Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಸಮು


1 : ಸೌಲನು ಫಿಲಿಷ್ಟಿಯರನ್ನು ಓಡಿಸಿ ಹಿಂದಿರುಗಿದಾಗ ದಾವೀದನು ಏಂಗೆದಿಯ ಮರುಭೂಮಿಯಲ್ಲಿದ್ದಾನೆಂದು ಅವನಿಗೆ ತಿಳಿದುಬಂದಿತು.
2 : ಆಗ ಅವನು ಇಸ್ರಯೇಲರಲ್ಲಿ ಶ್ರೇಷ್ಠರಾದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡು ಕಾಡುಗುರಿಬಂಡೆಗಳಲ್ಲಿದ್ದ ದಾವೀದನನ್ನೂ ಅವನ ಜನರನ್ನೂ ಹುಡುಕುವುದಕ್ಕಾಗಿ ಹೊರಟನು.
3 : ಮಾರ್ಗದಲ್ಲಿ ಕುರಿಹಟ್ಟಿಗಳ ಬಳಿಯಲ್ಲಿ ಒಂದು ಗವಿಯನ್ನು ಕಂಡು ಶೌಚಕ್ಕಾಗಿ ಅದರೊಳಗೆ ಪ್ರವೇಶಿಸಿದನು. ದಾವೀದನೂ ಅವನ ಜನರೂ ಅದೇ ಗವಿಯ ಹಿಂಗಡೆಯಲ್ಲಿ ಅಡಗಿಕೊಂಡಿದ್ದರು.
4 : ಜನರು ದಾವೀದನಿಗೆ, “ ‘ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು; ಆಗ ನೀನು ಅವನನ್ನು ನಿನ್ನ ಇಷ್ಟಾನುಸಾರ ನಡೆಸಬಹುದು,’ ಎಂದು ಸರ್ವೇಶ್ವರ ನಿನಗೆ ಹೇಳಿದ ಮಾತು ನೆರವೇರುವ ಸುದಿನವಿದು,” ಎಂದರು. ಅವನೆದ್ದು ಮೆಲ್ಲಗೆ ಹೋಗಿ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡನು.
5 : ಅನಂತರದಲ್ಲೇ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿದ್ದಕ್ಕಾಗಿ ಅವನ ಮನಸ್ಸಾಕ್ಷಿ ಅವನನ್ನು ಹಂಗಿಸತೊಡಗಿತು. 6ಅವನು ತನ್ನ ಜನರಿಗೆ, “ಆತ ಸರ್ವೇಶ್ವರನಿಂದ ಅಭಿಷಿಕ್ತನು ಹಾಗು ಆತನು ನನ್ನ ಒಡೆಯನು ಆಗಿದ್ದಾರೆ; ನಾನು ನಿಮ್ಮ ಮಾತು ಕೇಳಿ ಸರ್ವೇಶ್ವರನ ಅಭಿಷಿಕ್ತನ ವಿರೋಧವಾಗಿ ಕೈಯೆತ್ತದಂತೆ ಆ ಸರ್ವೇಶ್ವರನೇ ನನಗೆ ಅಡ್ಡಿಮಾಡಲಿ,” ಎಂದನು.
6 : ಅವನು ತನ್ನ ಜನರಿಗೆ, “ಆತ ಸರ್ವೇಶ್ವರನಿಂದ ಅಭಿಷಿಕ್ತನು ಹಾಗು ಆತನು ನನ್ನ ಒಡೆಯನು ಆಗಿದ್ದಾರೆ; ನಾನು ನಿಮ್ಮ ಮಾತು ಕೇಳಿ ಸರ್ವೇಶ್ವರನ ಅಭಿಷಿಕ್ತನ ವಿರೋಧವಾಗಿ ಕೈಯೆತ್ತದಂತೆ ಆ ಸರ್ವೇಶ್ವರನೇ ನನಗೆ ಅಡ್ಡಿಮಾಡಲಿ,” ಎಂದನು.
7 : ಹೀಗೆ ಸೌಲನಿಗೆ ವಿರುದ್ಧ ತನ್ನ ಜನರು ದಂಗೆಯೇಳದಂತೆ ತಡೆದನು.
8 : ಸೌಲನು ಗವಿಯಿಂದ ಹೊರಗೆ ಬಂದು ಸ್ವಲ್ಪ ಮುಂದೆ ಹೋದಮೇಲೆ ದಾವೀದನೂ ಹೊರಗೆ ಬಂದು, “ಅರಸರೇ, ನನ್ನ ಒಡೆಯರೇ,” ಎಂದು ಅವನನ್ನು ಕೂಗಿದನು. ಸೌಲನು ಹಿಂದಿರುಗಿ ನೋಡಿದನು. ಆಗ ಅವನಿಗೆ ಸಾಷ್ಟಾಂಗ ನಮಸ್ಕಾರಮಾಡಿ,
9 : “ನಿಮಗೆ ನಾನು ಕೇಡುಮಾಡಬೇಕೆಂದಿದ್ದೇನೆಂದು ಹೇಳುವವರ ಮಾತಿಗೆ ನೀವು ಕಿವಿಗೊಡಬೇಡಿ.
10 : ಇಂದು ಈ ಗವಿಯಲ್ಲಿ ಸರ್ವೇಶ್ವರ ನಿಮ್ಮನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದರೆಂಬುದು ಈಗ ನಿಮಗೆ ಗೊತ್ತಾಗಿರಬೇಕು. ನಿಮ್ಮನ್ನು ಕೊಂದುಬಿಡಬೇಕೆಂದು ಕೆಲವರು ನನಗೆ ಹೇಳಿದರು. ಆದರೆ ನಾನು ಅವರಿಗೆ, ‘ಸರ್ವೇಶ್ವರನಿಂದ ಅಭಿಷಿಕ್ತರಾದ ನನ್ನ ಒಡೆಯರ ಮೇಲೆ ಕೈಯೆತ್ತುವುದಿಲ್ಲ,’ ಎಂದು ಹೇಳಿ ನಿಮ್ಮನ್ನು ಉಳಿಸಿದೆ.
11 : ನೀವು ನನ್ನ ತಂದೆ; ಇಗೋ ನೋಡಿ! ನನ್ನ ಕೈಯಲ್ಲಿ ನಿಮ್ಮ ನಿಲುವಂಗಿಯ ತುಂಡು ಇದೆ; ನಾನು ನಿಮ್ಮನ್ನು ಕೊಲ್ಲದೆ ನಿಮ್ಮ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡೆನಷ್ಟೆ. ಇದರಿಂದ ನನ್ನಲ್ಲಿ ಯಾವ ದೋಷವೂ ಅಪರಾಧವೂ ಇರುವುದಿಲ್ಲ; ನಾನು ನಿಮಗೆ ವಿರೋಧವಾಗಿ ದ್ರೋಹ ಮಾಡಲಿಲ್ಲ ಎಂದು ತಿಳಿದುಕೊಳ್ಳಿ; ಆದರೂ ನೀವು ನನ್ನ ಪ್ರಾಣಕ್ಕೆ ಹೊಂಚು ಹಾಕುತ್ತಿರುವಿರಲ್ಲವೆ?
12 : ಸರ್ವೇಶ್ವರನೇ ನಮ್ಮ ಉಭಯರ ವ್ಯಾಜ್ಯವನ್ನು ತೀರಿಸಲಿ; ಅವರೇ ನನಗಾಗಿ ನಿಮಗೆ ಮುಯ್ಯಿಸಲ್ಲಿಸಲಿ; ನಾನಂತೂ ನಿಮಗೆ ವಿರೋಧವಾಗಿ ಕೈಯೆತ್ತುವುದಿಲ್ಲ.
13 : ಇಸ್ರಯೇಲರಲ್ಲಿ ‘ಕೆಟ್ಟವರಿಂದಲೇ ಕೇಡು’ ಎಂಬುದಾಗಿ ಹಿರಿಯರಿಂದ ಬಂದ ಗಾದೆಯುಂಟು. ನಾನು ನಿಮಗೆ ವಿರೋಧವಾಗಿ ಕೈಯೆತ್ತುವುದಿಲ್ಲ.
14 : ಇಸ್ರಯೇಲರ ಅರಸರೇ, ಯಾರನ್ನು ಹಿಂದಟ್ಟಿ ಹೊರಟಿದ್ದೀರಿ? ಯಾರನ್ನು ಹಿಡಿಯಬೇಕೆಂದಿರುತ್ತೀರಿ? ಸತ್ತ ನಾಯಿಯನ್ನೇ? ಒಂದು ಬಡ ಸೊಳ್ಳೆಯನ್ನೇ?
15 : ಸರ್ವೇಶ್ವರ ನ್ಯಾಯಾಧಿಪತಿಯಾಗಿ ನಮ್ಮಿಬ್ಬರ ವ್ಯಾಜ್ಯವನ್ನು ತೀರಿಸಲಿ; ಅವರೇ ನೋಡಿ ನನ್ನ ಪರವಾಗಿ ವಾದಿಸಿ ನನ್ನನ್ನು ನಿಮ್ಮ ಕೈಯಿಂದ ತಪ್ಪಿಸಲಿ,” ಎಂದು ಹೇಳಿದನು.
16 : ದಾವೀದನ ಮಾತುಗಳು ಮುಗಿದನಂತರ ಸೌಲನು, “ದಾವೀದನೇ, ನನ್ನ ಮಗನೇ, ಇದು ನಿಜವಾಗಿಯೂ ನಿನ್ನ ಸ್ವರವೇ?” ಎಂದು ಗಟ್ಟಿಯಾಗಿ ಅತ್ತನು.
17 : ಇದಲ್ಲದೆ ಅವನು ದಾವೀದನಿಗೆ, “ನೀನು ನನಗಿಂತ ನೀತಿವಂತ; ನಾನು ನಿನಗೆ ಕೇಡುಮಾಡಿದರೂ ನೀನು ನನಗೆ ಒಳ್ಳೆಯದನ್ನೇ ಮಾಡಿದೆ.
18 : ಸರ್ವೇಶ್ವರ ನನ್ನನ್ನು ನಿನ್ನ ಕೈಗೆ ಒಪ್ಪಿಸಿ ಕೊಟ್ಟರೂ ನೀನು ನನ್ನನ್ನು ಕೊಲ್ಲಲಿಲ್ಲ. ಇದರಿಂದ ನೀನು ನನಗೆ ಹಿತವನ್ನೇ ಮಾಡುವಂಥವನೆಂಬುದು ಈ ದಿನ ಖಚಿತವಾಯಿತು.
19 : ಯಾವನಾದರೂ ತನ್ನ ಕೈಗೆ ಸಿಕ್ಕಿದ ವೈರಿಯನ್ನು ಸುಕ್ಷೇಮದಿಂದ ಕಳುಹಿಸಿಬಿಡುತ್ತಾನೆಯೇ? ನೀನು ಈ ದಿನ ನನಗೆ ಮಾಡಿದ ಉಪಕಾರಕ್ಕಾಗಿ ಸರ್ವೇಶ್ವರ ನಿನಗೆ ಪ್ರತ್ಯುಪಕಾರಮಾಡಲಿ.
20 : ಕೇಳು; ನೀನು ಹೇಗೂ ಅರಸನಾಗುವೆಯೆಂದೂ ಇಸ್ರಯೇಲ್ ರಾಜ್ಯ ನಿನ್ನ ಆಳ್ವಿಕೆಯಲ್ಲಿ ಸ್ಥಿರವಾಗುವುದೆಂದೂ ಬಲ್ಲೆ.
21 : ಹೀಗಿರುವುದರಿಂದ ನೀನು ನನ್ನ ಸಂತಾನವನ್ನು ನಿರ್ಮೂಲಮಾಡುವುದು ಇಲ್ಲವೆಂದೂ ನಮ್ಮ ಕುಲದಿಂದ ನನ್ನ ಹೆಸರನ್ನು ತೆಗೆದುಹಾಕುವುದಿಲ್ಲವೆಂದೂ ಸರ್ವೇಶ್ವರನ ಹೆಸರಿನಲ್ಲಿ ಪ್ರಮಾಣ ಮಾಡು,” ಎಂದು ಬೇಡಿಕೊಂಡನು. ಹಾಗೆಯೇ ದಾವೀದನು ಪ್ರಮಾಣ ಮಾಡಿದನು.
22 : ಅನಂತರ ಸೌಲನು ತನ್ನ ಮನೆಗೆ ಹೊರಟನು; ದಾವೀದನು ತನ್ನ ಜನರೊಡನೆ ಆಶ್ರಯಗಿರಿಗೆ ಮರಳಿದನು.

· © 2017 kannadacatholicbible.org Privacy Policy