1 : ದಾವೀದನ ಮತ್ತು ಸೌಲನ ಸಂಭಾಷಣೆ ಮುಗಿಯಿತು. ಇದಾದ ಕೂಡಲೆ ಯೋನಾತಾನನು ಹಾಗು ದಾವೀದನು ಪ್ರಾಣ ಗೆಳೆಯರಾದರು. ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸತೊಡಗಿದನು.
2 : ಅಂದಿನಿಂದ ಸೌಲನು ದಾವೀದನನ್ನು ಅವನ ತಂದೆಯ ಮನೆಗೂ ಹೋಗಗೊಡದೆ ತನ್ನ ಬಳಿಯಲ್ಲೇ ಇಟ್ಟುಕೊಂಡನು.
3 : ಯೋನಾತಾನನು ದಾವೀದನನ್ನು ತನ್ನ ಪ್ರಾಣಸ್ನೇಹಿತನನ್ನಾಗಿ ಪ್ರೀತಿಸುತ್ತಿದ್ದುದರಿಂದ ಅವನೊಂದಿಗೆ ಒಂದು ಒಪ್ಪಂದಮಾಡಿಕೊಂಡನು.
4 : ಇದಲ್ಲದೆ ತನ್ನ ಮೈಮೇಲಿದ್ದ ನಿಲುವಂಗಿಯನ್ನು, ಯುದ್ಧವಸ್ತ್ರಗಳನ್ನು ಹಾಗು ಕತ್ತಿ, ಬಿಲ್ಲು, ನಡುಕಟ್ಟುಗಳನ್ನು ತೆಗೆದು ದಾವೀದನಿಗೆ ಕೊಟ್ಟನು.
5 : ದಾವೀದನಾದರೋ ಸೌಲನು ಎಲ್ಲಿಗೆ ಕಳುಹಿಸಿದರೂ ಅಲ್ಲಿಗೆ ಹೋಗಿ ಎಲ್ಲವನ್ನು ವಿವೇಕದಿಂದ ಮಾಡಿ ಯಶಸ್ಸು ಪಡೆಯುತ್ತಿದ್ದನು. ಆದ್ದರಿಂದ ಸೌಲನು ಅವನನ್ನು ಸೇನಾಪತಿಯನ್ನಾಗಿ ನೇಮಿಸಿದನು. ಇದರಿಂದ ಎಲ್ಲ ಅಧಿಕಾರಿಗಳಿಗೂ ಜನ ಸಾಮಾನ್ಯರಿಗೂ ಸಂತೋಷವಾಯಿತು.
6 : ದಾವೀದನು ಫಿಲಿಷ್ಟಿಯರನ್ನು ಸಂಹರಿಸಿ ಸರ್ವಸೈನಿಕರೊಡನೆ ಹಿಂದಿರುಗಿ ಬರುವಾಗ ಇಸ್ರಯೇಲರ ಎಲ್ಲ ಪಟ್ಟಣಗಳಿಂದ ಮಹಿಳೆಯರು ಹೊರಗೆ ಬಂದು, ತಾಳ ತಮ್ಮಟೆಗಳನ್ನು ಹಿಡಿದು, ಸಂತೋಷದಿಂದ ಹಾಡುತ್ತಾ ಕುಣಿಯುತ್ತಾ, ಅರಸ ಸೌಲನನ್ನು ಎದುರುಗೊಂಡರು.
7 : ಅವರು:
“ಸೌಲ ಕೊಂದನು ಸಾವಿರಗಟ್ಟಳೆ
ದಾವೀದನೋ ಕೊಂದನು
ಹತ್ತು ಸಾವಿರಗಟ್ಟಳೆ,”
ಎಂದು ಪರಸ್ಪರ ಹಾಡಿದರು.
8 : ಈ ಮಾತುಗಳು ಸೌಲನಿಗೆ ಹಿಡಿಸಲಿಲ್ಲ. ಅವನು ಕೋಪದಿಂದ, “ದಾವೀದನು ಹತ್ತು ಸಾವಿರಗಟ್ಟಳೆ ಕೊಂದನೆಂದೂ ನಾನು ಸಾವಿರಗಟ್ಟಳೆ ಮಾತ್ರ ಕೊಂದೆನೆಂದು ಹಾಡುತ್ತಾರಲ್ಲಾ! ಹಾಗಾದರೆ ಅವನನ್ನು ರಾಜನನ್ನಾಗಿ ಮಾಡುವುದೊಂದೇ ಕಡಿಮೆ!” ಎಂದುಕೊಂಡನು.
9 : ಅಂದಿನಿಂದ ಸೌಲನು ದಾವೀದನ ಮೇಲೆ ಕಣ್ಣಿಟ್ಟನು.
10 : ಮಾರನೆಯ ದಿನ ದೇವರಿಂದ ಬಂದ ದುರಾತ್ಮವೊಂದು ಸೌಲನನ್ನು ಆವರಿಸಿತು. ಅವನು ಬುದ್ಧಿಗೆಟ್ಟು ಮನೆಯೊಳಗೇ ಕೂಗಾಡತೊಡಗಿದನು. ಅವನ ಕೈಯಲ್ಲಿ ಒಂದು ಈಟಿ ಇತ್ತು. ವಾಡಿಕೆಯ ಪ್ರಕಾರ ದಾವೀದನು ಕಿನ್ನರಿ ಬಾರಿಸುತ್ತಾ ಇದ್ದನು.
11 : ಆಗ ಸೌಲನು, “ಗೋಡೆಗೆ ಕಚ್ಚಿಕೊಳ್ಳುವಂತೆ ಈ ದಾವೀದನನ್ನು ತಿವಿಯುವೆನು,” ಎಂದುಕೊಂಡು ಅವನತ್ತ ಈಟಿಯನ್ನು ಎರಡುಸಾರಿ ಎಸೆದನು. ಎರಡುಸಾರಿಯೂ ದಾವೀದನು ತಪ್ಪಿಸಿಕೊಂಡನು.
12 : ಸರ್ವೇಶ್ವರ ಸೌಲನನ್ನು ತ್ಯಜಿಸಿ ದಾವೀದನೊಂದಿಗೆ ಇದ್ದರು. ಈ ಕಾರಣಕ್ಕಾಗಿ ಸೌಲನು ದಾವೀದನಿಗೆ ಭಯಪಟ್ಟನು.
13 : ಅವನನ್ನು ತನ್ನ ಸಾನ್ನಿಧ್ಯ ಸೇವೆಯಿಂದ ತೆಗೆದು ಸೈನ್ಯದ ಒಬ್ಬ ಸಹಸ್ರಾಧಿಪತಿಯನ್ನಾಗಿ ನೇಮಿಸಿದನು. ದಾವೀದನು ದಳಪತಿಯಾಗಿ ಯುದ್ಧಕ್ಕೆ ಹೋಗುತ್ತಾ ಬರುತ್ತಾ ಇದ್ದನು.
14 : ಸರ್ವೇಶ್ವರ ಅವನೊಂದಿಗೆ ಇದ್ದುದರಿಂದ ಅವನು ಎಲ್ಲ ಕಾರ್ಯಗಳಲ್ಲಿ ವಿವೇಕದಿಂದ ವರ್ತಿಸಿ ಜಯಶಾಲಿಯಾಗುತ್ತಿದ್ದನು.
15 : ಇದರಿಂದಾಗಿ ಸೌಲನಿಗೆ ಮತ್ತಷ್ಟು ಹೆದರಿಕೆಯುಂಟಾಯಿತು.
16 : ಆದರೆ ಇಸ್ರಯೇಲರಿಗೆ ಹಾಗು ಯೆಹೂದ್ಯರಿಗೆ ದಾವೀದನ ಮೇಲೆ ಮಿಗಿಲಾದ ಪ್ರೀತಿ. ಏಕೆಂದರೆ ಅವನು ತಮ್ಮ ಸಂಗಡವೇ ಬಂದು ಮುಂದಾಳತ್ವ ವಹಿಸುತ್ತಿದ್ದನು.
17 : ಒಂದು ದಿನ ಸೌಲನು, “ಇವನು ನನ್ನ ಕೈಯಿಂದ ಸಾಯಬಾರದು; ಫಿಲಿಷ್ಟಿಯರ ಕೈಯಿಂದಲೇ ಸಾಯಲಿ,” ಎಂದು ಒಂದು ಉಪಾಯ ಹೂಡಿದನು. ದಾವೀದನಿಗೆ, “ನೀನು ನನ್ನ ವೀರನಾಗಿ ಹೋಗಿ ಸರ್ವೇಶ್ವರನ ಯುದ್ಧಗಳನ್ನು ನಡೆಸು; ನಾನು ನನ್ನ ಹಿರಿಯ ಮಗಳಾದ ಮೇರಬಳನ್ನು ನಿನಗೆ ಮದುವೆಮಾಡಿಕೊಡುತ್ತೇನೆ,” ಎಂದನು.
18 : ಅದಕ್ಕೆ ದಾವೀದನು, “ಅರಸರ ಅಳಿಯನಾಗಲು ನಾನು ಎಷ್ಟರವನು? ಇಸ್ರಯೇಲರಲ್ಲಿ ನನ್ನ ಕುಲವಾಗಲಿ, ಕುಟುಂಬವಾಗಲಿ ಎಷ್ಟರದು?” ಎಂದನು.
19 : ಮದುವೆ ಮಾಡಿಕೊಡುವ ಸಮಯ ಬಂದಾಗ ಸೌಲನು ತನ್ನ ಮಗಳು ಮೇರಬಳನ್ನು ದಾವೀದನಿಗೆ ಬದಲಾಗಿ, ಮೆಹೋಲದ ಅದ್ರಿಯೇಲ್ ಎಂಬವನಿಗೆ ಕೊಟ್ಟು ಮದುವೆ ಮಾಡಿದನು.
20 : ಇತ್ತ ಸೌಲನ ಮಗಳಾದ ವಿೂಕಲಳು ದಾವೀದನನ್ನು ಪ್ರೀತಿಸತೊಡಗಿದಳು. ಈ ವಿಷಯ ಸೌಲನಿಗೆ ತಿಳಿದು ಬಂದಾಗ ಅವನಿಗೆ ಸಂತೋಷ ಆಯಿತು.
21 : “ಇವಳನ್ನು ಅವನಿಗೆ ಕೊಡುತ್ತೇನೆ. ಈಕೆ ಅವನಿಗೆ ಉರುಲಾಗಿರಬಲ್ಲಳು; ಫಿಲಿಷ್ಟಿಯರ ಕೈಗೆ ಇವನು ಸಿಕ್ಕಿಬೀಳುವಂತೆ ಮಾಡಬಲ್ಲಳು,” ಎಂದುಕೊಂಡನು. ದಾವೀದನಿಗೆ, “ನೀನು ನನ್ನ ಅಳಿಯನಾಗಲು ಎರಡನೇ ಸಂದರ್ಭ ಬಂದೊದಗಿದೆ,” ಎಂದು ಹೇಳಿದನು.
22 : ಅಲ್ಲದೆ ತನ್ನ ಸೈನಿಕರಿಗೆ, “ನೀವು ದಾವೀದನಿಗೆ, ‘ಅರಸರು ನಿಮ್ಮನ್ನು ಮೆಚ್ಚಿಕೊಂಡಿದ್ದಾರೆ; ಅವರ ಎಲ್ಲ ಸೇವಕರಿಗೂ ನಿಮ್ಮ ಮೇಲೆ ಪ್ರೀತಿಯಿದೆ; ನೀವು ಅರಸರ ಅಳಿಯರಾಗಲೇಬೇಕು,’ ಎಂದು ಪುಸಲಾಯಿಸಿರಿ,” ಎಂದು ಗುಟ್ಟಾಗಿ ತಿಳಿಸಿದನು.
23 : ಅಂತೆಯೇ ಆ ಸೇವಕರು ದಾವೀದನಿಗೆ ತಿಳಿಯಪಡಿಸಿದರು. ಅದಕ್ಕೆ ದಾವೀದನು, “ಅರಸರ ಅಳಿಯನಾಗುವುದು ಅಷ್ಟು ಸಾಧಾರಣ ಸಂಗತಿ ಎಂದು ನೆನೆಸುತ್ತೀರೋ? ನಾನೊಬ್ಬ ಬಡವ, ದೀನದಲಿತ,” ಎಂದುಬಿಟ್ಟನು.
24 : ದಾವೀದನ ಪ್ರತಿಕ್ರಿಯೆಯನ್ನು ಸೇವಕರು ಸೌಲನಿಗೆ ತಿಳಿಸಿದರು.
25 : ಆಗ ಅವನು, “ನೀವು ಹೋಗಿ ದಾವೀದನಿಗೆ ‘ಅರಸರು ಯಾವ ದಕ್ಷಿಣೆಯನ್ನೂ ಬಯಸುವುದಿಲ್ಲ; ಆದರೆ ಅವರ ಶತ್ರುಗಳಿಗೆ ಮುಯ್ಯಿತೀರಿಸಿ ಅವರಲ್ಲಿನ ನೂರುಮಂದಿಯ ಮುಂದೊಗಲನ್ನು ತಂದುಕೊಟ್ಟರೆ ಸಾಕೆನ್ನುತ್ತಾರೆ’ ಎಂದು ತಿಳಿಸಿರಿ”, ಎಂದು ಆಜ್ಞಾಪಿಸಿದನು. (ದಾವೀದನನ್ನು ಫಿಲಿಷ್ಟಿಯರ ಕೈಯಿಂದಲೇ ಕೊಲ್ಲಿಸಬೇಕೆಂಬುದು ಅವನ ಉದ್ದೇಶವಾಗಿತ್ತು.)
26 : ಸೇವಕರು ದಾವೀದನಿಗೆ ಹಾಗೆಯೇ ತಿಳಿಸಿದಾಗ ಅರಸನ ಅಳಿಯನಾಗಲು ಅವನು ಸಮ್ಮತಿಸಿದನು.
27 : ನೇಮಕವಾದ ದಿನಗಳು ಮುಗಿಯುವ ಮೊದಲೇ ತನ್ನ ಸೈನಿಕರೊಡನೆ ಹೊರಟು ಫಿಲಿಷ್ಟಿಯರ ದೇಶಕ್ಕೆ ಹೋಗಿ, ಅಲ್ಲಿನ ಇನ್ನೂರು ಮಂದಿಯನ್ನು ಕೊಂದು, ಮುಂದೊಗಲುಗಳನ್ನು ತಂದು ಅರಸನ ಅಳಿಯನಾಗಲು ಬೇಕಾಗಿದ್ದ ಲೆಕ್ಕಾಚಾರವನ್ನು ಪೂರ್ತಿ ಆಗಿ ಒಪ್ಪಿಸಿದನು. ಆಗ ಸೌಲನು ತನ್ನ ಮಗಳು ವಿೂಕಲಳನ್ನು ದಾವೀದನಿಗೆ ಮದುವೆಮಾಡಿ ಕೊಟ್ಟನು.
28 : ಸರ್ವೇಶ್ವರ ದಾವೀದನೊಂದಿಗಿದ್ದಾರೆಂದು ಸೌಲನಿಗೆ ಮನದಟ್ಟಾಯಿತು. ತನ್ನ ಮಗಳು ಅವನನ್ನು ಬಹಳವಾಗಿ ಪ್ರೀತಿಸುತ್ತಾಳೆಂದು ಸಹ ಗೊತ್ತಾಯಿತು.
29 : ಈ ಕಾರಣ ಅವನ ಭಯ ಮತ್ತಷ್ಟೂ ಅಧಿಕವಾಯಿತು; ದಾವೀದನನ್ನು ತನ್ನ ಜೀವಮಾನ ಪರಿಯಂತ ವೈರಿಯೆಂದು ಭಾವಿಸ ತೊಡಗಿದನು.
30 : ಫಿಲಿಷ್ಟಿಯ ರಾಜರು ಯುದ್ಧಕ್ಕೆ ಬಂದಾಗಲೆಲ್ಲ ಸೌಲನ ಸೇನಾಪತಿಗಳಲ್ಲಿ ದಾವೀದನೇ ಅತ್ಯಧಿಕ ಜಯಶೀಲನಾಗಿ ಹಿಂದಿರುಗುತ್ತಿದ್ದನು. ಈ ಕಾರಣ ಅವನ ಹೆಸರು ಸುಪ್ರಸಿದ್ಧವಾಯಿತು.