Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಸಮು


1 : ಸರ್ವೇಶ್ವರಸ್ವಾಮಿ ಸಮುವೇಲನಿಗೆ, “ನಾನು ಸೌಲನನ್ನು ಇಸ್ರಯೇಲರ ಅರಸನಾಗಿರುವುದಕ್ಕೆ ಅಯೋಗ್ಯನೆಂದು ತಳ್ಳಿಬಿಟ್ಟೆನಲ್ಲವೆ? ನೀನು ಅವನಿಗಾಗಿ ಎಷ್ಟರವರೆಗೆ ದುಃಖಿಸುತ್ತಿರುವೆ? ಕೊಂಬನ್ನು ಎಣ್ಣೆಯಿಂದ ತುಂಬಿಸಿಕೊಂಡು ಬಾ; ನಾನು ನಿನ್ನನ್ನು ಬೆತ್ಲೆಹೇಮಿನವನಾದ ಜೆಸ್ಸೆಯನ ಬಳಿಗೆ ಕಳುಹಿಸುತ್ತೇನೆ. ಅವನ ಮಕ್ಕಳಲ್ಲೊಬ್ಬನನ್ನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ,” ಎಂದು ಹೇಳಿದರು.
2 : ಅದಕ್ಕೆ ಸಮುವೇಲನು, “ನಾನು ಹೋಗುವುದು ಹೇಗೆ? ಇದು ಸೌಲನಿಗೆ ಗೊತ್ತಾದರೆ ಅವನು ನನ್ನನ್ನು ಕೊಂದುಹಾಕುವನಲ್ಲವೇ?” ಎಂದನು. ಆಗ ಸರ್ವೇಶ್ವರ, “ನೀನು ಒಂದು ಕಡಸನ್ನು ತೆಗೆದುಕೊಂಡು ಹೋಗು. ಸರ್ವೇಶ್ವರನಿಗೆ ಬಲಿಯರ್ಪಣೆ ಮಾಡಲು ಬಂದಿದ್ದೇನೆ ಎಂದು ಹೇಳಿ ಜೆಸ್ಸೆಯನನ್ನು ಅದಕ್ಕೆ ಆಮಂತ್ರಿಸು.
3 : ಆಮೇಲೆ ನೀನು ಮಾಡಬೇಕಾದುದನ್ನು ನಾನೇ ತಿಳಿಸುತ್ತೇನೆ; ನಾನು ಯಾರನ್ನು ತೋರಿಸುತ್ತೇನೋ ಅವನನ್ನೇ ನೀನು ಅಭಿಷೇಕಿಸಬೇಕು,” ಎಂದರು.
4 : ಸರ್ವೇಶ್ವರ ಹೇಳಿದಂತೆಯೇ ಸಮುವೇಲನು ಬೆತ್ಲೆಹೇಮಿಗೆ ಹೋದನು. ಆ ಊರಿನ ಹಿರಿಯರು ನಡುನಡುಗುತ್ತಾ ಬಂದು, ಅವನನ್ನು ಎದುರುಗೊಂಡು, “ನಿನ್ನ ಆಗಮನ ನಮಗೆ ಶುಭಕರವಾಗಿದೆಯೇ?” ಎಂದು ಕೇಳಿದರು. ಅವನು,
5 : “ಹೌದು ಶುಭಕರವಾಗಿದೆ; ಸರ್ವೇಶ್ವರನಿಗೆ ಬಲಿಯನ್ನರ್ಪಿಸುವುದಕ್ಕೆ ಬಂದಿದ್ದೇನೆ. ನೀವು ಶುದ್ಧರಾಗಿ ನನ್ನ ಜೊತೆಯಲ್ಲಿ ಬಲಿಯರ್ಪಣೆಗೆ ಬನ್ನಿ,” ಎಂದು ಹೇಳಿ ಜೆಸ್ಸೆಯನನ್ನೂ ಅವನ ಮಕಳನ್ನೂ ಶುದ್ಧೀಕರಿಸಿ ಅವರನ್ನೂ ಬಲಿಯರ್ಪಣೆಗೆ ಆಮಂತ್ರಿಸಿದನು. ಅವರು ಬಂದರು.
6 : ಸಮುವೇಲನು ಎಲೀಯಾಬನನ್ನು ನೋಡಿ ತನ್ನಷ್ಟಕ್ಕೆ, “ನಿಶ್ಚಯವಾಗಿ ಸರ್ವೇಶ್ವರ ಅಭಿಷೇಕಕ್ಕೆ ಆರಿಸಿಕೊಂಡವನು ನನ್ನ ಮುಂದೆಯೇ ಇದ್ದಾನೆ,” ಎಂದುಕೊಂಡನು.
7 : ಆದರೆ ಸರ್ವೇಶ್ವರಸ್ವಾಮಿ ಸಮುವೇಲನಿಗೆ, “ನೀನು ಅವನ ಚೆಲುವಿಕೆಯನ್ನಾಗಲಿ ಎತ್ತರವನ್ನಾಗಲಿ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಸರ್ವೇಶ್ವರ ಮನುಷ್ಯರಂತೆ ಬಹಿರಂಗದ ತೋರಿಕೆಯನ್ನು ನೋಡುವುದಿಲ್ಲ; ಅಂತರಂಗವನ್ನೇ ವೀಕ್ಷಿಸುತ್ತಾನೆ,” ಎಂದರು.
8 : ಜೆಸ್ಸೆಯನು ಅಬೀನಾದಾಬನನ್ನು ಸಮುವೇಲನ ಬಳಿಗೆ ಬರಮಾಡಲು ಸಮುವೇಲನು, “ಸರ್ವೇಶ್ವರ ಇವನನ್ನೂ ಆರಿಸಿಕೊಳ್ಳಲಿಲ್ಲ,” ಎಂದು ಹೇಳಿದನು.
9 : ತರುವಾಯ ಜೆಸ್ಸೆಯನು ಶಮ್ಮ ಎಂಬವನನ್ನು ಬರಮಾಡಲು ಸಮುವೇಲನು, “ಸರ್ವೇಶ್ವರ ಇವನನ್ನೂ ಆರಿಸಿಕೊಳ್ಳಲಿಲ್ಲ,” ಎಂದು ಹೇಳಿದನು.
10 : ಹೀಗೆ ಜೆಸ್ಸೆಯನು ತನ್ನ ಮಕ್ಕಳಲ್ಲಿ ಏಳು ಮಂದಿಯನ್ನೂ ಅವನ ಬಳಿಗೆ ಬರಮಾಡಿದರೂ ಅವನು, “ಸರ್ವೇಶ್ವರ ಇವರನ್ನು ಆರಿಸಿಕೊಳ್ಳಲಿಲ್ಲ,” ಎಂದು ನುಡಿದನು.
11 : ಅನಂತರ ಸಮುವೇಲನು ಜೆಸ್ಸೆಯನನ್ನು, “ನಿನ್ನ ಮಕ್ಕಳೆಲ್ಲಾ ಇಷ್ಟೇ ಮಂದಿಯೋ?” ಎಂದು ಕೇಳಿದನು. ಅವನು, “ಇವರೆಲ್ಲರಿಗಿಂತಲೂ ಚಿಕ್ಕವನು ಒಬ್ಬನಿದ್ದಾನೆ; ಅವನು ಕುರಿಮೇಯಿಸುವುದಕ್ಕೆ ಹೋಗಿದ್ದಾನೆ,” ಎಂದು ಉತ್ತರಕೊಟ್ಟನು. ಆಗ ಸಮುವೇಲನು, “ಅವನನ್ನು ಇಲ್ಲಿಗೆ ಬರಮಾಡು; ಅವನು ಬರುವವರೆಗೂ ನಾವು ಊಟಕ್ಕೆ ಕುಳಿತುಕೊಳ್ಳಬಾರದು,” ಎಂದು ಹೇಳಿದನು. ಜೆಸ್ಸೆಯನು ಅವನನ್ನು ಕರೆದುತರಿಸಿದನು.
12 : ಅವನು ಕೆಂಬಣ್ಣದವನು, ಸುಂದರನೇತ್ರನು, ಹಾಗು ನೋಟಕ್ಕೆ ರಮಣೀಯನು. ಸರ್ವೇಶ್ವರ ಸಮುವೇಲನಿಗೆ, “ಎದ್ದು ಇವನನ್ನು ಅಭಿಷೇಕಿಸು; ನಾನು ಆರಿಸಿಕೊಂಡವನು ಇವನೇ,” ಎಂದು ಆಜ್ಞಾಪಿಸಿದರು.
13 : ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕಿಸಿದನು. ಕೂಡಲೆ ಸರ್ವೇಶ್ವರನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು. ಅನಂತರ ಸಮುವೇಲನು ರಾಮಾಕ್ಕೆ ಹೊರಟು ಹೋದನು.
14 : ಸರ್ವೇಶ್ವರನ ಆತ್ಮ ಸೌಲನನ್ನು ಬಿಟ್ಟು ಹೋಯಿತು. ಅವರಿಂದ ಬಂದ ದುರಾತ್ಮವೊಂದು ಅವನನ್ನು ಪೀಡಿಸುತ್ತಿತ್ತು.
15 : ಆದ್ದರಿಂದ ಅವನ ಸೇವಕರು ಅವನಿಗೆ, “ಇಗೋ, ದೇವರಿಂದ ಬಂದ ದುರಾತ್ಮ ನಿಮ್ಮನ್ನು ಪೀಡಿಸುತ್ತಾ ಇದೆ.
16 : ಒಡೆಯಾ, ಅಪ್ಪಣೆಯಾಗಲಿ, ನಿಮ್ಮ ಸನ್ನಿಧಿಯಲ್ಲಿ ನಿಂತಿರುವ ನಿಮ್ಮ ಸೇವಕರಾದ ನಾವು ಹೋಗಿ ಕಿನ್ನರಿ ಬಾರಿಸುವವರಲ್ಲಿ ನಿಪುಣನಾದ ಒಬ್ಬನನ್ನು ಹುಡುಕಿ ತರುತ್ತೇವೆ. ಸರ್ವೇಶ್ವರನಿಂದ ಕಳುಹಿಸಲಾದ ದುರಾತ್ಮ ನಿಮ್ಮ ಮೇಲೆ ಬರುವಾಗ ಅವನು ಕಿನ್ನರಿ ಬಾರಿಸಿದರೆ ನಿಮಗೆ ಉಪಶಮನ ಆಗುವುದು,” ಎಂದು ಹೇಳಿದರು.
17 : ಸೌಲನು ಅವರಿಗೆ, “ಚೆನ್ನಾಗಿ ಬಾರಿಸಬಲ್ಲವನಾದ ಒಬ್ಬನನ್ನು ನನಗಾಗಿ ಹುಡುಕಿ ಕರೆದುಕೊಂಡು ಬನ್ನಿ”, ಎಂದು ಆಜ್ಞಾಪಿಸಿದನು.
18 : ಸೇವಕರಲ್ಲೊಬ್ಬನು ಅವನಿಗೆ, “ಬೆತ್ಲೆಹೇಮಿನವನಾದ ಜೆಸ್ಸೆಯನ ಮಗನನ್ನು ನೋಡಿದ್ದೇನೆ; ಅವನು ಚೆನ್ನಾಗಿ ಬಾರಿಸಬಲ್ಲನು. ಅವನು ಪರಾಕ್ರಮಶಾಲಿ, ರಣಶೂರ, ವಾಕ್ಚತುರ, ಸುಂದರ ಹಾಗು ಸರ್ವೇಶ್ವರನ ಅನುಗ್ರಹ ಹೊಂದಿದವ,” ಎಂದು ತಿಳಿಸಿದನು.
19 : ಕೂಡಲೆ ಸೌಲನು ಜೆಸ್ಸೆಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ಕುರಿಮೇಯಿಸುತ್ತಿರುವ ನಿನ್ನ ಮಗ ದಾವೀದನನ್ನು ನನ್ನ ಬಳಿಗೆ ಕಳುಹಿಸು,” ಎಂದು ಹೇಳಿಸಿದನು.
20 : ಜೆಸ್ಸೆಯನು ರೊಟ್ಟಿಯನ್ನು, ಒಂದು ಬುದ್ದಲಿ ದ್ರಾಕ್ಷಾರಸವನ್ನು ಹಾಗು ಒಂದು ಹೋತಮರಿಯನ್ನು ಕತ್ತೆಯ ಮೇಲೆ ಹೇರಿಸಿ, ತನ್ನ ಮಗ ದಾವೀದನ ಮುಖಾಂತರ ಸೌಲನಿಗೆ ಕಳುಹಿಸಿದನು.
21 : ಹೀಗೆ ದಾವೀದನು ಸೌಲನ ಬಳಿಗೆ ಬಂದು ಅವನ ಸೇವಕನಾದನು. ಸೌಲನು ಅವನನ್ನು ಬಹಳವಾಗಿ ಪ್ರೀತಿಸಿದನು, ತನ್ನ ಆಯುಧಗಳನ್ನು ಹೊರುವುದಕ್ಕೆ ನೇಮಿಸಿಕೊಂಡನು.
22 : ತರುವಾಯ ಸೌಲನು ಜೆಸ್ಸೆಯನ ಬಳಿಗೆ ದೂತರನ್ನು ಅಟ್ಟಿ, ಅವನಿಗೆ, “ನಾನು ದಾವೀದನನ್ನು ಮೆಚ್ಚಿದ್ದೇನೆ; ಅವನು ನನ್ನ ಸನ್ನಿಧಿಯಲ್ಲೇ ಸೇವೆಮಾಡಲಿ,” ಎಂದು ತಿಳಿಸಿದನು.
23 : ದೇವರಿಂದ ಕಳುಹಿಸಲಾಗಿದ್ದ ದುರಾತ್ಮ ಸೌಲನ ಮೇಲೆ ಬಂದಾಗ ದಾವೀದನು ಕಿನ್ನರಿಯನ್ನು ಬಾರಿಸುತ್ತಿದ್ದನು. ಆಗ ಆ ದುರಾತ್ಮ ಸೌಲನನ್ನು ಬಿಟ್ಟುಹೋಗುತ್ತಿತ್ತು. ಅವನು ಉಪಶಮನಹೊಂದಿ ಚೆನ್ನಾಗಿರುತ್ತಿದ್ದನು.

· © 2017 kannadacatholicbible.org Privacy Policy