Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಸಮು


1 : ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಯೇಲರೊಡನೆ ಯುದ್ಧಮಾಡುವುದಕ್ಕಾಗಿ ಸೈನ್ಯವನ್ನು ಕೂಡಿಸತೊಡಗಿದರು. ಆಗ ಆಕೀಷನು ದಾವೀದನಿಗೆ, “ನೀನೂ ನಿನ್ನ ಜನರೂ ಯುದ್ಧಕ್ಕೆ ನನ್ನ ಜೊತೆಯಲ್ಲೇ ಬರಬೇಕೆಂಬುದು ನಿನಗೆ ಗೊತ್ತಿದೆಯಲ್ಲವೇ?” ಎಂದನು.
2 : ದಾವೀದನು, “ಹೌದು, ತಮ್ಮ ಸೇವಕನ ಸಾಹಸ ತಮಗೇ ಗೊತ್ತಾಗುವುದು,” ಎಂದನು. ಆಕೀಷನು, “ಹಾಗಾದರೆ ಯುದ್ಧಕಾಲದಲ್ಲೆಲ್ಲಾ ನಿನ್ನನ್ನೇ ನನ್ನ ಮೈಗಾವಲಿಗೆ ನೇಮಿಸಿಕೊಳ್ಳುತ್ತೇನೆ,” ಎಂದನು.
3 : ಸಮುವೇಲನು ಮರಣಹೊಂದಿದ್ದನು. ಇಸ್ರಯೇಲರು ಅವನಿಗಾಗಿ ಸಂತಾಪ ಸೂಚಿಸುತ್ತಾ ಅವನ ಶವವನ್ನು ಅವನ ಸ್ವಂತ ಊರಾದ ರಾಮಾದಲ್ಲಿ ಸಮಾಧಿಮಾಡಿದ್ದರು. ಸೌಲನು ಭೂತಪ್ರೇತಗಳನ್ನು ವಿಚಾರಿಸುವವರನ್ನೂ ಬೇತಾಳಿಕರನ್ನೂ ನಾಡಿನಿಂದ ಹೊರಡಿಸಿಬಿಟ್ಟಿದ್ದನು.
4 : ಫಿಲಿಷ್ಟಿಯರು ಸೈನ್ಯಕೂಡಿಸಿಕೊಂಡು ಬಂದು ಶೂನೇಮಿನಲ್ಲಿ ಪಾಳೆಯಮಾಡಿಕೊಂಡಿದ್ದರು. ಸೌಲನು ಸಮಸ್ತ ಇಸ್ರಯೇಲರೊಡನೆ ಬಂದು ಗಿಲ್ಬೋವದಲ್ಲಿ ಇಳಿದುಕೊಂಡನು.
5 : ಫಿಲಿಷ್ಟಿಯರ ಪಾಳೆಯವನ್ನು ಕಂಡಾಗ ಭಯಭೀತಿಯಿಂದ ಅವನ ಎದೆಯೊಡೆಯಿತು.
6 : ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸುವುದರಿಂದಾಗಲಿ, ಕನಸುಗಳಿಂದಾಗಲಿ, ಊರಿಮಿನಿಂದಾಗಲಿ ಪ್ರವಾದಿಗಳಿಂದಾಗಲಿ ಅವನಿಗೆ ಉತ್ತರ ಸಿಗಲಿಲ್ಲ.
7 : ಆದುದರಿಂದ ಅವನು ತನ್ನ ಸೇವಕರಿಗೆ, “ಭೂತಪ್ರೇತಗಳಲ್ಲಿ ವಿಚಾರಿಸಬಲ್ಲ ಒಬ್ಬ ಸ್ತ್ರೀಯನ್ನು ಹುಡುಕಿರಿ; ನಾನು ಆಕೆಯ ಬಳಿಗೇ ಹೋಗಿ ವಿಚಾರಿಸುವೆನು,” ಎಂದು ಹೇಳಿದನು. ಅವರು, “ಅಂಥವಳೊಬ್ಬಳು ಏಂದೋರಿನಲ್ಲಿದ್ದಾಳೆ,” ಎಂದರು.
8 : ಆಗ ಸೌಲನು ಉಡಿಗೆತೊಡಿಗೆಗಳಿಂದ ತನ್ನನ್ನು ಮಾರ್ಪಡಿಸಿಕೊಂಡು ಇಬ್ಬರು ಸೇವಕರೊಡನೆ ಹೊರಟು ರಾತ್ರಿಯಲ್ಲಿ ಆಕೆಯ ಮನೆಗೆ ಬಂದನು. “ದಯವಿಟ್ಟು ನನಗಾಗಿ ಭೂತಪ್ರೇತಗಳಲ್ಲಿ ವಿಚಾರಿಸಿ ಶಾಸ್ತ್ರ ಹೇಳು; ನಾನು ಯಾವನ ಹೆಸರು ಹೇಳುತ್ತೇನೋ ಅವನನ್ನು ಇಲ್ಲಿಗೆ ಬರಮಾಡು,” ಎಂದು ಆಕೆಯನ್ನು ಬೇಡಿಕೊಂಡನು.
9 : ಆಗ ಆಕೆ ಅವನಿಗೆ, “ಸೌಲನು ಮಾಡಿದ್ದು ನಿನಗೆ ಗೊತ್ತುಂಟು; ಅವನು ಭೂತಪ್ರೇತಗಳನ್ನು ವಿಚಾರಿಸುವವರನ್ನು ಹಾಗು ಬೇತಾಳಿಕರನ್ನು ನಾಡಿನಿಂದ ಹೊರಡಿಸಿಬಿಟ್ಟನಲ್ಲವೇ? ಹೀಗಿದ್ದರೂ ನಾನು ಸಾಯುವಂತೆ ನೀನು ನನ್ನ ಪ್ರಾಣಕ್ಕೆ ಉರಲೊಡ್ಡುವುದೇಕೆ?” ಎಂದಳು.
10 : ಅದಕ್ಕೆ ಸೌಲನು, “ಸರ್ವೇಶ್ವರನಾಣೆ, ಈ ವಿಷಯದಲ್ಲಿ ನೀನು ದಂಡನೆಗೆ ಗುರಿಯಾಗುವುದಿಲ್ಲ,” ಎಂದು ಆಕೆಗೆ ಸರ್ವೇಶ್ವರನ ಹೆಸರಿನಲ್ಲಿ ಪ್ರಮಾಣ ಮಾಡಿದನು.
11 : ಆಗ ಆ ಸ್ತ್ರೀ, “ನಿನಗೆ ಯಾರನ್ನು ಬರಮಾಡಬೇಕು?” ಎಂದಳು. “ಸಮುವೇಲನನ್ನು,” ಎಂದು ಉತ್ತರಕೊಟ್ಟನು.
12 : ಆ ಸ್ತ್ರೀ ಸಮುವೇಲನನ್ನು ಕಂಡಕೂಡಲೆ ಗಟ್ಟಿಯಾಗಿ ಕೂಗಿ ಸೌಲನಿಗೆ, “ನೀನು ನನ್ನನ್ನು ವಂಚಿಸಿದ್ದೇಕೆ? ನೀನು ಸೌಲನಲ್ಲವೇ?,” ಎಂದಳು.
13 : ಆಗ ಅರಸನು, “ಹೆದರಬೇಡ, ನಿನಗೇನು ಕಾಣಿಸುತ್ತದೆ?” ಎಂದು ಆಕೆಯನ್ನು ಕೇಳಿದನು. “ಭೂಮಿಯೊಳಗಿನಿಂದ ಪ್ರೇತಾತ್ಮವೊಂದು ಬರುತ್ತಿರುವುದನ್ನು ನೋಡುತ್ತಿದ್ದೇನೆ,” ಎಂದು ಉತ್ತರ ಕೊಟ್ಟಳು.
14 : ಅವನು ಮತ್ತೆ, “ಅವನ ರೂಪ ಹೇಗಿದೆ?” ಎಂದು ಕೇಳಿದನು. ಆಕೆ, “ನಿಲುವಂಗಿಯನ್ನು ತೊಟ್ಟುಕೊಂಡ ಒಬ್ಬ ಮುದುಕ ಬರುತ್ತಿದ್ದಾನೆ,” ಎಂದು ಹೇಳಿದಳು. ಅವನು ಸಮುವೇಲನೇ ಎಂದು ಸೌಲನು ತಿಳಿದು ನೆಲದ ಮಟ್ಟಿಗೂ ಬಾಗಿ ನಮಸ್ಕರಿಸಿದನು.
15 : ಆಗ ಸಮುವೇಲನು ಸೌಲನನ್ನು, “ನೀನು ನನ್ನ ವಿಶ್ರಾಂತಿಯನ್ನು ಕೆಡಿಸಿದ್ದೇಕೆ? ನನ್ನನ್ನು ಇಲ್ಲಿಗೆ ಏಕೆ ಬರಮಾಡಿದೆ?” ಎಂದು ಕೇಳಿದನು. ಅದಕ್ಕೆ ಸೌಲನು, “ನಾನು ಬಲು ಇಕ್ಕಟ್ಟಿನಲ್ಲಿ ಇದ್ದೇನೆ; ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧಕ್ಕೆ ಬಂದಿದ್ದಾರೆ; ದೇವರು ನನ್ನನ್ನು ಕೈ ಬಿಟ್ಟು ದೂರಹೋಗಿದ್ದಾರೆ; ಅವರು ನನಗೆ ಪ್ರವಾದಿಗಳಿಂದಾಗಲಿ, ಕನಸುಗಳಿಂದಾಗಲಿ ಉತ್ತರ ಕೊಡಲೊಲ್ಲರು. ಆದುದರಿಂದ ನಾನು ಮಾಡಬೇಕಾದುದನ್ನು ನೀನು ತಿಳಿಸುವೆಯೆಂದು ನಿನ್ನನ್ನು ಇಲ್ಲಿಗೆ ಬರಮಾಡಿದೆನು,” ಎಂದನು.
16 : ಆಗ ಸಮುವೇಲನು, “ಸರ್ವೇಶ್ವರ ನಿನ್ನನ್ನು ಕೈಬಿಟ್ಟು ನಿನಗೆ ವಿರೋಧಿಯಾದ ಮೇಲೆ ನೀನು ನನ್ನನ್ನು ವಿಚಾರಿಸುವುದೇಕೆ?
17 : ಅವರು ನನ್ನ ಮುಖಾಂತರ ನಿನಗೆ ಹೇಳಿದ್ದನ್ನು ನೆರವೇರಿಸಿದ್ದಾರೆ; ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನ್ನ ನೆರೆಯವನಾದ ದಾವೀದನಿಗೆ ಕೊಟ್ಟಿದ್ದಾರೆ.
18 : ನೀನು ಸರ್ವೇಶ್ವರನ ಮಾತನ್ನು ಕೇಳಲಿಲ್ಲ; ಅವರು ಅಮಾಲೇಕ್ಯರ ಮೇಲೆ ಉಗ್ರಕೋಪಗೊಂಡು ಮಾಡಿದ ಕೋಪಾಜ್ಞೆಯನ್ನು ನೀನು ನೆರವೇರಿಸಲಿಲ್ಲ. ಆದುದರಿಂದಲೇ ಸರ್ವೇಶ್ವರ ಈಗ ನಿನಗೆ ಹೀಗೆ ಮಾಡುತ್ತಾರೆ.
19 : ನಿನ್ನ ಸಮೇತ ಇಸ್ರಯೇಲರನ್ನು ಫಿಲಿಷ್ಟಿಯರ ಕೈಗೆ ಒಪ್ಪಿಸುವರು. ನಾಳೆ ನೀನೂ ನಿನ್ನ ಮಕ್ಕಳೂ ನಾನಿರುವಲ್ಲಿಗೆ ಬರುವಿರಿ. ಸರ್ವೇಶ್ವರ ಇಸ್ರಯೇಲ್ ಸೈನ್ಯವನ್ನು ಫಿಲಿಷ್ಟಿಯರ ಕೈಗೆ ಒಪ್ಪಿಸುವರು,” ಎಂದು ಹೇಳಿದನು.
20 : ಸೌಲನು ಸಮುವೇಲನ ಮಾತುಗಳನ್ನು ಕೇಳಿದ ಕೂಡಲೆ ದಿಗ್ಬ್ರಾಂತನಾಗಿ ನೆಲದ ಮೇಲೆ ಕೈಕಾಲು ಚಾಚಿಬಿದ್ದನು. ಅವನು ಇಡೀ ದಿವಸ ಊಟ ಮಾಡಿರಲಿಲ್ಲ. ಆದುದರಿಂದ ಅವನಲ್ಲಿ ಬಲವೇ ಇರಲಿಲ್ಲ.
21 : ಆ ಸ್ತ್ರೀ ಸೌಲನ ಹತ್ತಿರಕ್ಕೆ ಬಂದು ಅವನು ಬಹುಭೀತನಾಗಿದ್ದಾನೆಂದು ಕಂಡು, “ನಿಮ್ಮ ದಾಸಿಯಾದ ನಾನು ನಿಮ್ಮ ಮಾತು ಕೇಳಿದೆನು; ಕೈಯಲ್ಲಿ ಜೀವ ಹಿಡಿದವಳಾಗಿ ನಿಮ್ಮ ಅಪ್ಪಣೆಯನ್ನು ನೆರವೇರಿಸಿದೆನು.
22 : ಆದುದರಿಂದ ಈಗ ನೀವು ದಯವಿಟ್ಟು ನಿಮ್ಮ ದಾಸಿಯ ಮಾತನ್ನು ಕೇಳಬೇಕು. ಸ್ವಲ್ಪ ಆಹಾರ ತರುತ್ತೇನೆ, ಪ್ರಯಾಣಕ್ಕೆ ಬಲಬರುವ ಹಾಗೆ ಅದನ್ನು ಊಟ ಮಾಡಿ,” ಎಂದು ಹೇಳಿದಳು.
23 : ಅವನು, “ಒಲ್ಲೆ; ಊಟ ಮಾಡುವುದಿಲ್ಲ,” ಎಂದನು. ಆದರೆ, ಅವನ ಸೇವಕರೂ ಆ ಸ್ತ್ರೀಯೂ ಬಹಳವಾಗಿ ಬೇಡಿಕೊಂಡಿದ್ದರಿಂದ ಅವನು ಕಡೆಗೆ ಅವರ ಮಾತಿಗೆ ಒಪ್ಪಿ ನೆಲದಿಂದೆದ್ದು ಮಂಚದ ಮೇಲೆ ಕುಳಿತುಕೊಂಡನು.
24 : ಆ ಸ್ತ್ರೀಗೆ ಮನೆಯಲ್ಲಿ ಒಂದು ಕೊಬ್ಬಿದ ಕರುವಿತ್ತು. ಆಕೆ ಶೀಘ್ರವಾಗಿ ಅದನ್ನು ಕೊಯ್ದು, ಪಕ್ವಮಾಡಿ, ಹಿಟ್ಟನ್ನು ತೆಗೆದುಕೊಂಡು ನಾದಿ, ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು,
25 : ಸೌಲನಿಗೂ ಅವನ ಸೇವಕರಿಗೂ ಬಡಿಸಿದಳು. ಅವರು ಊಟಮಾಡಿ ಅದೇ ರಾತ್ರಿ ಹೊರಟುಹೋದರು.

· © 2017 kannadacatholicbible.org Privacy Policy