1 : ಮೂರು ವರ್ಷಗಳವರೆಗೆ ಇಸ್ರಯೇಲರಿಗೂ ಸಿರಿಯಾದವರಿಗೂ ಯುದ್ಧ ನಡೆಯಲಿಲ್ಲ.
2 : ಮೂರನೆಯ ವರ್ಷದಲ್ಲಿ ಯೆಹೂದ್ಯರ ಅರಸ ಯೆಹೋಷಾಫಾಟನು ಇಸ್ರಯೇಲರ ಅರಸನ ಬಳಿಗೆ ಬಂದನು.
3 : ಆಗ ಇಸ್ರಯೇಲರ ಅರಸನು ತನ್ನ ಸೇವಕರಿಗೆ, “ಗಿಲ್ಯಾದಿನ ರಾಮೋತ್ ಪಟ್ಟಣ ನಮ್ಮದೆಂದು ನಿಮಗೆ ಗೊತ್ತುಂಟಲ್ಲವೆ; ಅದನ್ನು ಇಷ್ಟರವರೆಗೂ ಸಿರಿಯಾದವರ ಅರಸನಿಂದ ತಿರುಗಿ ತೆಗೆದುಕೊಳ್ಳದೆ ಸುಮ್ಮನೆ ಕುಳಿತಿರುತ್ತೇವೆ,” ಎಂದು ಹೇಳಿದನು.
4 : ಯೆಹೋಷಾಫಾಟನನ್ನು “ಯುದ್ಧ ಮಾಡುವುದಕ್ಕೆ ನೀನೂ ನಮ್ಮ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಬರುತ್ತಿಯೋ?,” ಎಂದು ಕೇಳಿದನು. ಅವನು, “ನಾನೂ ನೀನೂ, ನನ್ನ ಜನರೂ ನಿನ್ನ ಜನರೂ, ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ ಅಲ್ಲವೇ?” ಎಂದು ಉತ್ತರಕೊಟ್ಟನು.
5 : ಮಾತ್ರವಲ್ಲ, “ಸರ್ವೇಶ್ವರನ ಸನ್ನಿಧಿಯಲ್ಲಿ ಈಗಲೆ ವಿಚಾರಿಸು,” ಎಂದು ಇಸ್ರಯೇಲರ ಅರಸನನ್ನು ಬೇಡಿಕೊಂಡನು.
6 : ಆಗ ಇಸ್ರಯೇಲರ ಅರಸನು ತನ್ನ ರಾಜ್ಯದಲ್ಲಿದ್ದ ಸುಮಾರು ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ, “ನಾನು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೋಗಬಹುದೋ? ಬಾರದೋ?” ಎಂದು ಕೇಳಿದನು. ಅವರು, “ಹೋಗಬಹುದು, ಸರ್ವೇಶ್ವರ ಅದನ್ನು ಕೈಗೆ ಒಪ್ಪಿಸಿವರು,” ಎಂದರು.
7 : ಆದರೆ ಯೆಹೋಷಾಫಾಟನು ಇಸ್ರಯೇಲರ ಅರಸನನ್ನು, “ಸರ್ವೇಶ್ವರನ ಪ್ರವಾದಿಗಳಲ್ಲಿ ಇವರ ಹೊರತಾಗಿ ನಾವು ವಿಚಾರಿಸಬಹುದಾದ ಬೇರೆ ಪ್ರವಾದಿಯಿಲ್ಲವೇ?”, ಎಂದು ಕೇಳಿದನು.
8 : ಅವನು, “ನಮಗಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸಬಲ್ಲವನಾದ ಇನ್ನೊಬ್ಬ ಪ್ರವಾದಿಯಿರುತ್ತಾನೆ; ಅವನು ಇಮ್ಲನ ಮಗನಾದ ಮೀಕಾಯೆಹು ಎಂಬವನು. ಆದರೆ ನಾನು ಅವನನ್ನು ಹಗೆಮಾಡುತ್ತೇನೆ; ಅವನು ನನ್ನನ್ನು ಕುರಿತು ಯಾವಾಗಲೂ ಶುಭವನ್ನಲ್ಲ, ಅಶುಭವನ್ನೇ ಮುಂತಿಳಿಸುತ್ತಾನೆ,” ಎಂದು ಉತ್ತರಕೊಟ್ಟನು. ಅದಕ್ಕೆ ಯೆಹೋಷಾಫಾಟನು, “ಅರಸರು ಹಾಗನ್ನಬಾರದು,” ಎಂದನು.
9 : ಆಗ ಇಸ್ರಯೇಲರ ಅರಸನು ಒಬ್ಬ ಕಂಚುಕಿಯನ್ನು ಕರೆದು, “ಬೇಗ ಹೋಗಿ ಇಮ್ಲನ ಮಗ ಮೀಕಾಯೆಹುವನ್ನು ಕರೆದುಕೊಂಡು ಬಾ,” ಎಂದು ಆಜ್ಞಾಪಿಸಿದನು.
10 : ಇಸ್ರಯೇಲರ ಅರಸನೂ ಯೆಹೂದ್ಯರ ಅರಸ ಯೆಹೋಷಾಫಾಟನೂ ರಾಜವಸ್ತ್ರಗಳನ್ನು ಧರಿಸಿಕೊಂಡು ಸಮಾರಿಯ ಪಟ್ಟಣದ ಹೆಬ್ಬಾಗಿಲಿನ ಹತ್ತಿರವಿರುವ ಬಯಲಿನಲ್ಲಿ ತಮ್ಮ ತಮ್ಮ ಆಸನಗಳ ಮೇಲೆ ಕುಳಿತುಕೊಂಡರು. ಎಲ್ಲ ಪ್ರವಾದಿಗಳು ಅವರ ಮುಂದೆ ಪರವಶರಾಗಿ ಮಾತಾಡತೊಡಗಿದರು.
11 : ಅವರಲ್ಲಿ ಕೆನಾನನ ಮಗ ಚಿದ್ಕೀಯ ಎಂಬವನು ಕಬ್ಬಿಣದ ಕೊಂಬುಗಳನ್ನು ಮಾಡಿಸಿ ತಲೆಗೆ ಕಟ್ಟಿಕೊಂಡು ಬಂದು, “ಕೊಂಬುಗಳಿಂದಲೋ ಎಂಬಂತೆ ನೀವು ಸಿರಿಯಾದವರನ್ನು ಇರಿದು ಕೊಂದುಹಾಕುವಿರಿ,” ಎಂದನು.
12 : ಉಳಿದ ಪ್ರವಾದಿಗಳೂ ಇದೇ ತರದ ಮಾತುಗಳನ್ನು ನುಡಿದು, “ರಾಮೋತ್ ಗಿಲ್ಯಾದಿಗೆ ಹೋಗಿ; ನೀವು ಕೃತಾರ್ಥರಾಗಿ ಬರುವಿರಿ; ಸರ್ವೇಶ್ವರ ಅದನ್ನು ಅರಸರ ಕೈಗೆ ಒಪ್ಪಿಸುವರು,” ಎಂದರು.
13 : ಇತ್ತ ಮೀಕಾಯೆಹುವನ್ನು ಕರೆಯುವುದಕ್ಕೆ ಬಂದಿದ್ದ ದೂತನು, “ನೋಡಿ ಎಲ್ಲಾ ಪ್ರವಾದಿಗಳು ಏಕಮನಸ್ಸಿನಿಂದ ಅರಸರಿಗೆ ಶುಭವನ್ನೇ ಮುಂದೆ ತಿಳಿಸುತ್ತಾರೆ; ದಯವಿಟ್ಟು ನೀವೂ ಅವರಂತೆ ಶುಭವನ್ನೇ ಮುಂತಿಳಿಸಿ,” ಎಂದು ಹೇಳಿದನು.
14 : ಅದಕ್ಕೆ ಮೀಕಾಯೆಹುವು, “ಸರ್ವೇಶ್ವರನಾಣೆ, ಸರ್ವೇಶ್ವರ ಹೇಳುವುದನ್ನೇ ನುಡಿಯುತ್ತೇನೆ,” ಎಂದು ಉತ್ತರಕೊಟ್ಟನು.
15 : ಅವನು ಅರಸನ ಬಳಿಗೆ ಬಂದಾಗ ಅರಸನು, “ಮೀಕಾಯೆಹುವೇ, ನಾವು ರಾಮೋತ್ಗಿಲ್ಯಾದನ ಮೇಲೆ ಯುದ್ಧಕ್ಕೆ ಹೋಗಬಹುದೋ ಬಾರದೋ?,” ಎಂದು ಕೇಳಿದನು. ಅವನು, “ಹೋಗಬಹುದು, ಕೃತಾರ್ಥರಾಗಿ ಬರುವಿರಿ; ಸರ್ವೇಶ್ವರ ಪಟ್ಟಣವನ್ನು ಅರಸರ ಕೈಗೆ ಒಪ್ಪಿಸುವರು,” ಎಂದು ಹೇಳಿದನು.
16 : ಆಗ ಅರಸನು ಅವನಿಗೆ, “ಸತ್ಯವನ್ನೇ ತಿಳಿಸಬೇಕೆಂದು ಸರ್ವೇಶ್ವರನ ಹೆಸರಿನಲ್ಲಿ ನಿನ್ನಿಂದ ಎಷ್ಟುಸಾರಿ ಪ್ರಮಾಣಮಾಡಿಸಬೇಕು?” ಎಂದನು.
17 : ಆಗ ಅವನು, “ಇಸ್ರಯೇಲರೆಲ್ಲರೂ ಕುರುಬನಿಲ್ಲದ ಕುರಿಗಳಂತೆ ಬೆಟ್ಟಗಳಲ್ಲಿ ಚದರಿಹೋದದ್ದನ್ನು ಕಂಡೆ; ಆಗ ಸರ್ವೇಶ್ವರ, ‘ಇವರು ಒಡೆಯನಿಲ್ಲದವರಾಗಿರುತ್ತಾರೆ; ಸಮಾಧಾನದಿಂದ ತಮ್ಮ ತಮ್ಮ ಮನೆಗಳಿಗೆ ಹೋಗಲಿ,’ ಎಂದರು” ಎಂಬುದಾಗಿ ಉತ್ತರಕೊಟ್ಟನು.
18 : ಆಗ ಇಸ್ರಯೇಲರ ಅರಸನು ಯೆಹೋಷಾಫಾಟನಿಗೆ, “ಇವನು ನನಗೆ ಯಾವಾಗಲೂ ಶುಭವನ್ನಲ್ಲ, ಅಶುಭವನ್ನೇ ಮುಂತಿಳಿಸುತ್ತಾನೆಂದು ನಾನು ನಿನಗೆ ಹೇಳಲಿಲ್ಲವೇ?,” ಎಂದನು.
19 : ಅದಕ್ಕೆ ಮಿಕಾಯೆಹುವು, “ಅದಿರಲಿ, ಸರ್ವೇಶ್ವರನ ವಾಕ್ಯವನ್ನು ಕೇಳು: ಸರ್ವೇಶ್ವರ ತಮ್ಮ ಸಿಂಹಾಸನದ ಮೇಲೆ ಕುಳಿತುಕೊಂಡದ್ದನ್ನೂ ಪರಲೋಕಸೈನ್ಯಗಳು ಅವರ ಎಡಬಲಗಡೆಗಳಲ್ಲಿ ನಿಂತದ್ದನ್ನೂ ಕಂಡೆ.
20 : ಸರ್ವೇಶ್ವರ ತಮ್ಮ ಹತ್ತಿರ ನಿಂತವರನ್ನು, “ಅಹಾಬನು ಹತನಾಗಿ ಬೀಳುವಂತೆ ಅವನನ್ನು ರಾಮೋತ್ಗಿಲ್ಯಾದಿನ ಯುದ್ಧಕ್ಕೆ ಯಾರು ಪ್ರೇರಿಸುವಿರಿ?”, ಎಂದು ಕೇಳಿದಾಗ ಒಬ್ಬನು ಒಂದು ವಿಧವಾಗಿಯೂ ಇನ್ನೊಬ್ಬನು ಇನ್ನೊಂದು ವಿಧವಾಗಿಯೂ ಉತ್ತರ ಕೊಟ್ಟರು.
21 : ಕಡೆಗೆ ಒಂದು ಆತ್ಮವು ಸರ್ವೇಶ್ವರನ ಮುಂದೆ ಬಂದು ನಿಂತು, ‘ನಾನು ಹೋಗಿ ಅವನನ್ನು ಪ್ರೇರಿಸುವೆನು,’ ಎಂದಿತು.
22 : ‘ಹೇಗೆ ಪ್ರೇರಿಸುವೆ?’ ಎಂದು ಸರ್ವೇಶ್ವರ ಕೇಳಿದರು. ಅದು, ‘ನಾನು ಅಸತ್ಯವನ್ನಾಡುವ ಆತ್ಮವಾಗಿ ಅವನ ಎಲ್ಲ ಪ್ರವಾದಿಗಳಲ್ಲಿ ಸೇರುವೆನು,’ ಎಂದು ಉತ್ತರ ಕೊಟ್ಟಿತು. ಆಗ ಸರ್ವೇಶ್ವರ, ‘ಹೋಗಿ ಅದರ ಅಂತೆಯೇ ಮಾಡು; ಅವನನ್ನು ಪ್ರೇರಿಸಿ ಸಫಲನಾಗುವೆ’, ಎಂದರು.
23 : ನೋಡು ಸರ್ವೇಶ್ವರ ನಿನ್ನ ವಿಷಯದಲ್ಲಿ ಕೇಡು ನುಡಿದು ನಿನ್ನ ಎಲ್ಲಾ ಪ್ರವಾದಿಗಳಲ್ಲಿ ಅಸತ್ಯವನ್ನಾಡುವ ಆತ್ಮವನ್ನು ಕಳುಹಿಸಿದ್ದಾರೆ,” ಎಂದು ಹೇಳಿದನು.
24 : ಆಗ ಕೆನಾನನ ಮಗ ಚಿದ್ಕೀಯನು ಮಿಕಾಯೆಹುವಿನ ಬಳಿಗೆ ಬಂದು ಅವನ ಕೆನ್ನೆಗೆ ಒಂದು ಪೆಟ್ಟುಕೊಟ್ಟು, “ಸರ್ವೇಶ್ವರನ ಆತ್ಮ ನನ್ನನ್ನು ಬಿಟ್ಟು ನಿನ್ನೊಂದಿಗೆ ಮಾತಾಡುವುದಕ್ಕೆ ಯಾವ ಮಾರ್ಗವಾಗಿ ಬಂದಿತು?,” ಎಂದನು.
25 : ಮೀಕಾಯೆಹುವು, “ನೀನು ಅಡಗಿಕೊಳ್ಳುವುದಕ್ಕೆ ಒಳಗಿನ ಕೋಣೆಗೆ ಹೋಗುವ ದಿನದಲ್ಲಿ ಅದು ನಿನಗೆ ಗೊತ್ತಾಗುವುದು,” ಎಂದು ಉತ್ತರ ಕೊಟ್ಟನು.
26 : ಆಗ ಇಸ್ರಯೇಲರ ಅರಸನು ಸೇವಕರಿಗೆ, “ಮೀಕಯೆಹುವನ್ನು ಹಿಡಿದುಕೊಂಡು ಹೋಗಿ ಪುರಾಧಿಕಾರಿಯಾದ ಅಮೋನನಿಗೂ ರಾಜಪುತ್ರನಾದ ಯೋವಾಷನಿಗೂ ಒಪ್ಪಿಸಿರಿ;
27 : ಅವರಿಗೆ, ‘ನಾನು ಸುರಕ್ಷಿತನಾಗಿ ಹಿಂದಿರುಗುವವರಿಗೂ ಇವನನ್ನು ಸೆರೆಯಲ್ಲಿಟ್ಟು ಸೆರೆಮನೆಯ ಅನ್ನಪಾನಗಳನ್ನೇ ಕೊಟ್ಟು ಕರಗಿಸಬೇಕು,’ ಎಂದು ಅರಸನು ಹೇಳಿದ್ದಾರೆಂದು ತಿಳಿಸಿರಿ,” ಎಂದು ಆಜ್ಞಾಪಿಸಿದನು.
28 : ಮೀಕಾಯೆಹುವು ಅರಸನಿಗೆ, “ನೀನು ಸುರಕ್ಷಿತನಾಗಿ ಬರುವುದಾದರೆ ನಾನು ನುಡಿದದ್ದು ಸರ್ವೇಶ್ವರನ ಮಾತಲ್ಲವೆಂದು ತಿಳಿದುಕೋ,” ಎಂದು ಹೇಳಿ, “ಮಹಾಜನರೇ, ನನ್ನ ಮಾತನ್ನು ಗಮನದಲ್ಲಿಡಿ,” ಎಂದು ಕೂಗಿದನು.
29 : ಇಸ್ರಯೇಲರ ಅರಸನು ಹಾಗು ಯೆಹೂದ್ಯರ ಅರಸ ಯೆಹೋಷಾಫಾಟನು ರಾಮೋತ್ ಗಿಲ್ಯಾದಿಗೆ ವಿರುದ್ಧ ಯುದ್ಧಕ್ಕೆ ಹೊರಟರು.
30 : ಇಸ್ರಯೇಲರ ಅರಸನು ಯೆಹೋಷಾಫಾಟನಿಗೆ, “ನಾನು ವೇಷಹಾಕಿಕೊಂಡು ರಣರಂಗಕ್ಕೆ ಬರುತ್ತೇನೆ; ನೀನಾದರೋ ನಿನ್ನ ರಾಜವಸ್ತ್ರಗಳನ್ನು ಧರಿಸಿಕೊಂಡೇ ಬಾ;” ಎಂದು ಹೇಳಿ ವೇಷ ಹಾಕಿಕೊಂಡು ರಣರಂಗಕ್ಕೆ ಹೋದನು.
31 : ಸಿರಿಯಾದವರ ಅರಸನು ತನ್ನ ರಥಬಲದ ಮೂವತ್ತೆರಡು ಮಂದಿ ಅಧಿಪತಿಗಳಿಗೆ, “ನೀವು ಶತ್ರುಗಳ ಸಾಧಾರಣ ಸೈನಿಕರನ್ನೂ ಅಧಿಪತಿಗಳನ್ನೂ ಬಿಟ್ಟು ಇಸ್ರಯೇಲರ ಅರಸನಿಗೇ ಗುರಿ ಇಡಿ,” ಎಂದು ಆಜ್ಞಾಪಿಸಿದ್ದನು.
32 : ಅವರು ಯೆಹೋಷಾಫಾಟನನ್ನು ಕಂಡಾಗ ಅವನೇ ಇಸ್ರಯೇಲರ ಅರಸನೆಂದು ನೆನಸಿ, ಅವನಿಗೆ ವಿರುದ್ಧ ಯುದ್ಧಮಾಡಲು ಬಂದರು.
33 : ಅವನು ಕೂಗಿಕೊಂಡನು. ಆಗ ಇವನು ಇಸ್ರಯೇಲರ ಅರಸನಲ್ಲವೆಂಬುದು ರಥಬಲದ ಅಧಿಪತಿಗಳಿಗೆ ಗೊತ್ತಾಯಿತು. ಅವರು ಅವನನ್ನು ಬಿಟ್ಟು ಹಿಂದಿರುಗಿದರು.
34 : ಸಿರಿಯಾದವರ ಸೈನಿಕನೊಬ್ಬನು ಯಾರಿಗೂ ಗುರಿಯಿಡದೆ ಬಾಣವನ್ನೆಸೆದನು. ಆ ಬಾಣ ಇಸ್ರಯೇಲರ ಅರಸನಿಗೆ, ಅವನ ಕವಚದ ಸಂದಿನಲ್ಲಿ ಬಂದು ತಾಕಿತು. ಆಗ ಅವನು ತನ್ನ ಸಾರಥಿಗೆ, “ರಥವನ್ನು ತಿರುಗಿಸಿ ನನ್ನನ್ನು ರಣರಂಗದಿಂದ ಆಚೆಗೆ ತೆಗೆದುಕೊಂಡು ಹೋಗು; ನನಗೆ ದೊಡ್ಡ ಗಾಯವಾಗಿದೆ,” ಎಂದು ಹೇಳಿದನು.
35 : ಆ ದಿವಸ ಯುದ್ಧ ಬಹುಘೋರವಾಗಿತ್ತು. ಆದ್ದರಿಂದ ಅರಸನು ಸಿರಿಯಾದವರ ಎದುರಿಗೆ ತನ್ನರಥದಲ್ಲೇ ಆತುಕೊಂಡು ನಿಲ್ಲಬೇಕಾಯಿತು. ಸಾಯಂಕಾಲ ವಾದಾಗ ಅವನು ಸತ್ತನು. ಗಾಯದಿಂದ ರಕ್ತವು ಸುರಿದು ಸುರಿದು ರಥದ ಅಡಿಯಲ್ಲಿ ನಿಂತಿತ್ತು.
36 : ಸೂರ್ಯಾಸ್ತಮವಾದ ಕೂಡಲೆ, “ಪ್ರತಿಯೊಬ್ಬನು ತನ್ನ ಪ್ರಾಂತ್ಯಕ್ಕೂ ಪಟ್ಟಣಕ್ಕೂ ಹೋಗಲಿ,” ಎಂಬ ಕೂಗು ಇಸ್ರಯೇಲವ ಸೈನ್ಯದಲ್ಲಿ ಹಬ್ಬಿಕೊಂಡಿತು.
37 : ಅರಸನ ಶವವನ್ನು ಸಮಾರಿಯಕ್ಕೆ ತಂದು ಅಲ್ಲಿ ಸಮಾಧಿ ಮಾಡಿದರು.
38 : ವೇಶ್ಯೆಯರು ಸ್ನಾನಮಾಡುವ ಸಮಾರಿಯದ ಕೆರೆಯಲ್ಲಿ ಅವನ ರಥವನ್ನು ತೊಳೆಯುತ್ತಿದ್ದಾಗ, ನಾಯಿಗಳು ಬಂದು ಅದರಲ್ಲಿದ್ದ ರಕ್ತವನ್ನು ನೆಕ್ಕಿದವು, ಹೀಗೆ ಸರ್ವೇಶ್ವರ ಹೇಳಿದ ಮಾತು ನೆರವೇರಿತು.
39 : ಅಹಾಬನ ಉಳಿದ ಚರಿತ್ರೆ, ಅವನು ಕಟ್ಟಿಸಿದ ದಂತಮಂದಿರ, ಪಟ್ಟಣಗಳು, ಇವುಗಳ ವಿವರ, ಹಾಗು ಅವನ ಬೇರೆ ಕಾರ್ಯಸಾಧನೆಗಳು ಇಸ್ರಯೇಲರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
40 : ಅಹಾಬನು ಸತ್ತು ಪಿತೃಗಳ ಬಳಿಗೆ ಸೇರಿದನು. ಅವನಿಗೆ ಬದಲಾಗಿ ಅವನ ಮಗ ಅಹಜ್ಯ ಎಂಬವನು ಅರಸನಾದನು.
41 : ಇಸ್ರಯೇಲರ ಅರಸ ಅಹಾಬನ ನಾಲ್ಕನೆಯ ವರ್ಷದಲ್ಲಿ ಆಸನ ಮಗ ಯೆಹೋಷಾಫಾಟನು ಯೆಹೂದ್ಯರ ಅರಸನಾದನು.
42 : ಅವನು ಅರಸನಾದಾಗ ಮೂವತ್ತೈದು ವರ್ಷದವನಾಗಿ ಇದ್ದನು. ಜೆರುಸಲೇಮಿನಲ್ಲಿ ಇಪ್ಪತ್ತೈದು ವರ್ಷದವನಾಗಿ ಇದ್ದನು. ಜೆರುಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಶಿಲ್ಹಿಯ ಮಗಳಾದ ಅಜೂಬಳೆಂಬ ಆಕೆ ಇವನ ತಾಯಿ.
43 : ತನ್ನ ತಂದೆ ಆಸನ ಮಾರ್ಗದಲ್ಲಿ ಇವನು ತಪ್ಪದೆ ನಡೆಯುತ್ತಾ, ಸರ್ವೇಶ್ವರನ ದೃಷ್ಟಿಯಲ್ಲಿ ಒಳ್ಳೆಯವನಾಗಿ ಇದ್ದನು. ಆದರೂ ಪೂಜಾಸ್ಥಳಗಳನ್ನು ಹಾಳು ಮಾಡಲಿಲ್ಲ; ಜನರು ಆ ಸ್ಥಳಗಳಲ್ಲಿ ಬಲಿಕೊಡುತ್ತಾ, ಧೂಪಾರತಿ ಎತ್ತುತ್ತಾ ಇದ್ದರು.
44 : ಇವನು ಇಸ್ರಯೇಲರ ಅರಸನೊಡನೆ ಸಮಾಧಾನದಿಂದಿದ್ದನು.
45 : ಇವನ ಉಳಿದ ಚರಿತ್ರೆ ಹಾಗು ಇವನು ಯುದ್ಧಗಳಲ್ಲಿ ನಡಿಸಿದ ಶೂರ ಕೃತ್ಯಗಳ ವಿವರ ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ.
46 : ಇವನು ತನ್ನ ತಂದೆ ಆಸನ ಕಾಲದಲ್ಲಿ ತಪ್ಪಿಸಿಕೊಂಡ ಹೆಣ್ಣು-ಗಂಡು ವೇಶ್ಯೆಯರನ್ನು ನಾಡಿನಿಂದ ತೆಗೆದುಹಾಕಿದನು.
47 : ಆ ಕಾಲದಲ್ಲಿ ಎದೋಮ್ ದೇಶದಲ್ಲಿ ಅರಸನಿರಲಿಲ್ಲ; ಇವನ ಪ್ರತಿನಿಧಿಯೇ ಅದನ್ನು ಆಳುತ್ತಿದ್ದನು.
48 : ಇದಲ್ಲದೆ, ಯೆಹೋಷಾಫಾಟನು ಓಫೀರಿನಿಂದ ಬಂಗಾರ ತರುವುದಕ್ಕಾಗಿ ತಾರ್ಷೀಷ್ ಹಡಗುಗಳನ್ನು ಮಾಡಿಸಿದನು.
49 : ಆಗ ಅಹಾಬನ ಮಗ ಅಹಜ್ಯನು, “ನಿನ್ನ ಜನರ ಜೊತೆಯಲ್ಲಿ ನನ್ನ ಜನರೂ ಸಮುದ್ರ ಪ್ರಯಾಣಮಾಡುವುದÀಕ್ಕೆ ಅಪ್ಪಣೆಯಾಗಲಿ,” ಎಂದು ಬೇಡಿಕೊಂಡನು. ಅವನು ಅದಕ್ಕೆ ಒಪ್ಪಲಿಲ್ಲ. ಆದರೆ ಆ ಹಡಗುಗಳು ಎಚ್ಯೋನ್ಗೆಬೆರಿನಲ್ಲಿ ಒಡೆದುಹೋದುದರಿಂದ ಓಫೀರನ್ನು ಮುಟ್ಟಲಿಲ್ಲ.
50 : ಯೆಹೋಷಾಫಾಟನು ಮೃತನಾಗಿ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ಅವನ ಪೂರ್ವಜ ದಾವೀದನ ಪಟ್ಟಣದೊಳಗೆ ಕುಟುಂಬ ಸ್ಮಶಾನ ಭೂಮಿಯಲ್ಲಿ ಸಮಾಧಿ ಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ಯೆಹೋರಾಮನು ಅರಸನಾದನು.
51 : ಯೆಹೂದ್ಯರ ಅರಸ ಯೆಹೋಷಾಫಾಟನ ಆಳ್ವಿಕೆಯ ಹದಿನೇಳನೆಯ ವರ್ಷದಲ್ಲಿ ಅಹಾಬನ ಮಗ ಅಹಜ್ಯ ಎಂಬುವನು ಅರಸನಾಗಿ ಸಮಾರಿಯದಲ್ಲಿ ಎರಡು ವರ್ಷ ಆಳಿದನು.
52 : ಇವನು ಇಸ್ರಯೇಲರನ್ನು ಪಾಪಕ್ಕೆ ಪ್ರಚೋದಿಸಿ ನೆಬಾಟನ ಮಗ ಯಾರೊಬ್ಬಾಮನ ಮತ್ತು ತನ್ನ ತಂದೆತಾಯಿಗಳ ಮಾರ್ಗದಲ್ಲಿ ನಡೆದು ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು.
53 : ತನ್ನ ತಂದೆಯಂತೆ ಬಾಳ್ದೇವರನ್ನು ಪೂಜಿಸಿ ಇಸ್ರಯೇಲರ ದೇವರಾದ ಸರ್ವೇಶ್ವರನನ್ನು ರೇಗಿಸಿದನು.