Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಅರಸು


1 : ಸೊಲೊಮೋನನು ಈಜಿಪ್ಟಿನ ಅರಸ ಫರೋಹನ ಮಗಳನ್ನು ಮದುವೆಮಾಡಿಕೊಂಡು ಅವನ ಅಳಿಯನಾದ. ತನ್ನ ಅರಮನೆಯನ್ನು, ಸರ್ವೇಶ್ವರನ ಮಹಾದೇವಾಲಯವನ್ನು ಹಾಗು ಜೆರುಸಲೇಮಿನ ಸುತ್ತಣ ಗೋಡೆಯನ್ನು ಕಟ್ಟಿಮುಗಿಸುವ ತನಕ ಆಕೆಯನ್ನು ದಾವೀದ ನಗರದಲ್ಲೇ ಇರಿಸಿಕೊಂಡನು.
2 : ಅಲ್ಲಿಯವರೆಗೂ ಸರ್ವೇಶ್ವರಸ್ವಾಮಿಯ ನಾಮಕ್ಕೋಸ್ಕರ ಆಲಯವೇ ಇರಲಿಲ್ಲ. ಆದುದರಿಂದ ಜನರು ಪೂಜಾ ಸ್ಥಳಗಳಲ್ಲಿ ಬಲಿಯರ್ಪಣೆ ಮಾಡುತ್ತಿದ್ದರು.
3 : ಸೊಲೊಮೋನನು ಸರ್ವೇಶ್ವರನನ್ನು ಪ್ರೀತಿಸಿ, ತನ್ನ ತಂದೆ ದಾವೀದನ ವಿಧಿಗಳನ್ನು ಕೈಗೊಳ್ಳುತ್ತಿದ್ದರೂ ಆ ಪೂಜಾಸ್ಥಳಗಳಲ್ಲೇ ಬಲಿಯರ್ಪಿಸುತ್ತಿದ್ದನು; ಅಲ್ಲಿಯೇ ಧೂಪಾರತಿ ಎತ್ತುತ್ತಿದ್ದನು.
4 : ಒಮ್ಮೆ ಅರಸ ಸೊಲೊಮೋನನು ಬಲಿಯರ್ಪಿಸುವುದಕ್ಕಾಗಿ, ಪೂಜಾಸ್ಥಳಗಳಲ್ಲೇ ಪ್ರಾಮುಖ್ಯವಾದ ಗಿಬ್ಯೋನಿಗೆ ಹೋದನು. ಅಲ್ಲಿನ ಪೀಠದ ಮೇಲೆ ಸಹಸ್ರ ಬಲಿಗಳನ್ನು ಸಮರ್ಪಿಸಿದಾಗ,
5 : ದೇವರಾದ ಸರ್ವೇಶ್ವರ ಆ ರಾತ್ರಿ ಕನಸಿನಲ್ಲಿ ಅವನಿಗೆ ಕಾಣಿಸಿಕೊಂಡರು; “ನಿನಗೆ ಯಾವ ವರಬೇಕು ಕೇಳಿಕೋ,” ಎಂದು ಹೇಳಿದರು.
6 : ಸೊಲೊಮೋನನು, “ನಿಮಗೆ ಪ್ರಾಮಾಣಿಕನಾಗಿ ನೀತಿಯಿಂದಲೂ ಯಥಾರ್ಥ ಚಿತ್ತದಿಂದಲೂ ನಡೆದುಕೊಂಡ ನಿಮ್ಮ ದಾಸನೂ ನನ್ನ ತಂದೆಯೂ ಆದ ದಾವೀದನಿಗೆ ನೀವು ಮಹಾಕೃಪೆಯನ್ನು ತೋರಿಸಿದಿರಿ; ಆ ಕೃಪೆಯನ್ನು ಮುಂದುವರಿಸುತ್ತಾ ಈಗ ಅವರ ಸಿಂಹಾಸನಕ್ಕೆ ಒಬ್ಬ ಮಗನನ್ನು ಅನುಗ್ರಹಿಸಿ ಅದನ್ನು ಸಂಪೂರ್ಣ ಗೊಳಿಸಿದ್ದೀರಿ.
7 : ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು.
8 : ವ್ಯವಹಾರಜ್ಞಾನ ಇಲ್ಲದವನು; ನಿಮ್ಮ ದಾಸನಾದ ನಾನು ಅಸಂಖ್ಯಾತ ಮಹಾ ಜನಾಂಗವಾದ ನಿಮ್ಮ ಸ್ವಕೀಯ ಪ್ರಜೆಯ ಮಧ್ಯೆ ಇದ್ದೇನೆ.
9 : ಆದುದರಿಂದ ಅದನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿರಿ. ಈ ಮಹಾಜನಾಂಗವನ್ನು ಆಳಲು ಯಾರೂ ಸಮರ್ಥರಲ್ಲ,” ಎಂದು ಬೇಡಿಕೊಂಡನು.
10 : ಸೊಲೊಮೋನನ ಈ ಬಿನ್ನಹವನ್ನು ಸರ್ವೇಶ್ವರನಾದ ದೇವರು ಮೆಚ್ಚಿದರು.
11 : ಅವರು ಆತನಿಗೆ, “ನೀನು ದೀರ್ಘಾಯುಷ್ಯವನ್ನಾಗಲಿ, ಸಿರಿಸಂಪತ್ತನ್ನಾಗಲಿ, ಶತ್ರುವಿನಾಶವನ್ನಾಗಲಿ ಕೇಳಿಕೊಳ್ಳಲಿಲ್ಲ. ನ್ಯಾಯನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ.
12 : ಆದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ. ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ.
13 : ಇದಲ್ಲದೆ, ನೀನು ಕೇಳದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಸಿರಿಸಂಪತ್ತಿನಲ್ಲಿಯೂ ಘನತೆ ಗೌರವದಲ್ಲಿಯೂ ನಿನಗೆ ಸಮಾನನಾದ ಅರಸನು ಇನ್ನೊಬ್ಬನಿರುವುದಿಲ್ಲ.
14 : ನೀನು ನಿನ್ನ ತಂದೆ ದಾವೀದನಂತೆ ನನ್ನ ಮಾರ್ಗದಲ್ಲೇ ನಡೆದು ನನ್ನ ಆಜ್ಞಾವಿಧಿಗಳನ್ನು ಕೈಗೊಳ್ಳುವುದಾದರೆ ನಿನ್ನ ಆಯುಷ್ಯವನ್ನೂ ಹೆಚ್ಚಿಸುವೆನು,” ಎಂದರು.
15 : ಸೊಲೊಮೋನನು ನಿದ್ರೆಯಿಂದ ಎಚ್ಚೆತ್ತಾಗ, ಅದು ಕನಸೆಂದು ತಿಳಿದುಕೊಂಡನು. ಅವನು ಜೆರುಸಲೇಮಿಗೆ ಬಂದನಂತರ ಸರ್ವೇಶ್ವರನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ದಹನಬಲಿಗಳನ್ನೂ ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿ, ತನ್ನ ಎಲ್ಲಾ ಪರಿವಾರದವರಿಗೆ ಔತಣವನ್ನು ಏರ್ಪಡಿಸಿದನು.
16 : ಒಂದು ದಿನ ಇಬ್ಬರು ವೇಶ್ಯೆಯರು ಅರಸನ ಸನ್ನಿಧಿಗೆ ಬಂದರು.
17 : ಅವರಲ್ಲಿ ಒಬ್ಬಳು ಅರಸನಿಗೆ, “ಒಡೆಯಾ, ಕೇಳಿ; ನಾನೂ ಇವಳೂ ಒಂದೇ ಮನೆಯಲ್ಲಿ ವಾಸಿಸುತ್ತೇವೆ. ಇವಳು ಮನೆ ಯಲ್ಲಿದ್ದಾಗಲೇ ನಾನು ಒಂದು ಮಗುವನ್ನು ಹೆತ್ತೆ.
18 : ಮೂರನೆಯ ದಿನದಲ್ಲಿ ಇವಳೂ ಹೆತ್ತಳು. ನಾವಿಬ್ಬರೂ ಒಟ್ಟಿಗೆ ಇದ್ದೆವು; ನಮ್ಮಿಬ್ಬರ ಹೊರತು ಆ ಮನೆಯಲ್ಲಿ ಯಾರೂ ಇರಲಿಲ್ಲ.
19 : ಇವಳು ರಾತ್ರಿಯಲ್ಲಿ ತನ್ನ ಕೂಸಿನ ಮೇಲೆ ಹೊರಳಿದ್ದರಿಂದ ಅದು ಸತ್ತಿತು.
20 : ಮಧ್ಯರಾತ್ರಿಯಲ್ಲಿ ಇವಳೆದ್ದು, ನಿಮ್ಮ ಸೇವಕಳಾದ ನಾನು ಗಾಢನಿದ್ರೆಯಲ್ಲಿದ್ದಾಗ, ನನ್ನ ಮಗುವನ್ನು ನನ್ನ ಬಳಿಯಿಂದ ತೆಗೆದು ತನ್ನ ಮಗ್ಗುಲಲ್ಲಿ ಇಟ್ಟುಕೊಂಡಳು. ಸತ್ತುಹೋದ ತನ್ನ ಮಗುವನ್ನು ನನ್ನ ಮಗ್ಗುಲಲ್ಲಿಟ್ಟಳು.
21 : ನಾನು ಬೆಳಿಗ್ಗೆ ಎದ್ದು ಮಗುವಿಗೆ ಮೊಲೆಕುಡಿಸಬೇಕೆಂದಿರುವಾಗ ಅದು ಸತ್ತಿತ್ತು. ಆದರೆ ಅದನ್ನು ಬೆಳಕಿನಲ್ಲಿ ನೋಡಿದಾಗ ಅದು ನಾನು ಹೆತ್ತ ಕೂಸಾಗಿರಲಿಲ್ಲ,” ಎಂದು ಹೇಳಿದಳು.
22 : ಆಗ ಎರಡನೆಯವಳು, “ಹಾಗಲ್ಲ, ಬದುಕಿರುವವನು ನನ್ನ ಮಗ; ಸತ್ತಿರುವವನು ನಿನ್ನ ಮಗ”, ಎಂದು ನುಡಿದಳು. ಮೊದಲನೆಯವಳು ಮತ್ತೆ, “ಇಲ್ಲ ಸತ್ತಿರುವವನು ನಿನ್ನ ಮಗ; ಬದುಕಿರುವವನು ನನ್ನ ಮಗ,” ಎಂದಳು. ಹೀಗೆ ಅವರು ಅರಸನ ಮುಂದೆ ವಾದಿಸುತ್ತಾ ಇದ್ದರು.
23 : ಆಗ ಅರಸನು, “ ‘ಜೀವದಿಂದಿರುವ ಕೂಸು ನನ್ನದು, ಸತ್ತಿರುವುದು ನಿನ್ನದು,’ ಎಂದು ಒಬ್ಬಳು ಹೇಳುತ್ತಾಳೆ; ಇನ್ನೊಬ್ಬಳು, ‘ಇಲ್ಲ, ಸತ್ತಿರುವುದು ನಿನ್ನದು, ಜೀವದಿಂದಿರುವುದು ನನ್ನದು,’ ಎನ್ನುತ್ತಾಳೆ.
24 : ನನಗೊಂದು ಕತ್ತಿಯನ್ನು ತಂದುಕೊಡಿ,” ಎಂದು ಸೇವಕರಿಗೆ ಹೇಳಿದನು.
25 : ಅವರು ತಂದರು. ಅರಸನು ಅವರಿಗೆ, “ಜೀವದಿಂದಿರುವ ಕೂಸನ್ನು ಕಡಿದು, ಎರಡು ಭಾಗಮಾಡಿ, ಅರ್ಧವನ್ನು ಅವಳಿಗೂ ಅರ್ಧವನ್ನು ಇವಳಿಗೂ ಕೊಡಿ,” ಎಂದು ಅಪ್ಪಣೆ ಮಾಡಿದನು.
26 : ಆಗ, ಜೀವದಿಂದಿದ್ದ ಕೂಸಿನ ನಿಜವಾದ ತಾಯಿಗೆ ಕೂಸಿನ ವಿಷಯದಲ್ಲಿ ಕರುಳು ಕರಗಿತು; “ನನ್ರ್ನೆಡೆಯಾ, ಬೇಡಿ; ಬದುಕಿರುವ ಕೂಸನ್ನು ಅವಳಿಗೇ ಕೊಟ್ಟು ಬಿಡಿ; ಅದನ್ನು ಕೊಲ್ಲಿಸಬೇಡಿ,” ಎಂದು ಬೇಡಿಕೊಂಡಳು; ಎರಡನೆಯವಳು, “ಅದು ನನಗೂ ಬೇಡ, ನಿನಗೂ ಬೇಡ, ಕಡಿಯಲಿ,” ಎಂದು ಕೂಗಿದಳು.
27 : ಕೂಡಲೆ ಅರಸನು, “ಬದುಕಿರುವ ಕೂಸನ್ನು ಕೊಲ್ಲಬೇಡಿ, ಅದನ್ನು ಆ ಸ್ತ್ರೀಗೆ ಕೊಡಿ; ಅವಳೇ ಅದರ ತಾಯಿ,” ಎಂದು ಆಜ್ಞಾಪಿಸಿದನು.
28 : ಇಸ್ರಯೇಲರೆಲ್ಲರೂ ಅರಸನ ಈ ತೀರ್ಪನ್ನು ಕೇಳಿದರು. ನ್ಯಾಯ ನಿರ್ಣಯಿಸುವುದಕ್ಕೆ ಈತನಲ್ಲಿ ದೇವದತ್ತ ಜ್ಞಾನವಿದೆ ಎಂದು ತಿಳಿದು ಅವನ ಬಗ್ಗೆ ಅಪಾರ ಗೌರವ ಉಳ್ಳವರಾದರು.

· © 2017 kannadacatholicbible.org Privacy Policy