Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಸಮು


1 : ಸರ್ವೇಶ್ವರನ ಮಂಜೂಷ ಫಿಲಿಷ್ಟಿಯರ ದೇಶದಲ್ಲಿ ಏಳು ತಿಂಗಳಿತ್ತು.
2 : ಫಿಲಿಷ್ಟಿಯರು ಅವರ ಪೂಜಾರಿಗಳನ್ನೂ ಮಂತ್ರಗಾರರನ್ನೂ ಕರೆದು, “ಸರ್ವೇಶ್ವರನ ಮಂಜೂಷವನ್ನು ಏನು ಮಾಡಬೇಕು? ಅದನ್ನು ಮರಳಿ ಅದರ ಸ್ಥಳಕ್ಕೆ ಹೇಗೆ ಕಳುಹಿಸುವುದು? ನಮಗೆ ತಿಳಿಸಿ,” ಎಂದು ಕೇಳಿಕೊಂಡರು.
3 : ಮರುತ್ತರವಾಗಿ ಅವರು, “ಇಸ್ರಯೇಲ್ ದೇವರ ಮಂಜೂಷವನ್ನು ಸುಮ್ಮನೆ ಕಳುಹಿಸಬಾರದು; ನಿಮ್ಮ ಪಾಪಕ್ಕಾಗಿ ಪ್ರಾಯಶ್ಚಿತ್ತ ದ್ರವ್ಯದೊಡನೆ ಕಳುಹಿಸಬೇಕು. ಆಗ ಮಾತ್ರ ನೀವು ಗುಣಹೊಂದುವಿರಿ; ಅಲ್ಲದೆ ಅವರ ದೇವರ ಶಿಕ್ಷಾಹಸ್ತ ನಿಮ್ಮನ್ನು ಬಾಧಿಸುತ್ತಿದ್ದುದಕ್ಕೆ ಕಾರಣ ಗೊತ್ತಾಗುವುದು,” ಎಂದು ಹೇಳಿದರು.
4 : ಆ ಜನರು, “ನಾವು ಪ್ರಾಯಶ್ಚಿತಾರ್ಥವಾಗಿ ಏನನ್ನು ಕಳುಹಿಸಬೇಕು?” ಎಂದು ವಿಚಾರಿಸಿದರು. ಅದಕ್ಕೆ ಅವರು, “ನಿಮಗೂ ನಿಮ್ಮ ರಾಜರುಗಳಿಗೂ ಒಂದೇ ವಿಧವಾದ ವ್ಯಾಧಿ ಇರುವುದರಿಂದ ನಿಮ್ಮ ರಾಜರುಗಳ ಸಂಖ್ಯೆಗೆ ಸರಿಯಾಗಿ ಐದು ಬಂಗಾರದ ಗಡ್ಡೆಗಳನ್ನು ಹಾಗು ಐದು ಬಂಗಾರದ ಇಲಿಗಳನ್ನು ಮಾಡಿಸಬೇಕು.
5 : ನಿಮ್ಮ ದೇಶ ನಿವಾಸಿಗಳ ವಿನಾಶಕ್ಕೆ ಕಾರಣವಾಗಿರುವ ಈ ಗಡ್ಡೆಗಳ ಹಾಗು ಇಲಿಗಳ ರೂಪವನ್ನು ಚಿನ್ನದಿಂದ ಮಾಡಿಸಿ ಇಸ್ರಯೇಲ್ ದೇವರಿಗೆ ಬಹುಮಾನವಾಗಿ ಕೊಡಿ. ಆಗ ಆತನ ಶಿಕ್ಷಾಹಸ್ತ ನಿಮ್ಮನ್ನೂ ನಿಮ್ಮ ದೇವತೆಗಳನ್ನೂ ಹಾಗು ಪ್ರಾಂತ್ಯಗಳನ್ನೂ ಬಿಟ್ಟುಹೋಗಬಹುದು.
6 : ಈಜಿಪ್ಟ್‍ನವರಂತೆ ಆಗಲಿ, ಫರೋಹನಂತೆ ಆಗಲಿ ನೀವೇಕೆ ನಿಮ್ಮ ಹೃದಯಗಳನ್ನು ಕಠಿಣ ಪಡಿಸಿಕೊಳ್ಳಬೇಕು? ಇಸ್ರಯೇಲರನ್ನು ಕಳುಹಿಸಲೊಲ್ಲದ ಆ ಈಜಿಪ್ಟ್ ನವರನ್ನು ಸರ್ವೇಶ್ವರನು ಎಷ್ಟೋ ವಿಧವಾಗಿ ಬಾಧಿಸಬೇಕಾಯಿತಲ್ಲವೆ?
7 : ಈಗ ನೀವು ಒಂದು ಹೊಸ ಬಂಡಿಯನ್ನು ಮಾಡಿಸಿರಿ. ಅದಕ್ಕೆ ಹಾಲುಕರೆಯುವ ಮತ್ತು ಎಂದೂ ನೊಗಹೊರದ ಎರಡು ಹಸುಗಳನ್ನು ಹೂಡಿಸಿರಿ.
8 : ಆ ಬಂಡಿಯ ಮೇಲೆ ಸರ್ವೇಶ್ವರನ ಮಂಜೂಷವನ್ನು ಹಾಗು ನೀವು ಪ್ರಾಯಶ್ಚಿತಾರ್ಥವಾಗಿ ಕೊಡುವ ಬಂಗಾರದ ವಸ್ತುಗಳುಳ್ಳ ಚಿಕ್ಕ ಪೆಟ್ಟಿಗೆಯನ್ನು ಇಡಿ. ಬಳಿಕ ಆ ಬಂಡಿಯನ್ನು ಹೊರಡಿಸಿ ಹೋಗಬಿಡಿ. ಆ ಹಸುಗಳ ಕರುಗಳನ್ನು ಮನೆಗೆ ತೆಗೆದುಕೊಂಡು ಹೋಗಿ,
9 : ಬಂಡಿ ಹೋಗುವ ದಾರಿಯನ್ನು ಗಮನಿಸಿರಿ. ಅದು ತಾನಾಗಿ ಸ್ವದೇಶದ ದಾರಿಹಿಡಿದು ಬೇತ್‍ಷೆಮೆಷಿನ ಕಡೆಗೆ ಹೋದರೆ ಈಗ ಬಂದಿರುವ ಕೇಡನ್ನು ಕಳುಹಿಸಿದವನು ಆ ಸರ್ವೇಶ್ವರನೇ ಎಂದು ತಿಳಿಯಿರಿ. ಬಂಡಿ ಆ ಮಾರ್ಗವನ್ನು ಹಿಡಿಯದಿದ್ದರೆ ಆ ಸರ್ವೇಶ್ವರನ ಹಸ್ತ ನಮ್ಮನ್ನು ಮುಟ್ಟಲಿಲ್ಲ, ಈ ಕೇಡು ಆಕಸ್ಮಿಕವಾಗಿ ಬಂದಿದೆ ಎಂದು ತಿಳಿದುಕೊಳ್ಳಿ,” ಎಂದು ಹೇಳಿದರು.
10 : ಫಿಲಿಷ್ಟಿಯರು ಅದೇ ಪ್ರಕಾರ ಮಾಡಿದರು: ಹಾಲುಕರೆಯುವ ಎರಡು ಹಸುಗಳನ್ನು ತೆಗೆದುಕೊಂಡು ಬಂಡಿಗೆ ಹೂಡಿದರು. ಅವುಗಳ ಕರುಗಳನ್ನು ಮನೆಯಲ್ಲೇ ಕಟ್ಟಿಹಾಕಿದರು.
11 : ಸರ್ವೇಶ್ವರನ ಮಂಜೂಷವನ್ನು ಮತ್ತು ಚಿನ್ನದ ಇಲಿಗಳೂ ಗಡ್ಡೆಗಳೂ ಇದ್ದ ಚಿಕ್ಕಪೆಟ್ಟಿಗೆಯನ್ನು ಬಂಡಿಯಲ್ಲಿ ಇಟ್ಟರು.
12 : ಕೂಡಲೆ ಆ ಹಸುಗಳು ಬೇತ್ ಷೆಮೆಷಿನ ರಾಜಮಾರ್ಗವನ್ನು ಹಿಡಿದು, ಅಂಬಾ ಎನ್ನುತ್ತಾ ನೆಟ್ಟಗೆ ಮುಂದೆಸಾಗಿದವು. ಎಡಕ್ಕಾಗಲಿ, ಬಲಕ್ಕಾಗಲಿ ತಿರುಗಲಿಲ್ಲ. ಫಿಲಿಷ್ಟಿಯ ರಾಜರುಗಳು ಬೇತ್‍ಷೆಮೆಷಿನ ಎಲ್ಲೆಯವರೆಗೂ ಅವುಗಳ ಹಿಂದೆ ಹೋದರು.
13 : ಬೇತ್‍ಷೆಮೆಷಿನವರು ಅಲ್ಲಿನ ತಗ್ಗಿನಲ್ಲಿ ಗೋದಿಬೇಳೆಯನ್ನು ಕೊಯ್ಯುತ್ತಿದ್ದರು. ಕಣ್ಣೆತ್ತಿ ಸರ್ವೇಶ್ವರನ ಮಂಜೂಷವನ್ನು ನೋಡಿ ಬಹಳ ಸಂತೋಷಪಟ್ಟರು.
14 : ಆ ಬಂಡಿ ಬೇತ್‍ಷೆಮೆಷಿ ನವನಾದ ಯೆಹೋಶುವನ ಹೊಲದಲ್ಲಿದ್ದ ಒಂದು ದೊಡ್ಡ ಕಲ್ಲಿನ ಬಳಿ ಬಂದು ನಿಂತಿತು. ಅವರು ಅಲ್ಲಿಗೆ ಹೋಗಿ, ಬಂಡಿಯ ಕಟ್ಟಿಗೆಗಳನ್ನು ಮುರಿದು, ಅಗ್ನಿ ಮಾಡಿ ಆ ಹಸುಗಳನ್ನು ಸರ್ವೇಶ್ವರನಿಗೆ ದಹನ ಬಲಿಯಾಗಿ ಅರ್ಪಿಸಿದರು.
15 : ಲೇವಿಯರು ಸರ್ವೇಶ್ವರನ ಮಂಜೂಷವನ್ನು ಹಾಗು ಚಿನ್ನದ ವಸ್ತುಗಳಿದ್ದ ಚಿಕ್ಕಪೆಟ್ಟಿಗೆಯನ್ನು ಇಳಿಸಿ ಆ ದೊಡ್ಡ ಕಲ್ಲಿನ ಮೇಲಿಟ್ಟರು. ಬೇತ್‍ಷೆಮೆಷಿನವರು ಅದೇ ದಿನ ಸರ್ವೇಶ್ವರನಿಗೆ ದಹನಬಲಿಗಳನ್ನು ಹಾಗು ಶಾಂತಿಸಮಾಧಾನದ ಬಲಿಗಳನ್ನು ಸಮರ್ಪಿಸಿದರು.
16 : ಇದನ್ನೆಲ್ಲ ನೋಡಿದ ಮೇಲೆ ಫಿಲಿಷ್ಟಿಯರ ಐದು ಮಂದಿ ರಾಜರು ಅದೇ ದಿನ ಎಕ್ರೋನಿಗೆ ಹಿಂದಿರುಗಿದರು.
17 : ಫಿಲಿಷ್ಟಿಯರು ಸರ್ವೇಶ್ವರನಿಗೆ ಪ್ರಾಯಶ್ಚಿತಾರ್ಥವಾಗಿ ಸಮರ್ಪಿಸಿದ ಚಿನ್ನದ ಗಡ್ಡೆಗಳ ಸಂಸ್ಥಾನಾನುಸಾರವಾದ ಪಟ್ಟಿ ಇದು: ಅಷ್ಡೋದ್, ಗಾಜಾ, ಪರವಾಗಿ ಒಂದು, ಅಷ್ಕೆಲೋನ್ ಪರವಾಗಿ ಒಂದು, ಗತ್ ಪರವಾಗಿ ಒಂದು ಮತ್ತು ಎಕ್ರೋನ್ ಪರವಾಗಿ ಒಂದು.
18 : ಅವರು ಕಳುಹಿಸಿದ ಬಂಗಾರದ ಇಲಿಗಳು ಫಿಲಿಷ್ಟಿಯರ ಐದು ಮಂದಿ ರಾಜರ ಅಧೀನದಲ್ಲಿದ್ದ ಎಲ್ಲ ಪುಟ್ಟ ಗ್ರಾಮಗಳ ಹಾಗು ಕೋಟೆಪೇಟೆಗಳ ಸಂಖ್ಯೆಗೆ ಸರಿಯಾಗಿದ್ದವು. ಸರ್ವೇಶ್ವರನ ಮಂಜೂಷವನ್ನು ಇಡಲಾಗಿದ್ದ ಆ ದೊಡ್ಡ ಕಲ್ಲು ಇಂದಿನವರೆಗೂ ಬೇತ್‍ಷೆಮೆಷಿನ ಯೆಹೋಶುವಿನ ಹೊಲದಲ್ಲಿ ಸಾಕ್ಷಿಯಾಗಿ ನಿಂತಿದೆ.
19 : ಮಂಜೂಷವನ್ನು ತೆರೆದು ನೋಡಿದ ಬೇತ್‍ಷೆಮೆಷಿನವರಾದ ಎಪ್ಪತ್ತು ಮಂದಿಯನ್ನು ಸರ್ವೇಶ್ವರ ನಾಶಮಾಡಿದರು. ಈ ವಿನಾಶಕ್ಕಾಗಿ ಬೇತ್‍ಷೆಮೆಷಿನವರು ಗೋಳಾಡಿದರು.
20 : “ಪರಮಪಾವನ ದೇವರಾದ ಸರ್ವೇಶ್ವರನ ಮುಂದೆ ಯಾರುತಾನೆ ನಿಂತಾರು? ಇನ್ನು ಮುಂದೆ ಇವರು ಹೋಗತಕ್ಕ ಸ್ಥಳ ಯಾವುದು?” ಎಂದು ಮಾತಾಡಿಕೊಂಡರು ಜನರು.
21 : ಕಿರ್ಯತ್ಯಾರೀಮಿನವರ ಬಳಿಗೆ ದೂತರನ್ನು ಕಳುಹಿಸಿ, “ಫಿಲಿಷ್ಟಿಯರು ಸರ್ವೇಶ್ವರನ ಮಂಜೂಷವನ್ನು ಕಳುಹಿಸಿದ್ದಾರೆ; ನೀವು ಬಂದು ಅದನ್ನು ತೆಗೆದುಕೊಂಡು ಹೋಗಿ,” ಎಂದು ತಿಳಿಸಿದರು.

· © 2017 kannadacatholicbible.org Privacy Policy