1 :
ಫಿಲಿಷ್ಟಿಯರು ಇಸ್ರಯೇಲರೊಡನೆ ಯುದ್ಧಮಾಡಿದರು. ಇಸ್ರಯೇಲರು ಅವರಿಂದ ಅಪಜಯಹೊಂದಿ ಗಿಲ್ಬೋವ ಬೆಟ್ಟದಲ್ಲಿ ಹತರಾದರು.
2 : ಫಿಲಿಷ್ಟಿಯರು ಸೌಲನನ್ನೂ ಅವನ ಮಕ್ಕಳನ್ನೂ ಬಿಡದೆ ಹಿಂದಟ್ಟಿ ಅವನ ಮಕ್ಕಳಾದ ಯೋನಾತಾನನನ್ನೂ ಅಬೀನಾದಾಬನನ್ನೂ ಮಲ್ಕೀಷೂವನನ್ನೂ ಕೊಂದರು.
3 : ಸೌಲನಿದ್ದ ಕಡೆಯಲ್ಲಿ ಯುದ್ದವು ಬಹುಘೋರವಾಗಿತ್ತು. ಬಿಲ್ಲುಗಾರರು ಅವನಿಗೆ ಗುರಿಯಿಟ್ಟರು.
4 : ಆದುದರಿಂದ ಸೌಲನು ಭಯಭೀತನಾಗಿ ತನ್ನ ಆಯುಧ ವಾಹಕನಿಗೆ, “ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ತಿವಿದು ಕೊಲ್ಲು; ಇಲ್ಲವಾದರೆ ಸುನ್ನತಿಯಿಲ್ಲದ ಈ ಜನರು ಬಂದು ನನ್ನನ್ನು ತಿವಿದು ಅಪಕೀರ್ತಿಯನ್ನುಂಟುಮಾಡಬಹುದು,” ಎಂದು ಹೇಳಿದನು. ವಾಹಕನು ಹೆದರಿ, “ಒಲ್ಲೆ” ಎಂದನು. ಆದುದರಿಂದ ಸೌಲನು ತಾನೇ ಕತ್ತಿಯನ್ನು ಹಿರಿದು ಅದರ ಮೇಲೆ ಬಿದ್ದನು.
5 : ಸೌಲನು ಸತ್ತದ್ದನ್ನು ಅವನ ಆಯುಧವಾಹಕನು ಕಂಡು ತಾನೂ ತನ್ನ ಕತ್ತಿಯ ಮೆಲೆ ಬಿದ್ದು ಅಲ್ಲಿಯೇ ಸತ್ತನು.
6 : ಹೀಗೆ ಸೌಲನೂ ಅವನ ಮೂರು ಮಂದಿ ಮಕ್ಕಳೂ ಅವನ ಆಯುಧ ವಾಹಕನೂ ಎಲ್ಲ ಆಳುಗಳೂ ಅದೇ ದಿವಸ ಸತ್ತರು.
7 : ಇಸ್ರಯೇಲ್ ಯೋಧರು ಸೋತರು; ಸೌಲನೂ ಅವನ ಮಕ್ಕಳೂ ಸತ್ತರು ಎಂಬ ಸಮಾಚಾರವನ್ನು ಕಣಿವೆಯ ಆಚೆಯಲ್ಲೂ ಜೋರ್ಡನಿನ ಆಚೆಯಲ್ಲೂ ವಾಸವಾಗಿದ್ದ ಇಸ್ರಯೇಲರು ಕೇಳಿ ತಮ್ಮತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಿಸಿದರು.
8 : ಮರುದಿನ ಬೆಳಿಗ್ಗೆ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳುವುದಕ್ಕೆ ಬಂದಾಗ ಸೌಲನೂ ಅವನ ಮೂರು ಮಂದಿ ಮಕ್ಕಳೂ ಗಿಲ್ಬೋವಬೆಟ್ಟದಲ್ಲಿ ಸತ್ತು ಬಿದ್ದಿರುವುದನ್ನು ಕಂಡರು.
9 : ಸೌಲನ ತಲೆಯನ್ನು ಕಡಿದು, ಅವನ ಆಯುಧಗಳನ್ನು ತೆಗೆದುಕೊಂಡು, ಅವುಗಳನ್ನು ತನ್ನ ದೇಶದ ಎಲ್ಲಾ ಕಡೆಗೂ ಕಳುಹಿಸಿದರು. ತಮ್ಮ ಎಲ್ಲಾ ಜನರಿಗೂ ದೇವಸ್ಥಾನಗಳಿಗೂ ವಿಜಯವಾರ್ತೆಯನ್ನು ಮುಟ್ಟಿಸಿದರು.
10 : ಅವನ ಆಯುಧಗಳನ್ನು ಅಷ್ಟೋರೆತ್ ದೇವತೆಯ ಗುಡಿಯಲ್ಲಿಟ್ಟರು. ಅವನ ಶವವನ್ನು ಬೇತ್ಷೆಯಾನಿನ ಕೋಟೆ ಗೋಡೆಗೆ ನೇತುಹಾಕಿದರು.
11 : ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬ ವರದಿ ಯಾಬಿಷ್ ಗಿಲ್ಯಾದಿನವರಿಗೆ ಮುಟ್ಟಿತು.
12 : ಆಗ ಅವರಲ್ಲಿದ್ದ ಶೂರರೆಲ್ಲರೂ ಹೊರಟು, ರಾತ್ರಿಯೆಲ್ಲಾ ನಡೆದುಹೋಗಿ, ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ಬೇತ್ಷೆಯಾನಿನ ಗೋಡೆಯಿಂದ ಇಳಿಸಿ, ಯಾಬೇಷಿಗೆ ತೆಗೆದುಕೊಂಡು ಬಂದು, ಅಲ್ಲಿ ಅವುಗಳನ್ನು ದಹಿಸಿದರು.
13 : ಅವರ ಎಲುಬುಗಳನ್ನು ಯಾಬೇಷಿನಲ್ಲಿದ್ದ ಪಿಚುಲ ವೃಕ್ಷದ ಕೆಳಗೆ ಸಮಾಧಿಮಾಡಿ, ಏಳು ದಿವಸ ಉಪವಾಸವನ್ನು ಆಚರಿಸಿದರು.