Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಅರಸು


1 : ಸೊಲೊಮೋನನು ತನ್ನ ಅರಮನೆಯನ್ನು ಹದಿಮೂರು ವರ್ಷಗಳಲ್ಲಿ ಕಟ್ಟಿಸಿ ಮುಗಿಸಿದನು.
2 : ಅವನು ಕಟ್ಟಿಸಿದ ‘ಲೆಬನೋನಿನ ತೋಪು’ ಎನಿಸಿಕೊಳ್ಳುವ ಮಂದಿರ 44 ಮೀಟರ್ ಉದ್ದ, 22 ಮೀಟರ್ ಅಗಲ, 13.5 ಮೀಟರ್ ಎತ್ತರವಾಗಿತ್ತು. ಅದರ ಮಾಳಿಗೆಗೆ ದೇವದಾರಿನ ಮೂರು ಸಾಲು ಕಂಬಗಳು ಅವುಗಳ ಮೇಲೆ ಇಡಲಾದ ದೇವದಾರಿನ ತೊಲೆಗಳೂ ಆಧಾರವಾಗಿ ಇದ್ದವು.
3 : ಸ್ತಂಭಗಳ ಮೇಲಿರುವ ತೊಲೆಗಳ ಮೇಲೆ ದೇವದಾರಿನ ಹಲಿಗೆಗಳಿಂದ ಮಾಡಿದ ಮಾಳಿಗೆಯಿತ್ತು. ಸ್ತಂಭಗಳು ಪ್ರತಿಯೊಂದು ಸಾಲಿನಲ್ಲಿ ಹದಿನ್ಶೆದರಂತೆ ಒಟ್ಟು ನಲ್ವತ್ತೈದು ಇದ್ದವು.
4 : ಬೆಳಕು ಎದುರೆದುರಾಗಿ ಬೀಳುವಂತೆ ಎರಡು ಗೋಡೆಗಳಿಗೆ ಮೂರು ಮೂರು ಸಾಲು ಬೆಳಕು ಕಿಂಡಿಗಳಿದ್ದವು.
5 : ಎಲ್ಲಾ ದ್ವಾರಗಳೂ ಬೆಳಕು ಕಿಂಡಿಗಳೂ ಚತುಷ್ಕೋನಾಕಾರವುಳ್ಳವುಗಳು. ಮೂರು ಮೂರು ಸಾಲು ಬೆಳಕು ಕಿಂಡಿಗಳು ಎದುರೆದುರಾಗಿದ್ದವು.
6 : ಇದಲ್ಲದೆ, ಸೊಲೊಮೋನನು ಒಂದು ಕಂಬ ಮಂಟಪವನ್ನು ಕಟ್ಟಿಸಿದನು. ಅದರ ಉದ್ದ 22 ಮೀಟರ್; ಅಗಲ 13.5 ಮೀಟರ್, ಅದರ ಮುಂದುಗಡೆಯಲ್ಲಿ ಒಂದು ಪಡಸಾಲೆಯಿತ್ತು; ಆ ಪಡಸಾಲೆಗೆ ಕಂಬಗಳೂ ಮೆಟ್ಟಲುಗಳೂ ಇದ್ದವು.
7 : ಇದಲ್ಲದೆ ಅವನು ಸಿಂಹಾಸನ ಮಂದಿರವನ್ನು ಕಟ್ಟಿಸಿದನು. ಅವನು ಅಲ್ಲಿ ನ್ಯಾಯ ತೀರಿಸುತ್ತಿದ್ದುದರಿಂದ ಅದಕ್ಕೆ ನ್ಯಾಯಮಂದಿರ ಎಂದು ಹೆಸರಾಯಿತು. ಇದರ ಎಲ್ಲಾ ಗೋಡೆಗಳು ನೆಲದಿಂದ ಮಾಳಿಗೆಯವರೆಗೆ ದೇವದಾರುವಿನ ಹಲಗೆಗಳಿಂದ ಹೊದಿಸಲಾಗಿದ್ದವು.
8 : ನ್ಯಾಯಮಂದಿರದ ಹಿಂದಿನ ಪ್ರಾಕಾರದಲ್ಲಿ ತನಗಾಗಿ ಅರಮನೆಯನ್ನೂ ತನ್ನ ಹೆಂಡತಿಯಾದ ಫರೋಹನ ಮಗಳಿಗಾಗಿ ಇನ್ನೊಂದು ಮನೆಯನ್ನೂ ಕಟ್ಟಿಸಿದನು. ನ್ಯಾಯಮಂದಿರದ ಹಾಗೆಯೇ ಇವುಗಳನ್ನು ಕಟ್ಟಿಸಿದನು.
9 : ಈ ಎಲ್ಲಾ ಮಂದಿರಗಳನ್ನೂ ಅವುಗಳ ಸುತ್ತುಗೋಡೆಯನ್ನೂ ದೊಡ್ಡ ಪ್ರಾಕಾರದ ಸುತ್ತುಗೋಡೆಯನ್ನೂ ಅಸ್ತಿವಾರದ ಮೇಲಿನಿಂದ ಕಡೇ ವರಸೆಯವರೆಗೆ, ಅಳತೆಯ ಮೇರೆಗೆ ಕೆತ್ತಲ್ಪಟ್ಟಂಥ, ಎರಡು ಮಗ್ಗಲಿಗೂ ಗರಗಸದಿಂದ ಕೊಯ್ಯಲ್ಪಟ್ಟಂಥ, ಶ್ರೇಷ್ಠವಾದ ಕಲ್ಲುಗಳಿಂದ ಕಟ್ಟಿದನು.
10 : ಅಸ್ತಿವಾರಕ್ಕೆ ಪ್ರಯೋಗಿಸಿದ ಶ್ರೇಷ್ಠವಾದ ದೊಡ್ಡಕಲ್ಲುಗಳು ಎಂಟು ಹತ್ತು ಮೊಳ ಉದ್ದವಾಗಿದ್ದವು.
11 : ಅಸ್ತಿವಾರದ ಮೇಲಣ ಭಾಗಕ್ಕೆ, ಅಳತೆಯ ಮೇರೆಗೆ ಕೆತ್ತಿದ ಶ್ರೇಷ್ಠವಾದ ಕಲ್ಲುಗಳನ್ನೂ ದೇವದಾರಿನ ಮರವನ್ನೂ ಉಪಯೋಗಿಸಿದರು.
12 : ಒಳಗಣ ಪ್ರಾಕಾರವೆನಿಸಿಕೊಳ್ಳುವ ಸರ್ವೇಶ್ವರನ ಆಲಯದ ಪ್ರಾಕಾರಕ್ಕೂ ಅರಮನೆಯ ಪ್ರಾಕಾರಕ್ಕೂ ಹೇಗೋ ಹಾಗೆಯೇ ಎಲ್ಲಾ ಮಂದಿರಗಳ ಸುತ್ತಲಿರುವ ದೊಡ್ಡ ಪ್ರಾಕಾರಕ್ಕೆ ಮೂರು ಸಾಲು ಕಲ್ಲಿನ ಕಂಬಗಳೂ ಒಂದು ಸಾಲು ದೇವದಾರುವಿನ ಮರದ ಕಂಬಗಳೂ ಇದ್ದವು.
13 : ಅರಸ ಸೊಲೊಮೋನನು ಟೈರ್ ಪಟ್ಟಣದಿಂದ ಹೀರಾಮ್ ಎಂಬವನನ್ನು ಕರೆಸಿದನು.
14 : ಇವನು ನಫ್ತಾಲಿಕುಲದ ಒಬ್ಬ ವಿಧವೆಯಲ್ಲಿ ಟೈರ್ ಪಟ್ಟಣದ ಒಬ್ಬ ಕಂಚುಗಾರನಿಗೆ ಹುಟ್ಟಿದವನು. ಜಾಣನೂ ತಾಮ್ರದ ಕೆಲಸದಲ್ಲಿ ನಿಪುಣನೂ ಅನುಭವಶಾಲಿಯೂ ಆಗಿದ್ದ ಇವನು ಅರಸನ ಬಳಿಗೆ ಬಂದು, ಅವನ ಎಲ್ಲಾ ಕೆಲಸವನ್ನು ಮಾಡಿದನು.
15 : ಅವನು ಎರಡು ಕಂಚಿನ ಕಂಬಗಳನ್ನು ಮಾಡಿದನು; ಅವು 8 ಮೀಟರ್ ಎತ್ತರವಿದ್ದವು. ಅವುಗಳ ಸುತ್ತಳತೆಯು 5.3 ಮೀಟರ್.
16 : ಇದಲ್ಲದೆ ಅವನು ತಾಮ್ರವನ್ನು ಎರಕಹೊಯ್ದು ಕಂಬಗಳ ಮೇಲೆ ಇಡುವುದಕ್ಕಾಗಿ 2.2 ಮೀಟರ್ ಎತ್ತರವಾದ ಎರಡು ಕುಂಭಗಳನ್ನೂ
17 : ಒಂದೊಂದಕ್ಕೆ ಏಳೇಳರಂತೆ ಕುಂಭದ ಮೇಲೆ ಹಾಕುವುದಕ್ಕಾಗಿ ತಾಮ್ರದ ಸರಿಗೆಯ ಜಾಲರಿಗಳನ್ನೂ ಮಾಡಿದನು;
18 : ಇದಲ್ಲದೆ, ಅವನು ತಾಮ್ರದ ದಾಳಿಂಬೆ ಹಣ್ಣುಗಳನ್ನು ಮಾಡಿ, ಅವುಗಳನ್ನು ಕಂಬಗಳ ಮೇಲಣ ಪ್ರತಿಯೊಂದು ಕುಂಭದ ಜಾಲರಿಯ ಸುತ್ತಲೂ ಎರಡೆರಡು ಸಾಲಾಗಿ ಸಿಕ್ಕಿಸಿದನು.
19 : ಕಂಬಗಳ ಮೇಲಿರುವ ಕುಂಭಗಳ ಒಡಲು 1.8 ಮೀಟರ್‍ಗಳವರೆಗೆ ಕಮಲಾಕಾರವುಳ್ಳದ್ದಾಗಿತ್ತು.
20 : ಆ ಕುಂಭಗಳ ಮೇಲಿನ ಭಾಗದಲ್ಲಿ ಒಡಲಿನ ಸುತ್ತಲೂ ಜಾಲರಿಯ ಹೊರಗೆ ದಾಳಿಂಬೆಹಣ್ಣಿನ ಆಕಾರವುಳ್ಳ ಗುಂಡುಗಳಿದ್ದವು. ಪ್ರತಿಯೊಂದು ಕುಂಭದ ಸುತ್ತಲೂ ಇನ್ನೂರು ಗುಂಡುಗಳನ್ನು ಸಾಲಾಗಿ ಸಿಕ್ಕಿಸಿದನು.
21 : ತರುವಾಯ ಅವನು ಆ ಎರಡು ಕಂಬಗಳನ್ನೂ ದೇವಾಲಯದ ಮಂಟಪದ ಬಳಿಯಲ್ಲಿ ನಿಲ್ಲಿಸಿ, ಬಲಗಡೆಯ ಕಂಬಕ್ಕೆ ಯಾಕೀನ್ ಎಂದೂ ಎಡಗಡೆಯ ಕಂಬಕ್ಕೆ ಬೋವಜ್ ಎಂದು ಹೆಸರಿಟ್ಟನು.
22 : ಅವನು ಕಂಬಗಳ ಮೇಲೆ ಕಮಲ ಅಲಂಕಾರವನ್ನು ಮಾಡಿ ಅವುಗಳ ಕೆಲಸವನ್ನು ಮುಗಿಸಿದನು.
23 : ಅನಂತರ ಅವನು ‘ಕಡಲು’ ಎನಿಸಿಕೊಳ್ಳುವ ಎರಕದ ಒಂದು ಕೊಳವನ್ನು ಮಾಡಿದನು. ಅದರ ಬಾಯಿ ಚಕ್ರಾಕಾರವಾಗಿಯೂ ಅಂಚಿನಿಂದ ಅಂಚಿಗೆ 4.4 ಮೀಟರ್ ಉದ್ದ ಇತ್ತು. ಅದರ ಎತ್ತರ 2.2 ಮೀಟರ್, ಸುತ್ತಳತೆ 13.2 ಮೀಟರ್.
24 : ಅದನ್ನು ಎರಕ ಹೊಯ್ಯುವಾಗ ಅದರ ಅಂಚಿನ ಕೆಳಗೆ ಸುತ್ತಲೂ ಹತ್ತತ್ತು ಮೊಳ ಉದ್ದವಾದ ಬಳ್ಳಿಗಳನ್ನು ಎರಡು ಸಾಲಾಗಿ ಎರಕಹೊಯ್ದಿದ್ದನು.
25 : ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರ ದಿಕ್ಕಿಗೂ ಮೂರು ಪಶ್ಚಿಮ ದಿಕ್ಕಿಗೂ ಮೂರು ದಕ್ಷಿಣ ದಿಕ್ಕಿಗೂ ಮೂರು ಪೂರ್ವ ದಿಕ್ಕಿಗೂ ಮುಖ ಮಾಡಿಕೊಂಡಿದ್ದವು. ಕಡಲು ಅವುಗಳ ಬೆನ್ನಿನ ಮೇಲೆ ಇತ್ತು. ಅವುಗಳ ಹಿಂಭಾಗ ಒಳಗಡೆ ಇತ್ತು.
26 : ಕೊಳದ ತಗಡು ನಾಲ್ಕು ಬೆರಳು ದಪ್ಪವಾಗಿತ್ತು. ಅದರ ಅಂಚು ಕಮಲಾಕಾರದ ಬಟ್ಟಲನ್ನು ಹೋಲುತ್ತಿತ್ತು. ಅದು ಸುಮಾರು ನಾಲ್ವತ್ತು ಸಾವಿರ ಲೀಟರ್ ನೀರನ್ನು ಹಿಡಿಯುತ್ತಿತ್ತು.
27 : ಇದಲ್ಲದೆ, ಹೀರಾಮನು ಹತ್ತು ಕಂಚಿನ ಪೀಠಗಳನ್ನು ಮಾಡಿದನು. ಪ್ರತಿಯೊಂದು 1.8 ಮೀಟರ್ ಉದ್ದ, 1.8 ಮೀಟರ್ ಅಗಲ, 1.3 ಮೀಟರ್ ಎತ್ತರ ಇತ್ತು.
28 : ಅವುಗಳನ್ನು ಮಾಡಿದ ವಿಧಾನ ಹೇಗೆಂದರೆ: ಅವುಗಳಲ್ಲಿ ನಿಲುವು ಪಟ್ಟಿಗಳಿಂದ ಕೂಡಿದ ಅಡ್ಡಪಟ್ಟಿಗಳಿದ್ದವು.
29 : ಆ ಅಡ್ಡಪಟ್ಟಿಗಳ ಮೇಲೆ ಸಿಂಹ, ಹೋರಿ, ಕೆರೂಬಿ, ಇವುಗಳ ಚಿತ್ರಗಳಿದ್ದವು; ನಿಲುವುಪಟ್ಟಿಗಳಿಗೂ ಇದೇ ಅಲಂಕಾರವಿತ್ತು; ಸಿಂಹ, ಹೋರಿ, ಇವುಗಳ ಮೇಲೂ ಕೆಳಗೂ ತೋರಣಚಿತ್ರಗಳಿದ್ದವು.
30 : ಪ್ರತಿಯೊಂದು ಪೀಠಕ್ಕೆ ನಾಲ್ಕು ತಾಮ್ರದ ಗಾಲಿಗಳೂ ಅಚ್ಚುಗಳೂ ಇದ್ದವು. ಪ್ರತಿಯೊಂದು ನಿಲುವು ಪಟ್ಟಿಯ ಮೇಲಿನ ತುದಿಯಲ್ಲಿ ಎರಕಹೊಯ್ದ ತಾಮ್ರದ ಹಿಡಿಗಳಿದ್ದವು; ಅವು ಪೀಠದ ಮೇಲಿನ ನೀರಿನ ಬಾನೆಯನ್ನು ಹಿಡಿಯುತ್ತಿದ್ದವು. ಅವುಗಳ ಹೊರ ಮೈಗೆ ತೋರಣಚಿತ್ರಗಳಿದ್ದವು.
31 : ಈ ಬಾನೆಯನ್ನು ಇಡುವುದಕ್ಕಾಗಿ ಪೀಠದ ಮೇಲಿನ ಭಾಗದಲ್ಲಿ ಒಂದು ಅಥವಾ ಒಂದುವರೆ ಮೊಳ ಎತ್ತರವಾದ ಬಾಯಿ ಇತ್ತು. ಚಕ್ರಾಕಾರವಾಗಿದ್ದ ಈ ಬಾಯಿಯು ಒಂದೂವರೆ ಮೊಳ ಅಗಲವಾಗಿತ್ತು. ಇದರ ಮೇಲೆಯೂ ಚಿತ್ರಗಳಿದ್ದವು. ಇದಕ್ಕೆ ಆಧಾರವಾದ ಅಡ್ಡಪಟ್ಟಿಗಳು ಚಕ್ರಾಕಾರವಾಗಿರದೆ ಚತುಷ್ಕೋನದವುಗಳಾಗಿದ್ದವು.
32 : ಮೇಲೆ ಕಂಡ ನಾಲ್ಕು ಗಾಲಿಗಳು ಅಡ್ಡಪಟ್ಟಿಗಳ ಕೆಳಗೆ ಇದ್ದವು. ಇರಸೂ ಪೀಠವೂ ಅಖಂಡವಾಗಿದ್ದವು; ಪ್ರತಿಯೊಂದು ಗಾಲಿಯೂ ಒಂದುವರೆ ಮೊಳ ಎತ್ತರವಿತ್ತು.
33 : ಅವು ಸಾಧಾರಣವಾದ ಬಂಡಿಗಳ ಗಾಲಿಗಳಂತೆಯೇ ಇದ್ದವು. ಆದರೆ ಅವುಗಳ ಕಟ್ಟು, ಅರ, ಕುಂಭ, ಇವುಗಳೂ ಅವುಗಳಿಗೆ ಸಂಬಂಧಪಟ್ಟ ಇರಸೂ ತಾಮ್ರದವುಗಳು.
34 : ಪ್ರತಿಯೊಂದು ಪೀಠದ ತುದಿಯಲ್ಲಿದ್ದ ನಾಲ್ಕು ಹಿಡಿಗಳು ಪೀಠದೊಡನೆ ಅಖಂಡವಾಗಿದ್ದವು.
35 : ಪೀಠದ ಮೇಲಿನ ಭಾಗದಲ್ಲಿದ್ದ ಚಕ್ರಾಕಾರ ಆದ ಬಾಯಿಯು ಅರ್ಧ ಮೊಳ ಎತ್ತರವಾಗಿತ್ತು. ಪೀಠದ ಮೇಲಿನ ಭಾಗದಲ್ಲಿದ್ದ ಹಿಂಡಿಗಳೂ ಅಡ್ಡ ಪಟ್ಟಿಗಳೂ ಅದರೊಡನೆ ಅಖಂಡವಾಗಿದ್ದವು;
36 : ಆ ಅಡ್ಡಪಟ್ಟಿಗಳಿಗೂ ಹಿಡಿಗಳ ಹೊರಮೈಗೂ ಸ್ಥಳವಿದ್ದ ಪ್ರಕಾರ ಕೆರೂಬಿ, ಸಿಂಹ, ಖರ್ಜೂರ ವೃಕ್ಷ, ಇವುಗಳ ಚಿತ್ರಗಳನ್ನೂ ಈ ಚಿತ್ರಗಳ ಸುತ್ತಲೂ ತೋರಣಚಿತ್ರಗಳನ್ನೂ ಮಾಡಿದನು.
37 : ಲೋಹಗಳನ್ನು ಒಂದೇ ಸಾರಿ ಕರಗಿಸಿ ಆ ಹತ್ತು ಪೀಠಗಳನ್ನು ಮಾಡಿದನು. ಅವುಗಳ ಆಕಾರವೂ ಅಳತೆಯೂ ಒಂದೇ.
38 : ಇದಲ್ಲದೆ ಹೀರಾಮನು 800 ಲೀಟರ್ ನೀರು ಹಿಡಿಯುವ ನಾಲ್ಕು ಮೊಳ ಅಗಲವಾದ ಹತ್ತು ಬಾನೆಗಳನ್ನು ಮಾಡಿ ಪ್ರತಿ ಒಂದು ಪೀಠದ ಮೇಲೆ ಒಂದೊಂದು ಬಾನೆಯನ್ನು ಇಟ್ಟನು.
39 : ಐದು ಪೀಠಗಳನ್ನು ದೇವಾಲಯದ ಬಲಗಡೆಯಲ್ಲಿಯೂ ಐದು ಪೀಠಗಳನ್ನು ಎಡಗಡೆಯಲ್ಲಿಯೂ ಇಟ್ಟನು. ಕಂಚಿನ ಕಡಲನ್ನು ದೇವಾಲಯದ ಬಲಗಡೆಯಲ್ಲಿ, ಅಂದರೆ ಪ್ರಾಕಾರದ ಆಗ್ನೇಯ ದಿಕ್ಕಿನಲ್ಲಿರಿಸಿದನು.
40 : ಇದಲ್ಲದೆ ಹೀರಾಮನು ಬಟ್ಟಲುಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಹೀರಾಮನು ಸೊಲೊಮೋನನ ಅಪ್ಪಣೆಯಂತೆ ದೇವಾಲಯಕ್ಕಾಗಿ ಮಾಡಿದ ಒಟ್ಟು ಸಾಮಾನುಗಳು ಯಾವುವೆಂದರೆ:-
41 : ಎರಡು ಕಂಬಗಳು; ಅವುಗಳ ಮೇಲಿನ ಎರಡು ಕುಂಭಗಳು, ಕುಂಭಗಳ ಮೇಲೆ ಹಾಕಲು ಎರಡು ಜಾಲರಿಗಳು;
42 : ಜಾಲರಿಗಳ ಮೇಲೆ ಎರಡೆರಡು ಸಾಲಾಗಿ ಸಿಕ್ಕಿಸಲು ತಾಮ್ರದ ನಾನೂರು ದಾಳಿಂಬೆ ಹಣ್ಣುಗಳು;
43 : ಹತ್ತು ಪೀಠಗಳು, ಅವುಗಳ ಮೇಲಿದ್ದ ಹತ್ತು ನೀರಿನ ಬಾನೆಗಳು;
44 : ಕಂಚಿನ ಕಡಲು, ಅದನ್ನು ಹೊರುವ ಹನ್ನೆರಡು ಎರಕದ ಹೋರಿಗಳು;
45 : ಹಂಡೆ, ಸಲಿಕೆ ಹಾಗು ಬೋಗುಣಿಗಳು. ಹೀರಾಮನ ಅರಸ ಸೊಲೊಮೋನನ ಅಪ್ಪಣೆಯಂತೆ ಸರ್ವೇಶ್ವರನ ಆಲಯಕ್ಕಾಗಿ ಈ ಎಲ್ಲ ಸಾಮಗ್ರಿಗಳನ್ನು ಒಪ್ಪಹಾಕಿದ ತಾಮ್ರದಿಂದ ಮಾಡಿದನು.
46 : ಅರಸನು ಜೋರ್ಡನಿನ ತಗ್ಗಿನಲ್ಲಿ ಸುಕ್ಯೋತಿಗೂ ಚಾರೆತಾನಿಗೂ ಮಧ್ಯದಲ್ಲಿರುವ ಮಣ್ಣುನೆಲದ ಕುಲುಮೆಯಲ್ಲಿ ಎರಕಹೊಯ್ಸಿದನು.
47 : ಸೊಲೊಮೋನನು ತಾನು ಮಾಡಿಸಿದ ಸಾಮಗ್ರಿಗಳು ಅನೇಕವಾಗಿದ್ದುದರಿಂದ ಅವುಗಳ ತಾಮ್ರದ ತೂಕ ಇಷ್ಟೆಂಬುದನ್ನು ನಿರ್ಧರಿಸಲಾಗಲಿಲ್ಲ.
48 : ಸೊಲೊಮೋನನು ಸರ್ವೇಶ್ವರನ ಆಲಯಕ್ಕಾಗಿ ಮಾಡಿಸಿದ ಒಳಗಿನ ಸಾಮಗ್ರಿಗಳು ಯಾವುವೆಂದರೆ:- ಬಂಗಾರದ ಧೂಪವೇದಿಕೆ, ನೈವೇದ್ಯವಾದ ರೊಟ್ಟಿಗಳನ್ನಿಡುವುದಕ್ಕಾಗಿ ಬಂಗಾರದ ಮೇಜು,
49 : ಮಹಾಪರಿಶುದ್ಧ ಸ್ಥಳದ ಎದುರಿಗೆ ಎಡಗಡೆಯಲ್ಲೂ ಬಲಗಡೆಯಲ್ಲೂ ಐದೈದರಂತೆ ಇಡುವುದಕ್ಕಾಗಿ ಚೊಕ್ಕ ಬಂಗಾರದಿಂದ ಮಾಡಿದ ಪುಷ್ಪಾಲಂಕಾರವುಳ್ಳ ಹತ್ತು ದೀಪವೃಕ್ಷಗಳು, ಬಂಗಾರದಹಣತೆ ತಂಡಸುಗಳು,
50 : ಚೊಕ್ಕ ಬಂಗಾರದ ಬಟ್ಟಲುಗಳು, ಕತ್ತರಿಗಳು, ಬೋಗುಣಿಗಳು, ಧೂಪಾರತಿಗಳು, ಅಗ್ಗಿಷ್ಟಿಕೆಗಳು, ದೇವಾಲಯದ ಮಹಾಪರಿಶುದ್ಧ ಸ್ಥಳವೆನಿಸಿಕೊಳ್ಳುವ ಗರ್ಭಗುಡಿಯ ಕದಗಳಿಗೂ ಪರಿಶುದ್ಧ ಸ್ಥಳದ ಕದಗಳಿಗೂ ಇರುವ ಬಂಗಾರದ ತಿರುಗಣಿಗಳು.
51 : ಸೊಲೊಮೋನನು ಸರ್ವೇಶ್ವರನ ಆಲಯಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಸಿದ್ದಮಾಡಿಸಿದ ನಂತರ ತನ್ನ ತಂದೆ ದಾವೀದನು ಸರ್ವೇಶ್ವರನಿಗೆ ಹರಕೆಹೊತ್ತು ಪ್ರತಿಷ್ಟಿಸಿದ ಬೆಳ್ಳಿ ಬಂಗಾರವನ್ನು ಸಾಮಗ್ರಿಗಳನ್ನೂ ದೇವಾಲಯದ ಭಂಡಾರಕ್ಕೆ ಸೇರಿಸಿದನು.

· © 2017 kannadacatholicbible.org Privacy Policy