1 :
ಫಿಲಿಷ್ಟಿಯರು ಕೆಯಿಲಾಕ್ಕೆ ಮುತ್ತಿಗೆ ಹಾಕಿ ಅಲ್ಲಿನ ಕಣಗಳನ್ನು ಸೂರೆ ಮಾಡುತ್ತಿದ್ದಾರೆಂದು ದಾವೀದನಿಗೆ ತಿಳಿಸಲಾಯಿತು.
2 : ಅವನು, “ನಾನು ಹೋಗಿ ಆ ಫಿಲಿಷ್ಟಿಯರ ಮೇಲೆ ದಾಳಿಮಾಡಲೆ?” ಎಂದು ಸರ್ವೇಶ್ವರನನ್ನು ಕೇಳಿದನು. ಸರ್ವೇಶ್ವರ ಅವನಿಗೆ, “ಹೋಗಿ ಫಿಲಿಷ್ಟಿಯರ ಮೇಲೆ ದಾಳಿಮಾಡಿ ಕೆ¬ೂಲಾ ಊರನ್ನು ರಕ್ಷಿಸು,” ಎಂದು ಉತ್ತರ ಕೊಟ್ಟರು.
3 : ಆದರೆ ದಾವೀದನ ಸೈನಿಕರು ಅವನಿಗೆ, “ನಮಗೆ ಯೆಹೂದ ನಾಡಿನಲ್ಲಿಯೇ ಇಷ್ಟು ಆಪತ್ತುಗಳು ಇರುವಲ್ಲಿ ಫಿಲಿಷ್ಟಿಯ ಸೈನ್ಯದೊಡನೆ ಯುದ್ಧಮಾಡುವುದಕ್ಕಾಗಿ ಕೆ¬ೂಲಾಕ್ಕೆ ಹೋದರೆ ಅಲ್ಲಿ ಎಷ್ಟೋ ಅಧಿಕವಾದ ಗಂಡಾಂತರಗಳು ಕಾದಿರಬಹುದಲ್ಲವೆ?” ಎಂದರು.
4 : ಆದುದರಿಂದ ಅವನು ಮತ್ತೆ ಸರ್ವೇಶ್ವರನನ್ನು ಕೇಳಿದನು. ಅವರು, “ನೀನೆದ್ದು ಕೆಯಿಲಾಕ್ಕೆ ಹೋಗು; ನಾನು ಫಿಲಿಷ್ಟಿಯರನ್ನು ನಿನ್ನ ಕೈಗೆ ಒಪ್ಪಿಸಿ ಕೊಡುವೆನು,” ಎಂದು ಉತ್ತರಕೊಟ್ಟರು.
5 : ಆಗ ದಾವೀದನು ತನ್ನ ಜನರೊಡನೆ ಕೆಯಿಲಾಕ್ಕೆ ಹೋಗಿ ಫಿಲಿಷ್ಟಿಯರೊಡನೆ ಯುದ್ಧಮಾಡಿದನು. ಅವರನ್ನು ಪೂರ್ಣವಾಗಿ ಸೋಲಿಸಿ, ಅವರ ಪಶುಗಳನ್ನು ತೆಗೆದುಕೊಂಡು ಕೆಯಿಲಾದವರನ್ನು ಕಾಪಾಡಿದನು.
6 : ದಾವೀದನ ಬಳಿಗೆ ಓಡಿಬಂದಿದ್ದ ಅಹೀಮೆಲೆಕನ ಮಗನಾದ ಎಬ್ಯಾತಾರನು ಕೆಯಿಲಕ್ಕೆ ಬರುವಾಗ ‘ಏಫೋದ’ನ್ನು ತಂದಿದ್ದನು.
7 : ದಾವೀದನು ಕೆಯಿಲಾದಲ್ಲಿದ್ದಾನೆಂಬ ಸಮಾಚಾರ ಸೌಲನಿಗೆ ಮುಟ್ಟಿತು. ಆಗ ಅವನು, “ದೇವರು ದಾವೀದನನ್ನು ನನ್ನ ಕೈಗೆ ಒಪ್ಪಿಸಿದ್ದಾರೆ. ಅವನು ಅಗುಳಿಕದಗಳಿಂದ ಭದ್ರವಾಗಿರುವ ಕೋಟೆಯನ್ನು ಪ್ರವೇಶಿಸಿದ್ದಾನಲ್ಲವೆ? ಅವನು ಅಲ್ಲಿಂದ ತಪ್ಪಿಸಿಕೊಳ್ಳಲಾರನು,” ಎಂದುಕೊಂಡನು.
8 : ಕೆಯಿಲಾದಲ್ಲಿದ್ದ ದಾವೀದನನ್ನೂ ಅವನ ಜನರನ್ನೂ ಹಿಡಿಯುವುದಕ್ಕಾಗಿ ಸೈನ್ಯವನ್ನು ಕೂಡಿಸಿದನು.
9 : ಸೌಲನು ತನಗೆ ಕೇಡು ಮಾಡಬೇಕೆಂದಿದ್ದಾನೆಂದು ದಾವೀದನು ತಿಳಿದು ಯಾಜಕನಾದ ಎಬ್ಯಾತಾರನಿಗೆ, “ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ,” ಎಂದು ಹೇಳಿ ತರಿಸಿ,
10 : “ಇಸ್ರಯೇಲ್ ದೇವರಾದ ಸರ್ವೇಶ್ವರಾ, ಸೌಲನು ಕೆಯಿಲಾಕ್ಕೆ ಬಂದು ನನ್ನ ನಿಮಿತ್ತ ಪಟ್ಟಣವನ್ನು ಹಾಳುಮಾಡಬೇಕೆಂದಿದ್ದಾನೆ ಎಂದು ನಿಮ್ಮ ದಾಸನಾದ ನನಗೆ ಸುದ್ದಿ ಬಂದಿದೆ.
11 : ನಾನು ಕೇಳಿದ ಸುದ್ದಿಯಂತೆ ಅವನು ನಿಜವಾಗಿ ಬರುವನೇ? ಕೆಯಿಲಾ ಪುರಜನರು ನನ್ನನ್ನು ಅವನ ಕೈಗೆ ಒಪ್ಪಿಸುವರೇ? ಇಸ್ರಯೇಲ ದೇವರಾದ ಸರ್ವೇಶ್ವರಾ, ಈ ವಿಷಯದಲ್ಲಿ ಉತ್ತರ ದಯಪಾಲಿಸಿ,” ಎಂದು ಪ್ರಾರ್ಥಿಸಿದನು. ಸೌಲನು ಬರುವನೆಂಬುದಾಗಿ ಸರ್ವೇಶ್ವರನಿಂದ ಉತ್ತರ ಸಿಕ್ಕಿತು.
12 : ದಾವೀದನು ಪುನಃ ಸರ್ವೇಶ್ವರನನ್ನು, “ಕೆಯಿಲಾದವರು ನನ್ನನ್ನೂ ನನ್ನ ಜನರನ್ನೂ ಸೌಲನ ಕೈಗೆ ಒಪ್ಪಿಸುವರೇ?” ಎಂದು ಕೇಳಿದಾಗ ಅವರು, “ಒಪ್ಪಿಸಿಕೊಡುವರು,” ಎಂದು ಉತ್ತರ ಕೊಟ್ಟರು.
13 : .ಆಗ ದಾವೀದನು ತನ್ನ ಸಂಗಡ ಇದ್ದ ಆರುನೂರು ಜನರ ಸಹಿತವಾಗಿ ಕೆಯಿಲಾ ಊರನ್ನು ಬಿಟ್ಟು ಎಲ್ಲೆಲ್ಲಿಯೋ ಅಲೆದಾಡಿದನು. ದಾವೀದನು ಕೆಯಿಲಾದಿಂದ ತಪ್ಪಿಸಿಕೊಂಡನು ಎಂದು ಸೌಲನಿಗೆ ಗೊತ್ತಾಗಲು ಅವನು ಪ್ರಯಾಣವನ್ನು ನಿಲ್ಲಿಸಿಬಿಟ್ಟನು.
14 :
ಅನಂತರ ದಾವೀದನು ಮರುಭೂಮಿಯಲ್ಲಿರುವ ಆಯಾ ಆಶ್ರಯಗಿರಿಗಳಲ್ಲಿ ಇರುತ್ತಿದ್ದನು. ಕಡೆಗೆ ಜೀಫ್ ಮರುಭೂಮಿಯ ಪರ್ವತ ಪ್ರಾಂತ್ಯಕ್ಕೆ ಬಂದು ಅಲ್ಲಿ ವಾಸಮಾಡಿದನು. ದಿನಂಪ್ರತಿ ಹುಡುಕುತ್ತಿದ್ದರೂ ದೇವರು ಆತನನ್ನು ಸೌಲನ ಕೈಗೆ ಒಪ್ಪಿಸಲಿಲ್ಲ.
15 : ಸೌಲನು ತನ್ನನ್ನು ಕೊಲ್ಲಲು ಹೊರಟಿದ್ದಾನೆಂದು ದಾವೀದನು ತಿಳಿದು ಜೀಫ್ ಮರುಭೂಮಿಯ ಹೋರೆಷದಲ್ಲಿ ಅಡಗಿಕೊಂಡಿದ್ದನು.
16 : ಆಗ ಸೌಲನ ಮಗ ಯೋನಾತಾನನು ಅಲ್ಲಿಗೆ ಹೋಗಿ,
17 : ದಾವೀದನಿಗೆ, “ಭಯ ಪಡಬೇಡ; ನೀನು ನನ್ನ ತಂದೆಯಾದ ಸೌಲನ ಕೈಗೆ ಸಿಕ್ಕಿಬೀಳುವುದಿಲ್ಲ; ನೀನು ಇಸ್ರಯೇಲರ ಅರಸನಾಗುವೆ; ನಾನು ನಿನಗೆ ಎರಡನೆಯವನಾಗಿರುವೆನು. ಹೀಗಾಗುವುದೆಂದು ನನ್ನ ತಂದೆ ಸೌಲ ತಿಳಿದುಕೊಂಡಿದ್ದಾರೆ,” ಎಂದು ಹೇಳಿ ದೇವರ ಹೆಸರಿನಲ್ಲಿ ಧೈರ್ಯತುಂಬಿದನು.
18 : ಅವರಿಬ್ಬರೂ ಸರ್ವೇಶ್ವರನ ಸನ್ನಿಧಿಯಲ್ಲಿ ಒಪ್ಪಂದಮಾಡಿಕೊಂಡರು. ತರುವಾಯ ಯೋನಾತಾನನು ತನ್ನ ಮನೆಗೆ ಹೋದನು. ದಾವೀದನು ಹೋರೆಷದಲ್ಲಿಯೇ ಇದ್ದನು.
19 : ಜೀಫ್ಯರು ಗಿಬೆಯದಲ್ಲಿದ್ದ ಸೌಲನ ಬಳಿಗೆ ಬಂದು, “ಒಡೆಯಾ, ಆಲಿಸಬೇಕು; ದಾವೀದನು ನಮ್ಮ ಪ್ರಾಂತ್ಯಕ್ಕೆ ಸೇರಿದ ಹೋರೆಷದ ಗಿರಿಗಳಲ್ಲಿ, ಅಂದರೆ ಮರುಭೂಮಿಯ ದಕ್ಷಿಣದಲ್ಲಿ ಇರುವ ಹಕೀಲಾ ಬೆಟ್ಟದಲ್ಲಿ ಅಡಗಿಕೊಂಡಿದ್ದಾನೆ.
20 : ಅರಸರು ಕುತೂಹಲದಂತೆ ನಮ್ಮ ಜೊತೆಯಲ್ಲಿ ಬರೋಣವಾಗಲಿ; ಅವನನ್ನು ತಮ್ಮ ಕೈಗೆ ಒಪ್ಪಿಸುವ ಕೆಲಸ ನಮ್ಮದು,” ಎಂದು ಹೇಳಿದರು.
21 : ಆಗ ಸೌಲನು ಅವರಿಗೆ, “ನೀವು ನನ್ನ ಮೇಲೆ ಕನಿಕರ ಪಟ್ಟದ್ದರಿಂದ ಸರ್ವೇಶ್ವರನ ಆಶೀರ್ವಾದ ನಿಮ್ಮ ಮೇಲಿರಲಿ!
22 : ! ನೀವು ದಯವಿಟ್ಟು ಹೋಗಿ ಅವನು ತಿರುಗಾಡುವ ಸ್ಥಳವನ್ನೂ ಅಲ್ಲಿ ಅವನ ಗುರುತು ಕಂಡಿರುವವರನ್ನೂ ಸೂಕ್ಷ್ಮವಾಗಿ ವಿಚಾರಿಸಿ ಗೊತ್ತುಮಾಡಿಕೊಳ್ಳಿ. ಅವನು ಬಹಳ ಯುಕ್ತಿವಂತನೆಂದು ಕೇಳಿದ್ದೇನೆ.
23 : .ಆದ್ದರಿಂದ ಅವನು ಅಡಗಿಕೊಳ್ಳತಕ್ಕ ಎಲ್ಲಾ ಗುಟ್ಟಾದ ಸ್ಥಳಗಳನ್ನು ಗೊತ್ತುಮಾಡಿಕೊಂಡು ಖಚಿತವಾದ ವರ್ತಮಾನವನ್ನು ನನಗೆ ಮುಟ್ಟಿಸಿರಿ. ನಾನು ನಿಮ್ಮ ಸಂಗಡ ಬರುವೆನು. ಅವನು ನಾಡಿನಲ್ಲಿ ಇರುವುದಾದರೆ ಯೆಹೂದ ಪ್ರಜೆಗಳ ಮಧ್ಯದಲ್ಲೆಲ್ಲಾ ಹುಡುಕಿ ಅವನನ್ನು ಹಿಡಿಯುವೆನು,” ಎಂದನು.
24 : ಅವರು ಹೊರಟು ಸೌಲನ ಮುಂದಾಗಿ ಜೀಫಿಗೆ ಬಂದರು. ದಾವೀದನೂ ಅವನ ಜನರೂ ಮಾವೋನ್ ಮರುಭೂಮಿಯ ದಕ್ಷಿಣದಿಕ್ಕಿನಲ್ಲಿ ಇರುವ ಅರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಇದ್ದರು.
25 : ಸೌಲನು ತನ್ನ ಜನರೊಡನೆ ದಾವೀದನನ್ನು ಹಿಡಿಯುವುದಕ್ಕೆ ಬಂದನು. ಈ ಸಮಾಚಾರ ದಾವೀದನಿಗೆ ಸಿಕ್ಕಿತು. ಅವನು ಮಾವೋನಿನಲ್ಲಿ ಇರುವ ಒಂದು ಕಡಿದಾದ ಬೆಟ್ಟಕ್ಕೆ ಹೋಗಿ ಅಡಗಿಕೊಂಡನು. ಸೌಲನು ಇದನ್ನು ಕೇಳಿ ಮಾವೋನ್ ಮರುಭೂಮಿಗೆ ಬಂದು ಆ ಬೆಟ್ಟದ ಒಂದು ಕಡೆಯಲ್ಲಿ ಹೋಗುತ್ತಿದ್ದನು.
26 : ಅದರ ಇನ್ನೊಂದು ಕಡೆಯಲ್ಲಿ ದಾವೀದನೂ ಅವನ ಜನರೂ ಇದ್ದರು. ದಾವೀದನೂ ಅವನ ಜನರೂ ತಪ್ಪಿಸಿಕೊಳ್ಳುವುದಕ್ಕೆ ತ್ವರೆಪಡುತ್ತಿದ್ದರು. ಅಷ್ಟರಲ್ಲಿ ಸೌಲನೂ ಅವನ ಜನರೂ ಬಂದು ಅವರನ್ನು ಸುತ್ತಿ ಹಿಡಿಯುವುದಕ್ಕಿದ್ದರು.
27 : ಅದೇ ವೇಳೆಗೆ ದೂತನೊಬ್ಬನು ಸೌಲನ ಬಳಿಗೆ ಬಂದು, “ಬೇಗ ಬನ್ನಿ, ಫಿಲಿಷ್ಟಿಯರು ನಾಡಿನೊಳಕ್ಕೆ ನುಗ್ಗಿದ್ದಾರೆ,” ಎಂದು ತಿಳಿಸಿದನು. 28ಆದ್ದರಿಂದ ಅವನು ದಾವೀದನನ್ನು ಹಿಡಿಯುವ ಕೆಲಸವನ್ನು ಬಿಟ್ಟು ಫಿಲಿಷ್ಟಿಯರಿಗೆ ವಿರುದ್ಧ ಯುದ್ಧಕ್ಕೆ ಹೊರಟನು. ಈ ಕಾರಣ ಆ ಬೆಟ್ಟಕ್ಕೆ ‘ಅಡ್ಡಬೆಟ್ಟ’ ಎಂದು ಹೆಸರಾಯಿತು.
29 : ದಾವೀದನು ಅಲ್ಲಿಂದ ಗುಡ್ಡ ಹತ್ತಿಹೋಗಿ ಏಂಗೆದಿಯ ಗಿರಿಗಳಲ್ಲಿ ವಾಸಿಸಿದನು.