Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಸಮು


1 : ಆ ಆಳು ಮುಂದೆ ಹೋದಾದ ಮೇಲೆ ಸಮುವೇಲನು ಓಲಿವ್ ಎಣ್ಣೇಕುಪ್ಪಿಯಿಂದ ಅವನ ತಲೆಯ ಮೇಲೆ ತೈಲವನ್ನು ಹೊಯ್ದು, ಅವನನ್ನು ಮುದ್ದಿಟ್ಟು ಅವನಿಗೆ, “ಸರ್ವೇಶ್ವರ ತಮ್ಮ ಜನರ ಮೇಲೆ ರಾಜ್ಯ ಆಳಲು ನಿಜವಾಗಿ ನಿನ್ನನ್ನು ಆಭಿಷೇಕಿಸಿದ್ದಾರೆ.
2 : ಈ ದಿನ ನೀನು ನನ್ನನ್ನು ಬಿಟ್ಟು ಹೋದನಂತರ, ಬೆನ್ಯಾವಿೂನ್ಯರ ಮೇರೆಯೊಳಗಿರುವ ರಾಖೇಲಳ ಸಮಾಧಿಯ ಬಳಿಯಲ್ಲಿರುವಂಥ ಚೆಲ್ಚಹಿನಲ್ಲಿ ಇಬ್ಬರು ವ್ಯಕ್ತಿಗಳನ್ನು ಕಾಣುವೆ; ಅವರು, ‘ನೀನು ಹುಡುಕುತ್ತಿರುವ ಕತ್ತೆಗಳು ಸಿಕ್ಕಿದವು; ನಿನ್ನ ತಂದೆ ಕತ್ತೆಗಳ ಚಿಂತೆಬಿಟ್ಟು ನನ್ನ ಮಗನೆಲ್ಲಿ ಹೋದನೋ ಎಂದು ನಿನಗಾಗಿ ಹಂಬಲಿಸುತ್ತಾ ಇರುತ್ತಾರೆ’ ಎಂದು ಹೇಳುವರು.
3 : ನೀನು ಅಲ್ಲಿಂದ ಮುಂದೆ ನಡೆದು ತಾಬೋರಿನ ಹತ್ತಿರವಿರುವ ಏಲೋನ್ ವೃಕ್ಷದ ಬಳಿಗೆ ಬಂದಾಗ ದೇವದರ್ಶನಕ್ಕಾಗಿ ಬೇತೇಲಿಗೆ ಹೋಗುವ ಮೂವರು ಜನರು ನಿನಗೆದುರಾಗುವರು. ಅವರಲ್ಲೊಬ್ಬನು ಮೂರು ಹೋತಮರಿಗಳನ್ನೂ ಮತ್ತೊಬ್ಬನು ಮೂರು ರೊಟ್ಟಿಗಳನ್ನೂ ಇನ್ನೊಬ್ಬನು ದ್ರಾಕ್ಷಾರಸದ ಒಂದು ಬುದ್ದಲಿಯನ್ನೂ ಹೊತ್ತುಕೊಂಡು ಇರುವರು.
4 : ಅವರು ನಿನ್ನ ಕ್ಷೇಮಸಮಾಚಾರವನ್ನು ವಿಚಾರಿಸಿ ಎರಡು ರೊಟ್ಟಿಗಳನ್ನು ಕೊಡುವರು; ನೀನು ಅವುಗಳನ್ನು ತೆಗೆದುಕೊಳ್ಳಬೇಕು.
5 : ಅಲ್ಲಿಂದ ದೇವಗಿರಿಯನ್ನು ಮುಟ್ಟಿದಾಗ ಫಿಲಿಷ್ಟಿಯರ ದಂಡುಪ್ರದೇಶವನ್ನು ಕಾಣುವೆ; ಮುಂಗಡೆಯಲ್ಲಿ ಸ್ವರಮಂಡಲ, ತಮ್ಮಟೆ, ಕೊಳಲು, ಕಿನ್ನರಿ ಈ ವಾದ್ಯಗಾರರೊಡನೆ ಗುಡ್ಡದಿಂದಿಳಿದು ಬರುತ್ತಿರುವ ಪ್ರವಾದಿಗಳ ಒಂದು ಗುಂಪನ್ನು ಕಾಣುವೆ. ಅವರು ಪರವಶರಾಗಿ ಪ್ರವಾದಿಸುವರು.
6 : ಆಗ ಸರ್ವೇಶ್ವರನ ಆತ್ಮ ನಿನ್ನ ಮೇಲೆ ಬರುವುದು. ನೀನೂ ಮಾರ್ಪಟ್ಟು ಪ್ರವಾದಿಸುವೆ.
7 : ಈ ಗುರುತುಗಳೆಲ್ಲ ಸಂಭವಿಸಿದಾಗ ನಿನಗೆ ಅನುಕೂಲವಿದ್ದ ಹಾಗೆ ವರ್ತಿಸು, ದೇವರು ನಿನ್ನೊಂದಿಗೆ ಇದ್ದಾರೆ!
8 : ನೀನು ಮುಂದಾಗಿ ಗಿಲ್ಗಾಲಿಗೆ ಹೋಗು; ಏಳು ದಿವಸಗಳಾದ ನಂತರ ನಾನು ದಹನಬಲಿಗಳನ್ನೂ ಶಾಂತಿಸಮಾಧಾನಬಲಿಗಳನ್ನೂ ಸಮರ್ಪಿಸುವುದಕ್ಕಾಗಿ ಅಲ್ಲಿಗೆ ಬಂದು ನೀನು ಮಾಡಬೇಕಾದುದನ್ನು ನಿನಗೆ ತಿಳಿಸುವೆನು; ಅಲ್ಲಿಯವರೆಗೆ ಕಾದುಕೊಂಡಿರು,” ಎಂದು ಹೇಳಿದನು.
9 : ಸೌಲನು ಸಮುವೇಲನನ್ನು ಬಿಟ್ಟು ಹೊರಟ ಕೂಡಲೆ ದೇವರು ಅವನಿಗೆ ನೂತನ ಚೈತನ್ಯವನ್ನು ಕೊಟ್ಟರು. ಅದೇ ದಿನದಲ್ಲಿ ಆ ಎಲ್ಲ ಘಟನೆಗಳು ಸಂಭವಿಸಿದವು.
10 : ಅವನು ದೇವಗಿರಿಗೆ ಬಂದ ಕೂಡಲೆ ಪರವಶರಾದ ಪ್ರವಾದಿಗಳ ಗುಂಪೊಂದು ತನ್ನೆದುರಿಗೆ ಬರುವುದನ್ನು ಕಂಡನು. ದೇವರ ಆತ್ಮ ಅವನ ಮೇಲೆ ಇಳಿದು ಬಂದುದರಿಂದ ಅವನೂ ಪರವಶನಾಗಿ ಅವರೊಳಗೆ ಸೇರಿ ಪ್ರವಾದಿಸಿದನು.
11 : ಅವನು ಪರವಶನಾಗಿ ಮಾತಾಡುವುದನ್ನು ಪರಿಚಿತರು ಕಂಡು ತಮ್ಮತಮ್ಮೊಳಗೆ, “ಕೀಷನ ಮಗನಿಗೆ ಏನಾಯಿತು? ಸೌಲನೂ ಪ್ರವಾದಿಗಳಲ್ಲಿ ಒಬ್ಬನೆ?” ಎಂದು ಮಾತಾಡಿಕೊಳ್ಳುತ್ತಿದ್ದರು.
12 : ಆಗ ಆ ಸ್ಥಳೀಯರಲ್ಲಿ ಒಬ್ಬನು, “ಹಾಗಾದರೆ ಇವರ ತಂದೆ ಯಾರು?” ಎಂದು ಕೇಳಿದನು. ಈ ಘಟನೆಯಿಂದಾಗಿ “ಏನು, ಸೌಲನೂ ಪ್ರವಾದಿಯಾಗಿಬಿಟ್ಟನೊ?” ಎಂಬ ಗಾದೆ ಹುಟ್ಟಿತು.
13 : ಅವನು ಪ್ರವಾದಿಸಿ ಆದ ಮೇಲೆ ಪೂಜಾಸ್ಥಳಕ್ಕೆ ಬಂದನು.
14 : ಸೌಲನ ಚಿಕ್ಕಪ್ಪನು ಅವನನ್ನೂ ಅವನ ಸೇವಕನನ್ನೂ ನೋಡಿ, “ನೀವು ಎಲ್ಲಿಗೆ ಹೋಗಿದ್ದಿರಿ?” ಎಂದು ಕೇಳಿದನು. ಅವನು, “ಕತ್ತೆಗಳನ್ನು ಹುಡುಕುವುದಕ್ಕೆ ಹೋಗಿದ್ದೆವು. ಅವು ಸಿಕ್ಕಲಿಲ್ಲ. ಆದುದರಿಂದ ಸಮುವೇಲನ ಬಳಿಗೆ ಹೋದೆವು,” ಎಂದನು.
15 : ಸಮುವೇಲನು ಏನು ಹೇಳಿದನೆಂದು ಚಿಕ್ಕಪ್ಪನು ಕೇಳಲು,
16 : ಸೌಲನು, “ಕತ್ತೆಗಳು ಸಿಕ್ಕಿದವೆಂದು ತಿಳಿಸಿದನು,” ಎಂಬುದಾಗಿ ಹೇಳಿದನೇ ಹೊರತು ಸಮುವೇಲನು ಹೇಳಿದ ಆ ರಾಜ್ಯಭಾರದ ಮಾತನ್ನು ತಿಳಿಸಲಿಲ್ಲ.
17 : ಸಮುವೇಲನು ಇಸ್ರಯೇಲರನ್ನು ಮಿಚ್ಪೆಗೆ ಕರೆಯಿಸಿ ಸರ್ವೇಶ್ವರನ ಸನ್ನಿಧಿಯಲ್ಲಿ ಸಭೆ ಸೇರಿಸಿದನು.
18 : ಅವರಿಗೆ, “ಇಸ್ರಯೇಲ್ ದೇವರಾದ ಸರ್ವೇಶ್ವರ ಹೇಳುವುದನ್ನು ಕೇಳಿರಿ: ‘ನೀವು ಈಜಿಪ್ಟ್‍ನವರ ಕೈಯಿಂದ ತಪ್ಪಿಸಿಕೊಳ್ಳುವಂತೆ ನಿಮ್ಮನ್ನು ಅವರ ದೇಶದಿಂದ ಬಿಡಿಸಿದವನು ಹಾಗು ಬಾಧಿಸುತ್ತಿದ್ದ ಬೇರೆ ಎಲ್ಲಾ ಜನಾಂಗಗಳಿಂದ ನಿಮ್ಮನ್ನು ರಕ್ಷಿಸಿದವನು ನಾನೇ.
19 : ನೀವಾದರೋ, ನಿಮ್ಮನ್ನು ಕಷ್ಟಸಂಕಟಗಳಿಂದ ಬಿಡಿಸಿದ ನಿಮ್ಮ ದೇವರಾದ ನನ್ನನ್ನು ತಿರಸ್ಕರಿಸಿ ಈಗ ನಮಗೊಬ್ಬ ಅರಸನನ್ನು ನೇಮಿಸೆಂದು ಕೇಳುತ್ತೀರಿ. ಆದುದರಿಂದ ನೀವು ನಿಮ್ಮ ನಿಮ್ಮ ಕುಲ ಹಾಗು ಗೋತ್ರಗಳ ಅನುಸಾರ ಸರ್ವೇಶ್ವರನ ಸನ್ನಿಧಿಯಲ್ಲಿ ಹಾಜರಾಗಿರಿ,” ಎಂದು ಅಪ್ಪಣೆ ಮಾಡಿದನು.
20 : ಹೀಗೆ ಸಮುವೇಲನು ಇಸ್ರಯೇಲರ ಎಲ್ಲಾ ಕುಲಗಳನ್ನು ಸವಿೂಪಕ್ಕೆ ಕರೆದಾಗ ಬೆನ್ಯಾವಿೂನ್ ಕುಲಕ್ಕೆ ಚೀಟು ಬಿದ್ದಿತು.
21 : ಆ ಕುಲದ ಗೋತ್ರಗಳನ್ನು ಬರಮಾಡಿದಾಗ ಮಟ್ರಿಯ ಗೋತ್ರದಲ್ಲಿ ಕೀಷನ ಮಗನಾದ ಸೌಲನಿಗೆ ಚೀಟು ಬಿದ್ದಿತು. ಅವನನ್ನು ಹುಡುಕಲು ಅವನು ಸಿಕ್ಕಲಿಲ್ಲ.
22 : ಅವರು, “ಆ ವ್ಯಕ್ತಿ ಇಲ್ಲಿಗೆ ಬರುವನೋ?” ಎಂದು ಸರ್ವೇಶ್ವರನನ್ನು ವಿಚಾರಿಸಿದಾಗ, “ಬಂದಿದ್ದಾನೆ; ಇಗೋ, ಸರಕುಸಾಮಾನುಗಳ ನಡುವೆ ಅಡಗಿಕೊಂಡಿದ್ದಾನೆ,” ಎಂದು ಉತ್ತರ ಬಂದಿತು.
23 : ಅವರು ತಟ್ಟನೆ ಹೋಗಿ ಅವನನ್ನು ಹಿಡಿದುಕೊಂಡು ಬಂದು ಜನರ ಮಧ್ಯೆ ನಿಲ್ಲಿಸಿದರು. ಎಲ್ಲ ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಬಹು ಎತ್ತರದ ವ್ಯಕ್ತಿ ಅವನಾಗಿದ್ದನು.
24 : ಆಗ ಸಮುವೇಲನು ಜನರೆಲ್ಲರಿಗೆ, “ನೋಡಿ, ಸರ್ವೇಶ್ವರನಿಂದ ಆಯ್ಕೆಯಾದವನು ಇವನೇ; ಸರ್ವಜನರಲ್ಲಿ ಇವನಿಗೆ ಸಮಾನರು ಇಲ್ಲವೇ ಇಲ್ಲ,” ಎಂದನು. ಜನರೆಲ್ಲರೂ, “ಅರಸನಿಗೆ ಜಯವಾಗಲಿ!” ಎಂದು ಘೋಷಿಸಿದರು.
25 : ತರುವಾಯ ಸಮುವೇಲನು ಜನರಿಗೆ ರಾಜನೀತಿಯನ್ನು ಬೋಧಿಸಿ, ಅದನ್ನು ಒಂದು ಪುಸ್ತಕದಲ್ಲಿ ಬರೆದು, ಸರ್ವೇಶ್ವರನ ಸನ್ನಿಧಿಯಲ್ಲಿಟ್ಟನು; ಆಮೇಲೆ ಜನರನ್ನು ಅವರವರ ಮನೆಗಳಿಗೆ ಕಳುಹಿಸಿಬಿಟ್ಟನು.
26 : ಸೌಲನೂ ಗಿಬೆಯದಲ್ಲಿದ್ದ ತನ್ನ ಮನೆಗೆ ಹೋದನು. ಕೆಲವು ಮಂದಿ ಶೂರರು ದೇವರಿಂದ ಪ್ರೇರಿತರಾಗಿ ಅವನ ಜೊತೆಯಲ್ಲೇ ಹೋದರು.
27 : ಕೆಲವು ಮಂದಿ ಪುಂಡುಪೋಕರು, “ಇವನೇನೋ ನಮ್ಮನ್ನು ರಕ್ಷಿಸುವವನು!” ಎಂದು ತಾತ್ಸಾರಮಾಡಿ ಕಾಣಿಕೆಗಳನ್ನು ತರಲಿಲ್ಲ. ಆದರೂ ಸೌಲನು ಸುಮ್ಮನಿದ್ದನು.

· © 2017 kannadacatholicbible.org Privacy Policy