Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಸಮು


1 : ಇಸ್ರಯೇಲರು ಫಿಲಿಷ್ಟಿಯರಿಗೆ ವಿರುದ್ಧ ಯುದ್ಧಕ್ಕೆ ಹೊರಟು ಎಬೆನೆಜೆರಿನ ಸವಿೂಪದಲ್ಲಿ ಪಾಳೆಯ ಮಾಡಿಕೊಂಡರು. ಫಿಲಿಷ್ಟಿಯರು ಬಂದು ಅಫೇಕಿನಲ್ಲಿ ಇಳಿದುಕೊಂಡರು.
2 : ಇವರು ಇಸ್ರಯೇಲರಿಗೆ ಎದುರಾಗಿ ವ್ಯೂಹಕಟ್ಟಿ ಯುದ್ಧ ಮಾಡಿದರು. ಇಸ್ರಯೇಲರು ಸೋತರು. ರಣರಂಗದಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಇಸ್ರಯೇಲರನ್ನು ಫಿಲಿಷ್ಟಿಯರು ಸಂಹರಿಸಿದರು.
3 : ಇಸ್ರಯೇಲರು ತಮ್ಮ ಪಾಳೆಯಕ್ಕೆ ಹಿಂದಿರುಗಿದ ಮೇಲೆ ಅವರೊಡನೆ ಅವರ ಹಿರಿಯರು, “ಸರ್ವೇಶ್ವರ ಈ ದಿನ ನಮ್ಮನ್ನು ಫಿಲಿಷ್ಟಿಯರಿಂದ ಅಪಜಯಪಡಿಸಿದ್ದೇಕೆ? ಶಿಲೋವಿನಿಂದ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ತರೋಣ; ಅವರು ನಮ್ಮ ಮಧ್ಯದಲ್ಲಿ ಬಂದು ಶತ್ರುಗಳ ಕೈಯಿಂದ ನಮ್ಮನ್ನು ರಕ್ಷಿಸಲಿ,” ಎಂದು ಸಮಾಲೋಚಿಸಿದರು.
4 : ಅಂತೆಯೇ ಜನರನ್ನು ಕಳುಹಿಸಿ ಕೆರೂಬಿಗಳ ಮಧ್ಯದಲ್ಲಿ ಆಸೀನರಾಗಿರುವ ಸೇನಾಧೀಶ್ವರ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ತರಿಸಿದರು. ಏಲಿಯ ಇಬ್ಬರು ಮಕ್ಕಳಾದ ಹೊಫ್ನಿ, ಫೀನೆಹಾಸ್ ಎಂಬವರು ದೇವರ ಒಡಂಬಡಿಕೆಯ ಮಂಜೂಷದ ಸಂಗಡ ಇದ್ದರು.
5 : ಸರ್ವೇಶ್ವರನ ಒಡಂಬಡಿಕೆಯ ಮಂಜೂಷ ಪಾಳೆಯಕ್ಕೆ ಬಂದಾಗ ಇಸ್ರಯೇಲರೆಲ್ಲರೂ ಭೂಮಿ ಬಿರಿಯುವಷ್ಟು ಗಟ್ಟಿಯಾಗಿ ಜಯಕಾರ ಮಾಡಿದರು.
6 : ಫಿಲಿಷ್ಟಿಯರು ಇದನ್ನು ಕೇಳಿ, “ಹಿಬ್ರಿಯರ ಪಾಳೆಯದಲ್ಲಿ ಇಂಥ ಆರ್ಭಟಕ್ಕೆ ಏನು ಕಾರಣ?” ಎಂದು ವಿಚಾರಿಸಿದರು. ಸರ್ವೇಶ್ವರನ ಮಂಜೂಷವು ಪಾಳೆಯಕ್ಕೆ ಬಂದದ್ದೇ ಕಾರಣವೆಂದು ಗೊತ್ತಾಯಿತು.
7 : “ದೇವರು ಇವರ ಪಾಳೆಯಕ್ಕೆ ಬಂದಿದ್ದಾರಂತೆ!” ಎಂದುಕೊಂಡು ಫಿಲಿಷ್ಟಿಯರು ಬಹಳವಾಗಿ ಭಯಪಟ್ಟರು. “ಅಯ್ಯೋ, ಹಿಂದೆ ಹೀಗಿರಲಿಲ್ಲ.
8 : ಅಕಟಾ, ಪ್ರತಾಪವುಳ್ಳ ಈ ದೇವರುಗಳ ಕೈಯಿಂದ ನಮ್ಮನ್ನು ಬಿಡಿಸುವವರಾರು? ಈಜಿಪ್ಟರನ್ನು ಅರಣ್ಯದಲ್ಲಿ ಸಂಪೂರ್ಣವಾಗಿ ನಾಶಮಾಡಿಬಿಟ್ಟ ದೇವರುಗಳು ಇವರೇ ಅಲ್ಲವೆ?
9 : ಫಿಲಿಷ್ಟಿಯರೇ, ಧೈರ್ಯಗೊಳ್ಳಿ; ಶೂರರಾಗಿರಿ! ಇಲ್ಲವಾದರೆ ನಿಮಗೆ ಗುಲಾಮರಾಗಿದ್ದ ಹಿಬ್ರಿಯರಿಗೆ ನೀವೇ ಗುಲಾಮರಾದೀರಿ; ಆದಕಾರಣ ಶೌರ್ಯದಿಂದ ಯುದ್ಧಮಾಡಿ!” ಎಂದು ಹೇಳಿಕೊಂಡು ಯುದ್ಧಮಾಡಿದರು.
10 : ಇಸ್ರಯೇಲರು ಸೋತು ತಮ್ಮ ತಮ್ಮ ಮನೆಗಳಿಗೆ ಓಡಿಹೋದರು. ಮಹಾ ಸಂಹಾರವಾಯಿತು; ಇಸ್ರಯೇಲರಲ್ಲಿ ಮೂವತ್ತು ಸಾವಿರ ಕಾಲಾಳುಗಳು ಮಡಿದರು.
11 : ದೇವರ ಮಂಜೂಷ ಶತ್ರುವಶವಾಯಿತು. ಏಲಿಯ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸ ಹತರಾದರು.
12 : ಅದೇ ದಿನ ಒಬ್ಬ ಬೆನ್ಯಾವಿೂನ್ಯನು ರಣರಂಗದಿಂದ ತಪ್ಪಿಸಿಕೊಂಡು, ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು, ತಲೆಯ ಮೇಲೆ ಮಣ್ಣುಹಾಕಿಕೊಂಡು,
13 : ಶಿಲೋವಿಗೆ ಬಂದು, ನಡೆದದ್ದನ್ನು ತಿಳಿಸಿದನು. ಜನರೆಲ್ಲರು ಗೋಳಾಡತೊಡಗಿದರು. ‘ದೇವರ ಮಂಜೂಷ ಏನಾಯಿತೋ?’ ಎಂಬ ಚಿಂತೆಯಿಂದ ಮಂದಿರ ದ್ವಾರದ ಬಳಿ ಕುಳಿತು, ದಾರಿಯನ್ನೇ ನೋಡುತ್ತಿದ್ದ ಏಲಿ, ಆ ದುಃಖಧ್ವನಿಯನ್ನು ಕೇಳಿದನು.
14 : ಈ ಗದ್ದಲವೇನೆಂದು ವಿಚಾರಿಸಿದನು. ಒಡನೆ ಆ ವ್ಯಕ್ತಿ ಏಲಿಯ ಬಳಿಗೆ ಬಂದು ಎಲ್ಲವನ್ನು ತಿಳಿಸಿದನು.
15 : ಏಲಿ ಆಗ ತೊಂಬತ್ತೆಂಟು ವರ್ಷದವನು; ಕಣ್ಣುಗಳು ಇಂಗಿಹೋಗಿ ಕುರುಡನಾಗಿದ್ದನು.
16 : ಆ ವ್ಯಕ್ತಿ ಏಲಿಗೆ, “ನಾನು ರಣರಂಗದಲ್ಲಿ ಇದ್ದವನು; ಈ ಹೊತ್ತೇ ಅಲ್ಲಿಂದ ಓಡಿಬಂದೆ” ಎನ್ನಲು ಏಲಿ, “ಮಗು, ಏನು ಸುದ್ದಿ?” ಎಂದು ಕೇಳಿದನು.
17 : ಅವನು ಏಲಿಗೆ, “ಇಸ್ರಯೇಲರು ಫಿಲಿಷ್ಟಿಯರಿಗೆ ಬೆನ್ನು ತೋರಿಸಿದರು; ಮಹಾ ಸಂಹಾರವಾಯಿತು. ನಿಮ್ಮ ಇಬ್ಬರು ಮಕ್ಕಳಾದ ಹೊಫ್ನಿ ಹಾಗು ಫೀನೆಹಾಸ ಸತ್ತರು; ದೇವರ ಮಂಜೂಷವು ಶತ್ರುವಶವಾಯಿತು,” ಎಂದು ತಿಳಿಸಿದನು.
18 : ಮುದುಕನೂ ಸ್ಥೂಲಕಾಯನೂ ಆದ ಏಲಿ ದೇವರ ಒಡಂಬಡಿಕೆಯ ಮಂಜೂಷದ ವರ್ತಮಾನವನ್ನು ಕೇಳಿದ್ದೇ, ಪೀಠದಿಂದ ಹಿಂದಕ್ಕೆ, ಬಾಗಿಲಿನ ಕಡೆಗೆ ಬಿದ್ದು, ಕುತ್ತಿಗೆ ಮುರಿದು ಸತ್ತನು. ಏಲಿ ಇಸ್ರಯೇಲರನ್ನು ನಾಲ್ವತ್ತು ವರ್ಷ ಪಾಲಿಸಿದ್ದನು.
19 : ಫೀನೆಹಾಸನ ಹೆಂಡತಿಯಾದ ಏಲಿಯ ಸೊಸೆ ದಿನತುಂಬಿದ ಗರ್ಭಿಣಿ. ದೇವರ ಮಂಜೂಷ ಶತ್ರುವಶವಾದದ್ದನ್ನು ಹಾಗು ಮಾವ ಮತ್ತು ಗಂಡ ಹತರಾದದ್ದನ್ನು ಕೇಳಿದೊಡನೆ ಪ್ರಸವವೇದನೆಯುಂಟಾಗಿ ಮಗುವನ್ನು ಹೆತ್ತಳು.
20 : ಆಕೆ ಸಾಯುವ ಸಮಯದಲ್ಲಿ ಬಳಿಯಲ್ಲಿ ನಿಂತಿದ್ದ ಮಹಿಳೆಯರು, “ಭಯಪಡಬೇಡ, ಮಗನನ್ನು ಹೆತ್ತಿದ್ದೀ,” ಎಂದು ಹೇಳಿದರು. ಆಕೆ ಅವರ ಮಾತಿಗೆ ಲಕ್ಷ್ಯಕೊಡಲಿಲ್ಲ, ಪ್ರತ್ಯುತ್ತರವನ್ನೂ ಕೊಡಲಿಲ್ಲ.
21 : ದೇವರ ಮಂಜೂಷ ಶತ್ರುವಶವಾದುದರಿಂದಲು ಹಾಗೂ ಮಾವನೂ ಗಂಡನೂ ಮೃತರಾಗಿದ್ದರಿಂದಲು, “ದೈವಮಹಿಮೆಯು ಇಸ್ರಯೇಲರನ್ನು ಬಿಟ್ಟುಹೋಯಿತು,” ಎಂದು ಹೇಳಿ ಆ ಕೂಸಿಗೆ ‘ಈಕಾಬೋದ್’ ಎಂದು ಹೆಸರು ಇಟ್ಟಳು.
22 : ದೇವರ ಮಂಜೂಷ ಶತ್ರುವಶವಾದ್ದರಿಂದಲೇ ಇಸ್ರಯೇಲರ ಮಹಿಮೆ ಮಾಯವಾಯಿತೆಂದು ಹೇಳಿದಳು.

· © 2017 kannadacatholicbible.org Privacy Policy