1 : ಸೊಲೊಮೋನನು ಸರ್ವೇಶ್ವರನ ಆಲಯವನ್ನು, ತನ್ನ ಅರಮನೆಯನ್ನು ಹಾಗು ತನಗೆ ಇಷ್ಟವಾದ ಬೇರೆ ಎಲ್ಲಾ ಮಂದಿರಗಳನ್ನೂ ಕಟ್ಟಿಮುಗಿಸಿದನು.
2 : ಅನಂತರ ಸರ್ವೇಶ್ವರ, ಗಿಬ್ಯೋನಿನಲ್ಲಿ ಪ್ರತ್ಯಕ್ಷರಾದಂತೆ, ಅವನಿಗೆ ಎರಡನೆಯ ಸಾರಿ ಪ್ರತ್ಯಕ್ಷರಾದರು.
3 : ಅವನಿಗೆ, “ನೀನು ನನಗೆ ಮಾಡಿದ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿದ್ದೇನೆ. ನನ್ನ ನಾಮಮಹತ್ತು ನೀನು ಕಟ್ಟಿಸಿದ ಆಲಯದಲ್ಲಿ ಸದಾ ಇರುವಂತೆ ಅದನ್ನು ನನಗೋಸ್ಕರ ಪ್ರತಿಷ್ಠಿಸಿಕೊಂಡಿದ್ದೇನೆ; ನನ್ನ ದೃಷ್ಟಿಯೂ ಮನಸ್ಸೂ ಪ್ರತಿದಿನ ಅದರ ಮೇಲಿರುವುವು.
4 : ನೀನು ನಿನ್ನ ತಂದೆ ದಾವೀದನಂತೆ ಪೂರ್ಣಮನಸ್ಸಿನಿಂದಲೂ ಯಥಾರ್ಥ ಚಿತ್ತದಿಂದಲೂ ನಡೆದುಕೊಂಡು, ನನ್ನ ಆಜ್ಞಾವಿಧಿನ್ಯಾಯಗಳನ್ನು ಕೈಗೊಳ್ಳುತ್ತಾ ಬಂದರೆ, ಇಸ್ರಯೇಲರಲ್ಲಿ ನಿನ್ನ ಸಿಂಹಾಸನವನ್ನು ಸದಾ ಸ್ಥಿರಪಡಿಸುವೆನು;
5 : ಇಸ್ರಯೇಲ್ ಸಿಂಹಾಸನದ ಮೇಲೆ ನಿನ್ನ ಸಂತಾನದವರು ತಪ್ಪದೆ ಕುಳಿತುಕೊಳ್ಳುವರು’ ಎಂಬುದಾಗಿ ನಿನ್ನ ತಂದೆ ದಾವೀದನಿಗೆ ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು.
6 : ಆದರೆ ನೀವಾಗಲಿ, ನಿಮ್ಮ ಮಕ್ಕಳಾಗಲಿ, ನನ್ನ ಆಜ್ಞಾವಿಧಿಗಳನ್ನು ಕೈಗೊಳ್ಳದೆ, ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಹಿಂಬಾಲಿಸಿ, ಅವುಗಳಿಗೆ ಕೈಮುಗಿದರೆ,
7 : ನಾನು ಕೊಟ್ಟ ನಾಡಿನಿಂದ ಇಸ್ರಯೇಲರನ್ನು ತೆಗೆದುಹಾಕುವೆನು; ನನ್ನ ಹೆಸರಿಗಾಗಿ ಪ್ರತಿಷ್ಠಿಸಿಕೊಂಡ ಆಲಯವನ್ನು ನಿರಾಕರಿಸಿ ಬಿಡುವೆನು. ಇಸ್ರಯೇಲರು ಎಲ್ಲಾ ಜನಾಂಗಗಳವರ ಲಾವಣಿಗೂ ನಿಂದೆಪರಿಹಾಸ್ಯಕ್ಕೂ ಗುರಿಯಾಗುವರು.
8 : ಈ ಮಹಾಮಂದಿರದ ಮಾರ್ಗವಾಗಿ ಹಾದು ಹೋಗುವವರು ಅದನ್ನು ನೋಡಿ ಚಕಿತರಾಗಿ, ‘ಅಬ್ಬಬ್ಬಾ, ಇದೇನು! ಸರ್ವೇಶ್ವರ ನಾಡಿಗೂ ಈ ಗುಡಿಗೂ ಹೀಗೇಕೆ ಮಾಡಿದರು?’ ಎಂದು ಕೇಳುವರು.
9 : ಆಗ ಅವರಿಗೆ, ‘ಈ ನಾಡಿನವರು ತಮ್ಮ ಪೂರ್ವಜರನ್ನು ಈಜಿಪ್ಟಿನಿಂದ ಬರಮಾಡಿದ ದೇವರಾದ ಸರ್ವೇಶ್ವರನನ್ನು ಬಿಟ್ಟು ಅನ್ಯದೇವತೆಗಳನ್ನು ಅವಲಂಬಿಸಿ ಅವುಗಳಿಗೆ ಅಡ್ಡಬಿದ್ದು ಆರಾಧಿಸಿದ್ದರಿಂದಲೇ ಸರ್ವೇಶ್ವರ ಈ ಎಲ್ಲಾ ಆಪತ್ತು-ವಿಪತ್ತುಗಳನ್ನು ಬರಮಾಡಿದ್ದಾರೆ’ ಎಂಬ ಉತ್ತರಸಿಕ್ಕುವುದು,” ಎಂದರು.
10 : ಅರಸ ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಸರ್ವೇಶ್ವರನ ಆಲಯವನ್ನು ಹಾಗು ತನ್ನ ಅರಮನೆಯನ್ನು ಕಟ್ಟಿ ಮುಗಿಸಿದನು.
11 : ತನಗೆ ಬೇಕಾದಷ್ಟು ದೇವದಾರು ಮರಗಳನ್ನು, ತುರಾಯಿ ಮರಗಳನ್ನು ಹಾಗು ಬಂಗಾರವನ್ನು ಕೊಟ್ಟಿದ್ದ ಟೈರಿನ ಅರಸ ಹೀರಾಮನಿಗೆ, ಗಲಿಲೇಯ ಪ್ರಾಂತ್ಯದಲ್ಲಿನ ಇಪ್ಪತ್ತು ಪಟ್ಟಣಗಳನ್ನು ಕೊಟ್ಟನು.
12 : ಹೀರಾಮನು ಟೈರಿನಿಂದ ಬಂದು ಆ ಪಟ್ಟಣಗಳನ್ನು ನೋಡಿದನು. ಅವು ಅವನ ಮನಸ್ಸಿಗೆ ಹಿಡಿಸಲಿಲ್ಲ.
13 : ಆದುದರಿಂದ ಅವನು ಸೊಲೊಮೋನನಿಗೆ, “ಸಹೋದರನೇ, ನೀನು ನನಗೆ ಇದೆಂಥ ಪಟ್ಟಣಗಳನ್ನು ಕೊಟ್ಟಿರುವೆ!” ಎಂದು ಹೇಳಿ ಅವುಗಳಿಗೆ ‘ಕಾಬೂಲ್ ದೇಶ’ ಎಂದು ಹೆಸರಿಟ್ಟನು. ಅವುಗಳಿಗೆ ಇಂದಿನವರೆಗೂ ಇದೇ ಹೆಸರಿರುತ್ತದೆ.
14 : ಹೀರಾಮನು ಸೊಲೊಮೋನನಿಗೆ, ನಾಲ್ಕು ಸಾವಿರ ಕಿಲೋಗ್ರಾಂ ಬಂಗಾರವನ್ನು ಕೊಟ್ಟನು.
15 : ಸರ್ವೇಶ್ವರನ ಆಲಯ, ಅರಮನೆ, ಮಿಲ್ಲೋಕೋಟಿ, ಜೆರುಸಲೇಮಿನ ಪೌಳಿಗೋಡೆ, ಹಾಚೋರ್, ಮೆಗಿದ್ದೋ ಹಾಗು ಗೆಜೆರ್ ಇವುಗಳನ್ನು ಸೊಲೊಮೋನನು ಬಿಟ್ಟೀಕೆಲಸದವರಿಂದ ಕಟ್ಟಿಸಿದನು.
16 : ಈಜಿಪ್ಟಿನ ಅರಸ ಫರೋಹನು, ಗೆಜೆರ್ ಪಟ್ಟಣವನ್ನು ಹಿಡಿದು ಅದನ್ನು ವಶಮಾಡಿಕೊಂಡು, ಸೊಲೊಮೋನನ ಹೆಂಡತಿಯಾದ ತನ್ನ ಮಗಳಿಗೆ ಉಡುಗೊರೆಯಾಗಿ ಕೊಟ್ಟಿದ್ದನು.
17 : ಗೆಜೆರ್ ಪಟ್ಟಣವನ್ನು ಬಿಟ್ಟು ಕೆಳಗಿನ ಬೇತ್-ಹೋರೋನ್,
18 : ಬಾಲಾತ್, ಮರುಭೂಮಿಯಲ್ಲಿ ಇರುವ ತಾಮರ್,
19 : ಉಗ್ರಾಣ ಪಟ್ಟಣಗಳು, ಯುದ್ಧ ರಥಗಳನ್ನಿರಿಸುವ ಪಟ್ಟಣಗಳು ಹಾಗು ರಾಹುತರ ಪಟ್ಟಣಗಳು ಇವುಗಳನ್ನೆಲ್ಲಾ ಕಟ್ಟಿಸಿದವನು ಸೊಲೊಮೋನನೇ. ಜೆರುಸಲೇಮಿನ್ಲೂ ಲೆಬನೋನಿನಲ್ಲೂ ತನ್ನ ರಾಜ್ಯದ ಎಲ್ಲಾ ಪ್ರಾಂತ್ಯಗಳಲ್ಲೂ ತನಗೆ ಇಷ್ಟವಾದುವುಗಳನ್ನೆಲ್ಲಾ ಅವನು ಕಟ್ಟಿಸಿದನು.
20 : ಇಸ್ರಯೇಲರು ಸಂಹರಿಸದೆ ಉಳಿಸಿದ ಅನ್ಯಜನರನ್ನೂ ಕಾನಾನ್ ದೇಶದಲ್ಲಿ ಉಳಿದಿದ್ದ ಅಮೋರಿಯ, ಹಿತ್ತಿಯ, ಪೆರಿಜ್ಜೀಯ, ಹಿವ್ವೀಯ,
21 : ಯೆಬೂಸಿಯ ಮೊದಲಾದ ಇತರ ಜನಾಂಗಗಳ ಸಂತಾನದವರೆಲ್ಲರನ್ನು ಬಿಟ್ಟೀ ಕೆಲಸಕ್ಕಾಗಿ ಇಟ್ಟಿದ್ದನು. ಇಂದಿನವರೆಗೂ ಅವರು ಬಿಟ್ಟೀ ಕೆಲಸದವರಾಗಿಯೇ ಇರುತ್ತಾರೆ.
22 : ಆದರೆ ಅವನು ಇಸ್ರಯೇಲರನ್ನು ಬಿಟ್ಟಿಹಿಡಿಯಲಿಲ್ಲ; ಅವರನ್ನು ಸೈನಿಕರನ್ನಾಗಿ, ಪರಿವಾರದವರನ್ನಾಗಿ, ಅಧಿಪತಿಗಳನ್ನಾಗಿ, ಸರದಾರರನ್ನಾಗಿ, ಹಾಗೂ ರಥಾಶ್ವಬಲಗಳ ನಾಯಕರನ್ನಾಗಿ ನೇಮಿಸಿಕೊಂಡನು.
23 : ಇದಲ್ಲದೆ, ಅವನು ಬಿಟ್ಟೀಕೆಲಸ ಮಾಡುವವರ ಮೇಲೆ ಐನೂರೈವತ್ತು ಮಂದಿ ಇಸ್ರಯೇಲರನ್ನು ಅಧಿಕಾರಿಗಳನ್ನಾಗಿ ನೇಮಿಸಿದನು.
24 : ಫರೋಹನ ಮಗಳು (ದಾವೀದನಗರದಿಂದ) ತನಗೋಸ್ಕರ ಕಟ್ಟಿಸಿದ್ದ ಮಂದಿರಕ್ಕೆ ಬಂದಳು; ಅನಂತರ ಸೊಲೊಮೋನನು ಸರ್ವೇಶ್ವರನ ಆಲಯದ ಮುಂದೆ ಸರ್ವೇಶ್ವರನಿಗಾಗಿ ತಾನು ಕಟ್ಟಿಸಿದ ಬಲಿಪೀಠದ ಮೇಲೆ ವರ್ಷಕ್ಕೆ ಮೂರು ಸಾರಿ ದಹನಬಲಿ ಹಾಗು ಶಾಂತಿಸಮಾಧಾನ ಬಲಿಗಳನ್ನು ಸಮರ್ಪಿಸಿ ಧೂಪಾರತಿ ಎತ್ತುತ್ತಿದ್ದನು. ಹೀಗೆ ಅವನು ಮಹಾ ದೇವಾಲಯವನ್ನು ಕಟ್ಟಿಸಿ ಮುಗಿಸಿದನು.
25 : ಫರೋಹನ ಮಗಳು (ದಾವೀದನಗರದಿಂದ) ತನಗೋಸ್ಕರ ಕಟ್ಟಿಸಿದ್ದ ಮಂದಿರಕ್ಕೆ ಬಂದಳು; ಅನಂತರ ಸೊಲೊಮೋನನು ಸರ್ವೇಶ್ವರನ ಆಲಯದ ಮುಂದೆ ಸರ್ವೇಶ್ವರನಿಗಾಗಿ ತಾನು ಕಟ್ಟಿಸಿದ ಬಲಿಪೀಠದ ಮೇಲೆ ವರ್ಷಕ್ಕೆ ಮೂರು ಸಾರಿ ದಹನಬಲಿ ಹಾಗು ಶಾಂತಿಸಮಾಧಾನ ಬಲಿಗಳನ್ನು ಸಮರ್ಪಿಸಿ ಧೂಪಾರತಿ ಎತ್ತುತ್ತಿದ್ದನು. ಹೀಗೆ ಅವನು ಮಹಾ ದೇವಾಲಯವನ್ನು ಕಟ್ಟಿಸಿ ಮುಗಿಸಿದನು.
26 : ಎದೋಮ್ ದೇಶದಲ್ಲಿ ಎಲೋತಿನ ಹತ್ತಿರ ಕೆಂಪು ಸಮುದ್ರದ ತೀರದಲ್ಲಿರುವ ಎಚ್ಯೋನ್ಗೆಬೆರಿನಲ್ಲಿ ಅರಸ ಸೊಲೊಮೋನನು ಹಡಗುಗಳನ್ನು ಕಟ್ಟಿಸಿದನು.
27 : ಹೀರಾಮನು ಸಮುದ್ರ ಪ್ರಯಾಣದಲ್ಲಿ ನಿಪುಣರಾದ ತನ್ನ ನಾವಿಕರನ್ನು ಸೊಲೊಮೋನನ ಸೇವಕರೊಡನೆ ಆ ಹಡಗುಗಳಲ್ಲಿ ಕಳುಹಿಸಿದನು.
28 : ಅವರು ಓಫೀರಿಗೆ ಪ್ರಯಾಣಮಾಡಿ ಅಲ್ಲಿಂದ ಅರಸನಾದ ಸೊಲೊಮೋನನಿಗೆ ಹದಿನಾಲ್ಕು ಸಾವಿರ ಕಿಲೋಗ್ರಾಂಗೂ ಹೆಚ್ಚಿನ ಬಂಗಾರವನ್ನು ತೆಗೆದುಕೊಂಡು ಬಂದರು.