Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಸಮು


1 : ಸಮುವೇಲನು ಇಸ್ರಯೇಲರೆಲ್ಲರಿಗೆ, “ನೋಡಿ, ನಾನು ನಿಮ್ಮ ಬಿನ್ನಹಗಳನ್ನು ಆಲಿಸಿ ನಿಮಗೊಬ್ಬ ಅರಸನನ್ನು ನೇಮಿಸಿದೆ.
2 : ಇನ್ನು ಇವನೇ ನಿಮ್ಮನ್ನು ಮುನ್ನಡೆಸುವನು. ಚಿಕ್ಕಂದಿನಿಂದ ನಿಮ್ಮ ನಾಯಕನಾಗಿದ್ದ ನಾನು ಈಗ ತಲೆನರೆತ ಮದುಕನಾಗಿದ್ದೇನೆ; ನನ್ನ ಮಕ್ಕಳು ನಿಮ್ಮ ಮಧ್ಯದಲ್ಲಿದ್ದಾರೆ.
3 : ಇಲ್ಲಿ ನಿಂತುಕೊಂಡಿರುವ ನಾನು, ಯಾರ ಎತ್ತನ್ನಾಗಲಿ, ಕತ್ತೆಯನ್ನಾಗಲಿ ತೆಗೆದುಕೊಂಡು ಯಾರನ್ನಾದರು ವಂಚಿಸಿ ಪೀಡಿಸಿದ್ದುಂಟೋ? ಲಂಚತೆಗೆದುಕೊಂಡು ಕುರುಡನಂತೆ ತೀರ್ಪುಕೊಟ್ಟಿದ್ದುಂಟೋ? ಹಾಗೇನಾದರು ಮಾಡಿದ್ದರೆ ಸರ್ವೇಶ್ವರನ ಹಾಗು ಅವರ ಅಭಿಷಿಕ್ತನ ಮುಂದೆ ಹೇಳಿರಿ; ನಾನು ಅದನ್ನು ಹಿಂದಕ್ಕೆ ಕೊಡುತ್ತೇನೆ,” ಎಂದನು.
4 : ಅವರು, “ಇಲ್ಲ, ನೀವು ನಮ್ಮನ್ನು ವಂಚಿಸಿ ಪೀಡಿಸಿ ನಮ್ಮಿಂದ ಏನೂ ಕಸಿದುಕೊಂಡಿಲ್ಲ,” ಎಂದು ಉತ್ತರಕೊಟ್ಟರು.
5 : ಸಮುವೇಲನು ಪುನಃ, “ನೀವು ನನ್ನಲ್ಲಿ ಇಂಥದನ್ನೇನೂ ಕಾಣಲಿಲ್ಲವೆಂಬುದಕ್ಕೆ ಸರ್ವೇಶ್ವರ ಹಾಗು ಅವರ ಅಭಿಷಿಕ್ತನು ಸಾಕ್ಷಿಯಾಗಿದ್ದಾರೆ,” ಎಂದನು. ಅವರು, “ಹೌದು, ಸರ್ವೇಶ್ವರ ಸಾಕ್ಷಿ ಆಗಿದ್ದಾರೆ,” ಎಂದು ನುಡಿದರು.
6 : ಆಗ ಸಮುವೇಲನು, “ನಿಮ್ಮ ಪೂರ್ವಜರನ್ನು ಈಜಿಪ್ಟಿನಿಂದ ಕರೆದುತರುವುದಕ್ಕಾಗಿ ಮೋಶೆ ಹಾಗು ಆರೋನರನ್ನು ನೇಮಿಸಿದ ಸರ್ವೇಶ್ವರಸ್ವಾಮಿಯೇ ಇದಕ್ಕೆ ಸಾಕ್ಷಿ: ಇಲ್ಲಿ ನಿಂತು ಕೇಳಿರಿ:
7 : ಸರ್ವೇಶ್ವರ ನಿಮ್ಮ ಹಾಗು ನಿಮ್ಮ ಪೂರ್ವಜರ ಪರವಾಗಿ ನಡೆಸಿದ ನೀತಿಕಾರ್ಯಗಳನ್ನು ಕುರಿತು ಅವರೆದುರಿನಲ್ಲೇ ನಿಮಗೆ ನೆನಪಿಗೆ ತಂದು, ನಿಮ್ಮನ್ನು ಎಚ್ಚರಿಸುತ್ತೇನೆ.
8 : ಈಜಿಪ್ಟಿಗೆ ಬಂದ ಯಕೋಬನ ವಂಶದವರಾದ ನಮ್ಮ ಹಿರಿಯರು ಸರ್ವೇಶ್ವರನಿಗೆ ಮೊರೆಯಿಟ್ಟಾಗ, ಅವರು ಮೋಶೆ ಹಾಗು ಆರೋನರ ಮುಖಾಂತರ ಅವರನ್ನು ಈಜಿಪ್ಟಿನಿಂದ ಬಿಡಿಸಿ ತಂದು ಈ ನಾಡಿನಲ್ಲಿ ನೆಲೆಗೊಳಿಸಿದರು.
9 : ಅವರು ತಮ್ಮ ದೇವರಾದ ಸರ್ವೇಶ್ವರನನ್ನು ಮರೆತುಬಿಟ್ಟರು. ಆಗ ಅವರನ್ನು ಹಾಚೋರಿನ ಸೇನಾಪತಿಯಾದ ಸೀಸೆರನಿಗೂ ಫಿಲಿಷ್ಟಿಯರಿಗೂ ಮೋವಾಬ್ ರಾಜನಿಗೂ ಮಾರಿ ಬಿಡಲಾಯಿತು. ಇವರು ದಂಡೆತ್ತಿ ಬಂದು ಅವರೊಡನೆ ಯುದ್ಧಮಾಡಿದರು.
10 : ಆಗ ಅವರು, “ನಾವು ಸರ್ವೇಶ್ವರನಾದ ನಿಮ್ಮನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನು ಪೂಜಿಸಿ ಪಾಪಮಾಡಿದ್ದೇವೆ. ಈಗ ಕೃಪೆಮಾಡಿ ನಮ್ಮನ್ನು ಶತ್ರುಗಳ ಕೈಯಿಂದ ಬಿಡಿಸಿರಿ; ನಾವು ಇನ್ನು ಮುಂದೆ ನಿಮ್ಮನ್ನೇ ಪೂಜಿಸಿ, ಸೇವೆ ಮಾಡುತ್ತೇವೆ,” ಎಂದು ಮೊರೆಯಿಟ್ಟರು.
11 : ಆಗ ಸರ್ವೇಶ್ವರ ಯೆರುಬ್ಬಾಳ್, ಬಾರಾಕ್, ಯೆಫ್ತಾಹ, ಸಮುವೇಲ್ ಇವರನ್ನು ಕಳುಹಿಸಿ ನಿಮ್ಮನ್ನು ಎಲ್ಲಾ ಶತ್ರುಗಳ ಕೈಯಿಂದ ತಪ್ಪಿಸಿ ಸುರಕ್ಷಿತವಾಗಿ ವಾಸಿಸುವಂತೆ ಮಾಡಿದರು.
12 : ಅಮ್ಮೋನಿಯರ ಅರಸನಾದ ನಾಹಾಷನು ನಿಮ್ಮ ಮೇಲೆ ಯುದ್ದಕ್ಕೆ ಬರುತ್ತಾನೆಂದು ನಿಮಗೆ ಗೊತ್ತಾಗಲು, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಅರಸನಾಗಿದ್ದರೂ ನೀವು, ‘ನಮಗೊಬ್ಬ ಅರಸನನ್ನು ನೇಮಿಸು’ ಎಂದು ನನ್ನನ್ನು ಬೇಡಿಕೊಂಡಿರಿ.
13 : “ಇಗೋ, ನೀವು ಅಪೇಕ್ಷಿಸಿ ಆರಿಸಿಕೊಂಡ ಅರಸ ಇವನೇ; ಸರ್ವೇಶ್ವರ ಇವನನ್ನು ನಿಮ್ಮ ಮೇಲೆ ಅರಸನನ್ನಾಗಿ ನೇಮಿಸಿದ್ದಾರೆ.
14 : ನೀವೂ ನಿಮ್ಮ ಅರಸನೂ ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿ ಅವರಿಗೆ ವಿಧೇಯರಾಗಿ ಅವರನ್ನೇ ಪೂಜಿಸಿರಿ; ಅವರ ಮಾತನ್ನು ತಪ್ಪದೆ ಪಾಲಿಸುತ್ತಾ ಅವರನ್ನೇ ಹೊಂದಿಕೊಂಡಿರಿ. ಹೀಗೆ ಮಾಡಿದರೆ ಎಷ್ಟೋ ಒಳ್ಳೆಯದು.
15 : ಆದರೆ ನೀವು ಸರ್ವೇಶ್ವರನ ಮಾತನ್ನು ಕೇಳದೆ, ಅವರ ಆಜ್ಞೆಗಳನ್ನು ಕೈಕೊಳ್ಳದೆ ನಡೆದರೆ, ಅವರ ಹಸ್ತ ನಿಮ್ಮ ಹಿರಿಯರಿಗೆ ವಿರೋಧವಾಗಿದ್ದಂತೆ ನಿಮಗೂ ವಿರೋಧವಾಗಿಯೇ ಇರುವುದು.
16 : ಈಗ ಸರ್ವೇಶ್ವರ ನಿಮ್ಮ ಕಣ್ಮುಂದೆಯೇ ಮಾಡುವ ಮಹತ್ಕಾರ್ಯವನ್ನು ಹತ್ತಿರಬಂದು ನೋಡಿರಿ.
17 : ನಾನು ಸರ್ವೇಶ್ವರನಿಗೆ ಮೊರೆಯಿಡುತ್ತೇನೆ; ಈಗ ಗೋದಿಯ ಸುಗ್ಗಿಕಾಲವಾಗಿದ್ದರೂ ಗುಡುಗನ್ನೂ ಮಳೆಯನ್ನೂ ಕಳುಹಿಸುವುದರ ಮೂಲಕ ನೀವು ಅರಸನನ್ನು ಕೇಳಿಕೊಂಡದ್ದು ತಮ್ಮ ದೃಷ್ಟಿಯಲ್ಲಿ ಎಷ್ಟೋ ಕೆಟ್ಟದ್ದಾಗಿದೆ ಎಂಬುದನ್ನು ಅವರು ತೋರಿಸಿಕೊಡುವರು,” ಎಂದು ಅವರಿಗೆ ಹೇಳಿದನು.
18 : ಅಂತೆಯೇ ಸಮುವೇಲನು ಮೊರೆ ಇಡಲು ಸರ್ವೇಶ್ವರ ಗುಡುಗುಮಳೆಗಳನ್ನು ಕಳುಹಿಸಿದರು. ಜನರೆಲ್ಲರು ಸರ್ವೇಶ್ವರನಿಗೂ ಸಮುವೇಲನಿಗೂ ಬಹಳವಾಗಿ ಭಯಪಟ್ಟು,
19 : ಸಮುವೇಲನನ್ನು “ನಮಗೊಬ್ಬ ಅರಸನು ಬೇಕೆಂದು ನಾವು ಬೇಡಿಕೊಂಡದ್ದರಿಂದ ನಮ್ಮ ಪಾಪಗಳಿಗೆ ಮತ್ತೊಂದು ಪಾಪ ಕೂಡಿತು; ಆದುದರಿಂದ ನಿಮ್ಮ ಸೇವಕರಾದ ನಾವು ಸಾಯದಂತೆ ನಿಮ್ಮ ದೇವರಾದ ಸರ್ವೇಶ್ವರನನ್ನು ಬೇಡಿಕೊಳ್ಳಿ,” ಎಂದು ಸಮುವೇಲನನ್ನು ವಿಜ್ಞಾಪಿಸಿದರು.
20 : ಆಗ ಸಮುವೇಲನು, “ಭಯಪಡಬೇಡಿ; ಇಷ್ಟು ಪಾಪಮಾಡಿದ ನೀವು ಇನ್ನು ಮುಂದೆ ಆದರೂ ಅದನ್ನು ಬಿಟ್ಟು ಸರ್ವೇಶ್ವರನನ್ನು ಹೊಂದಿಕೊಂಡು ಪೂರ್ಣಮನಸ್ಸಿನಿಂದ ಅವರೊಬ್ಬರನ್ನೇ ಪೂಜಿಸಿರಿ.
21 : ದೇವರಲ್ಲದವುಗಳನ್ನು ಹಿಂಬಾಲಿಸಬೇಡಿ; ಅವುಗಳಿಂದ ನಿಮಗೆ ಲಾಭವಿಲ್ಲ; ರಕ್ಷಣೆಯೂ ಸಿಕ್ಕುವುದಿಲ್ಲ. ಅವು ವ್ಯರ್ಥವಾದವುಗಳೇ ಸರಿ.
22 : ಸರ್ವೇಶ್ವರನ ದಯೆ ನಿಮ್ಮನ್ನು ಸ್ವಕೀಯ ಜನರನ್ನಾಗಿ ಆರಿಸಿಕೊಂಡ ಮೇಲೆ, ಅವರು ತಮ್ಮ ಮಹೋನ್ನತ ನಾಮದ ನಿಮಿತ್ತ, ನಿಮ್ಮನ್ನು ಖಂಡಿತವಾಗಿ ಕೈಬಿಡುವುದಿಲ್ಲ.
23 : ನಾನಾದರೋ ನಿಮ್ಮ ಪರವಾಗಿ ಸರ್ವೇಶ್ವರನನ್ನು ಪ್ರಾರ್ಥಿಸುತ್ತೇನೆ; ಅವರ ನೀತಿಯುತ ಉತ್ತಮ ಮಾರ್ಗವನ್ನು ನಿಮಗೆ ತೋರಿಸಿ ಕೊಡುವುದನ್ನು ಬಿಡುವುದಿಲ್ಲ; ಬಿಟ್ಟರೆ ದೇವರ ದೃಷ್ಟಿಯಲ್ಲಿ ನಾನೂ ಪಾಪಿಯಾಗುತ್ತೇನೆ.
24 : ನೀವಾದರೋ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿದ್ದು, ಅವರು ನಿಮಗಾಗಿ ಮಾಡಿದ ಮಹತ್ಕಾರ್ಯಗಳನ್ನು ಸ್ಮರಿಸಿಕೊಂಡು, ಅವರಿಗೆ ಶ್ರದ್ಧೆಯಿಂದಲೂ ಪೂರ್ಣಮನಸ್ಸಿನಿಂದಲೂ ಸೇವೆ ಸಲ್ಲಿಸುತ್ತಾ ಬರಬೇಕು.
25 : ನೀವು ದ್ರೋಹಿಗಳಾಗಿಯೇ ಇದ್ದರೆ ನಿಮ್ಮ ಅರಸನ ಸಮೇತ ನಾಶವಾಗುವಿರಿ,” ಎಂದು ಹೇಳಿದನು.

· © 2017 kannadacatholicbible.org Privacy Policy