1 : ಬೆನ್ಯಾವಿೂನ ಕುಲದಲ್ಲಿ ಕೀಷನೆಂಬ ಒಬ್ಬ ಐಶ್ವರ್ಯವಂತನಿದ್ದನು. ಇವನು ಚೆರೋರನ ಮಗನೂ ಬೆಕೋರತನ ಮೊಮ್ಮಗನೂ ಆಫೀಹನ ಮರಿಮಗನೂ ಆದ ಅಬೀಯೇಲನ ಮಗ.
2 : ಇವನಿಗೆ ಸೌಲನೆಂಬ ಒಬ್ಬ ಮಗನಿದ್ದನು. ಈ ಸೌಲನು ಉತ್ತಮನೂ ಇಸ್ರಯೇಲರಲ್ಲೆಲ್ಲ ಅತಿಸುಂದರನೂ ಆಗಿದ್ದನು; ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರ ಆಗಿದ್ದನು.
3 : ಒಂದು ದಿನ ಸೌಲನ ತಂದೆಯಾದ ಕೀಷನ ಕತ್ತೆಗಳು ಕಾಣದೆಹೋದವು. ಅವನು ತನ್ನ ಮಗ ಸೌಲನಿಗೆ, “ನೀನೆದ್ದು ಆಳುಗಳಲ್ಲೊಬ್ಬನನ್ನು ಕರೆದುಕೊಂಡು ಕತ್ತೆಗಳನ್ನು ಹುಡುಕಲು ಹೋಗು,” ಎಂದು ಹೇಳಿದನು.
4 : ಅದರಂತೆಯೇ ಸೌಲನು ಹೊರಟು ಎಫ್ರಯಿಮ್ ಪರ್ವತಪ್ರಾಂತ್ಯ, ಹಾಗು ಶಾಲಿಷಾನಾಡು ಇವುಗಳಲ್ಲಿ ಸುತ್ತಾಡಿದರೂ ಅವು ಸಿಕ್ಕಲಿಲ್ಲ. ಶಾಲೀಮ್, ಬೆನ್ಯಾವಿೂನ ಈ ಪ್ರಾಂತ್ಯಗಳಲ್ಲಿಯೂ ಸಿಕ್ಕಲಿಲ್ಲ.
5 : ಕಡೆಗೆ ಅವರು ಚೂಫ್‍ನಾಡಿಗೆ ಬಂದರು. ಅಲ್ಲಿ ಅವನು ತನ್ನ ಆಳಿಗೆ, “ಹಿಂದಿರುಗಿ ಹೋಗೋಣ ನಡೆ; ನಮ್ಮ ತಂದೆ ಈ ಕತ್ತೆಗಳ ಚಿಂತೆಯನ್ನೇ ಬಿಟ್ಟು ನಮ್ಮ ಚಿಂತೆಯಲ್ಲಿ ಇರಬಹುದು,” ಎಂದನು.
6 : ಆಗ ಆ ಆಳು, “ಇಗೋ, ಈ ಪಟ್ಟಣದಲ್ಲಿ ಗೌರವಸ್ಥನಾದ ಒಬ್ಬ ದೈವಪುರುಷ ಇದ್ದಾನೆ. ಅವನು ನುಡಿಯುವುದೆಲ್ಲಾ ನೆರವೇರುತ್ತದೆ; ಅಲ್ಲಿಗೆ ಹೋಗೋಣ; ಒಂದು ವೇಳೆ ಅವನು ನಾವು ಹೋಗಬೇಕಾದ ಮಾರ್ಗವನ್ನು ತಿಳಿಸುವನು,” ಎಂದನು.
7 : ಅದಕ್ಕೆ ಸೌಲನು, “ನಾವು ಅವನ ಬಳಿಗೆ ಹೋಗಬೇಕಾದರೆ ಏನಾದರೂ ತೆಗೆದುಕೊಂಡು ಹೋಗಬೇಕು; ನಾವು ತಂದಿದ್ದ ಆಹಾರಸಾಮಗ್ರಿ ಮುಗಿದುಹೋಯಿತು. ಆ ದೈವಪುರುಷನಿಗೆ ಕೊಡತಕ್ಕ ಕಾಣಿಕೆ ನಮ್ಮಲ್ಲಿ ಇಲ್ಲವಲ್ಲಾ;
8 : ಏನು ಕೊಡುವುದು?” ಎನ್ನಲು ಆ ಆಳು, “ಇಗೋ, ನನ್ನ ಕೈಯಲ್ಲಿ ಒಂದು ಪಾವಲಿ ಬೆಳ್ಳಿನಾಣ್ಯವಿದೆ; ಇದನ್ನು ಅವನಿಗೆ ಕೊಡೋಣ; ಅವನು ನಮಗೆ ಮಾರ್ಗ ತೋರಿಸುವನು,” ಎಂದು ಉತ್ತರಕೊಟ್ಟನು.
9 : (ಪೂರ್ವಕಾಲದಲ್ಲಿ ಇಸ್ರಯೇಲರಲ್ಲಿ ಯಾವನಾದರೂ ದೇವೋತ್ತರ ಕೇಳಬೇಕಾದರೆ ದಾರ್ಶನಿಕನ ಬಳಿಗೆ ಹೋಗೋಣ ಬನ್ನಿ ಎನ್ನುವನು; ಈ ಕಾಲದಲ್ಲಿ ಪ್ರವಾದಿಗಳೆನಿಸಿಕೊಳ್ಳುವವರನ್ನು ಆ ಕಾಲದಲ್ಲಿ ದಾರ್ಶನಿಕರೆಂದು ಕರೆಯುತ್ತಿದ್ದರು.)
10 : ಆಗ ಸೌಲನು ಆಳಿಗೆ, “ನೀನು ಹೇಳುವುದು ಒಳ್ಳೆಯದು, ಹೋಗೋಣ, ನಡೆ,” ಎಂದನು.
11 : ಅವರಿಬ್ಬರೂ ಗುಡ್ಡ ಹತ್ತಿ ದೇವಪುರುಷನಿದ್ದ ಪಟ್ಟಣವನ್ನು ಸವಿೂಪಿಸಿದರು. ನೀವು ಸೇದುವುದಕ್ಕಾಗಿ ಹೊರಗೆ ಬಂದಿದ್ದ ಮಹಿಳೆಯರನ್ನು ಕಂಡು, “ದಾರ್ಶನಿಕರು ಊರಲ್ಲಿ ಇದ್ದಾರೋ?” ಎಂದು ಕೇಳಲು, ಅವರು “ಹೌದು” ಎಂದರು.
12 : “ಈ ದಿನ ನಮ್ಮ ಊರಿನವರು ಗುಡ್ಡದ ಮೇಲೆ ಬಲಿಯನ್ನರ್ಪಿಸುವುದರಿಂದ ಅವರು ಈಗಲೇ ಇಲ್ಲಿಗೆ ಬಂದರು; ಬೇಗನೆ ಹೋಗಿ;
13 : ಅವರು ಬಲಿಭೋಜನಕ್ಕಾಗಿ ಗುಡ್ಡಕ್ಕೆ ಹೋಗುವ ಮೊದಲೇ ನೀವು ಊರೊಳಕ್ಕೆ ಹೋದರೆ ಸಿಕ್ಕುವರು. ಅವರು ಅಲ್ಲಿಗೆ ಹೋಗುವವರೆಗೆ ಜನರು ಊಟಮಾಡುವುದಿಲ್ಲ. ಅವರು ಹೋಗಿ ಬಲಿ ಆಹಾರವನ್ನು ಆಶೀರ್ವದಿಸುತ್ತಾರೆ; ಅನಂತರವೇ ಆಮಂತ್ರಿತರು ಊಟಮಾಡುವುದು. ಈಗಲೇ ಹೋಗಿ; ಅವನು ಸಿಕ್ಕುವ ಸಮಯ ಇದೇ,” ಎಂದರು ಆ ಮಹಿಳೆಯರು.
14 : ಅವರು ಗುಡ್ಡ ಹತ್ತಿ ಊರಿಗೆ ಬಂದಾಗ ಸಮುವೇಲನು ಗುಡ್ಡಕ್ಕೆ ಹೊರಟು ಅವರೆದುರಿಗೆ ಬಂದನು.
15 : ಸೌಲನು ಬರುವುದಕ್ಕೆ ಒಂದು ದಿವಸ ಮುಂದಾಗಿಯೇ ಸರ್ವೇಶ್ವರ ಸಮುವೇಲನಿಗೆ,
16 : “ನಾಳೆ ಇಷ್ಟು ಹೊತ್ತಿಗೆ ಬೆನ್ಯಾವಿೂನ್ ನಾಡಿನವನೊಬ್ಬನನ್ನು ನಿನ್ನ ಬಳಿಗೆ ಬರಮಾಡುವೆನು. ನೀನು ಅವನನ್ನು ಇಸ್ರಯೇಲರ ನಾಯಕನನ್ನಾಗಿ ಅಭಿಷೇಕಿಸಬೇಕು. ಅವನು ನನ್ನ ಜನರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವನು. ಅವರ ಕೂಗು ನನಗೆ ಮುಟ್ಟಿತು; ಅವರ ಮೇಲೆ ನನಗೆ ಕನಿಕರವಿದೆ,” ಎಂದು ತಿಳಿಸಿದರು.
17 : ಸಮುವೇಲನು ಸೌಲನನ್ನು ಕಂಡಾಗ ಸರ್ವೇಶ್ವರ ಅವನಿಗೆ, “ನಾನು ತಿಳಿಸಿದ್ದ ವ್ಯಕ್ತಿ ಇವನೇ; ಇವನೇ ನನ್ನ ಪ್ರಜೆಯನ್ನು ಆಳತಕ್ಕವನು,” ಎಂದು ಸೂಚಿಸಿದರು.
18 : ಊರಬಾಗಿಲಿಗೆ ಬಂದ ಸೌಲನು ಎದುರಿಗೆ ಬಂದ ಸಮುವೇಲನನ್ನು ನೋಡಿ, “ದಾರ್ಶನಿಕರ ಮನೆ ಎಲ್ಲಿದೆ ಎಂಬುದನ್ನು ದಯವಿಟ್ಟು ತಿಳಿಸುವಿರಾ?” ಎಂದನು.
19 : ಸಮುವೇಲನು, “ನಾನೇ ಆ ದಾರ್ಶನಿಕ; ನೀನು ನನ್ನ ಜೊತೆ ಗುಡ್ಡಕ್ಕೆ ಬಾ; ನೀನು ಈ ಹೊತ್ತು ನನ್ನ ಸಂಗಡ ಊಟಮಾಡಬೇಕು. ನಿನ್ನ ಚಿಂತೆಯನ್ನೆಲ್ಲಾ ಪರಿಹರಿಸಿ ನಾಳೆ ಬೆಳಿಗ್ಗೆ ನಿನ್ನನ್ನು ಕಳುಹಿಸಿಕೊಡುವೆನು.
20 : ಮೂರು ದಿವಸಗಳ ಹಿಂದೆ ತಪ್ಪಿಸಿಕೊಂಡ ನಿನ್ನ ಕತ್ತೆಗಳಿಗಾಗಿ ಚಿಂತೆ ಮಾಡಬೇಡ; ಅವು ಈಗಾಗಲೇ ಸಿಕ್ಕಿವೆ. ಮತ್ತು ಇಸ್ರಯೇಲರ ಆಶೋತ್ತರವೆಲ್ಲ ನಿನಗೂ ನಿನ್ನ ಕುಟುಂಬದವರಿಗೂ ಸಲ್ಲುವವಲ್ಲವೇ?” ಎಂದನು.
21 : ಅದಕ್ಕೆ ಸೌಲನು, “ಇಸ್ರಯೇಲ್ ಕುಲಗಳಲ್ಲಿ ಅತ್ಯಲ್ಪವಾಗಿರುವ ಬೆನ್ಯಾವಿೂನ್ ಕುಲಕ್ಕೆ ಸೇರಿದವನು ನಾನು; ಮಾತ್ರವಲ್ಲ, ಬೆನ್ಯಾವಿೂನ್ಯರ ಎಲ್ಲಾ ಕುಟುಂಬಗಳಲ್ಲಿ ನನ್ನದು ಕನಿಷ್ಠವಾದದ್ದು; ನನಗೆ ಇಂಥ ದೊಡ್ಡ ಮಾತನ್ನು ಏಕೆ ಹೇಳುತ್ತಿರುವಿರಿ?” ಎಂದನು.
22 : ಸಮುವೇಲನು ಸೌಲನನ್ನೂ ಅವನ ಸೇವಕನನ್ನೂ ಮಂಟಪಕ್ಕೆ ಕರೆದುಕೊಂಡು ಹೋದನು. ಬಲಿಭೋಜನಕ್ಕೆ ಬಂದಿದ್ದ ಸುಮಾರು ಮೂವತ್ತು ಜನರಲ್ಲಿ ಅವರಿಬ್ಬರಿಗೂ ಮುಖ್ಯಸ್ಥಾನವನ್ನು ಕೊಟ್ಟನು. ಅನಂತರ ಸಮುವೇಲನು ಅಡಿಗೆಯವನಿಗೆ,
23 : “ನಾನು ನಿನಗೆ ಹೇಳಿ ಪ್ರತ್ಯೇಕವಾಗಿ ಇಡಿಸಿದ್ದ ಮಾಂಸಭಾಗವನ್ನು ತಂದಿಡು,” ಎನ್ನಲು,
24 : ಅವನು ಒಂದು ತೊಡೆಯ ಮಾಂಸವನ್ನೂ ಅದರ ಸಂಗಡ ಇದ್ದದ್ದನ್ನೂ ತಂದು ಸೌಲನ ಮುಂದಿಟ್ಟನು. ಸಮುವೇಲನು ಸೌಲನಿಗೆ, “ಇಗೋ, ಇದು ನಿನಗಾಗಿ ಪ್ರತ್ಯೇಕಿಸಿದ್ದು; ಇದನ್ನು ತಿನ್ನು. ಜನರನ್ನು ಬಲಿಭೋಜನಕ್ಕೆ ಕರೆದಾಗಿನಿಂದ ಇದು ನಿನಗಾಗಿಯೇ ಪ್ರತ್ಯೇಕವಾಗಿ ಇಡಲಾಗಿತ್ತು,” ಎಂದು ಹೇಳಿದನು. ಸೌಲನು ಆ ದಿನ ಸಮುವೇಲನ ಸಂಗಡ ಊಟಮಾಡಿದನು.
25 : ಅವರು ಗುಡ್ಡದಿಂದಿಳಿದು ಪಟ್ಟಣಕ್ಕೆ ಬಂದನಂತರ ಸಮುವೇಲನು ಸೌಲನನ್ನು ತನ್ನ ಮನೆಮಾಳಿಗೆಯ ಮೇಲೆ ಕರೆದುಕೊಂಡು ಹೋಗಿ ಅವನೊಡನೆ ಮಾತನಾಡಿದನು.
26 : ಮರುದಿನ ಬೆಳಿಗ್ಗೆ ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು, “ಏಳು, ನಿನ್ನನ್ನು ಸಾಗಕಳಿಸುತ್ತೇನೆ” ಎಂದು ಎಬ್ಬಿಸಲು, ಅವನೆದ್ದನು. ತರುವಾಯ ಅವರು ಇಬ್ಬರೂ ಹೊರಟು ಊರ ಹೊರಗೆ ಬಂದಾಗ ಸಮುವೇಲನು ಸೌಲನಿಗೆ,
27 : “ನಿನ್ನ ಸೇವಕನನ್ನು ಮುಂದೆ ಕಳುಹಿಸಿ, ನೀನು ಇಲ್ಲೇ ಸ್ವಲ್ಪ ನಿಲ್ಲು; ನಿನಗೆ ತಿಳಿಸಬೇಕಾದ ದೈವೋಕ್ತಿ ಒಂದುಂಟು,” ಎಂದನು.