Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ರೆಹಬ್ಬಾಮನು ಶೆಕೆಮಿಗೆ ಹೋದನು. ಅಲ್ಲಿ ಇಸ್ರಯೇಲರೆಲ್ಲರು ಅವನನ್ನು ಅರಸನನ್ನಾಗಿ ಮಾಡುವುದಕ್ಕೆ ಕೂಡಿಬಂದಿದ್ದರು.
2 : ಇತ್ತ ಅರಸ ಸೊಲೊಮೋನನಿಗೆ ತಪ್ಪಿಸಿಕೊಂಡು ಈಜಿಪ್ಟಿಗೆ ಓಡಿಹೋಗಿದ್ದ ನೆಬಾಟನ ಮಗ ಯಾರೊಬ್ಬಾಮನು ನಡೆದ ಸಂಗತಿಗಳನ್ನು ಕೇಳಿದೊಡನೆ ಈಜಿಪ್ಟಿನಿಂದ ಹಿಂದಿರುಗಿ ಬಂದಿದ್ದನು.
3 : ಇಸ್ರಯೇಲರು ಅವನನ್ನೂ ತಮ್ಮ ಬಳಿಗೆ ಕರೆಸಿಕೊಂಡರು. ಅವನು ಎಲ್ಲ ಇಸ್ರಯೇಲರೊಡನೆ ರೆಹಬ್ಬಾಮನ ಬಳಿಗೆ ಹೋಗಿ,
4 : “ನಿಮ್ಮ ತಂದೆ ನಮ್ಮ ಮೇಲೆ ಭಾರವಾದ ನೊಗವನ್ನು ಹೇರಿದ್ದರು; ಅವರು ನೇಮಿಸಿದ್ದ ಬಿಟ್ಟೀ ಕೆಲಸವನ್ನು ನೀನು ಕಡಿಮೆಮಾಡಿ, ನಮ್ಮ ಮೇಲಿರುವ ಈ ಭಾರವಾದ ನೊಗವನ್ನು ಹಗುರಮಾಡುವುದಾದರೆ ನಾವು ನಿಮಗೆ ಸೇವೆ ಮಾಡುತ್ತೇವೆ,” ಎಂದನು. ಅವನು,
5 : “ನೀವು ಮೂರು ದಿನಗಳಾದ ನಂತರ ಮತ್ತೆ ಬನ್ನಿ,” ಎಂದು ಉತ್ತರಕೊಟ್ಟನು; ಜನರು ಹೊರಟು ಹೋದರು.
6 : ಆಗ ಅರಸ ರೆಹಬ್ಬಾಮನು ತನ್ನ ತಂದೆ ಸೊಲೊಮೋನನ ಕಾಲದಲ್ಲಿ ಮಂತ್ರಿಗಳಾಗಿದ್ದ ಹಿರಿಯರನ್ನು ಕೂಡಿಸಿ, ತಾನು ಜನರಿಗೆ ಕೊಡಬೇಕಾದ ಉತ್ತರದ ಬಗ್ಗೆ ಅವರ ಆಲೋಚನೆಯನ್ನು ಕೇಳಿದನು.
7 : ಅವರು, “ನೀವು ಈ ಜನರಿಗೆ ದಯೆತೋರಿಸಿ, ಅವರನ್ನು ಮೆಚ್ಚಿಸುವ ಒಳ್ಳೆಯ ಉತ್ತರಕೊಟ್ಟರೆ ಅವರು ಯಾವಾಗಲೂ ನಿಮಗೆ ಅಧೀನರಾಗಿರುವರು,” ಎಂದರು.
8 : ಆದರೆ ಅವನು ಆ ಹಿರಿಯರ ಆಲೋಚನೆಯನ್ನು ನಿರಾಕರಿಸಿದನು. ತನ್ನ ಸಂಗಡವೇ ಬೆಳೆದು ತನಗೆ ಮಂತ್ರಿಗಳಾದ ಯೌವನಸ್ಥರನ್ನು ಕರೆಸಿದನು.
9 : “ನನ್ನ ತಂದೆ ಹೇರಿದ ನೊಗವನ್ನು ಹಗುರ ಮಾಡಬೇಕೆಂದು ಬೇಡಿಕೊಳ್ಳುವ ಈ ಜನರಿಗೆ ಯಾವ ಉತ್ತರವನ್ನು ಕೊಡಬೇಕು? ಈ ವಿಷಯದಲ್ಲಿ ನಿಮ್ಮ ಆಲೋಚನೆ ಏನು?” ಎಂದು ಕೇಳಿದನು.
10 : ಅವರು ಅವನಿಗೆ, “ನಿಮ್ಮ ತಂದೆ ನಮ್ಮ ಮೇಲೆ ಹೇರಿರುವ ಭಾರವಾದ ನೊಗವನ್ನು ಹಗುರಮಾಡು ಎಂಬುದಾಗಿ ನಿಮ್ಮನ್ನು ಬೇಡಿಕೊಂಡ ಜನರಿಗೆ ನೀವು, ‘ನನ್ನ ತಂದೆಯ ಸೊಂಟಕ್ಕಿಂತ ನನ್ನ ಕಿರಿಬೆರಳು ದಪ್ಪ;
11 : ನನ್ನ ತಂದೆ ನಿಮ್ಮ ಮೇಲೆ ಭಾರವಾದ ನೊಗವನ್ನು ಹೇರಿರುವುದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುತ್ತೇನೆ; ಅವರು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ನಿಮ್ಮನ್ನು ಮುಳ್ಳು ಕೊರಡೆಗಳಿಂದ ದಂಡಿಸುವೆನು’ ಎಂಬುದಾಗಿ ಹೇಳಬೇಕು”, ಎಂದು ಉತ್ತರಕೊಟ್ಟರು.
12 : ಯಾರೊಬ್ಬಾಮನೂ ಜನರೆಲ್ಲರೂ ಅರಸ ರೆಹಬ್ಬಾಮನ ಅಪ್ಪಣೆಯಂತೆ ಮೂರನೆಯ ದಿನ ಪುನಃ ಅವನ ಬಳಿಗೆ ಬಂದರು.
13 : ಅರಸನು ಅವರಿಗೆ ಕಠಿಣವಾದ ಉತ್ತರವನ್ನು ಕೊಟ್ಟನು; ಅವನು ಹಿರಿಯರ ಆಲೋಚನೆಯನ್ನು ನಿರಾಕರಿಸಿದನು.
14 : ಯೌವನಸ್ಥರ ಆಲೋಚನೆಗನುಸಾರವಾಗಿ ಜನರಿಗೆ, “ನನ್ನ ತಂದೆ ನಿಮ್ಮ ಮೇಲೆ ಭಾರವಾದ ನೊಗವನ್ನು ಹೇರಿರುವುದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುವೆನು. ಅವರು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ, ನಾನಾದರೋ ನಿಮ್ಮನ್ನು ಮುಳ್ಳುಕೊರಡೆಗಳಿಂದ ದಂಡಿಸುವೆನು,” ಎಂದು ನುಡಿದನು.
15 : ಅರಸನು ಜನರ ಮಾತನ್ನು ಕೇಳದೆ ಹೋದದ್ದು ದೈವ ಯೋಗದಿಂದಲೇ, ಈ ಪ್ರಕಾರ ಸರ್ವೇಶ್ವರ ಶಿಲೋವಿನವನಾದ ಅಹೀಯನ ಮುಖಾಂತರ ನೆಬಾಟನ ಮಗ ಯಾರೊಬ್ಬಾಮನಿಗೆ ಹೇಳಿಸಿದ ಮಾತು ನೆರವೇರಿತು.
16 : ತಮ್ಮ ಮಾತನ್ನು ಅರಸನು ಲಕ್ಷಿಸಲಿಲ್ಲ ಎಂದು ತಿಳಿದು, ಇಸ್ರಯೇಲರೆಲ್ಲರು ಅವನಿಗೆ, “ದಾವೀದನಿಗೂ ನಮಗೂ ಇನ್ನು ಮೇಲೆ ಏನೂ ಸಂಬಂಧವಿಲ್ಲ, ಜೆಸ್ಸೆಯನ ಮಗನಿಗೂ ನಮಗೂ ಯಾವ ಬಾಧ್ಯತೆಯೂ ಇಲ್ಲ. ಇಸ್ರಯೇಲರೇ, ನಿಮ್ಮ ನಿಮ್ಮ ನಿವಾಸಗಳಿಗೆ ತೆರಳಿರಿ; ದಾವೀದನ ಕಡೆಯವರೇ, ನಿಮ್ಮ ಕುಲವನ್ನು ನೀವೇ ನೋಡಿಕೊಳ್ಳಿ,” ಎಂದು ಪ್ರತಿಭಟಿಸಿ ತಮ್ಮ ತಮ್ಮ ನಿವಾಸಗಳಿಗೆ ಹೊರಟುಹೋದರು.
17 : ಜುದೇಯ ಪ್ರಾಂತ್ಯದಲ್ಲಿದ್ದ ಇಸ್ರಯೇಲರದರೋ ಅರಸ ರೆಹಬ್ಬಾಮನ ಅಧೀನದಲ್ಲೆ, ಉಳಿದರು.
18 : ರೆಹಬ್ಬಾಮನು ಬಿಟ್ಟೀಕೆಲಸದವರ ಮೇಲ್ವಿಚಾರಕನಾದ ಹದೋರಾಮನನ್ನು ಇಸ್ರಯೇಲರ ಬಳಿಗೆ ಕಳುಹಿಸಿದಾಗ, ಅವರು ಇವನನ್ನು ಕಲ್ಲೆಸೆದು ಕೊಂದರು. ಆಗ ಅರಸ ರೆಹಬ್ಬಾಮನು ಬೇಗನೆ ರಥವನ್ನೇರಿ ಜೆರುಸಲೇಮಿಗೆ ಓಡಿ ಹೋದನು.
19 : ಇಸ್ರಯೇಲರು ಅಂದಿನಿಂದ ಇಂದಿನವರೆಗೂ ದಾವೀದನ ಕುಟುಂಬದವರೊಡನೆ ಸಮಾಧಾನವಾಗಲೇ ಇಲ್ಲ.

· © 2017 kannadacatholicbible.org Privacy Policy