1 : ಸೊಲೊಮೋನರಾಜನು ಸರ್ವ ಇಸ್ರಯೇಲರ ಮೇಲೆ ಅರಸನಾಗಿದ್ದನು.
2 : ಅವನ ಮುಖ್ಯ ಪದಾಧಿಕಾರಿಗಳು ಇವರು:
3 : ಶೀಷನ ಮಕ್ಕಳಾದ ಎಲೀಹೋರೆಫ್
ಹಾಗು ಅಹೀಯಾಹು ಎಂಬುವರು ಕಾರ್ಯ
ದರ್ಶಿಗಳು;
ಅಹೀಲೂದನ ಮಗ ಯೆಹೋಷಾಫಾಟನು
- ಅವನ ಮಂತ್ರಿ;
4 : ಯೆಹೋಯಾದಾವನ ಮಗ ಬೆನಾಯನು -
ಸೇನಾಪತಿ; ಎಬ್ಯಾತಾರ ಹಾಗು ಚಾದೋಕ
- ಯಾಜಕರು;
5 : ನಾತಾನನ ಮಗ ಅಜರ್ಯನು - ಪ್ರದೇ
ಶಾಧಿಪತಿಗಳ ಮುಖ್ಯಸ್ಥ; ನಾತಾನನ ಮಗ
ಜಾಬೂದನು ಯಾಜಕ ಹಾಗು ಅರಸನ
ಮಿತ್ರ;
6 : ಅಹೀಷಾರನು - ರಾಜ್ಯಗೃಹಾಧಿಪತಿ; ಅಬ್ದನ
ಮಗನಾದ ಅದೋನೀರಾಮನು - ಬಿಟ್ಟೀ
ಕೆಲಸಮಾಡಿಸುವವರ ಮುಖ್ಯಸ್ಥ.
7 : ಸರ್ವ ಇಸ್ರಯೇಲರ ಮೇಲೆ ಸೊಲೊಮೋನನು ಹನ್ನೆರಡು ಜನ ಜಿಲ್ಲಾಧಿಕಾರಿಗಳನ್ನು ನೇಮಿಸಿದ್ದನು. ಅವರು ತಮ್ಮ ಜಿಲ್ಲೆಗಳಿಂದ ಅರಸನಿಗೂ ಅರಮನೆಯವರಿಗೂ ಬೇಕಾದ ಆಹಾರ ಪದಾರ್ಥಗಳನ್ನು ಪೂರೈಸುತ್ತಿದ್ದರು. ಪ್ರತಿಯೊಬ್ಬನೂ ವರ್ಷದಲ್ಲಿ ಒಂದೊಂದು ತಿಂಗಳು ಪೂರೈಸಬೇಕಾಗಿತ್ತು.
8 : ಸೊಲೊಮೋನನ ಜಿಲ್ಲಾಧಿಕಾರಿಗಳು
9 : ಬಿನ್‍ಹೂರ - ಎಫ್ರಯಿಮಿನ ಮಲೆನಾಡಿನ ಪ್ರದೇಶ:
10 : ಬಿನ್‍ದೆಕೆರ್ - ಮಾಕಚ್, ಶಾಲ್ಬೀಮ್, ಬೀತ್ ಷೆಮೆಷ್, ಏಲೋನ್, ಬೇತ್ ಹಾನಾನ್;
11 : ಬಿನ್‍ಹೆಸೆದ್ - ಅರುಬ್ಬೋತ್ (ಸೋಕೋ, ಹೇಫೆರ್ ಎಂಬ ಪ್ರದೇಶಗಳು ಅವನ
ವಶದಲ್ಲಿದ್ದವು).
12 : ಬಿನ್‍ಅಬೀನಾದಾಬ್ - ನಾಪೋತ್‍ದೋರ್ (ಇವನು ಸೊಲೊಮೋನನ ಮಗಳು
ಟಾಫತಳನ್ನು ವಿವಾಹವಾಗಿದ್ದನು);
13 : ಅಹೀಲೂದನ ಮಗ ಬಾಣಾ - ತಾಣಕ್, ಮೆಗಿದ್ದೋ, ಚಾರೆತಾನಿನ ಬಳಿಯಲ್ಲಿರುವ
ಜೆಸ್ರೀಲಿನ ಅಡಿಯಲ್ಲಿದ್ದ ಬೇತ್‍ಷೆಯಾನಿನಿಂದ ಆಬೇಲ್ ಮೆಹೋಲದವರೆಗೂ ಇದ್ದ,
ಯೊಕ್ಮೆಯಾನಿನ ಆಚೆಗೆ ವಿಸ್ತರಿಸಿಕೊಂಡಿದ್ದ ಬೇತ್‍ಷೆಯಾನಿನ ಎಲ್ಲಾಪ್ರದೇಶ;
14 : ಬಿನ್‍ಗೆಬೆರ್ - ರಾಮೋತ್‍ಗಿಲ್ಯಾದ್ (ಗಿಲ್ಯಾದಿನಲ್ಲಿ ಮನಸ್ಸೆಯ ಮಗ ಯಾಯೀರನ
ಗ್ರಾಮಗಳಿಗೂ ಬಾಷಾನಿನಲ್ಲಿ ಪೌಳಿಗೋಡೆಗಳಿಂದಲೂ ಕಬ್ಬಿಣದ ಅಗುಳಿಗಳಿಂದಲೂ
ಭದ್ರಮಾಡಲ್ಪಟ್ಟ ಅರವತ್ತು ಪಟ್ಟಣಗಳಿದ್ದ ಅರ್ಗೋಬ ಪ್ರದೇಶ); ಇದ್ದೋವಿನ ಮಗ
ಅಹೀನಾದಾಬನು - ಮಹನಯಿಮ್;
15 : ಅಹೀಮಾಚ - ನಫ್ತಾಲಿ ಪ್ರದೇಶ (ಇವನು ಸೊಲೊಮೋನನ ಮಗಳು ಬಾಸೆಮತ
ಳನ್ನು ವಿವಾಹವಾಗಿದ್ದನು);
16 : ಹೂಷೈಯ ಮಗ ಬಾಣ - ಅಶೇರ ಹಾಗು ಅಲೋತ್;
17 : ಫಾರೂಹನ ಮಗ ಯೆಹೋಷಾಫಾಟನು - ಇಸ್ಸಾಕಾರ ಪ್ರದೇಶ;
18 : ಏಲನ ಮಗ ಶಿಮ್ಮಿ - ಬೆನ್ಯಾಮೀನರ ಪ್ರದೇಶ;
19 : ಉರೀಯನ ಮಗ ಗೆಬೆರ್ - ಗಿಲ್ಯಾದ (ಅಮೋರಿಯರ ಅರಸ ಸೀಹೋನ್, ಬಾಷಾನಿನ
ಅರಸ ಓಗ್ ಇವರ ಪ್ರದೇಶ) ಪ್ರದೇಶಕ್ಕೆಲ್ಲಾ ಅವನೊಬ್ಬನೇ ಜಿಲ್ಲಾಧಿಕಾರಿಯಾಗಿದ್ದನು.
20 : ಇಸ್ರಯೇಲ್ ಹಾಗು ಯೆಹೂದ್ಯರು ಸಮುದ್ರ ತೀರದ ಮರಳಿನಷ್ಟು ಅಸಂಖ್ಯಾತರಾದರು; ಅನ್ನಪಾನಗಳಲ್ಲಿ ಸಂತೃಪ್ತರಾಗಿ ಸಂತೋಷದಿಂದ ಬಾಳುತ್ತಿದ್ದರು.
21 : ಯೂಫ್ರಟಿಸ್‍ನದಿ ಮೊದಲ್ಗೊಂಡು ಫಿಲಿಷ್ಟಿಯರ ಮತ್ತು ಈಜಿಪ್ಟಿಯರ ದೇಶಗಳವರೆಗೂ ಇರುವ ಎಲ್ಲ ರಾಜ್ಯಗಳ ಪ್ರಜೆಗಳನ್ನು ಸೊಲೊಮೋನನು ಆಳುತ್ತಿದ್ದನು. ಆ ದೇಶದವರು, ತಮ್ಮ ಜೀವಮಾನದಲ್ಲೆಲ್ಲಾ ಅಧೀನರಾಗಿದ್ದು, ಕಪ್ಪ ಕಾಣಿಕೆಗಳನ್ನು ಸಲ್ಲಿಸುತ್ತಿದ್ದರು.
22 : ಸೊಲೋಮೋನನ ಅರಮನೆಗೆ ದಿನಂಪ್ರತಿ ಬೇಕಾಗಿದ್ದ ಆಹಾರಪದಾರ್ಥಗಳ ಪಟ್ಟಿ: ಐದುಸಾವಿರ ಲೀಟರ್ ಗೋದಿಯ ಹಿಟ್ಟು, ಹತ್ತು ಸಾವಿರ ಲೀಟರ್ ಜವೆಗೋದಿಯ ಹಿಟ್ಟು;
23 : ಹತ್ತು ಕಟ್ಟಿ ಮೇಯಿಸಿದ ಎತ್ತುಗಳು, ಇಪ್ಪತ್ತು ಬಿಟ್ಟು ಮೇಯಿಸಿದ ಎತ್ತುಗಳು, ನೂರು ಕುರಿಗಳು; ಇವುಗಳ ಜೊತೆಗೆ, ದುಪ್ಪಿ, ಜಿಂಕೆ, ಸಾರಂಗ, ಕೊಬ್ಬಿದ ಕೋಳಿಗಳು.
24 : ಅವನು ಯೂಫ್ರೆಟಿಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲ್ಗೊಂಡು ಗಾಜದವರೆಗಿರುವ ಈಚೆಯ ಎಲ್ಲಾ ರಾಜರಿಗೂ ಅಧಿಪತಿಯಾಗಿದ್ದನು. ಸುತ್ತಮುತ್ತಲಿನ ರಾಜರೊಡನೆ ಶಾಂತಿಸಮಾಧಾನದಿಂದಿದ್ದನು.
25 : ಸೊಲೊಮೋನನ ಆಳ್ವಿಕೆಯಲ್ಲೆಲ್ಲಾ ದಾನ್ ಪಟ್ಟಣದಿಂದ ಬೇರ್ಷೆಬದವರೆಗಿರುವ ಸಮಸ್ತ ಇಸ್ರಯೇಲರು ಹಾಗು ಯೆಹೂದ್ಯರು ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು.
26 : ಸೊಲೊಮೋನನ ಲಾಯಗಳಲ್ಲಿ ನಾಲ್ವತ್ತು ಸಾವಿರ ರಥಾಶ್ವಗಳಿಗೆ ಸ್ಥಳವಿತ್ತು; ಅವನಿಗೆ ಹನ್ನೆರಡು ಸಾವಿರ ಮಂದಿ ರಾಹುತರಿದ್ದರು.
27 : ಮೇಲೆ ಹೇಳಿದ ಜಿಲ್ಲಾಧಿಕಾರಿಗಳು ತಮತಮಗೆ ನೇಮಕವಾದ ತಿಂಗಳಲ್ಲಿ ಅರಸ ಸೊಲೊಮೋನನಿಗೂ ಅವನ ಪಂಕ್ತಿಯಲ್ಲಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದ ಎಲ್ಲರಿಗೂ ಬೇಕಾಗುವ ಆಹಾರ ಪದಾರ್ಥಗಳನ್ನು ಯಾವ ಕೊರತೆಯೂ ಇಲ್ಲದೆ ಒದಗಿಸುತ್ತಿದ್ದರು.
28 : ಇದಲ್ಲದೆ, ಅವರು ರಥಾಶ್ವಗಳಿಗಾಗಿ ಹಾಗು ಸವಾರಿ ಕುದುರೆಗಳಿಗಾಗಿ ನೇಮಕವಾದಷ್ಟು ಜವೆಗೋದಿಯನ್ನೂ ಹುಲ್ಲನ್ನೂ ಕುದುರೆಗಳಿದ್ದ ಸ್ಥಳಕ್ಕೆ ತಂದು ಒಪ್ಪಿಸುತ್ತಿದ್ದರು.
29 : ದೇವರು ಸೊಲೊಮೋನನಿಗೆ ಸಮುದ್ರ ತೀರದ ಮರಳಿನಷ್ಟು ಅಪರಿಮಿತವಾದ ಜ್ಞಾನ ವಿವೇಕಗಳನ್ನೂ ಮನೋವಿಶಾಲತೆಯನ್ನೂ ಅನುಗ್ರಹಿಸಿದ್ದರು.
30 : ಅವನ ಜ್ಞಾನ ಮೂಡಣ ದೇಶದವರೆಲ್ಲರ ಜ್ಞಾನಕ್ಕಿಂತಲು, ಈಜಿಪ್ಟರ ಸರ್ವಜ್ಞಾನಕ್ಕಿಂತಲು ಮಿಗಿಲಾಗಿತ್ತು.
31 : ಅವನು ಜೆರಹನ ಮಗನಾದ ಏತಾನ್, ಮಾಹೋಲನ ಮಕ್ಕಳಾದ ಹೇಮಾನ್, ಕಲ್ಕೋಲ್, ದರ್ದ ಮೊದಲಾದ ಎಲ್ಲರಿಗಿಂತಲೂ ಜ್ಞಾನಿಯಾಗಿದ್ದನು. ಸುತ್ತ ಮುತ್ತಲಿನ ಜನಾಂಗಗಳಲ್ಲೆಲ್ಲಾ ಅವನ ಹೆಸರು ಪ್ರಸಿದ್ಧವಾಯಿತು.
32 : ಅವನು ನುಡಿದ ಜ್ಞಾನೋಕ್ತಿಗಳು ಮೂರು ಸಾವಿರ; ರಚಿಸಿದ ಗೀತೆಗಳು ಸಾವಿರದ ಐದು.
33 : ಅವನು, ಲೆಬನೋನಿನ ದೇವದಾರುವೃಕ್ಷ ಮೊದಲ್ಗೊಂಡು ಗೋಡೆಯಲ್ಲಿ ಬೆಳೆಯುವ ಹಿಸ್ಸೋಪ್ ಗಿಡದವರೆಗಿರುವ ಎಲ್ಲಾ ವನಸ್ಪತಿಗಳನ್ನು ಕುರಿತು, ಎಲ್ಲಾ ಪಶುಪಕ್ಷಿ, ಜಲಜಂತು, ಕ್ರಿಮಿಕೀಟಗಳನ್ನು ಕುರಿತು ಪ್ರಸ್ತಾಪಿಸಬಲ್ಲವನಾಗಿದ್ದನು.
34 : ಸೊಲೊಮೋನನ ಜ್ಞಾನ ವಿಶೇಷವನ್ನು ಕುರಿತು ಕೇಳಿದ ಸರ್ವಜನಾಂಗಗಳ ಭೂಪಾಲರಲ್ಲಿ ಅನೇಕರು ಅವನ ಜ್ಞಾನವಾಕ್ಯಗಳನ್ನು ಕೇಳುವುದಕ್ಕಾಗಿ ಬರುತ್ತಿದ್ದರು.