1 : ಓದೇದನ ಮಗ ಅಜರ್ಯನ ಮೇಲೆ ದೇವರ ಆತ್ಮವು ಬಂದಿತು.
2 : ಅವನು ಆಸನನ್ನು ಭೇಟಿಯಾಗಲು ಬಂದು, ಅವನಿಗೆ, “ಆಸ ರಾಜನೇ, ಎಲ್ಲಾ ಯೆಹೂದ ಹಾಗೂ ಬೆನ್ಯಾಮೀನ್ ಕುಲಗಳವರೇ, ಕಿವಿಗೊಡಿ: ನೀವು ಸರ್ವೇಶ್ವರನನ್ನು ಹೊಂದಿಕೊಂಡಿರುವ ತನಕ ಅವರೂ ನಿಮ್ಮೊಂದಿಗುರವರು; ನೀವು ಅವರನ್ನು ಅರಸಿದರೆ ನಿಮಗೆ ಸಿಕ್ಕುವರು. ಅವರನ್ನು ಬಿಟ್ಟರೆ ಅವರೂ ನಿಮ್ಮನ್ನು ಬಿಟ್ಟುಬಿಡುವರು.
3 : ಇಸ್ರಯೇಲರಿಗೆ ಬಹುಕಾಲದವರೆಗೆ ನಿಜವಾದ ದೇವರು, ಬೋಧಿಸುವ ಯಾಜಕರು ಹಾಗೂ ಧರ್ಮಶಾಸ್ತ್ರ ಇರಲಿಲ್ಲ.
4 : ಅವರು ತಮ್ಮ ಇಕ್ಕಟ್ಟಿನಲ್ಲಿ ಇಸ್ರಯೇಲ್ ದೇವರಾದ ಸರ್ವೇಶ್ವರನ ಕಡೆಗೆ ತಿರುಗಿಕೊಂಡರು; ಹುಡುಕಿದಾಗ ಸರ್ವೇಶ್ವರ ಅವರಿಗೆ ಸಿಕ್ಕಿದರು.
5 : ಆ ಕಾಲದಲ್ಲಿ ಯಾರಿಗೂ ನಿರ್ಭಯವಾಗಿ ತಿರುಗಾಡುವುದಕ್ಕೆ ಆಗುತ್ತಾ ಇರಲಿಲ್ಲ. ನಾಡಿನ ನಿವಾಸಿಗಳೆಲ್ಲರೂ ಕಳವಳಗೊಂಡಿದ್ದರು.
6 : ಒಂದು ಜನಾಂಗ ಇನ್ನೊಂದು ಜನಾಂಗವನ್ನೂ ಒಂದು ಪಟ್ಟಣದವರು ಇನ್ನೊಂದು ಪಟ್ಟಣದವರನ್ನೂ ಹಾಳು ಮಾಡುತ್ತಿದ್ದರು. ದೇವರು ನಾನಾ ತರದ ಕಷ್ಟದಿಂದ ಅವರನ್ನು ತಳಮಳಗೊಳಿಸಿದ್ದರು.
7 : ನೀವಾದರೋ ಸ್ಥಿರಚಿತ್ತರಾಗಿರಿ; ನಿಮ್ಮ ಕೈಗಳು ಜೋಲುಬೀಳದಿರಲಿ. ನಿಮ್ಮ ಪ್ರಯತ್ನಕ್ಕೆ ಫಲತಪ್ಪದು,” ಎಂದು ಹೇಳಿದನು.
8 : ಆಸನು ಓದೇದನ ಮಗ ಅಜರ್ಯನ ಈ ಪ್ರವಾದನೋಕ್ತಿಗಳನ್ನು ಕೇಳಿ ಧೈರ್ಯ ಗೊಂಡನು. ಜುದೇಯ ಹಾಗೂ ಬೆನ್ಯಾಮೀನ್ ಪ್ರಾಂತ್ಯಗಳಲ್ಲೂ ತಾನು ಸ್ವಾಧೀನಮಾಡಿಕೊಂಡಿದ್ದ ಎಫ್ರಯಿಮ್ ಪರ್ವತ ಪ್ರದೇಶದ ಪಟ್ಟಣಗಳಲ್ಲೂ ಇದ್ದ ಅಸಹ್ಯ ಪ್ರತಿಮೆಗಳನ್ನು ತೆಗೆದು ಹಾಕಿಸಿದನು; ಸರ್ವೇಶ್ವರನ ಆಲಯಕ್ಕೆ ಸೇರಿದ ಮಂಟಪದ ಮುಂದಿದ್ದ ಬಲಿಪೀಠವನ್ನು ದುರಸ್ತಿ ಮಾಡಿಸಿದನು.
9 : ಆಮೇಲೆ ಆಸನು ಎಲ್ಲಾ ಯೆಹೂದ ಹಾಗೂ ಬೆನ್ಯಾಮೀನ್ ಕುಲಗಳವರನ್ನು ಬರಮಾಡಿದನು. ದೇವರಾದ ಸರ್ವೇಶ್ವರ ತನ್ನೊಂದಿಗೆ ಇರುವುದನ್ನು ನೋಡಿ, ತನ್ನ ಬಳಿಗೆ ಗುಂಪುಗುಂಪಾಗಿ ಕೂಡಿಬಂದು, ಜುದೇಯ ನಾಡಿನಲ್ಲಿ ನೆಲಸಿದ್ಧ ಎಫ್ರಯಿಮ್, ಮನಸ್ಸೆ ಹಾಗೂ ಸಿಮೆಯೋನ್ ಕುಲಗಳವರನ್ನು ಸಹ ಕರೆಸಿಕೊಂಡನು.
10 : ಅವರು ಆಸನ ಆಳ್ವಿಕೆಯ ಹದಿನೈದನೆಯ ವರ್ಷದ ಮೂರನೆಯ ತಿಂಗಳಲ್ಲಿ ಜೆರುಸಲೇಮಿನಲ್ಲಿ ಕೂಡಿ ಬಂದರು.
11 : ತಾವು ತಂದ ಕೊಳ್ಳೆಯಿಂದ ಏಳುನೂರು ಹೋರಿಗಳನ್ನೂ ಏಳು ಸಾವಿರ ಕುರಿಗಳನ್ನೂ ಸರ್ವೇಶ್ವರನಿಗೆ ಆ ದಿನ ಬಲಿದಾನ ಮಾಡಿದರು.
12 : ಇದಲ್ಲದೆ, ಅವರು ಪೂರ್ಣ ಹೃದಯದಿಂದಲೂ ಪೂರ್ಣಪ್ರಾಣದಿಂದಲೂ ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನಿಗೆ ಭಕ್ತರಾಗಿರುವೆವೆಂದು ಪ್ರಮಾಣಮಾಡಿದರು.
13 : ಇದಲ್ಲದೆ, “ತಮ್ಮಲ್ಲಿ ಇಸ್ರಯೇಲ್ ದೇವರಾದ ಸರ್ವೇಶ್ವರನ ಭಕ್ತಿಯನ್ನು ತೊರೆದುಬಿಡುವವರು ಚಿಕ್ಕವರಾಗಲಿ ದೊಡ್ಡವರಾಗಲಿ, ಗಂಡಸರಾಗಲಿ, ಹೆಂಗಸರಾಗಲಿ, ಅವರೆಲ್ಲರನ್ನು ಕೊಲ್ಲಲಾಗುವುದು” ಎಂದು,
14 : ತುತ್ತೂರಿ ಕೊಂಬುಗಳನ್ನು ಊದಿಸಿ, ದೊಡ್ಡ ಘೋಷಣೆಗಳೊಡನೆ, ವಾಗ್ದಾನ ಮಾಡಿದರು.
15 : ಈ ಪ್ರಮಾಣದ ನಿಮಿತ್ತ ಯೆಹೂದ್ಯರೆಲ್ಲರಿಗೆ ಸಂತೋಷವಾಯಿತು. ಅವರು ಪೂರ್ಣಮನಸ್ಸಿನಿಂದ ಪ್ರಮಾಣಮಾಡಿ ತುಂಬಾ ಲವಲವಿಕೆಯಿಂದ ಸರ್ವೇಶ್ವರನನ್ನು ಬಯಸಿದ ಕಾರಣ, ಸರ್ವೇಶ್ವರ ಅವರಿಗೆ ಪ್ರಸನ್ನರಾಗಿ ಎಲ್ಲಾ ಕಡೆಗಳಲ್ಲೂ ಶಾಂತಿಸಮಾಧಾನವನ್ನು ಅನುಗ್ರಹಿಸಿದರು.
16 : ಅರಸನಾದ ಆಸನ ತಾಯಿ ಮಾಕಳು ಅಶೇರ ದೇವತೆಯ ಒಂದು ಅಸಹ್ಯ ಮೂರ್ತಿಯನ್ನು ಮಾಡಿಸಿದ್ದಳು. ಆದ್ದರಿಂದ ಅವನು ಆಕೆಯನ್ನು ‘ರಾಜಮಾತೆ’ ಎಂಬ ಪದವಿಯಿಂದ ತೆಗೆದುಹಾಕಿದನು. ಆ ಮೂರ್ತಿಯನ್ನು ತೆಗೆಸಿ ಕಿದ್ರೋನ್ ಹಳ್ಳದ ಬಳಿಯಲ್ಲಿ ಚೂರು ಚೂರು ಮಾಡಿ ಸುಡಿಸಿದನು.
17 : ಇಸ್ರಯೇಲ್ ಪ್ರಾಂತ್ಯದಲ್ಲಿದ್ದ ಪೂಜಾಸ್ಥಳಗಳನ್ನು ಹಾಳುಮಾಡದೆ ಇದ್ದರೂ ಆಸನು ತನ್ನ ಜೀವಮಾನದಲ್ಲೆಲ್ಲಾ ಯಥಾರ್ಥಚಿತ್ತನಾಗಿ ನಡೆದುಕೊಂಡನು.
18 : ತಾನೂ ತನ್ನ ತಂದೆಯೂ ತಾನೂ ಪ್ರತಿಷ್ಠಿಸಿದ ಬೆಳ್ಳಿ ಬಂಗಾರವನ್ನೂ ಪಾತ್ರೆಗಳನ್ನೂ ದೇವಾಲಯದಲ್ಲಿ ತಂದಿಟ್ಟನು.
19 : ಅವನ ಆಳ್ವಿಕೆಯ ಮೂವತ್ತ ಐದನೆಯ ವರ್ಷದವರೆಗೂ ಯುದ್ಧವಿರಲಿಲ್ಲ.