Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ಅರಸ ಯಾರೊಬ್ಬಾಮನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಅಬೀಯನು ಜುದೇಯದ ಅರಸನಾಗಿ
2 : ಜೆರುಸಲೇಮಿನಲ್ಲಿ ಮೂರು ವರ್ಷ ಆಳಿದನು. ಗಿಬೆಯದ ಊರೀಯೇಲನ ಮಗಳಾದ ಮೀಕಾಯ ಎಂಬಾಕೆ ಇವನ ತಾಯಿ. ಇವನಿಗೂ ಯಾರೊಬ್ಬಾಮನಿಗೂ ಯುದ್ಧನಡೆಯಿತು.
3 : ಅಬೀಯನು ನಾಲ್ಕು ಲಕ್ಷ ಮಂದಿ ರಣವೀರರನ್ನು ಆರಿಸಿಕೊಂಡು ಬಂದು ಯುದ್ಧ ಪ್ರಾರಂಭಿಸಿದನು. ಯಾರೊಬ್ಬಾಮನು ಎಂಟು ಲಕ್ಷ ಶ್ರೇಷ್ಠ ಯೋಧರೊಡನೆ ಅವನಿಗೆ ವಿರೋಧವಾಗಿ ಬಂದು ವ್ಯೂಹ ಕಟ್ಟಿದನು.
4 : ಆಗ ಅಬೀಯನು ಎಫ್ರಯಿಮ್ ಪರ್ವತ ಪ್ರದೇಶದಲ್ಲಿರುವ ಚೆಮಾರೈಮೆಂಬ ಬೆಟ್ಟದಲ್ಲಿ ನಿಂತು, “ಯಾರೊಬ್ಬಾಮನೇ, ಎಲ್ಲಾ ಇಸ್ರಯೇಲರೇ, ನನ್ನ ಮಾತಿಗೆ ಕಿವಿಗೊಡಿ:
5 : ಮುರಿಯಲಾಗದ ಒಡಂಬಡಿಕೆಯಿಂದ ದಾವೀದನಿಗೂ ಅವನ ಸಂತಾನದವರಿಗೂ ಇಸ್ರಯೇಲರ ಮೇಲೆ ಸರ್ವೇಶ್ವರ ಶಾಶ್ವತವಾದ ಅರಸು ತನವನ್ನು ಕೊಟ್ಟಿದ್ದಾರೆಂದು ನಿಮಗೆ ಗೊತ್ತಿಲ್ಲವೇ?
6 : ಹೀಗಿದ್ದರೂ ದಾವೀದನ ಮಗ ಸೊಲೊಮೋನನ ಸೇವೆಯಲ್ಲಿದ್ದ, ನೆಬಾಟನ ಮಗ ಯಾರೊಬ್ಬಾಮನು ದಂಗೆಯೆದ್ದು ತನ್ನ ದಣಿಗೆ ವಿರುದ್ಧ ದ್ರೋಹವೆಸಗಿದ್ದ;
7 : ಕಾಕಪೋಕರೂ ದುಷ್ಟರೂ ಆದ ಜನರನ್ನು ಕೂಡಿಕೊಂಡ ಎಳೇಪ್ರಾಯದವನೂ ಮುಗ್ದನೂ ತಮ್ಮೆದುರಿನಲ್ಲಿ ನಿಲ್ಲಲು ಅಶಕ್ತನೂ ಆದ ಸೊಲೊಮೋನನ ಮಗ ರೆಹಬ್ಬಾಮನನ್ನು ಇವರು ಪ್ರತಿಭಟಿಸಿ ಬಲಗೊಂಡರು.
8 : ಈಗ ನೀವು ದೊಡ್ಡ ಗುಂಪಾಗಿ ಇರುವುದರಿಂದ ಹಾಗು ಯಾರೊಬ್ಬಾಮನು ನಿಮಗೆ ದೇವರುಗಳೆಂದು ಮಾಡಿಕೊಟ್ಟ ಬಂಗಾರದ ಹೋರಿಕರುಗಳ ಮೂರ್ತಿಗಳು ನಿಮ್ಮಲ್ಲಿರುವುದರಿಂದ, ದಾವೀದನ ಸಂತಾನದವರ ಕೈಯಲ್ಲಿರುವ ಸರ್ವೇಶ್ವರನ ರಾಜ್ಯಕ್ಕೆ ವಿರುದ್ಧ ದಂಗೆಯೆದ್ದು ಗೆಲ್ಲಬಹುದೆಂದು ನೆನಸುತ್ತೀರೋ?
9 : ನೀವು ಸರ್ವೇಶ್ವರನ ಯಾಜಕರಾದ ಆರೋನನ ಸಂತಾನದವರನ್ನೂ ಲೇವಿಯರನ್ನೂ ಓಡಿಸಿಬಿಟ್ಟು ಅನ್ಯದೇಶಗಳವರಂತೆ ನಿಮಗಾಗಿ ಪೂಜಾರಿಗಳನ್ನು ನೇಮಿಸಿಕೊಂಡಿದ್ದೀರಿ; ತಾನು ಪ್ರಜಾರಿಯಾಗಿ ಪ್ರತಿಷ್ಠಿತನಾಗಬೇಕೆಂದು ಒಂದು ಎಳೇ ಹೋರಿಯನ್ನೂ ಏಳು ಟಗರುಗಳನ್ನೂ ತೆಗೆದುಕೊಂಡು ಬಂದ ಪ್ರತಿಯೊಬ್ಬನೂ ದೇವರಲ್ಲದವುಗಳಿಗೆ ಪ್ರಜಾರಿಯಾದನಷ್ಟೆ!
10 : ನಮಗಾದರೋ ಸರ್ವೇಶ್ವರ ನೊಬ್ಬರೇ ದೇವರು; ನಾವು ಅವರನ್ನು ಬಿಡಲಿಲ್ಲ. ಸರ್ವೇಶ್ವರನ ಆರಾಧನೆ ನಡೆಸಲು ಆರೋನನ ಸಂತಾನದವರಾದ ಯಾಜಕರು ಹಾಗೂ ತಮಗೆ ನೇಮಕವಾದ ಕೆಲಸದಲ್ಲಿ ನಿರತರಾದ ಲೇವಿಯರು ನಮಗಿರುತ್ತಾರೆ.
11 : ಈ ಯಾಜಕರು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸರ್ವೇಶ್ವರನಿಗಾಗಿ ದಹನ ಬಲಿಗಳನ್ನು ಸಮರ್ಪಿಸುತ್ತಾ, ಸುಗಂಧದ್ರವ್ಯಗಳ ಧೂಪಾರತಿ ಎತ್ತುತ್ತಾ, ಚೊಕ್ಕ ಬಂಗಾರದ ಮೇಜಿನ ಮೇಲೆ ನೈವೇದ್ಯವಾದ ರೊಟ್ಟಿಗಳನ್ನಿಡುತ್ತಾ, ಪ್ರತೀ ಸಾಯಂಕಾಲ ಬಂಗಾರದ ದೀಪಸ್ತಂಭದ ದೀಪಗಳನ್ನು ಹಚ್ಚುತ್ತಾ ಇರುತ್ತಾರೆ. ಹೀಗೆ ನಾವು ನಮ್ಮ ದೇವರಾದ ಸರ್ವೇಶ್ವರನ ಕಟ್ಟಳೆಗಳನ್ನು ಕೈಕೊಳ್ಳುತ್ತೇವೆ; ನೀವಾದರೋ ಅವರನ್ನು ತೊರೆದು ಬಿಟ್ಟವರು.
12 : ಇಗೋ, ದೇವರೇ ನಾಯಕರಾಗಿ ನಮ್ಮೊಂದಿಗಿರುತ್ತಾರೆ; ನಿಮಗೆ ವಿರುದ್ಧ ಯುದ್ಧ ಕಹಳೆಗಳನ್ನು ಮೊಳಗಿಸುವ ಯಾಜಕರೂ ನಮ್ಮೊಂದಿಗೆ ಇರುತ್ತಾರೆ. ಇಸ್ರಯೇಲರೇ, ನಿಮ್ಮ ಪೂರ್ವಜರ ದೇವರಾದ ಸರ್ವೇಶ್ವರನೊಡನೆ ಯುದ್ಧ ಮಾಡಬೇಡಿ; ನೀವು ಜಯಿಸಲಾರಿರಿ,” ಎಂದು ಕೂಗಿ ಹೇಳಿದನು.
13 : ಯಾರೊಬ್ಬಾಮನು ಯೆಹೂದ್ಯರ ಹಿಂದೆ ಹೊಂಚುಹಾಕುವುದಕ್ಕಾಗಿ ತನ್ನ ಸೈನ್ಯದ ಒಂದು ಗುಂಪನ್ನು ಕಳುಹಿಸಿದನು. ಹೀಗೆ ಶತ್ರುಸೈನ್ಯ ಯೆಹೂದ್ಯರ ಮುಂದೆಯೂ ಹೊಂಚುಹಾಕುವವರು ಅವರ ಹಿಂದೆಯೂ ಇದ್ದರು.
14 : ಯೆಹೂದ್ಯರು ತಮ್ಮ ಮುಂದೆಯೂ ಹಿಂದೆಯೂ ಯುದ್ಧ ಪ್ರಾರಂಭವಾಗಿರುವುದನ್ನು ಕಂಡು ಸರ್ವೇಶ್ವರನಿಗೆ ಅಭಿಮುಖರಾಗಿ ಮೊರೆಯಿಟ್ಟರು; ಯಾಜಕರು ಕಹಳೆಗಳನ್ನು ಊದಿದರು.
15 : ಅನಂತರ ಜನರು ಆರ್ಭಟಿಸಿದರು. ಅವರು ಆರ್ಭಟಿಸಿದ ಕೂಡಲೆ ದೇವರು ಯಾರೊಬ್ಬಾಮನನ್ನೂ ಎಲ್ಲಾ ಇಸ್ರಯೇಲರನ್ನೂ ಅಬೀಯನಿಂದ ಹಾಗೂ ಯೆಹೂದ್ಯರಿಂದ ಅಪಜಯಗೊಳಿಸಿದರು.
16 : ಹೀಗಾಗಿ ಇಸ್ರಯೇಲರು ಯೆಹೂದ್ಯರ ಎದುರಿನಿಂದ ಓಡಿಹೋದರು. ದೇವರು ಅವರನ್ನು ಯೆಹೂದ್ಯರ ಕೈಗೆ ಒಪ್ಪಿಸಿದರು.
17 : ಅಬೀಯನೂ ಅವನ ಜನರೂ ಅವರಲ್ಲಿ ಅನೇಕಾನೇಕರನ್ನು ಸದೆಬಡಿದರು. ಇಸ್ರಯೇಲ್ ಯೋಧರಲ್ಲಿ ಹತರಾಗಿ ಬಿದ್ದವರು ಐದು ಲಕ್ಷ ಮಂದಿ.
18 : ಹೀಗೆ ಇಸ್ರಯೇಲರು ಆ ಕಾಲದಲ್ಲಿ ಸೋಲುಸವಿದರು; ಯೆಹೂದ್ಯರು ತಮ್ಮ ಪಿತೃಗಳ ದೇವರಾದ ಸರ್ವೇಶ್ವರನಲ್ಲಿ ಭರವಸೆಯಿಟ್ಟದ್ದರಿಂದ ಜಯಶೀಲರಾದರು.
19 : ಅಬೀಯನು ಯಾರೊಬ್ಬಾಮನನ್ನು ಹಿಂದಟ್ಟಿ, ಅವನಿಂದ ಬೇತೇಲ್, ಯೆಷಾನಾ, ಎಫ್ರೋನ್ ಎಂಬ ಪಟ್ಟಣಗಳನ್ನೂ ಅವುಗಳಿಗೆ ಸೇರಿದ ಗ್ರಾಮಗಳನ್ನೂ ಕಿತ್ತುಕೊಂಡನು.
20 : ಯಾರೊಬ್ಬಾಮನು ಅಬೀಯನ ಜೀವಮಾನದಲ್ಲಿ ಮತ್ತೆ ತಲೆಯೆತ್ತಲೇ ಇಲ್ಲ. ಕಾಲಕ್ರಮೇಣ, ಸರ್ವೇಶ್ವರನ ದಂಡನೆಯಿಂದ ಅವನು ಸತ್ತನು.
21 : ಇತ್ತ ಅಬೀಯನು ಪ್ರಬಲನಾದನು. ಅವನಿಗೆ ಹದಿನಾಲ್ಕು ಮಂದಿ ಹೆಂಡತಿಯರೂ ಇಪ್ಪತ್ತೆರಡೂ ಮಂದಿ ಗಂಡುಮಕ್ಕಳೂ ಹದಿನಾರು ಮಂದಿ ಹೆಣ್ಣುಮಕ್ಕಳೂ ಇದ್ದರು.
22 : ಅಬೀಯನ ಉಳಿದ ಚರಿತ್ರೆ ಹಾಗೂ ನಡೆನುಡಿಗಳು ಪ್ರವಾದಿ ಇದ್ದೋವಿನ ವ್ಯಾಖ್ಯಾನದಲ್ಲಿ ಲಿಖಿತವಾಗಿವೆ.

· © 2017 kannadacatholicbible.org Privacy Policy