Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಅರಸು


1 : ದಾವೀದನಿಗೆ ಜೀವಮಾನದಲ್ಲೆಲ್ಲಾ ಆಪ್ತಮಿತ್ರನಾಗಿದ್ದ ಟೈರಿನ ಅರಸನಾದ ಹೀರಾಮನು, ಸೊಲೊಮೋನನು ತಂದೆಗೆ ಬದಲಾಗಿ ಪಟ್ಟಾಭಿಷೇಕ ಪಡೆದಿದ್ದಾನೆಂದು ಕೇಳಿ, ಅವನ ಬಳಿಗೆ ತನ್ನ ಸೇವಕರನ್ನು ಕಳುಹಿಸಿದನು.
2 : ಸೊಲೊಮೋನನು ದೂತರ ಮುಖಾಂತರ ಹೀರಾಮನಿಗೆ,
3 : “ಸರ್ವೇಶ್ವರಸ್ವಾಮಿಯ ಅನುಗ್ರಹದಿಂದ ನಮ್ಮ ತಂದೆ ದಾವೀದನಿಗೆ ಎಲ್ಲಾ ಶತ್ರುಗಳು ವಶವಾದರು. ಅಲ್ಲಿಯವರೆಗೆ ಅವರು ಸುತ್ತಲೂ ಯುದ್ಧಗಳನ್ನು ನಡೆಸಬೇಕಾಗಿತ್ತು. ಆದ್ದರಿಂದ ತಮ್ಮ ದೇವರಾದ ಸರ್ವೇಶ್ವರನ ಹೆಸರಿಗೆ ಆಲಯವನ್ನು ಕಟ್ಟಿಸಲಾರದೆ ಹೋದರು. ಇದು ನಿಮಗೆ ತಿಳಿದ ವಿಷಯ.
4 : ನನಗಾದರೋ ನನ್ನ ದೇವರಾದ ಸರ್ವೇಶ್ವರ ಎಲ್ಲ ಕಡೆಗಳಲ್ಲೂ ಸಮಾಧಾನವನ್ನು ಅನುಗ್ರಹಿಸಿದ್ದಾರೆ; ನನ್ನನ್ನು ವಿರೋಧಿಸುವವನು ಒಬ್ಬನೂ ಇಲ್ಲ; ಆಪತ್ತು ವಿಪತ್ತು ದೂರವಾಗಿದೆ.
5 : ಸರ್ವೇಶ್ವರ ನನ್ನ ತಂದೆ ದಾವೀದನಿಗೆ, ‘ನಾನು ನಿನ್ನ ಸ್ಥಾನದಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸುವ ನಿನ್ನ ಮಗ, ನನ್ನ ಹೆಸರಿಗೆ ಒಂದು ಆಲಯವನ್ನು ಕಟ್ಟಲಿ,’ ಎಂದು ಹೇಳಿದ್ದರು. ಆದುದರಿಂದ ನಾನು ನನ್ನ ದೇವರಾದ ಸರ್ವೇಶ್ವರನಿಗೆ ಒಂದು ಆಲಯವನ್ನು ಕಟ್ಟಬೇಕೆಂದಿರುತ್ತೇನೆ.
6 : ನೀನು ನನಗೋಸ್ಕರ ಲೆಬನೋನಿನ ದೇವದಾರು ವೃಕ್ಷಗಳನ್ನು ಕೊಯ್ಯಬೇಕೆಂದು ನಿನ್ನ ಆಳುಗಳಿಗೆ ಆಜ್ಞಾಪಿಸು; ಅವರ ಜೊತೆಯಲ್ಲಿ ನನ್ನ ಆಳುಗಳನ್ನೂ ಕಳುಹಿಸುವೆನು. ಮತ್ತು ನಿನ್ನ ಆಳುಗಳಿಗೆ ನೀನು ಹೇಳುವಷ್ಟು ಸಂಬಳವನ್ನು ಕೊಡುತ್ತೇನೆ. ಸಿದೋನ್ಯರಂತೆ ಮರಕೊಯ್ಯುವುದರಲ್ಲಿ ಜಾಣರು ನಮ್ಮಲ್ಲಿರುವು ದಿಲ್ಲವೆಂದು ನಿನಗೆ ಗೊತ್ತಿದೆಯಲ್ಲವೆ?” ಎಂದು ಹೇಳಿಸಿದನು.
7 : ಹೀರಾಮನು ಸೊಲೊಮೋನನ ಮಾತುಗಳನ್ನು ಕೇಳಿದಾಗ ಬಹಳವಾಗಿ ಸಂತೋಷ ಪಟ್ಟನು. “ಈ ಮಹಾಜನಾಂಗವನ್ನು ಆಳುವುದಕ್ಕಾಗಿ ದಾವೀದನಿಗೆ ಒಬ್ಬ ಬುದ್ಧಿವಂತ ಮಗನನ್ನು ಅನುಗ್ರಹಿಸಿದ ಸರ್ವೇಶ್ವರನಿಗೆ ಸ್ತೋತ್ರವಾಗಲಿ!” ಎಂದು ನುಡಿದನು.
8 : ಇದೂ ಅಲ್ಲದೆ, ಅವನು ಸೊಲೊಮೋನನಿಗೆ, “ನೀನು ಹೇಳಿ ಕಳುಹಿಸಿದ್ದನ್ನು, ಕೇಳಿದೆನು; ದೇವದಾರು ವೃಕ್ಷಗಳನ್ನೂ ತುರಾಯಿಮರಗಳನ್ನೂ ಕುರಿತು ನಿನ್ನ ಅಪೇಕ್ಷೆಯನ್ನು ನೆರವೇರಿಸುವೆನು.
9 : ನನ್ನ ಸೇವಕರು ಅವುಗಳನ್ನು ಲೆಬನೋನಿನಿಂದ ಸಮುದ್ರಕ್ಕೆ ತೆಗೆದುಕೊಂಡು ಹೋಗುವರು. ನಾನು ಅವುಗಳನ್ನು ತೆಪ್ಪವನ್ನಾಗಿ ಕಟ್ಟಿಸಿ ಸಮುದ್ರಮಾರ್ಗವಾಗಿ ನೀನು ನೇಮಿಸುವ ಸ್ಥಳಕ್ಕೆ ಕಳುಹಿಸಿ ಅಲ್ಲೆ ಬಿಚ್ಚಿಸುವೆನು; ನೀನು ಅವುಗಳನ್ನು ತೆಗೆದುಕೊಂಡು, ಅವುಗಳಿಗೆ ಬದಲಾಗಿ ನನ್ನ ಮನೆಯವರಿಗೆ ಆಹಾರ ಪದಾರ್ಥಗಳನ್ನು ಕೊಡಬೇಕೆಂಬುದೇ ನನ್ನ ಅಪೇಕ್ಷೆ,” ಎಂದು ಹೇಳಿಕಳುಹಿಸಿದನು.
10 : ಹೀಗೆ ಹೀರಾಮನು ಸೊಲೊಮೋನನಿಗೆ ಬೇಕಾದಷ್ಟು ದೇವದಾರಿನ ಮರಗಳನ್ನೂ ತುರಾಯಿ ಮರಗಳನ್ನೂ ಕೊಡುತ್ತಿದ್ದನು.
11 : ಸೊಲೊಮೋನನಾದರೋ ಪ್ರತಿವರ್ಷ ಅವನ ಮನೆಯವರ ಆಹಾರಕ್ಕಾಗಿ ಎರಡು ಸಾವಿರ ಮೆಟ್ರಿಕ್ ಟನ್ ಗೋದಿಯನ್ನೂ ನಾಲ್ಕು ಸಾವಿರ ಲೀಟರ್ ಅಪ್ಪಟ ಎಣ್ಣೆಯನ್ನೂ ಕೊಡುತ್ತಿದ್ದನು.
12 : ಸರ್ವೇಶ್ವರ ವಾಗ್ದಾನ ಮಾಡಿದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದ್ದರು. ಸೊಲೊಮೋನನಿಗೂ ಹೀರಾಮನಿಗೂ ಸಮಾಧಾನವಿತ್ತು; ಅವರು ಒಂದು ಒಪಂದ ಮಾಡಿಕೊಂಡಿದ್ದರು.
13 : ಅರಸ ಸೊಲೊಮೋನನು, ಇಸ್ರಯೇಲರಲ್ಲಿ ಮೂವತ್ತು ಸಾವಿರ ಮಂದಿಯನ್ನು ಬಿಟ್ಟಿ ಕೆಲಸಕ್ಕೆಂದು ಹಿಡಿದು,
14 : ಅವರಲ್ಲಿ ತಿಂಗಳೊಂದಕ್ಕೆ ಹತ್ತುಸಾವಿರ ಮಂದಿಯಂತೆ ಲೆಬನೋನಿಗೆ ಕಳುಹಿಸುತ್ತಿದ್ದನು. ಅವರು ಒಂದು ತಿಂಗಳು ಲೆಬನೋನಿನಲ್ಲಿದ್ದರೆ, ಎರಡು ತಿಂಗಳು ಮನೆಯಲ್ಲಿರುತ್ತಿದ್ದರು. ಅದೋನೀರಾಮನು ಇವರ ಮುಖ್ಯಸ್ಥನಾಗಿದ್ದನು.
15 : ಇದಲ್ಲದೆ, ಸೊಲೊಮೋನನಿಗೆ ಎಪ್ಪತ್ತು ಸಾವಿರ ಮಂದಿ ಹೊರೆಹೊರುವವರೂ ಎಂಬತ್ತು ಸಾವಿರ ಮಂದಿ ಕಲ್ಲುಗಣಿಯಲ್ಲಿ ಕೆಲಸ ಮಾಡುವವರೂ ಇದ್ದರು.
16 : ಈ ಕೆಲಸದವರ ಮೇಳ್ವಿಚಾರಣೆಗಾಗಿ ಅವನು ಮೂರು ಸಾವಿರದ ಮುನ್ನೂರು ಮಂದಿ ಮೇಸ್ತ್ರಿಗಳನ್ನು ನೇಮಿಸಿದ್ದನು.
17 : ಕೆತ್ತಿದ ಕಲ್ಲುಗಳಿಂದ ಹಾಕಬೇಕಾದ ದೇವಾಲಯದ ಅಸ್ತಿವಾರಕ್ಕಾಗಿ ಆಳುಗಳು, ಸೊಲೊಮೋನನ ಅಪ್ಪಣೆಯಂತೆ, ಶ್ರೇಷ್ಠವಾದ ದೊಡ್ಡ ಕಲ್ಲುಗಳನ್ನು ಕೊರೆಯುತ್ತಿದ್ದರು.
18 : ಸೊಲೊಮೋನನ ಮತ್ತು ಹೀರಾಮನ ಶಿಲ್ಪಿಗಳೂ ಗೆಬಾಲ್ಯರೂ ಅವುಗಳನ್ನು ಕೆತ್ತುತ್ತಿದ್ದರು. ದೇವಾಲಯ ಕಟ್ಟುವುದಕ್ಕೆ ಬೇಕಾದ ಕಲ್ಲು, ಮರಗಳನ್ನು ಸಿದ್ಧಪಡಿಸಿದವರು ಇವರೇ.

· © 2017 kannadacatholicbible.org Privacy Policy