1 : ಅಬೀಯನು ಮೃತನಾಗಿ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ದಾವೀದನಗರದಲ್ಲಿ ಸಮಾಧಿ ಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ಆಸನು ಅರಸನಾದನು. ಇವನ ಕಾಲದಲ್ಲಿ, ನಾಡಿನಲ್ಲಿ ಹತ್ತು ವರ್ಷ ಶಾಂತಿ ಸಮಾಧಾನವಿತ್ತು.
2 : ಆಸನು ತನ್ನ ದೇವರಾದ ಸರ್ವೇಶ್ವರನ ದೃಷ್ಟಿಯಲ್ಲಿ ಒಳ್ಳೆಯವನಾಗಿಯೂ ನೀತಿವಂತನಾಗಿಯೂ ನಡೆದನು.
3 : ಇವನು ಅನ್ಯ ದೇವತೆಗಳ ಯಜ್ಞವೇದಿಗಳನ್ನೂ ಪೂಜಾ ಸ್ಥಳಗಳನ್ನೂ ತೆಗೆದುಹಾಕಿಸಿದನು. ಕಲ್ಲುಕಂಬಗಳನ್ನು ಒಡೆದು ಹಾಕಿಸಿದನು. ಅಶೇರ ವಿಗ್ರಹ ಸ್ತಂಭಗಳನ್ನು ಕೆಡವಿಬಿಟ್ಟನು.
4 : ಯೆಹೂದ್ಯರಿಗೆ, “ನೀವು ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರನನ್ನೇ ಆಶ್ರಯಿಸಿಕೊಂಡು ಧರ್ಮಶಾಸ್ತ್ರವಿಧಿಗಳನ್ನು ಕೈಗೊಳ್ಳಿರಿ,” ಎಂದು ಆಜ್ಞಾಪಿಸಿದನು.
5 : ಜುದೇಯದ ಎಲ್ಲ ಪಟ್ಟಣಗಳಿಂದ ಪೂಜಾಸ್ಥಳಗಳನ್ನೂ ಸೂರ್ಯಸ್ತಂಭಗಳನ್ನೂ ತೆಗೆದು ಹಾಕಿಸಿದನು. ಇವನ ಆಳ್ವಿಕೆಯಲ್ಲಿ ರಾಜ್ಯದೊಳಗೆ ಸಮಾಧಾನವಿತ್ತು.
6 : ಸರ್ವೇಶ್ವರನ ಅನುಗ್ರಹದಿಂದ ಶತ್ರುಭಯ ತಪ್ಪಿ, ಆ ವರ್ಷಗಳಲ್ಲಿ ಯಾವ ಯುದ್ಧವೂ ಇಲ್ಲದೆ, ನಾಡಿನಲ್ಲಿ ಸಮಾಧಾನವಿದ್ದುದರಿಂದ ಇವನು ಜುದೇಯದಲ್ಲಿ ಕೋಟೆ ಕೊತ್ತಲುಗಳುಳ್ಳ ಪಟ್ಟಣಗಳನ್ನು ಕಟ್ಟಿಸಿದನು.
7 : ಇವನು ಯೆಹೂದ್ಯರಿಗೆ, “ನಾವು ನಮ್ಮ ದೇವರಾದ ಸರ್ವೇಶ್ವರನನ್ನು ಆಶ್ರಯಿಸಿಕೊಂಡ ಕಾರಣ, ಅವರ ಅನುಗ್ರಹದಿಂದ ಸುತ್ತಣ ವೈರಿಗಳ ಭಯ ತಪ್ಪಿ, ನಾಡು ಈವರೆಗೆ ನಿರಾತಂಕವಾಗಿದೆ. ಆದುದರಿಂದ ನಾವು ಪಟ್ಟಣಗಳನ್ನು ಕಟ್ಟಿ ಅವುಗಳನ್ನು ಸುತ್ತಣಗೋಡೆ, ಬುರುಜು, ಬಾಗಿಲು, ಅಗುಳಿ ಇವುಗಳಿಂದ ಭದ್ರಪಡಿಸೋಣ,” ಎಂದನು. ಅವರು ಅವುಗಳನ್ನು ಚೆನ್ನಾಗಿ ಕಟ್ಟಿ ಮುಗಿಸಿದರು.
8 : ಆಸನಿಗೆ ಸೈನ್ಯವಿತ್ತು; ಅದರಲ್ಲಿ ಗುರಾಣಿ ಬರ್ಜಿಗಳನ್ನು ಹಿಡಿದ ಮೂರು ಲಕ್ಷ ಮಂದಿ ಯೆಹೂದ್ಯರಿದ್ದರು. ಖೇಡ್ಯಹಿಡಿದವರೂ ಬಿಲ್ಲುಗಾರರೂ ಆದ ಎರಡು ಲಕ್ಷದ ಎಂಬತ್ತು ಸಾವಿರ ಮಂದಿ ಬೆನ್ಯಾಮೀನ್ಯರೂ ಇದ್ದರು. ಇವರೆಲ್ಲರು ರಣವೀರರು.
9 : ಸುಡಾನಿನ ಜೆರಹನು ಹತ್ತು ಲಕ್ಷ ಸೈನ್ಯವನ್ನೂ ಮುನ್ನೂರು ರಥಗಳನ್ನೂ ತೆಗೆದುಕೊಂಡು ಇಸ್ರಯೇಲರಿಗೆ ವಿರುದ್ಧ ಯುದ್ಧಕ್ಕೆ ಹೊರಟು ಮಾರೇಷಕ್ಕೆ ಬಂದನು.
10 : ಆಸನು ಅವನನ್ನು ಎದುರುಗೊಳ್ಳಲು ಹೋದನು. ಮಾರೇಷದ ಬಳಿಯಲ್ಲಿದ್ದ ಚೆಫಾತಾ ಬಯಲಿನಲ್ಲಿ ಉಭಯರೂ ವ್ಯೂಹಕಟ್ಟಿದರು.
11 : ಆಸನು ತನ್ನ ದೇವರಾದ ಸರ್ವೇಶ್ವರನಿಗೆ, “ಸರ್ವೇಶ್ವರಾ, ಬಲಿಷ್ಠನು ಬಲಹೀನನ ಮೇಲೆ ಬೀಳುವಾಗ, ನಿಮ್ಮ ಹೊರತು ರಕ್ಷಕನಿಲ್ಲ. ನಿಮ್ಮಲ್ಲಿ ಭರವಸೆ ಇಟ್ಟು ನಿಮ್ಮ ಹೆಸರಿನಲ್ಲಿ ಈ ಮಹಾ ಸೇನೆಗೆ ವಿರುದ್ಧ ಯುದ್ಧಕ್ಕೆ ಬಂದಿದ್ದೇವೆ. ಸರ್ವೇಶ್ವರಾ, ನಮ್ಮ ದೇವರು ನೀವು; ನರರು ನಿಮ್ಮನ್ನು ಎದುರಿಸಿ ಗೆಲ್ಲಬಾರದು,” ಎಂದು ಮೊರೆ ಇಟ್ಟನು.
12 : ಸರ್ವೇಶ್ವರ ಆಸನಿಂದಲೂ ಯೆಹೂದ್ಯರಿಂದಲೂ ಸುಡಾನರಿಗೆ ಅಪಜಯ ಉಂಟಾಗುವಂತೆ ಮಾಡಿದರು.
13 : ಅವರು ಸೋತು ಓಡಿ ಹೋದಾಗ ಆಸನೂ ಅವನ ಜನರೂ ಗೆರಾರಿನವರೆಗೂ ಅವರನ್ನು ಹಿಂದಟ್ಟಿ ಸಂಹರಿಸಿದರು. ಅವರಲ್ಲಿ ಯಾರೂ ಜೀವದಿಂದುಳಿಯಲಿಲ್ಲ. ಸರ್ವೇಶ್ವರನ ಮತ್ತು ಅವರ ಸೈನ್ಯದ ಮುಂದೆ ಸುಡಾನರು ಭಿನ್ನಭಿನ್ನರದರು. ಇಸ್ರಯೇಲರಿಗೆ ಅಪರಿಮಿತವಾದ ಕೊಳ್ಳೆಸಿಕ್ಕಿತು.
14 : ಇದಲ್ಲದೆ ಸರ್ವೇಶ್ವರನ ಭಯದಿಂದ ತಬ್ಬಿಬ್ಬಾದ ಗೆರಾರಿನ ಸುತ್ತಣ ಪಟ್ಟಣಗಳನ್ನು ಅವರು ವಶಪಡಿಸಿಕೊಂಡು, ಅವುಗಳನ್ನೆಲ್ಲಾ ಸುಲಿಗೆಮಾಡಿದರು. ಅವುಗಳಲ್ಲೂ ದೊಡ್ಡ ಕೊಳ್ಳೆ ಸಿಕ್ಕಿತು.
15 : ದನಕಾಯುವವರ ಗುಡಾರಗಳ ಮೇಲೆ ದಾಳಿಮಾಡಿ ಎಷ್ಟೋ ಒಂಟೆಕುರಿಗಳನ್ನು ಜೆರುಸಲೇಮಿಗೆ ಹೊಡೆದುಕೊಂಡು ಬಂದರು.