1 : ರೆಹಬ್ಬಾಮನು ಜೆರುಸಲೇಮನ್ನು ಮುಟ್ಟಿದ ನಂತರ ಇಸ್ರಯೇಲರಿಗೆ ವಿರುದ್ಧ ಯುದ್ಧ ಮಾಡುವುದಕ್ಕೂ ಅವರ ರಾಜ್ಯವನ್ನು ಮರಳಿ ವಶಪಡಿಸಿಕೊಳ್ಳುವುದಕ್ಕೂ ಯೆಹೂದ-ಬೆನ್ಯಾಮೀನ್ ಕುಲಗಳಿಂದ ಲಕ್ಷದ ಎಂಬತ್ತು ಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಕೂಡಿಸಿದನು.
2 : ಆಗ ದೈವಪುರುಷನಾದ ಶೆಮಾಯನಿಗೆ ಸರ್ವೇಶ್ವರನ ಈ ವಾಣಿ ಕೇಳಿಸಿತು:
3 : “ನೀನು ಹೋಗಿ ಸೊಲೊಮೋನನ ಮಗನೂ ಜುದೇಯದ ಅರಸನೂ ಆದ ರೆಹಬ್ಬಾಮನಿಗೂ ಯೆಹೂದ-ಬೆನ್ಯಾಮೀನ್ ಕುಲಗಳ ಇಸ್ರಯೇಲರೆಲ್ಲರಿಗೂ
4 : ‘ಸರ್ವೇಶ್ವರ ಇಂತೆನ್ನುತ್ತಾರೆ: ನೀವು ನಿಮ್ಮ ಸಹೋದರರೊಡನೆ ಯುದ್ಧ ಮಾಡುವುದಕ್ಕೆ ಹೋಗಬಾರದು. ಎಲ್ಲರು ಹಿಂದಿರುಗಿ ಹೋಗಿರಿ; ಈ ವಿಭಜನಾಕಾರ್ಯ ಸರ್ವೇಶ್ವರನಿಂದಾಗಿದೆ’ ಎಂದು ಹೇಳಬೇಕು.” ಅಂತೆಯೇ ಆ ಜನರು ಸರ್ವೇಶ್ವರನ ಮಾತನ್ನು ಕೇಳಿ ಯಾರೊಬ್ಬಾಮನಿಗೆ ವಿರೋಧವಾಗಿ ಹೊರಡದೆ ಹಿಂದಿರುಗಿ ಹೋದರು.
5 : ರೆಹಬ್ಬಾಮನು ಜೆರುಸಲೇಮಿನಲ್ಲಿ ವಾಸವಾಗಿದ್ದು ಜುದೇಯದ ಈ ಕೆಳಕಂಡ ಪಟ್ಟಣಗಳನ್ನು ಭದ್ರಪಡಿಸಿದನು:
6 : ಬೆತ್ಲೆಹೇಮ್, ಏತಾಮ್, ತೆಕೋವ,
7 : ಬೇತ್ಚೂರ್, ಸೋಕೋ, ಅದುಲ್ಲಾಮ್, ಗತ್‍ಊರು,
8 : ಬೇತ್ಚೂರ್, ಸೋಕೋ, ಅದುಲ್ಲಾಮ್, ಗತ್‍ಊರು,
9 : ಮಾರೇಷ, ಜೀಫ್, ಅದೋರೈಮ್, ಲಾಕೀಷ್,
10 : ಅಜೇಕ, ಚೊರ್ಗ, ಅಯ್ಯಾಲೋನ್ ಹಾಗೂ ಹೆಬ್ರೋನ್, ಕೋಟೆಕೊತ್ತಲಗಳಿಂದ ಕೂಡಿದ್ದ ಈ ಪಟ್ಟಣಗಳು ಯೆಹೂದ-ಬೆನ್ಯಾಮೀನ್ ಕುಲ ಪ್ರಾಂತ್ಯಗಳಾಗಿದ್ದವು.
11 : ಅವನು ಈ ಕೋಟೆಗಳನ್ನು ಬಲಪಡಿಸಿ, ನಾಯಕರ ವಶಕ್ಕೆ ಕೊಟ್ಟು, ಪ್ರತಿ ಒಂದರಲ್ಲಿ ಆಹಾರಪದಾರ್ಥ, ಎಣ್ಣೆ, ದ್ರಾಕ್ಷಾರಸ ಇವುಗಳನ್ನೂ ಗುರಾಣಿ ಬರ್ಜಿಗಳನ್ನೂ ಸಂಗ್ರಹಿಸಿಟ್ಟನು.
12 : ಹೀಗೆ ಇವುಗಳನ್ನು ಮತ್ತಷ್ಟು ಸುಭದ್ರಪಡಿಸಿದನು.
13 : ಯೆಹೂದ, ಬೆನ್ಯಾಮೀನ ಕುಲಗಳವರು ಅವನ ಸ್ವಾಧೀನದಲ್ಲಿದ್ದುದಲ್ಲದೆ ಬೇರೆ ಎಲ್ಲ ಇಸ್ರಯೇಲ್ ಪ್ರಾಂತ್ಯಗಳಲ್ಲಿದ್ದ ಯಾಜಕರು ಹಾಗೂ ಲೇವಿಯರು ಅವನೊಡನೆ ಸೇರಿಕೊಂಡರು.
14 : ಲೇವಿಯರು ಸರ್ವೇಶ್ವರನಿಗೆ ಯಾಜಕ ಸೇವೆಮಾಡದಂತೆ ಯಾರೊಬ್ಬಾಮನು ಮತ್ತು ಅವನ ಮಕ್ಕಳು ಅವರನ್ನು ಬಹಿಷ್ಕರಿಸಿ ಇದ್ದರು.
15 : ತಾವೇ ಏರ್ಪಡಿಸಿದ್ದ ಪೂಜಾಸ್ಥಳಗಳಿಗಾಗಿ ಹಾಗೂ ಅಜದೇವತೆ, ಹೋರಿಕರುಗಳ ಮೂರ್ತಿಪೂಜೆಗಾಗಿ ಬೇರೆ ಪೂಜಾರಿಗಳನ್ನು ನೇಮಿಸಿಕೊಂಡಿದ್ದರು. ಆದುದರಿಂದ ಅವರು ಗೋಮಾಳಗಳಿದ್ದ ತಮ್ಮ ಸೊತ್ತುಗಳನ್ನು ಬಿಟ್ಟು ಜುದೇಯನಾಡಿಗೂ ಜೆರುಸಲೇಮಿಗೂ ಬಂದರು.
16 : ಇಸ್ರಯೇಲರ ಎಲ್ಲ ಕುಲಗಳಲ್ಲಿ ಇಸ್ರಯೇಲ್ ದೇವರಾದ ಸರ್ವೇಶ್ವರನ ದರ್ಶನವನ್ನು ಬಯಸುತ್ತಿದ್ದವರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನಿಗೆ ಬಲಿಯರ್ಪಿಸುವುದಕ್ಕಾಗಿ ಆ ಲೇವಿಯರನ್ನು ಹಿಂಬಾಲಿಸಿ ಜೆರುಸಲೇಮಿಗೆ ಬಂದರು.
17 : ಇವರೆಲ್ಲರು ಮೊದಲನೆಯ ಮೂರು ವರ್ಷಗಳಲ್ಲಿ ದಾವೀದ ಹಾಗೂ ಸೊಲೊಮೋನರ ಮಾರ್ಗದಲ್ಲೇ ನಡೆಯುತ್ತಿದ್ದರು. ಎಂದೇ ಜುದೇಯರಾಜ್ಯವು ಆ ವರ್ಷಗಳಲ್ಲಿ ವೃದ್ಧಿಯಾಗಿ, ಸೊಲೊಮೋನನ ಮಗ ರೆಹಬ್ಬಾಮನು ಬಲಿಷ್ಠನಾದನು.
18 : ರೆಹಬ್ಬಾಮನು, ದಾವೀದನ ಮಗ ಯೆರೀಮೋತನಿಗೆ ಜೆಸ್ಸೆಯ ಮೊಮ್ಮಗಳೂ ಎಲೀಯಾಬನ ಮಗಳೂ ಆದ ಅಬೀಹೈಲಳಲ್ಲಿ ಹುಟ್ಟಿದ ಮಹ್ಲತ್ ಎಂಬಾಕೆಯನ್ನು ಹೆಂಡತಿಯನ್ನಾಗಿ ತೆಗೆದುಕೊಂಡನು.
19 : ಆಕೆ ಅವನಿಂದ ಯೆಗೂಷ್, ಶೆಮರ್ಯ, ಜಾಹಮ್ ಎಂಬ ಗಂಡು ಮಕ್ಕಳನ್ನು ಹೆತ್ತಳು.
20 : ಅನಂತರ ಅವನು ಅಬ್ಷಾಲೋಮನ ಮಗಳಾದ ಮಾಕ ಎಂಬಾಕೆಯನ್ನು ಮದುವೆ ಮಾಡಿಕೊಂಡನು; ಆಕೆ ಅವನಿಂದ ಅಬೀಯ, ಅತ್ತೈ, ಬೀಜ, ಶೆಲೋಮೀತ್ ಎಂಬುವರನ್ನು ಹೆತ್ತಳು.
21 : ರೆಹಬ್ಬಾಮನು ತನ್ನ ಎಲ್ಲಾ ಪತ್ನಿಯರಲ್ಲಿಯೂ ಉಪಪತ್ನಿಯರಲ್ಲಿಯೂ ಅಬ್ಷಾಲೋಮನ ಮಗಳಾದ ಮಾಕಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದನು. ಅವನಿಗೆ ಹದಿನೆಂಟು ಮಂದಿ ಪತ್ನಿಯರೂ ಅರವತ್ತು ಮಂದಿ ಉಪಪತ್ನಿಯರೂ ಇದ್ದರು. ಇವರಲ್ಲಿ ಅವನಿಗೆ ಇಪ್ಪತ್ತು ಎಂಟು ಮಂದಿ ಗಂಡುಮಕ್ಕಳೂ ಅರವತ್ತು ಮಂದಿ ಹೆಣ್ಣು ಮಕ್ಕಳೂ ಹುಟ್ಟಿದರು.
22 : ರೆಹಬ್ಬಾಮನು ಮಾಕಳ ಮಗನಾದ ಅಬೀಯನನ್ನು ಅರಸನನ್ನಾಗಿ ಮಾಡಬೇಕೆಂದು ಅವನನ್ನು ಅವನ ಅಣ್ಣ ತಮ್ಮಂದಿರಲ್ಲಿ ಪ್ರಧಾನನನ್ನಾಗಿಯೂ ಯುವರಾಜನನ್ನಾಗಿಯೂ ನೇಮಿಸಿದನು.
23 : ತನ್ನ ಉಳಿದ ಎಲ್ಲ ಮಕ್ಕಳನ್ನು ಜಾಣತನದಿಂದ ವಿಂಗಡಿಸಿ ಯೆಹೂದ-ಬೆನ್ಯಾಮೀನ್ ಕುಲಪ್ರದೇಶಗಳಲ್ಲಿ ಇದ್ದ ಕೋಟೆ ಕೊತ್ತಲುಗಳಿಂದ ಕೂಡಿದ ಆಯಾ ಪಟ್ಟಣಗಳಲ್ಲಿಟ್ಟು, ಅವರಿಗೆ ಬೇಕಾದಷ್ಟು ಜೀವನಾಂಶವನ್ನು ಏರ್ಪಡಿಸಿ, ಹಲವಾರು ಹೆಂಡತಿಯರನ್ನೂ ಗೊತ್ತುಮಾಡಿಕೊಟ್ಟನು.