1 : ಸಮುವೇಲನು ಮುದಕನಾದ ಮೇಲೆ ತನ್ನ ಮಕ್ಕಳನ್ನು ಇಸ್ರಯೇಲರಿಗೆ ನ್ಯಾಯ ಸ್ಥಾಪಕರನ್ನಾಗಿ ಮಾಡಿದನು.
2 : ಅವನ ಹಿರಿಯ ಮಗನ ಹೆಸರು ಯೋವೇಲ್, ಎರಡನೇ ಮಗನ ಹೆಸರು ಅಬೀಯ; ಇವರ ನ್ಯಾಯಾಸನವು ಬೇರ್ಷೆಬದಲ್ಲಿತ್ತು.
3 : ಇವರು ತಂದೆಯ ಮಾರ್ಗದಲ್ಲಿ ನಡೆಯದೆ ದ್ರವ್ಯಾಶೆಯಿಂದ ಲಂಚ ತೆಗೆದುಕೊಂಡು ನ್ಯಾಯವಿರುದ್ಧವಾದ ತೀರ್ಪು ಮಾಡುತ್ತಿದ್ದರು.
4 : ಆದುದರಿಂದ ಇಸ್ರಯೇಲರ ಹಿರಿಯರೆಲ್ಲರೂ ಕೂಡಿ ರಾಮಾದಲ್ಲಿದ್ದ ಸಮುವೇಲನ ಬಳಿಗೆ ಬಂದು,
5 : “ತಾವಂತೂ ಮುದುಕರಾದಿರಿ; ನಿಮ್ಮ ಮಕ್ಕಳು ನಿಮ್ಮ ಮಾರ್ಗದಲ್ಲಿ ನಡೆಯುವುದಿಲ್ಲ. ಆದುದರಿಂದ ಬೇರೆ ಎಲ್ಲ ಜನಾಂಗಗಳಿಗಿರುವಂತೆ ನಮಗೂ ಒಬ್ಬ ಅರಸನನ್ನು ನೇಮಿಸಿ; ಅವನೇ ನಮ್ಮ ನ್ಯಾಯಸ್ಥಾಪಕನಾಗಿರಲಿ,” ಎಂದರು.
6 : ‘ನ್ಯಾಯಸ್ಥಾಪನೆಗಾಗಿ ನಮಗೊಬ್ಬ ಅರಸನನ್ನು ನೇಮಿಸಿಕೊಡಿ’ ಎಂಬ ಮಾತಿಗೆ ಸಮುವೇಲನು ದುಃಖಪಟ್ಟನು. ಸರ್ವೇಶ್ವರನನ್ನು ಪ್ರಾರ್ಥಿಸಿದನು.
7 : ಸರ್ವೇಶ್ವರ ಅವನಿಗೆ, “ಜನರು ಹೇಳಿದಂತೆಯೇ ಮಾಡು; ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳ್ವಿಕೆ ಬೇಡವೆನ್ನುತ್ತಾರೆ.
8 : ನಾನು ಅವರನ್ನು ಈಜಿಪ್ಟಿನಿಂದ ಬಿಡಿಸಿದೆ. ಅಂದಿನಿಂದ ಇಂದಿನವರೆಗೂ ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳ್ನು ಪೂಜಿಸಿದರು. ನನಗೆ ಹೇಗೆ ಮಾಡಿದರೋ ಹಾಗೆಯೇ ನಿನಗೂ ಮಾಡುತ್ತಾರೆ.
9 : ನೀನು ಈಗ ಅವರು ಕೇಳಿಕೊಂಡಂತೆ ಮಾಡು; ಆದರೆ ಅವರ ಮೇಲೆ ರಾಜರಿಗಿರುವ ಅಧಿಕಾರ ಎಷ್ಟು ಘನವಾದುದೆಂಬುದನ್ನು ಅವರಿಗೆ ತಿಳಿಸಿ ಎಚ್ಚರಿಸದೆ ಇರಬೇಡ,” ಎಂದು ಹೇಳಿದರು.
10 : ಸಮುವೇಲನು ಅರಸಬೇಕೆಂದು ಕೋರಿದ ಜನರಿಗೆ,
11 : ಸರ್ವೇಶ್ವರನ ಮಾತುಗಳನ್ನೆಲ್ಲಾ ತಿಳಿಸಿದನು. “ಅರಸನ ಅಧಿಕಾರ ಎಷ್ಟೆಂದು ಕೇಳಿರಿ: ಅವನು ನಿಮ್ಮ ಮಕ್ಕಳನ್ನು ತೆಗೆದುಕೊಂಡು ತನ್ನ ಸಾರಥಿಗಳನ್ನಾಗಿಯೂ ರಾಹುತರನ್ನಾಗಿಯೂ ಮಾಡಿಕೊಳ್ಳುವನು; ಅವರು ಅವನ ರಥಗಳ ಮುಂದೆ ಓಡಬೇಕಾಗುವುದು.
12 : ಕೆಲವರನ್ನು ಸಹ ಸ್ರಾಧಿಪತಿಗಳನ್ನಾಗಿಯೂ ಕೆಲವರನ್ನು ಪಂಚಾ ಶದಾಧಿಪತಿಗಳನ್ನಾಗಿಯೂ ನೇಮಿಸುವನು. ಇನ್ನು ಕೆಲವರು ಅವನ ಭೂಮಿಯನ್ನು ಉಳುವವರೂ, ಪೈರನ್ನು ಕೊಯ್ಯುವವರೂ, ಯುದ್ಧಾಯುಧ, ರಥಸಾಮಗ್ರಿಗಳನ್ನು ಮಾಡುವವರೂ ಆಗಬೇಕು.
13 : ಇದಲ್ಲದೆ ಅವನು ನಿಮ್ಮ ಹೆಣ್ಣು ಮಕ್ಕಳನ್ನು ಪರಿಮಳ ದ್ರವ್ಯಮಾಡುವುದಕ್ಕೂ, ಅಡಿಗೆಮಾಡುವುದಕ್ಕೂ, ರೊಟ್ಟಿಸುಡುವುದಕ್ಕೂ ನೇಮಿಸಿಕೊಳ್ಳುವನು.
14 : ನಿಮ್ಮ ಉತ್ತಮವಾದ ಹೊಲಗಳನ್ನೂ ದ್ರಾಕ್ಷಿ ತೋಟಗಳನ್ನೂ ಎಣ್ಣೆ ಮರದ ತೋಪುಗಳನ್ನೂ ಕಿತ್ತುಕೊಂಡು ತನ್ನ ಸೇವಕರಿಗೆ ಕೊಡುವನು.
15 : ನಿಮ್ಮ ಧಾನ್ಯದ್ರಾಕ್ಷಿಗಳಲ್ಲಿ ದಶಮಾಂಶವನ್ನು ತೆಗೆದುಕೊಂಡು ತನ್ನ ಅಧಿಕಾರಿಗಳಿಗೂ ಪರಿವಾರದವರಿಗೂ ಕೊಡುವನು.
16 : ನಿಮ್ಮ ದಾಸ ದಾಸಿಯರನ್ನು ಹಾಗು ಉತ್ತಮವಾದ ಎತ್ತುಕತ್ತೆಗಳನ್ನು ತನಗಾಗಿ ದುಡಿಸಿಕೊಳ್ಳುವನು.
17 : ಕುರಿ ಹಿಂಡುಗಳಲ್ಲೂ ಹತ್ತರಲ್ಲೊಂದು ಭಾಗವನ್ನು ತೆಗೆದುಕೊಳ್ಳುವನು; ನೀವೂ ಅವನಿಗೆ ಗುಲಾಮರಾಗಿರಬೇಕು.
18 : ಆಗ, ನೀವು ಆರಿಸಿಕೊಂಡ ಅರಸನ ನಿಮಿತ್ತ, ಆ ದಿನದಲ್ಲಿ ಬೇಸÀತ್ತು ಸರ್ವೇಶ್ವರನಿಗೆ ಮೊರೆಯಿಡುವಿರಿ; ಆಗ ಅವರು ನಿಮ್ಮನ್ನು ಲಕ್ಷಿಸುವುದಿಲ್ಲ,” ಎಂದನು.
19 : ಹೀಗೆ ಸಮುವೇಲನು ಎಷ್ಟು ಹೇಳಿದರೂ ಜನರು ಕೇಳದೆ ಹೋದರು. “ಅದಿರಲಿ; ನಮಗೆ ಅರಸನನ್ನು ಕೊಡು; ನಾವು ಇತರ ಜನಾಂಗಗಳಂತೆ ಆಗಬೇಕು.
20 : ನಮ್ಮ ನ್ಯಾಯಗಳನ್ನು ತೀರಿಸಿ, ನಮಗೆ ಮುಂದಾಗಿ ಹೊರಟು, ನಮ್ಮ ಪರವಾಗಿ ಯುದ್ಧಮಾಡುವ ಒಬ್ಬ ಅರಸನು ಬೇಕು,” ಎಂದು ಹೇಳಿದರು.
21 : ಸಮುವೇಲನು ಜನರ ಈ ಎಲ್ಲ ಮಾತುಗಳನ್ನು ಸರ್ವೇಶ್ವರನಿಗೆ ತಿಳಿಸಿದನು.
22 : ಸರ್ವೇಶ್ವರ ಅವನಿಗೆ, “ಅವರ ಇಷ್ಟದಂತೆ ಅವರಿಗೊಬ್ಬ ಅರಸನನ್ನು ನೇಮಿಸು,” ಎಂದರು. ಆಗ ಸಮುವೇಲನು ಇಸ್ರಯೇಲರಿಗೆ, “ನಿಮ್ಮ ನಿಮ್ಮ ಊರುಗಳಿಗೆ ಹೋಗಿರಿ,” ಎಂದು ಅಪ್ಪಣೆ ಕೊಟ್ಟನು.