1 : ಆಗ ಕಿರ್ಯತ್ಯಾರೀಮಿನವರು ಬಂದು ಸರ್ವೇಶ್ವರನ ಮಂಜೂಷವನ್ನು ತೆಗೆದುಕೊಂಡು ಹೋದರು. ಗುಡ್ಡದಮೇಲೆ ವಾಸವಾಗಿದ್ದ ಅಬೀನಾದಾಬನ ಮನೆಯಲ್ಲಿ ಅದನ್ನು ಇಟ್ಟು, ಅವನ ಮಗ ಎಲ್ಲಾಜಾರನನ್ನು ಅದರ ಸೇವೆಗಾಗಿ ಪ್ರತಿಷ್ಠಿಸಿದರು.
2 : ಮಂಜೂಷವು ಕಿರ್ಯತ್ಯಾರೀಮಿಗೆ ಬಂದು ಬಹಳ ದಿವಸಗಳು ಅಂದರೆ, ಇಪ್ಪತ್ತು ವರ್ಷಗಳು ಕಳೆದುಹೋದವು. ಈ ಕಾಲದಲ್ಲಿ ಎಲ್ಲ ಇಸ್ರಯೇಲರು ಸರ್ವೇಶ್ವರನಿಗಾಗಿ ಹಂಬಲಿಸುತ್ತಿದ್ದರು.
3 : ಆಗ ಸಮುವೇಲನು ಅವರಿಗೆ, “ನೀವು ಪೂರ್ಣಮನಸ್ಸಿನಿಂದ ಸರ್ವೇಶ್ವರನಿಗೆ ಅಭಿಮುಖರಾಗಿ ನಿಮ್ಮ ಮಧ್ಯದಲ್ಲಿರುವ ಅಷ್ಟೋರೆತ್ ಮೊದಲಾದ ಅನ್ಯದೇವತೆಗಳನ್ನು ತೆಗೆದು ಹಾಕಿರಿ. ಸರ್ವೇಶ್ವರನ ಮೇಲೆಯೇ ಮನಸ್ಸಿಟ್ಟು ಅವರೊಬ್ಬರಿಗೇ ಸೇವೆಸಲ್ಲಿಸಿರಿ; ಆಗ ಅವರು ನಿಮ್ಮನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವರು,” ಎಂದನು.
4 : ಹಾಗೆಯೇ ಇಸ್ರಯೇಲರು ಬಾಳ್ ಅಷ್ಟೋರೆತ್ ದೇವತೆಗಳನ್ನು ತೆಗೆದುಹಾಕಿ ಸರ್ವೇಶ್ವರಸ್ವಾಮಿಯೊಬ್ಬರಿಗೆ ಸೇವೆ ಸಲ್ಲಿಸತೊಡಗಿದರು.
5 : ಸಮುವೇಲನು ಪುನಃ ಅವರಿಗೆ, “ಇಸ್ರಯೇಲರೆಲ್ಲರೂ ಮಿಚ್ಪೆಯಲ್ಲಿ ಕೂಡಿಬರಲಿ; ನಾನು ನಿಮಗೋಸ್ಕರ ಸರ್ವೇಶ್ವರನನ್ನು ಪ್ರಾರ್ಥಿಸುವೆನು,” ಎಂದನು.
6 : ಅಂತೆಯೇ ಅವರು ಅಲ್ಲಿ ಕೂಡಿಬಂದು, ನೀರುಸೇದಿ ಸರ್ವೇಶ್ವರನ ಮುಂದೆ ಹೊಯ್ದು, ಆ ದಿವಸ ಉಪವಾಸವಿದ್ದು, ದ್ರೋಹಿಗಳಾಗಿದ್ದೇವೆಂದು ಸರ್ವೇಶ್ವರನಿಗೆ ಅರಿಕೆ ಮಾಡಿದರು. ಸಮುವೇಲನು ಮಿಚ್ಪೆಯಲ್ಲಿ ಇಸ್ರಯೇಲರ ವ್ಯಾಜ್ಯಗಳನ್ನು ತೀರಿಸಿದನು.
7 : ಇಸ್ರಯೇಲರು ಮಿಚ್ಪೆಯಲ್ಲಿ ಕೂಡಿ ಬಂದಿದ್ದಾರೆಂಬುದು ಫಿಲಿಷ್ಟಿಯರಿಗೆ ಗೊತ್ತಾದಾಗ ಅವರ ರಾಜರುಗಳು ಇಸ್ರಯೇಲರಿಗೆ ವಿರುದ್ಧ ಯುದ್ಧಕ್ಕೆ ಹೊರಟರು. ಇದನ್ನು ತಿಳಿದ ಇಸ್ರಯೇಲರು ಬಹಳವಾಗಿ ಭಯಪಟ್ಟರು.
8 : ಅವರು ಸಮುವೇಲನಿಗೆ, “ನಮ್ಮ ದೇವರಾದ ಸರ್ವೇಶ್ವರ ನಮ್ಮನ್ನು ಫಿಲಿಷ್ಟಿಯರ ಕೈಯಿಂದ ತಪ್ಪಿಸಿ ರಕ್ಷಿಸುವ ಹಾಗೆ ನೀವು ನಮಗೋಸ್ಕರ ಪ್ರಾರ್ಥನೆಮಾಡಿ, ಸುಮ್ಮನಿರಬೇಡಿ,” ಎಂದರು.
9 : ಆಗ ಸಮುವೇಲನು ಹಾಲುಕುಡಿಯುವ ಒಂದು ಕುರಿಮರಿಯನ್ನು ತಂದು ಸರ್ವೇಶ್ವರನಿಗೆ ದಹನ ಬಲಿಯಾಗಿ ಸಮರ್ಪಿಸಿ, ಇಸ್ರಯೇಲರ ಪರವಾಗಿ ಪ್ರಾರ್ಥನೆ ಮಾಡಿದನು. ಸರ್ವೇಶ್ವರ ಸದುತ್ತರವನ್ನು ದಯಪಾಲಿಸಿದರು.
10 : ಹೇಗೆಂದರೆ, ಸಮುವೇಲನು ಬಲಿಯನ್ನರ್ಪಿಸುವ ವೇಳೆಯಲ್ಲಿ ಫಿಲಿಷ್ಟಿಯರು ಯುದ್ಧಕ್ಕಾಗಿ ಸವಿೂಪಿಸಿದರು. ಸರ್ವೇಶ್ವರ ದೊಡ್ಡ ಗುಡುಗಿನಿಂದ ಅವರನ್ನು ಕಳವಳಗೊಳಿಸಿ, ಇಸ್ರಯೇಲರಿಗೆ ಸೋತು ಓಡಿಹೋಗುವಂತೆ ಮಾಡಿದರು.
11 : ಇಸ್ರಯೇಲರಾದರೋ ಮಿಚ್ಪೆಯಿಂದ ಹೊರಟು ಬೇತ್ಕರಿನ ತಗ್ಗಿನವರೆಗೆ ಅವರನ್ನು ಹಿಂಬಾಲಿಸಿ ಹತಮಾಡಿದರು.
12 : ಅನಂತರ ಸಮುವೇಲನು ಮಿಚ್ಪೆಗೂ ಶೇನಿಗೂ ಮಧ್ಯದಲ್ಲಿ ಒಂದು ಕಲ್ಲನ್ನು ನಿಲ್ಲಿಸಿ, “ಸರ್ವೇಶ್ವರ ಇಲ್ಲಿಯವರೆಗೆ ನಮಗೆ ಸಹಾಯ ಮಾಡಿದರು,” ಎಂದು ಹೇಳಿ ಅದಕ್ಕೆ ‘ಎಬನೆಜೆರ್’ ಎಂದು ಹೆಸರಿಟ್ಟನು.
13 : ಫಿಲಿಷ್ಟಿಯರು ಸೋತು ಹೋದುದರಿಂದ ಮತ್ತೆ ಇಸ್ರಯೇಲರ ಪ್ರಾಂತ್ಯದೊಳಗೆ ಬರಲೇ ಇಲ್ಲ. ಸಮುವೇಲನ ಜೀವಮಾನದಲ್ಲೆಲ್ಲಾ ಸರ್ವೇಶ್ವರನ ಹಸ್ತ ಫಿಲಿಷ್ಟಿಯರಿಗೆ ವಿರೋಧವಾಗಿಯೇ ಇತ್ತು.
14 : ಅವರು ಎಕ್ರೋನ್ ಮೊದಲುಗೊಂಡು ಗತ್ ಊರಿನವರೆಗೆ ಇಸ್ರಯೇಲರಿಂದ ಕಿತ್ತುಕೊಂಡಿದ್ದ ಎಲ್ಲ ಪಟ್ಟಣಗಳು ಇಸ್ರಯೇಲರಿಗೆ ದೊರಕಿದವು. ಅವುಗಳಿಗೆ ಸೇರಿದ ಗ್ರಾಮಗಳನ್ನೂ ಇಸ್ರಯೇಲರು ಫಿಲಿಷ್ಟಿಯರಿಂದ ತೆಗೆದುಕೊಂಡರು. ಇಸ್ರಯೇಲರಿಗೂ ಅಮೋರಿಯರಿಗೂ ಸಮಾಧಾನವಿತ್ತು.
15 : ಸಮುವೇಲನು ಜೀವದಿಂದಿರುವವರೆಗೆ ಇಸ್ರಯೇಲರನ್ನು ಪಾಲಿಸುತ್ತಿದ್ದನು.
16 : ಅವನು ಇಸ್ರಯೇಲರ ನ್ಯಾಯಗಳನ್ನು ತೀರಿಸುವುದಕ್ಕಾಗಿ ಪ್ರತಿವರ್ಷವೂ ಬೇತೇಲ್, ಗಿಲ್ಗಾಲ್, ಮಿಚ್ಪೆ ಎಂಬ ಪಟ್ಟಣಗಳನ್ನು ಸುತ್ತಿ ರಾಮಾಕ್ಕೆ ತಿರುಗಿ ಬರುತ್ತಿದ್ದನು.
17 : ಅಲ್ಲಿ ಅವನ ಸ್ವಂತ ಮನೆ ಇದ್ದುದರಿಂದ ಅಲ್ಲಿಯೇ ಸರ್ವೇಶ್ವರನಿಗೆ ಒಂದು ಬಲಿಪೀಠವನ್ನು ಕಟ್ಟಿಸಿ ಇಸ್ರಯೇಲರನ್ನು ಪಾಲಿಸುತ್ತಿದ್ದನು.