1 : ಬಾಲಕ ಸಮುವೇಲನು ಏಲಿಯ ನೇತೃತ್ವದಲ್ಲಿ ಸರ್ವೇಶ್ವರನ ಸೇವೆಮಾಡುತ್ತಾ ಬಂದನು. ಆ ಕಾಲದಲ್ಲಿ ದೇವೋಕ್ತಿಗಳು ವಿರಳ ಆಗಿದ್ದವು; ದೇವದರ್ಶನಗಳು ಅಪರೂಪವಾಗಿ ಬಿಟ್ಟಿದ್ದವು.
2 : ಏಲಿಯ ಕಣ್ಣುಗಳು ದಿನದಿನಕ್ಕೂ ಮೊಬ್ಬಾಗುತ್ತಾ ಬಂದು ಕುರುಡನಂಥಾಗಿ ಬಿಟ್ಟಿದ್ದನು. ಒಂದು ರಾತ್ರಿ ಅವನು ತನ್ನ ಕೋಣೆಯಲ್ಲಿ ಮಲಗಿದ್ದನು.
3 : ಸಮುವೇಲನು ಸರ್ವೇಶ್ವರನ ಮಂದಿರದಲ್ಲಿ, ದೇವರ ಮಂಜೂಷವಿದ್ದ ಸ್ಥಳದಲ್ಲಿ ಮಲಗಿದ್ದನು. ದೇವರ ದೀಪ ಇನ್ನೂ ಉರಿಯುತ್ತಿತ್ತು.
4 : ಆಗ ಸರ್ವೇಶ್ವರಸ್ವಾಮಿ ಸಮುವೇಲನನ್ನು ಕರೆದರು. ಸಮುವೇಲನು “ಇಗೋ ಬಂದೆ” ಎಂದು ಉತ್ತರಕೊಟ್ಟು,
5 : ಒಡನೆ ಏಲಿಯ ಬಳಿಗೆ ಹೋಗಿ, “ಇಗೋ ಬಂದಿದ್ದೇನೆ; ನೀವು ನನ್ನನ್ನು ಕರೆದಿರಲ್ಲವೆ?” ಎಂದನು. ಏಲಿ, “ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ” ಎಂದನು. ಸಮುವೇಲನು ಹೋಗಿ ಮಲಗಿದನು.
6 : ಸರ್ವೇಶ್ವರ ಪುನಃ “ಸಮುವೇಲನೇ,” ಎಂದು ಕರೆದರು. ಸಮುವೇಲನು ಕೂಡಲೆ ಎದ್ದು ಏಲಿಯ ಬಳಿಗೆ ಹೋಗಿ, “ಇಗೋ ಬಂದಿದ್ದೇನೆ; ನೀವು ನನ್ನನ್ನು ಕರೆದಿರಲ್ಲವೆ?” ಎಂದನು. ಅವನು, “ಮಗನೇ, ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ,” ಎಂದನು.
7 : ಈವರೆಗೂ ಸಮುವೇಲನಿಗೆ ಸರ್ವೇಶ್ವರನ ನೇರ ಅನುಭವ ಆಗಿರಲಿಲ್ಲ. ದೇವರ ವಾಣಿ ಅವನಿಗೆ ಕೇಳಿಸಿರಲಿಲ್ಲ.
8 : ಸರ್ವೇಶ್ವರ ಸಮುವೇಲನನ್ನು ಮೂರನೆಯ ಸಾರಿ ಕರೆದರು. ಅವನು ತಟ್ಟನೆ ಏಲಿಯ ಹತ್ತಿರ ಓಡಿ, “ಇಗೋ, ಬಂದಿದ್ದೇನೆ, ನನ್ನನ್ನು ಕರೆದಿರಲ್ಲಾ,” ಎಂದನು. ಹುಡುಗನನ್ನು ಕರೆದವರು ಸರ್ವೇಶ್ವರನೇ ಎಂದು ಏಲಿಗೆ ತಿಳಿಯಿತು.
9 : ಅವನು ಸಮುವೇಲನಿಗೆ, “ಹೋಗಿ ಮಲಗಿಕೋ; ಮತ್ತೆ ಅವರು ನಿನ್ನನ್ನು ಕರೆದರೆ, ‘ಸರ್ವೇಶ್ವರಾ, ಅಪ್ಪಣೆಯಾಗಲಿ; ತಮ್ಮ ದಾಸ ಕಾದಿದ್ದಾನೆ,’ ಎಂದು ಹೇಳು,” ಎಂದನು. ಸಮುವೇಲನು ಹಿಂದಿರುಗಿ ಹೋಗಿ ತನ್ನ ಸ್ಥಳದಲ್ಲೇ ಮಲಗಿಕೊಂಡನು.
10 : ಸರ್ವೇಶ್ವರ ಪ್ರತ್ಯಕ್ಷರಾಗಿ ಹಿಂದಿನಂತೆಯೇ “ಸಮುವೇಲನೇ, ಸಮುವೇಲನೇ,” ಎಂದರು. ಸಮುವೇಲನು, “ಅಪ್ಪಣೆಯಾಗಲಿ, ತಮ್ಮ ದಾಸನಾದ ನಾನು ಕಾದಿದ್ದೇನೆ,” ಎಂದನು.
11 : ಆಗ ಸರ್ವೇಶ್ವರ ಸಮುವೇಲನಿಗೆ, “ನಾನು ಇಸ್ರಯೇಲರಲ್ಲಿ ಒಂದು ವಿಶೇಷಕಾರ್ಯವನ್ನು ನಡೆಸುವೆನು. ಆ ವಿಷಯವನ್ನು ಕೇಳುವವರ ಕಿವಿಗಳೆರಡೂ ನಿಮಿರುವುವು!
12 : ಏಲಿಯ ಮನೆಯನ್ನು ಕುರಿತು ತಿಳಿಸಿದ್ದೆಲ್ಲವನ್ನೂ ಆ ದಿನ ತಪ್ಪದೆ ನೆರವೇರಿಸುವೆನು.
13 : ತನ್ನ ಮಕ್ಕಳು ದೇವದೂಷಕರು ಎಂದು ಅವನಿಗೆ ತಿಳಿದುಬಂದರೂ ಅವನು ಅವರನ್ನು ತಿದ್ದಲಿಲ್ಲ. ಈ ಪಾಪದ ನಿಮಿತ್ತ ಅವನ ಕುಟುಂಬವನ್ನು ನಿತ್ಯದಂಡನೆಗೆ ಗುರಿಮಾಡಿದ್ದೇನೆಂದು ಅವನಿಗೆ ಮೊದಲೇ ತಿಳಿಸಿದೆನು.
14 : ಏಲಿಯ ಮನೆಯವರ ಅಪರಾಧವು, ಎಂದಿಗೂ ಬಲಿಯಿಂದಾಗಲಿ ನೈವೇದ್ಯಗಳಿಂದಾಗಲಿ ಪರಿಹಾರವಾಗುವುದಿಲ್ಲವೆಂದು ಪ್ರಮಾಣಮಾಡಿದ್ದೇನೆ,” ಎಂದು ಹೇಳಿದರು.
15 : ಅನಂತರ ಸಮುವೇಲನು ಮಲಗಿ, ಮುಂಜಾನೆಯಲ್ಲೇ ಎದ್ದು, ಸರ್ವೇಶ್ವರನ ಮಂದಿರದ ಬಾಗಿಲುಗಳನ್ನು ತೆರೆದನು. ತಾನು ಕಂಡದ್ದನ್ನು ಏಲಿಗೆ ತಿಳಿಸಲು ಭಯಪಟ್ಟನು.
16 : ಆದರೆ, ಏಲಿ, “ಮಗನೇ, ಸಮುವೇಲನೇ”, ಎಂದು ಕರೆದಾಗ ಅವನು “ಇಗೋ ಇದ್ದೇನೆ,” ಎಂದನು.
17 : ಏಲಿ ಅವನಿಗೆ, “ಸರ್ವೇಶ್ವರ ನಿನಗೆ ತಿಳಿಸಿದ್ದೇನು? ಅವರ ಮಾತುಗಳಲ್ಲಿ ಒಂದನ್ನಾದರೂ ಮರೆಮಾಡಬೇಡ; ಮಾಡಿದೆಯಾದರೆ ಸರ್ವೇಶ್ವರ ಇಷ್ಟ ಬಂದ ಹಾಗೆ ನಿನ್ನನ್ನು ದಂಡಿಸಲಿ,” ಎಂದು ಹೇಳಿದನು.
18 : ಸಮುವೇಲನು ಮುಚ್ಚುಮರೆಯಿಲ್ಲದೆ ಎಲ್ಲವನ್ನೂ ತಿಳಿಸಿದನು. ಏಲಿ ಅದನ್ನು ಕೇಳಿ, “ಅವರೇ ಸರ್ವೇಶ್ವರ. ತಮಗೆ ಸರಿಕಂಡಂತೆ ಮಾಡಲಿ,” ಎಂದನು.
19 : ಸಮುವೇಲನು ದೊಡ್ಡವನಾಗುತ್ತಾ ಬಂದನು. ಸರ್ವೇಶ್ವರ ಅವನೊಡನೆ ಇದ್ದರು. ಆದುದರಿಂದಲೆ ಅವನು ಪ್ರವಾದನೆ ಮಾಡಿದವುಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ.
20 : ಸರ್ವೇಶ್ವರ ಅವನನ್ನು ತಮ್ಮ ಪ್ರವಾದಿಯನ್ನಾಗಿ ನೇಮಿಸಿಕೊಂಡರು. ಈ ಸಂಗತಿ ದಾನ್ ಊರಿನಿಂದ ಬೇರ್ಷೆಬದವರೆಗಿದ್ದ ಎಲ್ಲ ಇಸ್ರಯೇಲರಿಗೆ ತಿಳಿಯಿತು.
21 : ಸರ್ವೇಶ್ವರ, ಶಿಲೋವಿನಲ್ಲಿ ದರ್ಶನ ಕೊಡುವುದಕ್ಕೆ ಪ್ರಾರಂಭಿಸಿ ದೈವವಾಣಿಯ ಮೂಲಕ ಸಮುವೇಲನಿಗೆ ತಮ್ಮನ್ನೇ ಶೃತಪಡಿಸುತ್ತಾ ಬಂದರು. ಇಸ್ರಯೇಲರೆಲ್ಲರಿಗೆ ಸಮುವೇಲನು ಸರ್ವೇಶ್ವರನ ವಚನಗಳನ್ನು ತಿಳಿಸುತ್ತಾ ಇದ್ದನು.