1 : ದಾವೀದನ ಮಗ ಸೊಲೊಮೋನನು ತನ್ನ ರಾಜ್ಯದ ಮೇಲೆ ಸಂಪೂರ್ಣ ಪ್ರಭುತ್ವ ಹೊಂದಿದನು. ಅವನ ದೇವರಾದ ಸರ್ವೇಶ್ವರ ಸ್ವಾಮಿ ಅವನನ್ನು ಹರಸಿ ಮಹಾ ಬಲಾಢ್ಯನಾಗುವಂತೆ ಮಾಡಿದರು.
2 : ಅವನು ತನ್ನ ಸಹಸ್ರಾಧಿಪತಿಗಳನ್ನು, ಶತಾಧಿಪತಿಗಳನ್ನು, ಸರಕಾರದ ಎಲ್ಲ ಪದಾಧಿಕಾರಿಗಳನ್ನು ಹಾಗೂ ಇಸ್ರಯೇಲ್ ಕುಲಗೋತ್ರಗಳ ನಾಯಕರನ್ನು ಬರಮಾಡಿ, ಅವರ ಸಮೇತ ಗಿಬ್ಯೋನಿನಲ್ಲಿದ್ದ ಪೂಜಾಸ್ಥಳಕ್ಕೆ ಹೋದನು.
3 : ಸರ್ವೇಶ್ವರನ ದಾಸನಾದ ಮೋಶೆ ಮರುಭೂಮಿಯಲ್ಲಿ ಮಾಡಿಸಿದ್ದ ದೇವದರ್ಶನದ ಗುಡಾರ ಅಲ್ಲಿಯೇ ಇತ್ತು.
4 : ದಾವೀದನು ದೇವರ ಮಂಜೂಷವನ್ನು, ಈಗಾಗಲೇ ಕಿರ್ಯತ್ಯಾರೀಮಿನಿಂದ ತಾನು ಜೆರುಸಲೇಮಿನಲ್ಲಿ ಅದಕ್ಕೋಸ್ಕರ ಸಿದ್ಧಮಾಡಿದ್ದ ಗುಡಾರಕ್ಕೆ ತೆಗೆದುಕೊಂಡು ಬಂದಿದ್ದನು.
5 : ಆದರೂ ಊರೀಯನ ಮಗನೂ ಹೂರನ ಮೊಮ್ಮಗನೂ ಆದ ಬೆಚಲೇಲನು ಮಾಡಿಸಿದ್ದ ತಾಮ್ರದ ಬಲಿಪೀಠ, ಅಲ್ಲೇ ಗಿಬ್ಯೋನಿನಲ್ಲಿ ಸರ್ವೇಶ್ವರನ ಗುಡಾರದ ಮುಂದೆ ಇತ್ತು. ಈ ಕಾರಣ ಸೊಲೊಮೋನನೂ ಅವನ ಸಮಾಜದವರೂ ಅಲ್ಲಿಗೆ ದರ್ಶನಕ್ಕಾಗಿ ಹೋಗುತ್ತಿದ್ದರು.
6 : ಸೊಲೊಮೋನನು, ದೇವ ದರ್ಶನದ ಗುಡಾರದ ಬಳಿ ಸರ್ವೇಶ್ವರನ ಮುಂದಿದ್ದ ಆ ತಾಮ್ರದ ಪೀಠದ ಮೇಲೆ, ಸಾವಿರ ದಹನಬಲಿಗಳನ್ನು ಸಮರ್ಪಿಸಿದನು.
7 : ಅದೇ ರಾತ್ರಿ ದೇವರು ಸೊಲೊಮೋನನಿಗೆ ದರ್ಶನಕೊಟ್ಟು, “ನಿನಗೆ ಯಾವ ವರಬೇಕು, ಕೇಳಿಕೋ,” ಎಂದು ಹೇಳಿದರು.
8 : ಸೊಲೊಮೋನನು, “ನೀವು ನನ್ನ ತಂದೆ ದಾವೀದನಿಗೆ ಮಹಾಕೃಪೆಯನ್ನು ತೋರಿಸಿದಿರಿ. ಅವರ ಸ್ಥಾನದಲ್ಲಿ ನನ್ನನ್ನು ಅರಸನನ್ನಾಗಿ ನೇಮಿಸಿದ್ದೀರಿ.
9 : ಹೀಗೆ ಇರಲಾಗಿ ದೇವರಾದ ಸರ್ವೇಶ್ವರಾ, ನೀವು ನನ್ನ ತಂದೆ ದಾವೀದನಿಗೆ ನುಡಿದದ್ದು ಸಾರ್ಥಕವಾಗಲಿ; ಧರೆಯ ಧೂಳಿನಷ್ಟು ಅಸಂಖ್ಯವಾದ ಜನಾಂಗದ ಮೇಲೆ ನನ್ನನ್ನು ಅರಸನನ್ನಾಗಿ ನೇಮಿಸಿದ್ದೀರಿ.
10 : ನಿಮ್ಮ ಪ್ರಜೆಯಾದ ಈ ಮಹಾಜನಾಂಗವನ್ನು ಆಳುವುದಕ್ಕೆ ಸಮರ್ಥರಾರು! ನಾನು ಈ ಜನರ ನಾಯಕನಾಗಿ ಇವರನ್ನು ಪರಿಪಾಲಿಸುವುದಕ್ಕೆ ಬೇಕಾದ ಜ್ಞಾನ ವಿವೇಕಗಳನ್ನು ನನಗೆ ಅನುಗ್ರಹಿಸಿರಿ,” ಎಂದು ದೇವರನ್ನು ಬೇಡಿಕೊಂಡನು.
11 : ಆಗ ದೇವರು ಸೊಲೊಮೋನನಿಗೆ, “ನೀನು ಘನಧನೈಶ್ವರ್ಯಗಳನ್ನಾಗಲಿ, ಶತ್ರುಗಳ ವಿನಾಶವನ್ನಾಗಲಿ, ದೀರ್ಘಾಯುಷ್ಯವನ್ನಾಗಲಿ ಕೇಳಿಕೊಳ್ಳಲಿಲ್ಲ. ಬದಲಿಗೆ ನಾನು ಯಾರ ಮೇಲೆ ನಿನ್ನನ್ನು ಅರಸನನ್ನಾಗಿ ಮಾಡಿದೆನೋ ಆ ನನ್ನ ಪ್ರಜೆಗಳನ್ನು ಪಾಲಿಸುವುದಕ್ಕೆ ಬೇಕಾದ ಜ್ಞಾನವಿವೇಕಗಳ ಮೇಲೆ ಮನಸ್ಸಿಟ್ಟು ಅವುಗಳನ್ನು ನಿನಗಾಗಿ ಬೇಡಿಕೊಂಡೆ. ಆದುದರಿಂದ ಅವು ನಿನಗೆ ದೊರಕುವುವು.
12 : ಇದಲ್ಲದೆ, ನಾನು ನಿನಗೆ ಘನಧನೈಶ್ವರ್ಯಗಳನ್ನೂ ಅನುಗ್ರಹಿಸುತ್ತೇನೆ. ಇಂಥ ಘನಧನೈಶ್ವರ್ಯಗಳು ನಿನಗಿಂತ ಮೊದಲಿದ್ದ ಅರಸರಲ್ಲಿ ಯಾರಿಗೂ ಇರಲಿಲ್ಲ, ನಿನ್ನ ಅನಂತರದವರಿಗೂ ಇರುವುದಿಲ್ಲ,” ಎಂದರು.
13 : ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಹೇತ್ ಎರಡನೆಯವನು. ಈ ಹೆಸರಿನ ಜನಾಂಗದವರಿಗೆ ಇವರೇ ಮೂಲ ಪುರುಷರು.
14 : ರಥಗಳನ್ನೂ ರಾಹುತರನ್ನೂ ಸಂಗ್ರಹಿಸಿದನು. ಅವನಿಗಿದ್ದ ರಥಗಳು ಸಾವಿರದ ನಾನೂರು; ರಾಹುತರು ಹನ್ನೆರಡು ಸಾವಿರ. ಇವುಗಳಲ್ಲಿ ಕೆಲವನ್ನು ಜೆರುಸಲೇಮಿನಲ್ಲೇ ಇಟ್ಟುಕೊಂಡನು. ಉಳಿದವುಗಳನ್ನು ರಥಗಳಿಗಾಗಿಯೇ ನೇಮಿಸಿದ್ದ ಪಟ್ಟಣಗಳಲ್ಲಿ ಇರಿಸಿದನು.
15 : ಅವನ ಕಾಲದಲ್ಲಿ ಬೆಳ್ಳಿಬಂಗಾರ ಕಲ್ಲಿನಂತೆಯೂ, ದೇವದಾರುಮರಗಳು ಇಳಕಲಿನ ಪ್ರದೇಶದಲ್ಲಿ ಬೆಳೆಯುವ ಅತ್ತಿಮರಗಳಂತೆಯೂ ಜೆರುಸಲೇಮಿನಲ್ಲಿ ವಿಫುಲವಾಗಿದ್ದವು.
16 : ಅರಸ ಸೊಲೊಮೋನನ ಕುದುರೆಗಳು ಈಜಿಪ್ಟ್ ದೇಶದವುಗಳು. ಅವನ ವರ್ತಕರು ಅವುಗಳನ್ನು ಹಿಂಡು ಹಿಂಡಾಗಿ ಕೊಂಡುಕೊಂಡು ಬರುತ್ತಿದ್ದರು.
17 : ರಥಕ್ಕೆ ಆರುನೂರು ಬೆಳ್ಳಿನಾಣ್ಯಗಳಂತೆ, ಕುದುರೆಗೆ ನೂರೈವತ್ತು ಬೆಳ್ಳಿನಾಣ್ಯಗಳಂತೆ ಕೊಟ್ಟು, ರಥಗಳನ್ನೂ ಕುದುರೆಗಳನ್ನೂ ಈಜಿಪ್ಟ್ ದೇಶದಿಂದ ತರಿಸುತ್ತಿದ್ದರು; ಹಿತ್ತಿಯರ ಮತ್ತು ಸಿರಿಯಾದವರ ಎಲ್ಲಾ ಅರಸರು ಇವರ ಮುಖಾಂತರವೇ ತರಿಸುತ್ತಿದ್ದರು.