುಖಾಂತರ ತೆಗೆದುಕೊಂಡು ಹೋಗಿ ಗೆಬ, ಮಿಚ್ಪ ಎಂಬ ಪಟ್ಟಣಗಳನ್ನು ಭದ್ರಪಡಿಸಿದನು.
7 : ಆ ಕಾಲದಲ್ಲಿ ದರ್ಶಿಯಾದ ಹನಾನಿಯು ಯೆಹೂದ್ಯರ ಅರಸ ಆಸನ ಬಳಿಗೆ ಬಂದು, “ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ಆಶ್ರಯಿಸಿಕೊಳ್ಳದೆ ಸಿರಿಯಾದ ಅರಸನನ್ನು ಆಶ್ರಯಿಸಿಕೊಂಡದ್ದರಿಂದ ಸಿರಿಯಾ ರಾಜನ ಸೈನ್ಯವು ನಿಮ್ಮ ಕೈಗೆ ಬೀಳದಂತೆ ನುಣಿಚಿಕೊಂಡಿತು.
8 : ಸುದಾನ್ ಹಾಗೂ ಲಿಬಿಯರ ಸೈನ್ಯ ಅಪರಿಮಿತ ರಥಾಶ್ವಬಲಗಳುಳ್ಳ ಮಹಾ ಸೈನ್ಯವಲ್ಲವೇ? ನೀವು ಸರ್ವೇಶ್ವರನನ್ನು ಆಶ್ರಯಿಸಿಕೊಂಡದ್ದರಿಂದ ಅವರು ಅದನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟರು.
9 : ಸರ್ವೇಶ್ವರ ಭೂಲೋಕದ ಎಲ್ಲಾ ಕಡೆ ದೃಷ್ಟಿ ಹರಿಸುತ್ತಾ ತಮ್ಮ ಕಡೆಗೆ ಯಥಾರ್ಥ ಮನಸ್ಸುಳ್ಳವರ ರಕ್ಷಣೆಗಾಗಿ ತಮ್ಮ ಪ್ರತಾಪವನ್ನು ತೋರ್ಪಡಿಸುತ್ತಾರೆ. ನೀವು ಈ ಕಾರ್ಯದಲ್ಲಿ ಬುದ್ಧಿಹೀನರಾಗಿ ನಡೆದುಕೊಂಡಿದ್ದೀರಿ; ಇಂದಿನಿಂದ ನಿಮಗೆ ಯುದ್ಧಗಳು ಇದ್ದೇ ಇರುತ್ತವೆ,” ಎಂದು ಹೇಳಿದನು.
10 : ಆಸನು ಈ ಮಾತುಗಳಿಂದ ಬೇಸರಗೊಂಡು, ದರ್ಶಿಯ ಮೇಲೆ ಕುಪಿತನಾಗಿ, ಅವನನ್ನು ಸೆರೆಮನೆ ಯಲ್ಲಿಡಿಸಿ ಕೋಳಹಾಕಿದನು. ಇದಲ್ಲದೆ, ಜನರಲ್ಲಿ ಕೆಲವರನ್ನು ಪೀಡಿಸಿದನು.
11 : ಆಸನ ಪೂರ್ವೋತ್ತರ ಚರಿತ್ರೆಯನ್ನು ಯೆಹೂದ ಮತ್ತು ಇಸ್ರಯೇಲ್ ರಾಜರ ಇತಿಹಾಸ ಗ್ರಂಥದಲ್ಲಿ ಬರೆದಿರುತ್ತದೆ.
12 : ಅವನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಅವನ ಕಾಲುಗಳಿಗೆ ಬಹು ಕಠಿಣವಾದ ರೋಗ ತಗಲಿತು. ಈ ರೋಗದಲ್ಲೂ ಅವನು ಸರ್ವೇಶ್ವರನ ಸಹಾಯವನ್ನು ಕೋರಲಿಲ್ಲ; ವೈದ್ಯರ ಸಹಾಯವನ್ನು ಮಾತ್ರ ಕೋರಿದನು.
13 : ಅವನು ತನ್ನ ಆಳ್ವಿಕೆಯ ನಲವತ್ತ ಒಂದನೆಯ ವರ್ಷದಲ್ಲಿ ತೀರಿಕೊಂಡು ಪಿತೃಗಳ ಬಳಿಗೆ ಸೇರಿದನು.
14 : ಅವನ ಶವವನ್ನು, ಬುಕ್ಕಿಟ್ಟುಗಾರನ ಕಸಬಿನ ಮೇರೆಗೆ ಮಿಶ್ರಣ ಮಾಡಲ್ಪಟ್ಟ ತರತರದ ಸುಗಂಧದ್ರವ್ಯಗಳಿಂದ ತುಂಬಿರುವ ಹಾಸಿಗೆಯ ಮೇಲಿಟ್ಟು, ಅವನು ತನಗಾಗಿ ದಾವೀದನಗರದಲ್ಲಿ ತೋಡಿಸಿದ್ದ ಸಮಾಧಿಯಲ್ಲಿ ಅದನ್ನು ಇಟ್ಟರು. ಹೇರಳವಾಗಿ ಧೂಪಹಾಕಿ ಸಂತಾಪ ಸೂಚಿಸಿದರು.

· © 2017 kannadacatholicbible.org Privacy Policy