1 : ಅನಂತರ ಸಂಭವಿಸಿದ ಘಟನೆಗಳು ಇವು: ಜೆಸ್ರೀಲಿನಲ್ಲಿ, ಸಮಾರಿಯದ ಅರಸ ಅಹಾಬನ ಅರಮನೆಯ ಹತ್ತಿರ ಜೆಸ್ರೀಲಿನವನಾದ ನಾಬೋತನೆಂಬ ವ್ಯಕ್ತಿಗೆ ಒಂದು ದ್ರಾಕ್ಷಿತೋಟವಿತ್ತು.
2 : ಅಹಾಬನು ಆ ನಾಬೋತನಿಗೆ, “ನಿನ್ನ ದ್ರಾಕ್ಷಿತೋಟವನ್ನು ನನಗೆ ಕೊಡು; ಅದು ನನ್ನ ಅರಮನೆಯ ಹತ್ತಿರವಿರುವುದರಿಂದ ಅದನ್ನು ಕಾಯಿಪಲ್ಯದ ತೋಟವನ್ನಾಗಿ ಮಾಡಿಕೊಳ್ಳುತ್ತೇನೆ; ಅದಕ್ಕೆ ಬದಲಾಗಿ ನಿನಗೆ ಅದಕ್ಕಿಂತ ಉತ್ತಮವಾದ ತೋಟವನ್ನು ಕೊಡುತ್ತೇನೆ; ಅದು ಬೇಡವಾದರೆ ಕ್ರಯವನ್ನು ಕೊಡುತ್ತೇನೆ,” ಎಂದು ಹೇಳಿದನು.
3 : ಅದಕ್ಕೆ ನಾಬೋತನು, “ಪಿತ್ರಾರ್ಜಿತ ಸೊತ್ತನ್ನು ನಿಮಗೆ ಮಾರದಂತೆ ಸರ್ವೇಶ್ವರ ನನ್ನನ್ನು ತಡೆಯಲಿ!” ಎಂದು ಉತ್ತರಕೊಟ್ಟನು.
4 : ಪಿತ್ರಾರ್ಜಿತ ಸೊತ್ತನ್ನು ನಿನಗೆ ಕೊಡುವುದಿಲ್ಲವೆಂದು ನಾಬೋತನು ಹೇಳಿದ್ದರಿಂದ ಅಹಾಬನು ಸಿಟ್ಟುಗೊಂಡನು; ಗಂಟುಮೋರೆ ಮಾಡಿಕೊಂಡು ಮನೆಗೆ ಹೋಗಿ, ಊಟ ಮಾಡಲೊಲ್ಲದೆ ಮಂಚದ ಮೇಲೆ ಮಲಗಿ, ಗೋಡೆಯ ಕಡೆಗೆ ಮುಖ ತಿರುಗಿಸಿ ಕೊಂಡನು.
5 : ಆಗ ಅವನ ಹೆಂಡತಿ ಈಜೆಬೆಲಳು ಅವನ ಬಳಿಗೆ ಬಂದು, “ನೀವೇಕೆ ಊಟ ಮಾಡುವುದಿಲ್ಲ? ನಿಮಗೆ ಯಾವ ಚಿಂತೆ?,” ಎಂದು ಕೇಳಿದಳು.
6 : ಅವನು, “ನಾನು ಜೆಸ್ರೀಲಿ ನವನಾದ ನಾಬೋತನಿಗೆ, ‘ನಿನ್ನ ದ್ರಾಕ್ಷಿತೋಟವನ್ನು ನನಗೆ ಮಾರಿಬಿಡು; ಹಣ ಬೇಡವಾದರೆ ನಿನಗೆ ಬೇರೊಂದು ದ್ರಾಕ್ಷೀ ತೋಟವನ್ನು ಕೊಡುತ್ತೇನೆ ಎಂದು ಹೇಳಿದೆ; ಆದರೆ ಅವನು ಕೊಡುವುದಿಲ್ಲ ಎಂದುಬಿಟ್ಟ”, ಎಂದು ಉತ್ತರಕೊಟ್ಟನು.
7 : ಆಗ ಅವನ ಹೆಂಡತಿ ಈಜೆಬೆಲಳು, “ಇಸ್ರಯೇಲರ ಅರಸರಾದ ನೀವು ಹೀಗೆ ವರ್ತಿಸುವುದೇ! ಎದ್ದು ಊಟಮಾಡಿ, ಸಂತೋಷದಿಂದಿರಿ; ನಾನು ನಿಮಗೆ ಜೆಸ್ರೀಲಿನವನಾದ ನಾಬೋತನ ದ್ರಾಕ್ಷೀತೋಟವನ್ನು ಕೊಡುತ್ತೇನೆ,” ಎಂದು ನುಡಿದಳು.
8 : ಅಂತೆಯೇ ಅಹಾಬನ ಹೆಸರಿನಲ್ಲಿ ಒಂದು ಪತ್ರವನ್ನು ಬರೆದು, ಅದಕ್ಕೆ ಅವನ ಮುದ್ರೆ ಹಾಕಿ, ಅದನ್ನು ನಾಬೋತನ ಊರಿನಲ್ಲಿದ್ದ ಎಲ್ಲಾ ಪ್ರಧಾನಪುರುಷರಿಗೂ ಹಿರಿಯರಿಗೂ ಕಳುಹಿಸಿದಳು.
9 : ಅದರಲ್ಲಿ, “ಎಲ್ಲರೂ ಉಪವಾಸ ಮಾಡಬೇಕೆಂದು ಪ್ರಕಟಿಸಿರಿ; ನಾಬೋತನನ್ನು ನೆರೆದ ಸಭೆಯ ಮುಂದೆ ನಿಲ್ಲಿಸಿರಿ;
10 : ಅವನು ದೇವರನ್ನೂ ಅರಸನನ್ನೂ ಶಪಿಸಿದವನು ಎಂಬುದಾಗಿ ಇಬ್ಬರು ದುಷ್ಟ ಮನುಷ್ಯರಿಂದ ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಿಸಿರಿ; ಅವನನ್ನು ಹೊರಗೆ ಒಯ್ದು, ಕಲ್ಲೆಸೆದು ಕೊಲ್ಲಿರಿ,” ಎಂದು ಬರೆದಿದ್ದಳು.
11 : ಅವನ ಊರಿನ ಹಿರಿಯರೂ ಪ್ರಧಾನ ಪುರುಷರೂ ಈಜೆಬೆಲಳು ಕಳುಹಿಸಿದ್ದ ಪತ್ರದಲ್ಲಿ ಬರೆದಿದ್ದಂತೆಯೇ ಮಾಡಿದರು;
12 : ಉಪವಾಸವನ್ನು ಪ್ರಕಟಿಸಿದರು; ನೆರೆದ ಸಭೆಯ ಮುಂದೆ ನಾಬೋತನನ್ನು ನಿಲ್ಲಿಸಿದರು;
13 : ತರುವಾಯ ಇಬ್ಬರು ದುಷ್ಟರು ಬಂದು ಅವನ ಮುಂದೆ ಕುಳಿತರು. ಇವನು ದೇವರನ್ನೂ ಅರಸನನ್ನೂ ಶಪಿಸಿದ್ದಾನೆಂಬುದಾಗಿ ಜನರ ಎದುರಿನಲ್ಲೆ ಅವನಿಗೆ ವಿರುದ್ಧ ಸಾಕ್ಷಿ ಹೇಳಿದರು. ಜನರು ಅವನನ್ನು ಊರಿನ ಹೊರಗೆ ಒಯ್ದು ಕಲ್ಲೆಸೆದು ಕೊಂದರು.
14 : ನಾಬೋತನು ಕಲ್ಲೆಸೆತದಿಂದ ಸತ್ತ ಸಮಾಚಾರವನ್ನು ಆ ಹಿರಿಯರು ಈಜೆಬೆಲಳಿಗೆ ಮುಟ್ಟಿಸಿದರು.
15 : ಆಕೆ ಇದನ್ನು ಕೇಳಿ ಅಹಾಬನಿಗೆ, “ನೀವು ಹೋಗಿ ನಾಬೋತನು ಮಾರುವುದಿಲ್ಲವೆಂದು ಹೇಳಿದ ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳಿ. ಅವನು ಜೀವದಿಂದಿಲ್ಲ, ಸತ್ತನು,” ಎಂದು ಹೇಳಿದಳು.
16 : ಜೆಸ್ರೀಲಿನವನಾದ ನಾಬೋತನ ಮರಣವಾರ್ತೆಯನ್ನು ಅಹಾಬನು ಕೇಳಿ, ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋದನು.
17 : ಆಗ ತಿಷ್ಬೀಯನಾದ ಎಲೀಯನಿಗೆ ಸರ್ವೇಶ್ವರನ ವಾಣಿವುಂಟಾಯಿತು.
18 : “ನೀನು ಹೋಗಿ ಸಮಾರಿಯದಲ್ಲಿ ವಾಸಿಸುವ ಇಸ್ರಯೇಲ್ ಅರಸನನ್ನು ಕಾಣು; ಅವನು ಈಗ ನಾಬೋತನ ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕಾಗಿ ಅಲ್ಲಿಗೆ ಹೋಗಿದ್ದಾನೆ.
19 : ಅವನಿಗೆ, ‘ನೀನು ಕೊಲೆಮಾಡಿ, ಸೊತ್ತನ್ನು ಸಂಪಾದಿಸಿಕೊಂಡೆಯಲ್ಲವೇ? ಬಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವುವು, ಎನ್ನುತ್ತಾರೆ ಸರ್ವೇಶ್ವರ’ ಎಂದು ಹೇಳು.”
20 : ಅಹಾಬನು ಎಲೀಯನನ್ನು ನೋಡಿ, “ಎಲೈ ವೈರಿಯೇ, ನೀನು ನನ್ನನ್ನು ಕಂಡುಹಿಡಿದೆಯಾ?” ಎಂದು ಕೇಳಿದನು. ಅವನು, “ಹೌದು, ಕಂಡು ಹಿಡಿದೆ, ನೀನು ನಿನ್ನನ್ನು ಪಾಪಕ್ಕೆ ಮಾರಿಬಿಟ್ಟು, ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದೆ.
21 : ಸರ್ವೇಶ್ವರ ನಿನ್ನನ್ನು ಕುರಿತು, ‘ನಾನು ನಿನ್ನ ಮೈಮೇಲೆ ಕೇಡನ್ನು ಬರಮಾಡಿ, ನಿನ್ನನ್ನು ಕಸದಂತೆ ತೆಗೆದುಹಾಕುವೆನು; ನಿನ್ನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಲಿ, ಪರತಂತ್ರರಾಗಲಿ ಎಲ್ಲರನ್ನೂ ಇಸ್ರಯೇಲರ ಮಧ್ಯೆಯಿಂದ ಕಡಿದುಬಿಡುವೆನು.
22 : ನೀನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿ, ನನಗೆ ಕೋಪವನ್ನೆಬ್ಬಿಸಿದ್ದರಿಂದ ನೆಬಾಟನ ಮಗ ಯಾರೊಬ್ಬಾಮನ ಮನೆಗೂ ಅಹೀಯನ ಮಗ ಬಾಷನ ಮನೆಗೂ ಆದ ಗತಿ ನಿನ್ನ ಮನೆಗೂ ಆಗುವುದು’ ಎನ್ನುತ್ತಾರೆ.
23 : ಇದಲ್ಲದೆ ಈಜೆಬೆಲಳನ್ನು ಕುರಿತು ಅವರು, ‘ನಾಯಿಗಳು ಜೆಸ್ರೀಲ್ ಪಟ್ಟಣದ ಗೋಡೆಯ ಬಳಿಯಲ್ಲಿ ಆಕೆಯ ಶವವನ್ನು ತಿನ್ನುವುವು;
24 : ಅಹಾಬನ ಮನೆಯವರಲ್ಲಿ ಊರೊಳಗೆ ಸಾಯುವಂಥವರನ್ನು ನಾಯಿಗಳೂ ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದುಬಿಡುವುವು’ ಎಂದು ಹೇಳುತ್ತಾರೆ,” ಎಂದನು.
25 : ಹೆಂಡತಿ ಈಜೆಬೆಲಳಿಂದ ಪ್ರಚೋದಿತನಾಗಿ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡುವುದಕ್ಕೆ ತನ್ನನ್ನೇ ಮಾರಿಬಿಟ್ಟ ಅಹಾಬನಂಥ ದುಷ್ಟನು ಇನ್ನೊಬ್ಬನಿರಲಿಲ್ಲ.
26 : ಸರ್ವೇಶ್ವರ ಇಸ್ರಯೇಲರ ನಾಡಿನಿಂದ ಓಡಿಸಿಬಿಟ್ಟ ಅಮೋರಿಯರಂತೆ ವಿಗ್ರಹಗಳನ್ನು ಪೂಜಿಸಿದ ಅಹಾಬನ ನಡತೆ ಬಹಳ ಅಸಹ್ಯವಾಗಿತ್ತು.
27 : ಅಹಾಬನು ಎಲೀಯನ ಮಾತುಗಳನ್ನು ಕೇಳಿ ತನ್ನ ಬಟ್ಟೆಯನ್ನು ದುಃಖದಿಂದ ಹರಿದು ಕೊಂಡನು; ಹಗಲಿರುಳು ಮೈಮೇಲೆ ಗೋಣಿ ತಟ್ಟನ್ನು ಹಾಕಿಕೊಂಡು ಉಪವಾಸ ಮಾಡುತ್ತಾ ದೀನಮನಸ್ಸಿನಿಂದ ವರ್ತಿಸಿದನು.
28 : ಆದುದರಿಂದ ಸರ್ವೇಶ್ವರ ತಿಷ್ಬೀಯನಾದ ಎಲೀಯನಿಗೆ,
29 : “ಅಹಾಬನು ನನ್ನ ಮುಂದೆ ತನ್ನನ್ನೇ ತಗ್ಗಿಸಿಕೊಂಡದ್ದನ್ನು ನೋಡಿದಿಯಲ್ಲವೇ? ಅವನು ಹೀಗೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ನಾನು ಮುಂತಿಳಿಸಿದ ಕೇಡನ್ನು ಅವನ ಜೀವಮಾನದಲ್ಲಿ ಬರಗೊಡುವುದಿಲ್ಲ. ಅವನ ಮಗನ ಕಾಲದಲ್ಲಿ ಅವನ ಮನೆಯವರ ಮೇಲೆ ಬರಮಾಡುವೆನು,” ಎಂದು ಹೇಳಿದರು.