Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಅರಸು


1 : ಇಸ್ರಯೇಲರು ಈಜಿಪ್ಟ್ ದೇಶವನ್ನು ಬಿಟ್ಟ ನಾನೂರ ಎಂಬತ್ತನೆಯ ವರ್ಷದಲ್ಲಿ ಅಂದರೆ, ಇಸ್ರಯೇಲರ ಅರಸನಾದ ಸೊಲೊಮೋನನ ಆಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಾದ ವೈಶಾಖ ಮಾಸದಲ್ಲಿ ಅರಸ ಸೊಲೊಮೋನನು ಸರ್ವೇಶ್ವರಸ್ವಾಮಿಯ ಆಲಯವನ್ನು ಕಟ್ಟುವುದಕ್ಕೆ ಪ್ರಾರಂಭಿಸಿದನು.
2 : ಅವನು ಸರ್ವೇಶ್ವರನಿಗೆ ಕಟ್ಟಿಸಿದ ದೇವಾಲಯದ ಉದ್ದ 27 ಮೀಟರ್, ಅಗಲ 9 ಮೀಟರ್, ಎತ್ತರ 13.5 ಮೀಟರ್.
3 : ದೇವಾಲಯದ ಪರಿಶುದ್ಧ ಸ್ಥಳದ ಮುಂದುಗಡೆಯಲ್ಲಿ ಒಂದು ಮಂಟಪವಿತ್ತು; ಅದರ ಉದ್ದಳತೆ ದೇವಾಲಯದ ಅಗಲಕ್ಕೆ ಸರಿಯಾಗಿ 4.5 ಮೀಟರ್, ಅಗಲಳತೆ 9 ಮೀಟರ್.
4 : ಇದಲ್ಲದೆ, ಅವನು ಆಲಯಕ್ಕೆ ತೆರೆಯಲಾಗದ ಜಾಲಂಧರ ಕಿಟಕಿಗಳನ್ನಿಡಿಸಿದನು.
5 : ದೇವಾಲಯದ ಗೋಡೆಯ ಸುತ್ತಲೂ ಅಂದರೆ, ಪರಿಶುದ್ಧ ಸ್ಥಳ ಹಾಗು ಮಹಾಪರಿಶುದ್ಧ ಸ್ಥಳ ಇವುಗಳ ಗೋಡೆಯ ಸುತ್ತಲೂ ಇನ್ನೊಂದು ಗೋಡೆಯನ್ನು ಕಟ್ಟಿಸಿ, ಇವುಗಳ ನಡುವೆ ಅಂತಸ್ತುಗಳುಳ್ಳ ಕೊಠಡಿಗಳನ್ನು ಮಾಡಿಸಿದನು.
6 : ಕೆಳಗಿನ ಕೊಠಡಿಗಳ ಅಗಲ 2.2 ಮೀಟರ್; ಮೊದಲನೆಯ ಅಂತಸ್ತಿನ ಕೊಠಡಿಗಳ ಅಗಲ 2.7 ಮೀಟರ್; ಎರಡನೆಯ ಅಂತಸ್ತಿನ ಕೊಠಡಿಗಳ ಅಗಲ 3.1 ಮೀಟರ್. ಅಂತಸ್ತಿನ ತೊಲೆಗಳನ್ನಿಡುವಾಗ ದೇವಾಲಯದ ಗೋಡೆಯಲ್ಲಿ ತೂತಾಗಬಾರದು ಎಂದು ಗೋಡೆಯ ಹೊರ ಮೈಯನ್ನು ಸೋಪಾನಾಕಾರವಾಗಿ ಮಾಡಿಸಿದನು.
7 : ದೇವಾಲಯವನ್ನು ಕಟ್ಟುವಾಗ, ಕಲ್ಲುಗಳನ್ನು ಕಲ್ಲುಗಣಿಯಲ್ಲಿಯೇ ಸಿದ್ಧಮಾಡಿಕೊಂಡು ಬಂದು ಕಟ್ಟಿದ್ದರಿಂದ, ಕಟ್ಟುವ ದಿವಸಗಳಲ್ಲೆಲ್ಲಾ ಸುತ್ತಿಗೆ, ಉಳಿ, ಮುಂತಾದ ಕಬ್ಬಿಣದ ಸಾಮಾನುಗಳ ಶಬ್ದವೂ ಕೇಳಿಸಲಿಲ್ಲ.
8 : ಕೆಳಗಿನ ಕೊಠಡಿಗಳಿಗೆ ಹೋಗುವ ಬಾಗಿಲು ಆಲಯದ ಬಲಪಾಶ್ರ್ವದಲ್ಲಿತ್ತು. ಅಲ್ಲಿಂದ ಮೊದಲನೆಯ ಅಂತಸ್ತಿಗೂ ಎರಡನೆಯ ಅಂತಸ್ತಿಗೂ ಹೋಗಬೇಕಾದರೆ ವಕ್ರಸೋಪಾನಗಳಿದ್ದವು.
9 : ಈ ಪ್ರಕಾರ ಅವನು ಮನೆಯನ್ನು ಕಟ್ಟಿಸಿ, ದೇವದಾರಿನ ತೊಲೆ ಹಲಿಗೆಗಳಿಂದ ಮಾಳಿಗೆಯನ್ನು ಮಾಡಿಸಿ, ಕೆಲಸ ಮುಗಿಸಿದನು.
10 : ಅವನು ದೇವಾಲಯದ ಸುತ್ತಲೂ ಒಂದರ ಮೇಲೊಂದು 2.2 ಮೀಟರುಗಳಂತೆ ಎತ್ತರವಾದ ಕೊಠಡಿಗಳನ್ನು ಕಟ್ಟಿಸಿದನು. ಇವು ದೇವದಾರಿನ ತೊಲೆಗಳಿಂದ ದೇವಾಲಯಕ್ಕೆ ಹೊಂದಿಕೊಂಡಿದ್ದವು.
11 : ಸರ್ವೇಶ್ವರಸ್ವಾಮಿ ಸೊಲೊಮೋನನಿಗೆ, “ನೀನು ಈಗ ಒಂದು ಆಲಯವನ್ನು ಕಟ್ಟಿಸುತ್ತಿರುವೆ.
12 : ‘ನನ್ನ ನಿಯಮವಿಧಿಗಳನ್ನು ಅನುಸರಿಸಿ ನನ್ನ ಆಜ್ಞೆಗಳನ್ನು ಕೈಗೊಂಡು, ನೀನು ನಡೆಯುವುದಾದರೆ, ನಿನ್ನನ್ನು ಕುರಿತು ನಿನ್ನ ತಂದೆ ದಾವೀದನಿಗೆ ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು.
13 : ನನ್ನ ಪ್ರಜೆಗಳಾದ ಇಸ್ರಯೇಲರನ್ನು ಕೈಬಿಡದೆ ಅವರ ಮಧ್ಯದಲ್ಲೇ ವಾಸಿಸುವೆನು,” ಎಂದು ಹೇಳಿದರು.
14 : ಹೀಗೆ ಸೊಲೊಮೋನನು ದೇವಾಲಯವನ್ನು ಕಟ್ಟಿಮುಗಿಸಿದನು.
15 : ದೇವಾಲಯದ ಗೋಡೆಗಳ ಒಳಮೈಯನ್ನು ನೆಲದಿಂದ ಮಾಳಿಗೆಯವರೆಗೆ ದೇವದಾರಿನ ಹಲಗೆಗಳಿಂದ ಹೊದಿಸಿದನು. ನೆಲಕ್ಕೆ ತುರಾಯಿಮರದ ಹಲಗೆಗಳನ್ನು ಹಾಕಿಸಿದನು.
16 : ಇದಲ್ಲದೆ, ದೇವಾಲಯದೊಳಗೆ ಹಿಂದಿನ 9 ಮೀಟರ್ ಸ್ಥಳವನ್ನು ಬಿಟ್ಟು ನೆಲದಿಂದ ತೊಲೆಗಳವರೆಗೆ ದೇವದಾರಿನ ಹಲಗೆಗಳಿಂದ ಒಂದು ಗೋಡೆಯನ್ನು ಮಾಡಿಸಿ ಅದರ ಹಿಂದಿನ ಭಾಗವನ್ನು ಗರ್ಭಗುಡಿ, ಅಥವಾ ಮಹಾಪರಿಶುದ್ಧ ಸ್ಥಳವೆಂದು ಪ್ರತ್ಯೇಕಿಸಿದನು.
17 : ದೇವಾಲಯದ ಪರಿಶುದ್ಧ ಸ್ಥಳವೆನಿಸಿಕೊಳ್ಳುವ ಮುಂದಿನ ಭಾಗ 18 ಮೀಟರ್ ಉದ್ದವಿತ್ತು.
18 : ದೇವಾಲಯದೊಳಗೆ ಕಲ್ಲು ಕಾಣಿಸದಂತೆ, ಗೋಡೆಯನ್ನೆಲ್ಲಾ ಬಳ್ಳಿಗಳೂ ಹೂವುಗಳೂ ಕೆತ್ತಿರುವ ದೇವದಾರಿನ ಹಲಗೆಗಳಿಂದ ಹೊದಿಸಿದನು.
19 : ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಇಡುವುದಕ್ಕಾಗಿ ದೇವಾಲಯದೊಳಗೆ ಒಂದು ಭಾಗವನ್ನು ‘ಗರ್ಭಗುಡಿ’ ಎಂದು ಪ್ರತ್ಯೇಕಿಸಿದನು.
20 : ಆ ಗರ್ಭಗುಡಿ 9 ಮೀಟರ್ ಉದ್ದ, 9 ಮೀಟರ್ ಅಗಲ, 9 ಮೀಟರ್ ಎತ್ತರ ಇತ್ತು. ಅದನ್ನು ಚೊಕ್ಕ ಬಂಗಾರದ ತಗಡಿನಿಂದಲೂ ವೇದಿಯನ್ನು ದೇವದಾರುಮರದಿಂದಲೂ ಹೊದಿಸಿದನು.
21 : ಸೊಲೊಮೋನನು ದೇವಾಲಯದ ಒಳಮೈಯನ್ನು ಚೊಕ್ಕ ಬಂಗಾರದ ತಗಡಿನಿಂದ ಹೊದಿಸಿದನು. ಬಂಗಾರದ ತಗಡಿನಿಂದ ಹೊದಿಸಲಾಗಿದ್ದ ಮಹಾಪರಿಶುದ್ಧ ಸ್ಥಳದ ಎದುರಿನಲ್ಲಿ ಒಂದು ಗೋಡೆಯಿಂದ ಇನ್ನೊಂದು ಗೋಡೆಗೆ ಬಂಗಾರದ ಸರಪಣಿಗಳನ್ನು ಕಟ್ಟಿಸಿದನು.
22 : ದೇವಾಲಯದ ಎಲ್ಲಾ ಗೋಡೆಗಳನ್ನೂ ಮಹಾಪರಿಶುದ್ಧ ಸ್ಥಳಕ್ಕೆ ಸೇರಿದ ಪೀಠವನ್ನೂ ಪೂರ್ಣವಾಗಿ ಬಂಗಾರದ ತಗಡಿನಿಂದ ಹೊದಿಸಿದನು.
23 : ಇದಲ್ಲದೆ ಅವನು ಎಣ್ಣೇಮರದಿಂದ 4.4 ಮೀಟರ್ ಎತ್ತರವಾದ ಎರಡು ‘ಕೆರೂಬಿ’ಗಳನ್ನು ಮಾಡಿಸಿ ಅವುಗಳನ್ನು ಗರ್ಭಗುಡಿಯಲ್ಲಿರಿಸಿದನು.
24 : ಪ್ರತಿಯೊಂದು ಕೆರೂಬಿಯ ರೆಕ್ಕೆಗಳು 2.2 ಮೀಟರ್ ಉದ್ದವಿದ್ದವು. ಎರಡು ರೆಕ್ಕೆಗಳ ಅಂತರವು ತುದಿಯಿಂದ ತುದಿಗೆ. 4.4 ಮೀಟರ್
25 : ಇನ್ನೊಂದು ಕೆರೂಬಿಯ ರೆಕ್ಕೆಗಳ ಅಂತರವೂ 4.4 ಮೀಟರ್. ಎರಡೂ ಕೆರೂಬಿಗಳ ಅಳತೆಯೂ ಆಕಾರವೂ ಒಂದೇ ಆಗಿತ್ತು.
26 : ಅವೆರಡೂ ಒಂದೊಂದು 4.4 ಮೀಟರ್ ಎತ್ತರವಾಗಿದ್ದವು.
27 : ಅವನು ಅವುಗಳನ್ನು ದೇವಾಲಯದ ಗರ್ಭಗುಡಿಯಲ್ಲಿರಿಸಿದನು. ಅವುಗಳ ರೆಕ್ಕೆಗಳು ಚಾಚಿದವುಗಳಾಗಿದ್ದುದರಿಂದ ಮೊದಲನೆಯ ಕೆರೂಬಿಯ ಒಂದು ರೆಕ್ಕೆ ಈಚೆಯ ಗೋಡೆಗೂ ಎರಡನೆಯ ಕೆರೂಬಿಯ ಒಂದು ರೆಕ್ಕೆ ಆಚೆಯ ಗೋಡೆಗೂ ತಗುಲಿದ್ದವು; ಅವುಗಳ ಬೇರೆ ಎರಡು ರೆಕ್ಕೆಗಳು ಮನೆಯ ಮಧ್ಯದಲ್ಲಿ ಒಂದನ್ನೊಂದು ತಗುಲಿ ಇದ್ದವು.
28 : ಈ ಕೆರೂಬಿಗಳು ಬಂಗಾರದ ತಗಡುಗಳಿಂದ ಹೊದಿಸಲ್ಪಟ್ಟಿದ್ದವು.
29 : ದೇವಾಲಯದ ಎಲ್ಲಾ ಗೋಡೆಗಳಲ್ಲಿ ಹೊರಗೂ ಒಳಗೂ ಕೆರೂಬಿ, ಖರ್ಜೂರವೃಕ್ಷ, ಹೂವು, ಇವುಗಳ ಚಿತ್ರಗಳನ್ನು ಕೆತ್ತಿಸಿದನು.
30 : ದೇವಾಲಯದ ಒಳಗೆ ಮತ್ತು ಹೊರಗಿನ ನೆಲವನ್ನು ಬಂಗಾರದ ತಗಡುಗಳಿಂದ ಹೊದಿಸಿದನು.
31 : ಗರ್ಭಗುಡಿಯ ಬಾಗಿಲಿಗೆ ಎಣ್ಣೇ ಮರದ ಕದಗಳನ್ನು ಹಚ್ಚಿಸಿದನು. ಚೌಕಟ್ಟು ಪಂಚಕೋನಗಳುಳ್ಳದ್ದಾಗಿತ್ತು.
32 : ಎಣ್ಣೇಮರದ ಆ ಎರಡು ಕದಗಳಲ್ಲಿಯೂ ಕೆರೂಬಿ, ಖರ್ಜೂರವೃಕ್ಷ, ಹೂವು, ಇವುಗಳ ಚಿತ್ರಗಳನ್ನು ಕೆತ್ತಿಸಿ, ಕದಗಳಿಗೆ ಬಂಗಾರದ ತಗಡನ್ನು ಹೊದಿಸಿ, ಚಿತ್ರಗಳಿದ್ದಲ್ಲಿ ಆ ತಗಡನ್ನು ಬಡಿಸಿದನು.
33 : ಇದಲ್ಲದೆ, ಪರಿಶುದ್ಧ ಸ್ಥಳದ ಬಾಗಲಿಗೆ ಎಣ್ಣೇಮರದಿಂದ ಚತುಷ್ಕೋನದ ಚೌಕಟ್ಟನ್ನು ಮಾಡಿಸಿ,
34 : ಅದಕ್ಕೆ ತುರಾಯಿಮರದ ಎರಡು ಕದಗಳನ್ನು ಹಚ್ಚಿಸಿದನು. ಪ್ರತಿಯೊಂದು ಕದವು ಎರಡು ಭಾಗವುಳ್ಳದ್ದಾಗಿ ಮಡಚುವುದಕ್ಕೆ ಬರುತ್ತಿತ್ತು.
35 : ಈ ಕದಗಳಲ್ಲಿ ಕೆರೂಬಿ, ಖರ್ಜೂರ ವೃಕ್ಷ, ಹೂವು, ಇವುಗಳ ಚಿತ್ರಗಳನ್ನು ಕೆತ್ತಿಸಿ ಅವುಗಳಿಗೆ ಬಂಗಾರದ ತಗಡನ್ನು ಹೊದಿಸಿ ಕೆತ್ತನೆ ಇದ್ದಲ್ಲಿ ಆ ತಗಡನ್ನು ಬಡಿಸಿದನು.
36 : ದೇವಾಲಯದ ಪ್ರಾಕಾರದಲ್ಲಿ ಮೂರು ಸಾಲು ಕಲ್ಲಿನ ಕಂಬಗಳನ್ನೂ ಒಂದು ಸಾಲು ದೇವ ದಾರುವಿನ ಕಂಬಗಳನ್ನೂ ಇರಿಸಿದನು.
37 : ಸೊಲೊಮೋನನ ಆಳ್ವಿಕೆಯ ನಾಲ್ಕನೆಯ ವರ್ಷದ ವೈಶಾಖ ಮಾಸದಲ್ಲಿ ಸರ್ವೇಶ್ವರನ ಆಲಯಕ್ಕೆ ಅಸ್ತಿವಾರ ಹಾಕಲಾಯಿತು.
38 : ಹನ್ನೊಂದನೆಯ ವರ್ಷದ ಎಂಟನೆಯ ತಿಂಗಳಾದ ಕಾರ್ತಿಕ ಮಾಸದಲ್ಲಿ ದೇವಾಲಯವೂ ಅದರ ಎಲ್ಲಾ ಕಟ್ಟಡಗಳೂ ಯೋಜನೆಯ ಪ್ರಕಾರ ಸಿದ್ಧವಾದವು. ದೇವಾಲಯವನ್ನು ಕಟ್ಟುವುದಕ್ಕೆ ಏಳು ವರ್ಷ ಹಿಡಿಯಿತು.

· © 2017 kannadacatholicbible.org Privacy Policy