1 : “ಆನಂದಿಸುತ್ತಿದೆ ನನ್ನ ಮನ
ಸರ್ವೇಶ್ವರನಲಿ
ಉನ್ನತೋನ್ನತವಾಗಿದೆ ನನ್ನ ಶಕ್ತಿ ಆ ದೇವನಲಿ
ನನಗಿದೆ ಶತ್ರುಗಳನ್ನೂ ಧಿಕ್ಕರಿಸುವ ಶಕ್ತಿ
ನನಗಿತ್ತಿರುವನಾ ಸಂತಸದಾಯಕ ಮುಕ್ತಿ.
2 : ಸರ್ವೇಶ್ವರನಂಥ ಪರಮಪಾವನನಿಲ್ಲ
ನಿನ್ನ ಹೊರತು ದೇವಾ, ಬೇರೆ ದೇವನಿಲ್ಲ;
ನಿಮ್ಮ ದೇವನಿಗೆ ಸಮನಾದ
ಆಶ್ರಯದುರ್ಗವಿಲ್ಲ.
3 : ಇನ್ನು ನಿಲ್ಲಲಿ ಗರ್ವದ ಮಾತು
ಬಾಯಿಂದ ಬರದಿರಲಿ ಸೊಕ್ಕಿನ ಸೊಲ್ಲು;
ಸರ್ವೇಶ್ವರನಾದ ದೇವನೇ ಸರ್ವಜ್ಞನು.
ಮಾನವಕ್ರಿಯೆಗಳ ತೂಕ
ನೋಡುವಾತನವನು.
4 : ಮುರಿದು ಬಿದ್ದಿವೆ ಶೂರರ
ಬಿಲ್ಲುಬಾಣಗಳು
ದುರ್ಬಲರಾದರೋ ಶೌರ್ಯದ ನಡುಕಟ್ಟಿ
ನಿಂತಿಹರು.
5 : ಉಂಡು ಸುಖದಿಂದಿರುವರು ಹಸಿವು
ಗೊಂಡವರು
ಹೊಟ್ಟೆಗಾಗಿ ಕೂಲಿಮಾಡುತ್ತಿಹರು
ತೃಪ್ತರಿದ್ದವರು.
ಬಂಜೆ ಹೆರುವಳು ಆರೇಳು ಮಕ್ಕಳನು
ಒಬ್ಬಂಟಿಗಳಾಗಿರುವಳು ಮಕ್ಕಳಿವೆ
ಎಂದವಳು.
6 : ಜೀವ ಕೊಡುವವನು,
ತೆಗೆದುಕೊಳ್ಳುವವನು ಆ
ಸರ್ವೇಶ್ವರನೇ
ಪಾತಾಳಕ್ಕಿಳಿಸುವವನು,
ಮೇಲಕ್ಕೆಳೆದುಕೊಳ್ಳುವವನು ಆತನೇ.
7 : ಬಡತನ, ಸಿರಿತನ ಕೊಡುವವನು
ಆ ಸರ್ವೇಶ್ವರನೇ
ತಗ್ಗಿಸುವವನು, ಹೆಚ್ಚಿಸುವವನು
ಆತನೇ.
8 : ಎತ್ತುವನಾತ ದೀನರನು ಧೂಳಿಂದ,
ದರಿದ್ರರನು ತಿಪ್ಪೆಯಿಂದ.
ಕುಳ್ಳರಿಸುವನವರನು ಅಧಿಪತಿಗಳ
ಸಮೇತ
ಅನುಗ್ರಹಿಸುವನು ಹಕ್ಕಾಗಿ ಆ
ಮಹಿಮಾಸನ.
ಕಾರಣ-ಭೂಮಿಯ ಆಧಾರ
ಸ್ತಂಭಗಳು ಸರ್ವೇಶ್ವರನವೇ
ಭೂಮಂಡಲವನು ಅವುಗಳ ಮೇಲೆ
ಸ್ಥಾಪಿಸಿದವನು ಆತನೇ.
9 : ಕಾಯುವನಾತ ತನ್ನ ಭಕ್ತರನು
ಹೆಜ್ಜೆಹೆಜ್ಜೆಗು
ದುರುಳರಾದರೋ ಮುಳುಗಿ ಮೌನ
ತಾಳುವರು ಅಂಧಕಾರದೊಳು.
ಕೇವಲ ಭುಜಬಲದಿಂದ ಜಯ
ಹೊಂದಲಾರನು ನರಮಾನವನು !
9 : ಸೌಲನು ತನಗೆ ಕೇಡು ಮಾಡಬೇಕೆಂದಿದ್ದಾನೆಂದು ದಾವೀದನು ತಿಳಿದು ಯಾಜಕನಾದ ಎಬ್ಯಾತಾರನಿಗೆ, “ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ,” ಎಂದು ಹೇಳಿ ತರಿಸಿ,
10 : ಚದರಿಹೋಗುವರು ಸರ್ವೇಶ್ವರನ
ವಿರೋಧಿಗಳು
ಅಗಸದಿಂದಾತ ಅವರ ವಿರುದ್ಧ
ಗರ್ಜಿಸಲು !
ನ್ಯಾಯತೀರಿಸುವನಾತ ಜಗದ
ಕಟ್ಟಕಡೆಯವರೆಗೆ
ಶಕ್ತಿಸಾಮಥ್ರ್ಯವನೀವನು ತಾ
ನೇಮಿಸಿದರಸನಿಗೆ
ಏರಿಸುವನು ತನ್ನಭಿಷಿಕ್ತನ
ಒಲುಮೆಯನು ಉನ್ನತಿಗೆ.
11 : ಎಲ್ಕಾನನು ರಾಮಾದಲ್ಲಿದ್ದ ತನ್ನ ಮನೆಗೆ ಹಿಂದಿರುಗಿದನು. ಹುಡುಗ ಸಮುವೇಲನು ಯಾಜಕ ಏಲಿಯನ ಕೈಕೆಳಗಿದ್ದು ಸರ್ವೇಶ್ವರನ ಸೇವೆಮಾಡುತ್ತಾ ಬಂದನು.
12 : ಏಲಿಯ ಮಕ್ಕಳು ಮಹಾದುಷ್ಟರು. ಅವರು ಸರ್ವೇಶ್ವರನನ್ನು ಲಕ್ಷಿಸುತ್ತಿರಲಿಲ್ಲ.
13 : ಬಲಿಯರ್ಪಿಸುವುದಕ್ಕೆ ಬಂದ ಜನರಲ್ಲೂ ಯಾಜಕರಾದ ಇವರು ಸರಿಯಾಗಿ ವರ್ತಿಸುತ್ತಿರಲಿಲ್ಲ: ಬಲಿಮಾಂಸ ಬೇಯುತ್ತಿರುವಾಗಲೇ ಯಾಜಕನ ಆಳು ಕೈಯಲ್ಲಿ ತ್ರಿಶೂಲ ಹಿಡಿದು ಬರುತ್ತಿದ್ದನು.
14 : ಅದನ್ನು ಮಾಂಸ ಬೇಯುತ್ತಿದ್ದ ಕೊಪ್ಪರಿಗೆಯಲ್ಲಾಗಲಿ, ಭಾಂಡದಲ್ಲಾಗಲಿ, ತಪ್ಪಲೆಯಲ್ಲಾಗಲಿ, ಗಡಿಗೆಯಲ್ಲಾಗಲಿ ಚುಚ್ಚಿ ಅದಕ್ಕೆ ಸಿಕ್ಕಿದೆಲ್ಲವನ್ನು ಯಾಜಕನಿಗೆಂದು ಹೇಳಿ ತೆಗೆದುಕೊಳ್ಳುತ್ತಿದ್ದನು. ಶಿಲೋವಿಗೆ ಬರುವ ಇಸ್ರಯೇಲರೆಲ್ಲರಿಗು ಹೀಗೆಯೇ ಮಾಡುತ್ತಿದ್ದರು.
15 : ಇದಲ್ಲದೆ, ಕೊಬ್ಬನ್ನು ಹೋಮಮಾಡುವುದಕ್ಕೆ ಮುಂಚೆಯೇ ಯಾಜಕನ ಆಳು ಬಂದು ಬಲಿಯರ್ಪಿಸುತ್ತಿದ್ದವನಿಗೆ, “ಹುರಿಯತಕ್ಕ ಮಾಂಸವನ್ನು ಯಾಜಕನಿಗೆ ಕೊಡು; ನೀವು ಬೇಯಿಸಿದ ಮಾಂಸವನ್ನು ಅವರು ತೆಗೆದುಕೊಳ್ಳುವುದಿಲ್ಲ; ಅವರಿಗೆ ಹಸಿ ಮಾಂಸವೇ ಬೇಕು,” ಎನ್ನುತ್ತಿದ್ದನು.
16 : ಬಲಿಯರ್ಪಿಸುತ್ತಿದ್ದವನು ಅವನಿಗೆ, “ಮೊದಲು ಕೊಬ್ಬನ್ನು ಹೋಮ ಮಾಡೋಣ; ಅನಂತರ ನಿನಗೆ ಬೇಕಾದುದನ್ನು ತೆಗೆದುಕೊಳ್ಳುವಿಯಂತೆ,” ಎಂದು ಹೇಳಿದಾಗ, “ಕೂಡದು, ಈಗಲೇ ಬೇಕು; ಇಲ್ಲವಾದರೆ ಬಲಾತ್ಕಾರದಿಂದ ತೆಗೆದುಕೊಳ್ಳುತ್ತೇನೆ,” ಎಂದು ಪೀಡಿಸುತ್ತಿದ್ದನು.
17 : ಹೀಗೆ ಸರ್ವೇಶ್ವರನ ನೈವೇದ್ಯವನ್ನು ತುಚ್ಛವಾಗಿ ಕಾಣುತ್ತಿದ್ದುದರಿಂದ ದೇವರ ದೃಷ್ಟಿಯಲ್ಲಿ ಏಲಿಯ ಮಕ್ಕಳ ಪಾಪ ಘೋರವಾಗಿತ್ತು.
18 : ಬಾಲಕನಾದ ಸಮುವೇಲನು ‘ಏಫೋದ’ ಎಂಬ ಪ್ರತ್ಯೇಕ ಮಡಿಯಂಗಿಯನ್ನು ತೊಟ್ಟು ಕೊಂಡು ಸರ್ವೇಶ್ವರನ ಸಾನ್ನಿಧ್ಯ ಸೇವೆಯನ್ನು ಮಾಡುತ್ತಿದ್ದನು.
19 : ಅವನ ತಾಯಿ ಪ್ರತಿವರ್ಷ ಗಂಡನ ಜೊತೆಯಲ್ಲಿ ಬಲಿಯನ್ನು ಅರ್ಪಿಸುವುದಕ್ಕೆ ಬಂದಾಗ ಒಂದು ಚಿಕ್ಕ ನಿಲುವಂಗಿಯನ್ನು ಹೊಲಿದು ಅವನಿಗೆ ತಂದುಕೊಡುತ್ತಿದ್ದಳು.
20 : ಎಲ್ಕಾನನಿಗೆ ಏಲಿ, “ನೀನು ಸರ್ವೇಶ್ವರನಿಗೆ ಸಮರ್ಪಿಸಿಬಿಟ್ಟ ಈ ಮಗನಿಗೆ ಬದಲಾಗಿ ಈ ಹನ್ನಳಿಂದ ನಿನಗೆ ಬೇರೆ ಮಕ್ಕಳಾಗಲಿ!” ಎಂದು ಹೇಳಿ ಅವನನ್ನೂ ಅವನ ಹೆಂಡತಿಯನ್ನೂ ಆಶೀರ್ವದಿಸುತ್ತಿದ್ದನು. ಅನಂತರ ಅವರು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು.
21 : ಸರ್ವೇಶ್ವರನ ಅನುಗ್ರಹ ಹನ್ನಳಿಗೆ ಲಭಿಸಿತು. ಆಕೆಗೆ ಮೂರು ಗಂಡು, ಇಬ್ಬರು ಹೆಣ್ಣು ಮಕ್ಕಳಾದವು. ಬಾಲಕ ಸಮುವೇಲನು ಸರ್ವೇಶ್ವರನ ಸನ್ನಿಧಿಯಲ್ಲಿ ಬೆಳೆದು ದೊಡ್ಡವನಾದನು.
22 : ಈಗ ಏಲಿ ಬಹಳ ಮುದುಕನಾಗಿದ್ದ. ತನ್ನ ಮಕ್ಕಳು ಇಸ್ರಯೇಲ್ ಜನರಿಗೆ ಮಾಡುತ್ತಿದ್ದುದೆಲ್ಲಾ ಅವನ ಕಿವಿಗೆ ಬೀಳುತ್ತಿತ್ತು. ದೇವದರ್ಶನದ ಗುಡಾರದ ಬಾಗಿಲಿನಲ್ಲಿ ಕೆಲಸ ಮಾಡುತ್ತಿದ್ದ ಸ್ತ್ರೀಯರೊಡನೆ ಮಲಗುತ್ತಿದ್ದಾರೆಂಬುದನ್ನೂ ಕೇಳಿದ್ದ.
23 : ಆದುದರಿಂದ ಅವರಿಗೆ, “ಜನರೆಲ್ಲರು ನಿಮ್ಮ ದುಷ್ಕøತ್ಯಗಳ ಬಗ್ಗೆ ದೂರುವುದನ್ನು ಕೇಳಿದ್ದೇನೆ. ಹೀಗೇಕೆ ಮಾಡುತ್ತೀರಿ?
24 : ಮಕ್ಕಳೇ, ಹೀಗೆ ಮಾಡಬಾರದು. ನೀವು ಸರ್ವೇಶ್ವರನ ಜನರನ್ನು ದುರ್ಮಾರ್ಗಕ್ಕೆ ಎಳೆಯುತ್ತಿದ್ದೀರೆಂದು ಕೇಳಿದ್ದೇನೆ. ಇದು ಸರಿಯಲ್ಲ.
25 : ಮನುಷ್ಯನು ಮನುಷ್ಯನಿಗೆ ವಿರುದ್ಧ ಅಪರಾಧ ಮಾಡಿದರೆ ದೇವರು ಮಧ್ಯಸ್ಥಿಕೆಯನ್ನು ವಹಿಸುತ್ತಾರೆ. ಆದರೆ ಮನುಷ್ಯನು ಸರ್ವೇಶ್ವರನಿಗೆ ವಿರುದ್ಧ ಅಪರಾಧ ಮಾಡಿದರೆ ಮಧ್ಯಸ್ಥಿಕೆ ವಹಿಸುವವರಾರು?” ಎಂದು ಎಚ್ಚರಿಸಿದನು. ಆದರೂ ಅವರು ತಮ್ಮ ತಂದೆಯ ಮಾತಿಗೆ ಕಿವಿಗೊಡಲಿಲ್ಲ. ಎಂದೇ ಅವರನ್ನು ಕೊಲ್ಲಬೇಕೆಂಬುದು ಸರ್ವೇಶ್ವರನ ಚಿತ್ತವಾಗಿತ್ತು.
26 : ಬಾಲಕ ಸಮುವೇಲ ಈ ಮಧ್ಯೆ ಬೆಳೆಯುತ್ತಾ ಸರ್ವೇಶ್ವರನ ಹಾಗು ಮಾನವರ ಪ್ರೀತಿಗೆ ಪಾತ್ರನಾಗುತ್ತಿದ್ದನು.
27 : ಒಂದು ದಿನ ದೇವಭಕ್ತನೊಬ್ಬನು ಏಲಿಯ ಬಳಿಗೆ ಬಂದು, ಸರ್ವೇಶ್ವರನಿಂದ ಬಂದ ಈ ಸಮಾಚಾರವನ್ನು ತಿಳಿಸಿದನು: “ಇಸ್ರಯೇಲರು ಈಜಿಪ್ಟಿನಲ್ಲಿ ಫರೋಹನ ದಾಸತ್ವದಲ್ಲಿದ್ದಾಗ ನಾನು ನಿನ್ನ ಗೋತ್ರದವರಿಗೆ ಪ್ರತ್ಯಕ್ಷನಾದೆ;
28 : ಇಸ್ರಯೇಲರ ಕುಟುಂಬಗಳಲ್ಲೆಲ್ಲಾ ಅವರನ್ನೇ ಯಾಜಕ ಸೇವಾವೃತ್ತಿಗೆ ಆರಿಸಿಕೊಂಡೆ: ಅಂದರೆ, ಬಲಿಯರ್ಪಿಸುವುದಕ್ಕೆ, ಧೂಪಾರತಿ ಎತ್ತುವುದಕ್ಕೆ ಹಾಗು ‘ಏಫೋದ’ನ್ನು ಧರಿಸಿಕೊಳ್ಳುವುದಕ್ಕೆ ಆರಿಸಿಕೊಂಡೆ; ಇಸ್ರಯೇಲರು ಅರ್ಪಿಸುವ ಬಲಿಶೇಷದ ಹಕ್ಕನ್ನೂ ಅವರಿಗೆ ಅನುಗ್ರಹಿಸಿದೆ.
29 : ಆದರೆ ನನ್ನ ಪ್ರಜೆ ಇಸ್ರಯೇಲರು ನನ್ನ ಆಜ್ಞಾನುಸಾರ ನನ್ನ ಮಂದಿರಕ್ಕೆ ತರುವ ಬಲಿದಾನಗಳ ಹಾಗು ನೈವೇದ್ಯಗಳ ಘನತೆಯನ್ನು ನೀವು ಭಂಗಪಡಿಸಿದ್ದೀರಿ. ಅವುಗಳ ಶ್ರೇಷ್ಠಭಾಗಗಳಿಂದ ನಿಮ್ಮನ್ನೇ ಕೊಬ್ಬಿಸಿಕೊಳ್ಳುತ್ತಿದ್ದೀರಿ; ಏಕೆ? ನೀನು ನನ್ನನ್ನು ಗೌರವಿಸುವುದಕ್ಕಿಂತ ಹೆಚ್ಚಾಗಿ ನಿನ್ನ ಮಕ್ಕಳನ್ನೇ ಗೌರವಿಸುವುದು ಸರಿಯೇ?
30 : ನಿನ್ನ ಗೋತ್ರದವರೂ ಸಂತಾನದವರೂ ನನ್ನ ಸನ್ನಿಧಿಯಲ್ಲಿ ಸೇವೆ ಮಾಡಬಹುದು ಎಂದು ಆಜ್ಞಾಪಿಸಿದ ಇಸ್ರಯೇಲರ ದೇವರಾದ ಸರ್ವೇಶ್ವರನೆಂಬ ನಾನು ಈಗ ತಿಳಿಸುವುದನ್ನು ಕೇಳು: ಇನ್ನು ಇದೆಲ್ಲ ನನ್ನಿಂದ ದೂರ ತೊಲಗಲಿ; ನನ್ನನ್ನು ಸನ್ಮಾನಿಸುವವನನ್ನು ನಾನು ಸನ್ಮಾನಿಸುವೆನು; ನನ್ನನ್ನು ಉಪೇಕ್ಷಿಸುವವನನ್ನು ನಾನು ತಿರಸ್ಕರಿಸುವೆನು.
31 : ನಿನ್ನ ಮತ್ತು ನಿನ್ನ ಮನೆಯವರ ಭುಜಬಲವನ್ನು ಮುರಿಯುವ ದಿನಗಳು ಬರಲಿವೆ. ನಿನ್ನ ಮನೆಯಲ್ಲಿ ಯಾರೂ ಪೂರ್ಣಾಯುಷ್ಯವನ್ನು ಮುಟ್ಟುವುದಿಲ್ಲ.
32 : ನಿನ್ನ ವೈರಿಯೇ ನನ್ನ ಮಂದಿರದಲ್ಲಿ ಸೇವೆಮಾಡುವುದನ್ನು ನೀನು ನೋಡುವೆ. ಇಸ್ರಯೇಲರಿಗೆ ಸರ್ವಶುಭವನ್ನು ದಯಪಾಲಿಸುವೆನು; ಆದರೆ ನಿನ್ನ ಮನೆಯಲ್ಲಿ ಯಾರೂ ಪೂರ್ಣಾಯುಷ್ಯವನ್ನು ಮುಟ್ಟುವುದೇ ಇಲ್ಲ.
33 : ನನ್ನ ಸಾನ್ನಿಧ್ಯಸೇವೆಯಿಂದ ನಿಮ್ಮಲ್ಲಿ ಒಬ್ಬನನ್ನು ಉಳಿಸಿ ಮಿಕ್ಕವರನ್ನು ತೆಗೆದುಹಾಕುವೆನು. ಉಳಿಸಲಾದವನು ಕೂಡ ಕುರುಡನಾಗಿ ನಿನ್ನ ವ್ಯಥೆಗೆ ಕಾರಣನಾಗುವನು. ನಿನ್ನ ಸಂತಾನದವರೆಲ್ಲರು ಕತ್ತಿಯಿಂದ ಸಾಯುವರು.
34 : ಇದೆಲ್ಲಾ ನೆರವೇರುವುದು ಎಂಬುದಕ್ಕೆ ಗುರುತಾಗಿ ನಿನ್ನ ಮಕ್ಕಳಾದ ಹೊಪ್ನಿ ಹಾಗು ಫೀನೆಹಾಸ್ ಒಂದೇ ದಿನದಲ್ಲಿ ಸಾಯುವರು.
35 : ನನ್ನ ಹೃನ್ಮನಗಳಿಗೆ ಸರಿಯಾದುದನ್ನೇ ಮಾಡುವ ಒಬ್ಬ ಶ್ರದ್ಧೆಯುಳ್ಳ ಯಾಜಕನನ್ನು ಎಬ್ಬಿಸುವೆನು. ಅವನಿಗೆ ಶಾಶ್ವತ ಗೃಹವನ್ನು ಅನುಗ್ರಹಿಸುವೆನು. ಅವನು ನನ್ನ ಅಭಿಷಿಕ್ತನ ಬಳಿಯಲ್ಲಿ ಸದಾಕಾಲ ಸೇವೆಮಾಡುವನು.
36 : ನಿನ್ನ ಮನೆಯಲ್ಲಿ ಅಳಿದು ಉಳಿದವರು ಬಂದು ಅವನ ಮುಂದೆ ಅಡ್ಡ ಬೀಳುವರು; ‘ನಮಗೊಂದು ಬೆಳ್ಳಿಕಾಸನ್ನಾದರೂ ರೊಟ್ಟಿ ಚೂರನ್ನಾದರೂ ಕೊಡು; ಒಂದು ತುತ್ತು ಅನ್ನಕ್ಕೆ ಮಾರ್ಗವಾಗುವ ಹಾಗೆ ದೇವಸ್ಥಾನದ ಸೇವೆಯಲ್ಲಿ ಯಾವುದಕ್ಕಾದರು ನಮ್ಮನ್ನು ಸೇರಿಸಿಕೋ’ ಎಂದು ಬೇಡಿಕೊಳ್ಳುವರು”.