Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಸಮು


1 : ಸೌಲನು ಅರಸನಾದಾಗ ಅವನಿಗೆ ಮೂವತ್ತು ವರ್ಷ. ಅವನು ಇಸ್ರಯೇಲರನ್ನು ನಾಲ್ವತ್ತೆರಡು ವರ್ಷ ಆಳಿದನು.
2 : ಅವನು ಅವರಲ್ಲಿ ಮೂರು ಸಾವಿರ ಜನರನ್ನು ಮಿಕ್ಮಾಷಿನಲ್ಲೂ ಬೇತೇಲಿನ ಗುಡ್ಡದಲ್ಲೂ ಇಟ್ಟುಕೊಂಡನು. ಉಳಿದ ಸಾವಿರ ಜನರನ್ನು ಬೆನ್ಯಾವಿೂನ್ಯರ ಗೆಬೆಯದಲ್ಲಿದ್ದ ಯೋನಾತಾನನ ವಶಕ್ಕೆ ಕೊಟ್ಟನು. ಬೇರೆ ಇಸ್ರಯೇಲರನ್ನು ಅವರವರ ಮನೆಗಳಿಗೆ ಕಳುಹಿಸಿದನು.
3 : ಯೋನಾತಾನನು ಗೆಬದಲ್ಲಿದ್ದ ಫಿಲಿಷ್ಟಿಯರ ದಂಡು ಪ್ರದೇಶವನ್ನು ನಾಶಮಾಡಿದನು. ಈ ಸಮಾಚಾರ ಫಿಲಿಷ್ಟಿಯರಿಗೆ ಮುಟ್ಟಿತು. ಹಿಬ್ರಿಯರೆಲ್ಲರಿಗೂ ಇದು ಗೊತ್ತಾಗುವಂತೆ ಸೌಲನು ದೇಶದಲ್ಲೆಲ್ಲಾ ಕೊಂಬೂದಿಸಿದನು.
4 : ಸೌಲನು ಫಿಲಿಷ್ಟಿಯರ ದಂಡುಪ್ರದೇಶವನ್ನು ನಾಶಮಾಡಿದ್ದರಿಂದ, ತಾವು ಅವರ ದ್ವೇಷಕ್ಕೆ ಗುರಿಯಾದೆವೆಂದು ಇಸ್ರಯೇಲರು ತಿಳಿದು, ಗಿಲ್ಗಾಲಿಗೆ ಬಂದು ಸೌಲನನ್ನು ಕೂಡಿಕೊಂಡರು.
5 : ಆಗ ಫಿಲಿಷ್ಟಿಯರು ಇಸ್ರಯೇಲರೊಡನೆ ಯುದ್ಧಮಾಡುವುದಕ್ಕಾಗಿ ಮೂವತ್ತು ಸಾವಿರ ರಥಬಲವನ್ನು, ಆರು ಸಾವಿರ ಅಶ್ವಬಲವನ್ನು ಹಾಗು ಸಮುದ್ರದ ಮರಳಿನಂತೆ ಅಸಂಖ್ಯವಾದ ಕಾಲಾಳುಗಳನ್ನು ತೆಗೆದುಕೊಂಡು ಬಂದು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡರು.
6 : ಇಸ್ರಯೇಲರಿಗೆ ಕೇಡು ಬಂದೊದಗಿತು. ತಾವು ಇಕ್ಕಟ್ಟಿನಲ್ಲಿ ಇದ್ದೇವೆಂದು ಅವರು ತಿಳಿದು ಗವಿ, ಕಾಡು, ಬಂಡೆ, ನೆಲಮನೆ, ಗುಂಡಿ ಇವುಗಳಲ್ಲಿ ಅಡಗಿಕೊಂಡರು.
7 : ಕೆಲವರು ಜೋರ್ಡನ್ ನದಿ ದಾಟಿ ಗಾದ್ಯರ ದೇಶಕ್ಕೂ ಗಿಲ್ಯಾದ್ ಪ್ರಾಂತ್ಯಕ್ಕೂ ಹೊರಟುಹೋದರು. ಸೌಲನು ಇನ್ನೂ ಗಿಲ್ಗಾಲಿನಲ್ಲೇ ಇದ್ದನು. ಅವನ ಸಂಗಡ ಇದ್ದವರು ಭಯದಿಂದ ನಡುಗುತ್ತಿದ್ದರು.
8 : ಸೌಲನು ಸಮುವೇಲನ ಆಜ್ಞೆಯಂತೆ ಗಿಲ್ಗಾಲಿನಲ್ಲೇ ಏಳು ದಿವಸ ಇದ್ದರೂ ಸಮುವೇಲನು ಅಲ್ಲಿಗೆ ಬರಲಿಲ್ಲ; ಅಷ್ಟರಲ್ಲಿ ಜನರು ಚದರಿಹೋದರು.
9 : ಆಗ ಸೌಲನು ಜನರಿಂದ ದಹನಬಲಿಗೆ ಹಾಗು ಶಾಂತಿಸಮಾಧಾನ ಬಲಿಗೆ ಬೇಕಾದದ್ದನ್ನು ತರಿಸಿ ದಹನಬಲಿಯನ್ನು ಅರ್ಪಿಸಿದನು.
10 : ಅದು ಮುಗಿಯುವಷ್ಟರಲ್ಲೇ ಸಮುವೇಲನು ಬಂದನು. ಸೌಲನು ಅವನನ್ನು ವಂದಿಸುವುದಕ್ಕಾಗಿ ಮುಂದೆ ಹೋದನು.
11 : ಸಮುವೇಲನು, ಅವನನ್ನು ನೋಡಿ, “ಇದೇನು ನೀನು ಮಾಡಿದ್ದು?” ಎಂದು ಕೇಳಿದನು. ಅವನು, “ಜನರು ಚದರಿಹೋಗುವುದನ್ನು, ನೀವು ನಿಯಮಿತ ಕಾಲಕ್ಕೆ ಬಾರದಿರುವುದನ್ನು ಹಾಗು ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ನಮಗೆ ವಿರೋಧವಾಗಿ ಕೂಡಿಕೊಂಡಿರುವುದನ್ನು ನೋಡಿದೆ;
12 : ಸರ್ವೇಶ್ವರನಿಗೆ ಶಾಂತಿಸಮಾಧಾನದ ಬಲಿಯನ್ನು ಸಲ್ಲಿಸುವುದಕ್ಕಿಂತ ಮೊದಲೇ ಫಿಲಿಷ್ಟಿಯರು ಗಿಲ್ಗಾಲಿಗೆ ಬಂದು ನನ್ನ ಮೇಲೆ ಬಿದ್ದಾರೆಂದು ಭಯಪಟ್ಟೆ. ಆದುದರಿಂದ ದಹನಬಲಿಯನ್ನು ಸಮರ್ಪಿಸುವುದಕ್ಕೆ ನಾನೇ ಮುಂದಾದೆ,” ಎಂದನು.
13 : ಆಗ ಸಮುವೇಲನು, “ನೀನು ಬುದ್ಧಿಹೀನ ಕಾರ್ಯವನ್ನು ಮಾಡಿದೆ; ನಿನ್ನ ದೇವರಾದ ಸರ್ವೇಶ್ವರನ ಆಜ್ಞೆಯನ್ನು ಕೈಗೊಳ್ಳಲಿಲ್ಲ. ಕೈಗೊಂಡಿದ್ದರೆ ನಿನ್ನ ರಾಜ್ಯವನ್ನು ಇಸ್ರಯೇಲರಲ್ಲಿ ಶಾಶ್ವತವಾಗಿ ಸ್ಥಿರಪಡಿಸುತ್ತಿದ್ದರು.
14 : ಈಗಲಾದರೋ, ನಿನ್ನ ಅರಸುತನ ನಿಲ್ಲುವುದಿಲ್ಲ; ನೀನು ಸರ್ವೇಶ್ವರನ ಆಜ್ಞೆಯನ್ನು ಕೈಗೊಳ್ಳದೆ ಹೋದುದರಿಂದ ಅವರು ತಮಗೆ ಒಪ್ಪಿಗೆಯಾದ ಬೇರೊಬ್ಬ ವ್ಯಕ್ತಿಯನ್ನು ತಮ್ಮ ಪ್ರಜೆಯ ಮೇಲೆ ಅರಸನನ್ನಾಗಿ ನೇಮಿಸಿದ್ದಾರೆ,” ಎಂದು ಹೇಳಿದನು.
15 : ಅನಂತರ ಸಮುವೇಲನು ಗಿಲ್ಗಾಲನ್ನು ಬಿಟ್ಟು ಬೆನ್ಯಾವಿೂನ್ಯರ ಗಿಬೆಯಕ್ಕೆ ಹೋದನು. ಸೌಲನು ತನ್ನ ಜೊತೆಯಲ್ಲಿದ್ದ ಸೈನಿಕರನ್ನು ಎಣಿಸಿದಾಗ ಆರುನೂರು ಮಂದಿಯಿದ್ದರು.
16 : ಅವರೊಡನೆ ಅವನೂ ಅವನ ಮಗನಾದ ಯೋನಾತಾನನೂ ಬೆನ್ಯಾವಿೂನ್ಯರ ಗೆಬದಲ್ಲಿ ಇಳಿದುಕೊಂಡರು. ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡಿದ್ದರು.
17 : ಸುಲಿಗೆ ಮಾಡುವುದಕ್ಕಾಗಿ ಫಿಲಿಷ್ಟಿಯರ ಪಾಳೆಯದಿಂದ ಮೂರು ಗುಂಪುಗಳು ಹೊರಟು ಬಂದವು. ಒಂದು ಗುಂಪು ಒಫ್ರದ ಮಾರ್ಗವಾಗಿ ಶುವಲ್‍ನಾಡಿಗೆ,
18 : ಇನ್ನೊಂದು ಬೇತ್‍ಹೋರೋನಿನ ಕಡೆಗೆ, ಮತ್ತೊಂದು ಜೆಬೋಯೀಮ್ ಕಣಿವೆಯೂ ಅದರ ಕೆಳಗಿರುವ ಅರಣ್ಯವೂ ಕಾಣಿಸುವ ಸ್ಥಳಕ್ಕೆ ಹೋದವು.
19 : ಹಿಬ್ರಿಯರು ಈಟಿಕತ್ತಿಗಳನ್ನು ಮಾಡಿಕೊಳ್ಳಕೂಡದೆಂದು ಫಿಲಿಷ್ಟಿಯರ ಆಜ್ಞೆ ಇದ್ದುದರಿಂದ ಇಸ್ರಯೇಲ್ ದೇಶದಲ್ಲಿ ಅವುಗಳನ್ನು ಮಾಡುವ ಕಮ್ಮಾರರೇ ಇರಲಿಲ್ಲ.
20 : (ಅವರು ತಮ್ಮ ನೇಗಿಲಿನ ಗುಳ, ಸಲಿಕೆ, ಕೊಡಲಿ, ಗುದ್ದಲಿ ಇವುಗಳನ್ನು ಹಣಿಸುವುದಕ್ಕಾಗಿ ಫಿಲಿಷ್ಟಿಯರ ಬಳಿಗೆ ಹೋಗಬೇಕಾಗಿತ್ತು.
21 : ಗುದ್ದಲಿ, ಸಲಿಕೆ, ತ್ರಿಶೂಲ, ಕೊಡಲಿ, ಮುಳ್ಳುಗೋಲು ಇವುಗಳನ್ನು ಹದಮಾಡುವುದಕ್ಕಾಗಿ ಅವರಲ್ಲಿ ಅರ ಮಾತ್ರ ಇತ್ತು.)
22 : ಹೀಗಿದ್ದುದರಿಂದ ಯುದ್ಧ ಪ್ರಾರಂಭಿಸಿದಾಗ ಸೌಲ ಯೋನಾತಾನರ ಹೊರತು, ಅವರ ಜೊತೆಯಲ್ಲಿದ್ದ ಜನರಲ್ಲಿ ಒಬ್ಬನ ಕೈಯಲ್ಲಾದರೂ ಕತ್ತಿಯಾಗಲಿ ಭರ್ಜಿಯಾಗಲಿ ಇರಲಿಲ್ಲ.

· © 2017 kannadacatholicbible.org Privacy Policy