Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಅರಸು


1 : ದಾವೀದನ ಮರಣಸಮಯ ಸಮೀಪಿಸಿದಾಗ ಅವನು ತನ್ನ ಮಗ ಸೊಲೊಮೋನನಿಗೆ ಹೀಗೆಂದು ಆಜ್ಞಾಪಿಸಿದನು:
2 : “ಜಗದ ಜನರೆಲ್ಲರು ಹೋಗುವ ದಾರಿಯನ್ನು ನಾನು ಈಗ ಹಿಡಿಯಬೇಕು; ನೀನು ಧೈರ್ಯದಿಂದಿರು. ನಿನ್ನ ಸಾಮಥ್ರ್ಯವನ್ನು ತೋರಿಸು.
3 : ನಿನ್ನ ದೇವರಾದ ಸರ್ವೇಶ್ವರಸ್ವಾಮಿಯ ಕಟ್ಟಳೆಯನ್ನು ಕೈಗೊಂಡು ಅವರ ಮಾರ್ಗದಲ್ಲೇ ನಡೆದುಕೋ; ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಅವರ ಆಜ್ಞಾ ನಿಯಮ-ವಿಧಿನಿರ್ಣಯಗಳನ್ನು ಪಾಲಿಸು. ಹೀಗೆ ಮಾಡುವುದಾದರೆ ನೀನು ಏನು ಮಾಡಿದರೂ ಎಲ್ಲಿಗೆ ಹೋದರೂ ಕೃತಾರ್ಥನಾಗುವೆ.
4 : ಇದಲ್ಲದೆ ಸರ್ವೇಶ್ವರ, ‘ನಿನ್ನ ಸಂತಾನದವರು ಪೂರ್ಣ ಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ನನಗೆ ನಂಬಿಗಸ್ತರಾಗಿ ನಡೆದುಕೊಳ್ಳುವುದರಲ್ಲಿ ಜಾಗರೂಕರಾಗಿದ್ದರೆ ಅವರು ಇಸ್ರಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದು ತಪ್ಪದು,’ ಎಂದು ನನಗೆ ಮಾಡಿದ ವಾಗ್ದಾನವನ್ನು ಅವರು ಸ್ಥಿರಪಡಿಸುವರು.
5 : “ಚೆರೂಯಳ ಮಗ ಯೋವಾಬನು ನನಗೆ ಮಾಡಿರುವುದನ್ನು ನೀನು ಬಲ್ಲೆ; ಅವನು ಇಬ್ಬರು ಇಸ್ರಯೇಲ್ ಸೇನಾಪತಿಗಳನ್ನು ಅಂದರೆ, ನೇರನ ಮಗ ಅಬ್ನೇರನನ್ನೂ ಯೆತೆರನ ಮಗ ಅಮಾಸನನ್ನೂ ಕೊಂದುಹಾಕಿದನು. ಯುದ್ಧಕಾಲದಲ್ಲಿಯೋ ಎಂಬಂತೆ ಸಮಾಧಾನ ಕಾಲದಲ್ಲಿಯೂ ರಕ್ತಸುರಿಸಿ ಆ ಕಲೆಯನ್ನು ತನ್ನ ನಡುಕಟ್ಟಿಗೂ ಪಾದರಕ್ಷೆಗಳಿಗೂ ಹಚ್ಚಿಕೊಂಡನು.
6 : ಅವನಿಗೇನು ಮಾಡಬೇಕೆಂಬುದು ಬುದ್ಧಿವಂತನಾದ ನಿನಗೆ ಗೊತ್ತಿದೆ; ಅವನ ಮುದಿತಲೆ ಸಮಾಧಿಯನ್ನು ಸಮಾಧಾನದಿಂದ ಸೇರದಂತೆ ಮಾಡು.
7 : “ಆದರೆ ಗಿಲ್ಯಾದ್ಯನಾದ ಬರ್ಜಿಲ್ಲೈಯು ಮಕ್ಕಳಿಗೆ ಉಪಕಾರಮಾಡು; ಅವರು ದಿನ ನಿತ್ಯವೂ ನಿನ್ನ ಪಂಕ್ತಿಯಲ್ಲಿ ಊಟಮಾಡುತ್ತಿರಬೇಕು. ಏಕೆಂದರೆ ನಾನು ನಿನ್ನ ಸಹೋದರ ಅಬ್ಷಾಲೋಮನನಿಂದ ತಪ್ಪಿಸಿಕೊಂಡು ಓಡಿಹೋದಾಗ ಅವರು ನನ್ನನ್ನು ಉಪಚರಿಸಿದರು.
8 : ಬೆನ್ಯಾಮೀನ್ಯನಾದ ಗೇರನ ಮಗನೂ ಬಹುರೀಮ್ ಊರಿನವನೂ ಆದ ಶಿಮ್ಮಿ ನಿನ್ನ ಬಳಿ ಇರುತ್ತಾನೆ; ನಾನು ಮಹನಯಿಮಿಗೆ ಹೋದಾಗ ಅವನು ನನ್ನನ್ನು ಬಹುಕ್ರೂರವಾಗಿ ಶಪಿಸಿದನು; ಆದರೂ ಅವನು ನನ್ನನ್ನು ಎದುರುಗೊಳ್ಳುವುದಕ್ಕೆ ಜೋರ್ಡನಿಗೆ ಬಂದಾಗ ನಾನು ಅವನಿಗೆ, ‘ನಿನ್ನನ್ನು ಕೊಲ್ಲುವುದಿಲ್ಲ’, ಎಂಬುದಾಗಿ ಸರ್ವೇಶ್ವರನ ಹೆಸರಿನಲ್ಲಿ ಪ್ರಮಾಣಮಾಡಿದೆ.
9 : ನೀನಾದರೋ ಅವನನ್ನು ಶಿಕ್ಷಿಸದೆ ಬಿಡಬೇಡ; ನೀನು ಬುದ್ಧಿವಂತ; ಅವನ ಮುದಿತಲೆ ರಕ್ತಮಯವಾಗಿ ಸಮಾಧಿ ಸೇರುವಂತೆ ಏನುಮಾಡಬೇಕೆಂದು ನಿನಗೆ ಗೊತ್ತಿದೆ.”
10 : ಅನಂತರ ದಾವೀದನು ಮರಣಹೊಂದಿ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು.
11 : ದಾವೀದನು ಇಸ್ರಯೇಲರನ್ನು ಆಳಿದ್ದು ನಾಲ್ವತ್ತು ವರ್ಷ: ಹೆಬ್ರೋನಿನಲ್ಲಿ ಏಳು ವರ್ಷ, ಜೆರುಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳಿದನು.
12 : ಸೊಲೊಮೋನನು ತನ್ನ ತಂದೆ ದಾವೀದನ ಸಿಂಹಾಸನವನ್ನು ಏರಿದನು. ಅವನ ರಾಜ್ಯ ಸಮೃದ್ಧಿಯಾಗಿ ಬೆಳೆಯಿತು.
13 : ಹಗ್ಗೀತಳ ಮಗ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಯ ದರ್ಶನಕ್ಕೆ ಬಂದನು. ಆಕೆ ಅವನನ್ನು, “ನೀನು ಸಮಾಧಾನದಿಂದ ಬಂದಿರುತ್ತಿಯೋ?” ಎಂದು ಕೇಳಿದಳು. ಅವನು, “ಹೌದು, ಸಮಾಧಾನದಿಂದ ಬಂದಿದ್ದೇನೆ,” ಎಂದನು.
14 : ಆಮೇಲೆ ಅವನು, “ನಿಮಗೊಂದು ಮಾತು ಹೇಳಬೇಕೆಂದು ಬಂದಿದ್ದೇನೆ,” ಎನ್ನಲು ಆಕೆ, “ಹೇಳು” ಎಂದಳು.
15 : ಆಗ ಅವನು, “ರಾಜ್ಯ ನನಗೆ ಬರಬೇಕಾಗಿತ್ತು; ನಾನೇ ಅರಸನಾಗುವೆನೆಂದು ಇಸ್ರಯೇಲರೆಲ್ಲರು ಎದುರು ನೋಡುತ್ತಿದ್ದರೆಂಬುದು ನಿನಗೆ ತಿಳಿದ ವಿಷಯ. ಆದರೆ ಅದು ತಪ್ಪಿ ನನ್ನ ತಮ್ಮನಿಗೆ ಹೋಯಿತು. ಅದು ಸರ್ವೇಶ್ವರನಿಂದಲೇ ಅವನಿಗೆ ದೊರಕಿತು.
16 : ಅದಿರಲಿ, ನನ್ನದೊಂದು ಬಿನ್ನಹವಿದೆ; ಅದನ್ನು ತಿರಸ್ಕರಿಸಬೇಡಿ” ಎಂದನು. ಅದಕ್ಕೆ ಬತ್ಷೆಬೆ, “ಅದೇನು, ಹೇಳು,” ಎಂದಳು.
17 : ಅವನು, “ದಯವಿಟ್ಟು ಶೂನೇಮ್ಯಳಾದ ಅಬೀಷಗಳನ್ನು ನನಗೆ ಹೆಂಡತಿಯನ್ನಾಗಿ ಕೊಡಬೇಕೆಂದು ಅರಸ ಸೊಲೊಮೋನನಿಗೆ ಹೇಳಿ; ಅವನು ನಿಮ್ಮ ಮಾತನ್ನು ತಳ್ಳುವುದಿಲ್ಲ,” ಎಂದನು.
18 : ಬತ್ಷೆಬೆ, “ಒಳ್ಳೇದು, ನಾನು ನಿನ್ನ ಪರವಾಗಿ ಸನ್ನಿಧಿಯಲ್ಲಿ ಅರಿಕೆಮಾಡುತ್ತೇನೆ,” ಎಂದು ಹೇಳಿದಳು.
19 : ಆಕೆ ಅದೋನೀಯನ ಪರವಾಗಿ ಮಾತಾಡಲು ಅರಸ ಸೊಲೊಮೋನನ ಬಳಿಗೆ ಬರುತ್ತಿರುವಾಗ ಅರಸನೇ ಎದ್ದುಹೋಗಿ ಆಕೆಯನ್ನು ಎದುರುಗೊಂಡು ನಮಸ್ಕರಿಸಿದನು. ಅನಂತರ ತಾನು ಸಿಂಹಾಸನದ ಮೇಲೆ ಕುಳಿತು ರಾಜಮಾತೆಗಾಗಿ ಒಂದು ಆಸನವನ್ನು ತರಿಸಿದನು. ಆಕೆ ಅವನ ಬಲಗಡೆಯಲ್ಲಿ ಕುಳಿತುಕೊಂಡಳು.
20 : “ಒಂದು ಸಣ್ಣ ಬಿನ್ನಹವಿದೆ, ಅದನ್ನು ತಿರಸ್ಕರಿಸಬೇಡ,” ಎಂದು ಹೇಳಿದಳು. ಅರಸನು, “ತಾಯೇ, ಏನು ಬೇಕು, ಕೇಳಿ; ನಾನು ಆಗದು ಎನ್ನುವುದಿಲ್ಲ,” ಎಂದನು.
21 : ಆಕೆ, “ಶೂನೇಮ್ಯಳಾದ ಅಬೀಷಗಳು ನಿನ್ನ ಅಣ್ಣ ಅದೋನೀಯನಿಗೆ ಹೆಂಡತಿಯಾಗಲು ಅಪ್ಪಣೆಯಾಗಲಿ,” ಎಂದಳು.
22 : ಆಗ ಅರಸ ಸೊಲೊಮೋನನು ತನ್ನ ತಾಯಿಗೆ, “ಅದೋನೀಯನಿಗಾಗಿ ಶೂನೇಮ್ಯಳಾದ ಅಬೀಷಗಳನ್ನು ಮಾತ್ರ ಕೇಳುವುದೇಕೆ? ಅವನಿಗೆ ರಾಜ್ಯವನ್ನೂ ಕೊಡಬೇಕೆಂದು ಕೇಳು; ಅವನು ನನ್ನ ಅಣ್ಣನಲ್ಲವೇ? ಯಾಜಕ ಎಬ್ಯಾತಾರನೂ ಚೆರೂಯಳ ಮಗ ಯೋವಾಬನೂ ಅವನ ಪಕ್ಷದವರಾಗಿದ್ದಾರೆ,” ಎಂದು ಉತ್ತರಕೊಟ್ಟನು.
23 : ಇದಲ್ಲದೆ, ಅರಸ ಸೊಲೊಮೋನನು, “ಸರ್ವೇಶ್ವರನಾಣೆ, ಅದೋನೀಯನ ಈ ಮಾತಿನ ನಿಮಿತ್ತ ನಾನು ಅವನನ್ನು ಮರಣಕ್ಕೆ ಪಾತ್ರನೆಂದು ಎಣಿಸದಿದ್ದರೆ ದೇವರು ನನಗೆ ಬೇಕಾದುದನ್ನು ಮಾಡಲಿ!
24 : ನನ್ನ ತಂದೆ ದಾವೀದನ ಸಿಂಹಾಸನದ ಮೇಲೆ ನನ್ನನ್ನು ಕುಳ್ಳಿರಿಸಿ, ಅಭಿವೃದ್ಧಿಗೊಳಿಸಿ, ತಾವು ವಾಗ್ದಾನ ಮಾಡಿದಂತೆ ನನಗೆ ಮನೆತನವನ್ನು ಕಟ್ಟಿದ ಸರ್ವೇಶ್ವರನಾಣೆ, ಅದೋನೀಯನು ಈ ದಿನವೇ ಸಾಯಬೇಕು,” ಎಂದು ಹೇಳಿದನು.
25 : ಅಂತೆಯೇ ಯೆಹೋಯಾದಾವನ ಮಗ ಬೆನಾಯನಿಗೆ ಆಜ್ಞಾಪಿಸಿದನು. ಅವನು ಹೋಗಿ ಅದೋನೀಯನನ್ನು ಹೊಡೆದು ಕೊಂದುಹಾಕಿದನು.
26 : ಬಳಿಕ ಅರಸ ಸೊಲೊಮೋನನು ಯಾಜಕನಾದ ಎಬ್ಯಾತಾರನಿಗೆ, “ನೀನು ಅಣತೋತಿನಲ್ಲಿರುವ ನಿನ್ನ ಮನೆಗೆ ಹೋಗು; ನೀನು ಮರಣಕ್ಕೆ ಪಾತ್ರನು. ಆದರೆ ನೀನು ಸ್ವಾಮಿ ಸರ್ವೇಶ್ವರನ ಮಂಜೂಷವನ್ನು ಹೊತ್ತುಕೊಂಡು ನನ್ನ ತಂದೆ ದಾವೀದನೊಡನೆ ಸಂಚರಿಸುತ್ತಾ ಅವರ ಕಷ್ಟ-ದುಃಖಗಳಲ್ಲಿ ಪಾಲುಗಾರನಾಗಿದ್ದುದರಿಂದ
27 : ಈ ದಿನ ನಿನ್ನನ್ನು ಕೊಲ್ಲಿಸುವುದಿಲ್ಲ,” ಎಂದು ಹೇಳಿದನು. ಆದರೆ ಅವನನ್ನು ಸರ್ವೇಶ್ವರನ ಯಾಜಕವೃತ್ತಿಯಿಂದ ತೆಗೆದುಬಿಟ್ಟನು. ಹೀಗೆ ಸರ್ವೇಶ್ವರ ಶಿಲೋವಿನಲ್ಲಿದ್ದ ಏಲಿಯ ಮನೆಯನ್ನು ಕುರಿತು ಭವಿಷ್ಯ ಹೇಳಿದ ಮಾತು ನೆರವೇರಿತು.
28 : ಈ ಸುದ್ದಿ ಯೋವಾಬನಿಗೆ ಮುಟ್ಟಿತು. ಅವನು ಕೂಡಲೆ ಸರ್ವೇಶ್ವರನ ಗುಡಾರಕ್ಕೆ ಓಡಿಹೋಗಿ ಬಲಿಪೀಠದ ಕೊಂಬುಗಳನ್ನು ಹಿಡಿದುಕೊಂಡನು. (ಅವನು ಅಬ್ಷಾಲೋಮನ ವಿರೋಧ ವಾಗಿದ್ದರೂ ಅದೋನೀಯನಿಗೆ ಪರವಾಗಿದ್ದನು.)
29 : ಯೋವಾಬನು ಸರ್ವೇಶ್ವರನ ಗುಡಾರಕ್ಕೆ ಓಡಿ ಹೋಗಿ ಬಲಿಪೀಠದ ಹತ್ತಿರ ಇದ್ದಾನೆ ಎಂಬ ಸುದ್ದಿ ಅರಸ ಸೊಲೊಮೋನನಿಗೆ ತಲುಪಿತು. ಅವನು ಯೆಹೋಯಾದಾವನ ಮಗ ಬೆನಾಯನಿಗೆ, “ಹೋಗಿ ಅವನನ್ನು ಕೊಂದುಹಾಕು,” ಎಂದು ಆಜ್ಞಾಪಿಸಿದನು.
30 : ಬೆನಾಯನು ಸರ್ವೇಶ್ವರನ ಗುಡಾರಕ್ಕೆ ಹೋಗಿ ಯೋವಾಬನಿಗೆ, “ನೀನು ಹೊರಗೆ ಬರಬೇಕೆಂದು ಅರಸರು ಆಜ್ಞಾಪಿಸುತ್ತಾರೆ,” ಎಂದನು. ಆದರೆ ಅವನು, “ಬರುವುದಿಲ್ಲ, ನಾನು ಇಲ್ಲಿಯೇ ಸಾಯುತ್ತೇನೆ,” ಎಂದು ಉತ್ತರಕೊಟ್ಟನು. ಬೆನಾಯನು ಅರಸನ ಬಳಿಗೆ ಹೋಗಿ ಯೋವಾಬನು ಹೇಳಿದ್ದನ್ನು ತಿಳಿಸಿದನು.
31 : ಅರಸನು, “ಅವನು ಹೇಳಿದಂತೆ ಮಾಡು; ಅವನನ್ನು ಕೊಂದು ಅವನ ಶವವನ್ನು ಸಮಾಧಿ ಮಾಡು. ಯೋವಾಬನು ನಿಷ್ಕಾರಣವಾಗಿ ರಕ್ತ ಸುರಿಸಿದುದರಿಂದ ನನಗೂ ನನ್ನ ತಂದೆಯ ಮನೆಯವರಿಗೂ ಹತ್ತಿರುವ ದೋಷವನ್ನು ಈ ಪ್ರಕಾರ ಪರಿಹರಿಸು.
32 : ಸರ್ವೇಶ್ವರ ಈ ರಕ್ತ ಅಪರಾಧವನ್ನು ಅವನ ತಲೆಯ ಮೇಲೆಯೇ ಬರಮಾಡಲಿ; ಅವನು ನನ್ನ ತಂದೆ ದಾವೀದನಿಗೆ ತಿಳಿಯದೆ ತನಗಿಂತ ಉತ್ತಮರೂ ನೀತಿವಂತರೂ ಆದ ಇಬ್ಬರು ವ್ಯಕ್ತಿಗಳನ್ನು ಅಂದರೆ, ಇಸ್ರಯೇಲ್ ಸೇನಾಪತಿಯೂ ನೇರನ ಮಗನೂ ಆದ ಅಬ್ನೇರನನ್ನೂ ಯೆಹೂದ ಸೇನಾಪತಿಯೂ ಯೆತೆರನ ಮಗನೂ ಆದ ಅಮಾಸನನ್ನೂ ಕೊಂದನಲ್ಲವೆ?
33 : ಈ ಇಬ್ಬರನ್ನೂ ವಧಿಸಿದ ಪಾಪವು ಯೋವಾಬನ ತಲೆಯ ಮೇಲೂ ಅವನ ಸಂತಾನದವರ ತಲೆಯ ಮೇಲೂ ಇರಲಿ; ಆದರೆ ದಾವೀದನಿಗೂ ಅವನ ಸಿಂಹಾಸನವನ್ನೇರುವ ಸಂತಾನದವರಿಗೂ ಸರ್ವೇಶ್ವರನಿಂದ ನಿತ್ಯ ಸೌಭಾಗ್ಯ ದೊರಕಲಿ!” ಎಂದನು.
34 : ಯೆಹೋಯಾದಾವನ ಮಗ ಬೆನಾಯನು ಹೋಗಿ ಯೋವಾಬನನ್ನು ಕೊಂದನು. ಅವನ ಶವಕ್ಕೆ ಮರುಭೂಮಿಯಲ್ಲಿ ಇದ್ದ ಅವನ ಮನೆಯ ನಿವೇಶನದಲ್ಲಿ ಸಮಾಧಿಯಾಯಿತು.
35 : ಅರಸನು ಯೋವಾಬನಿಗೆ ಬದಲಾಗಿ ಯೆಹೋಯಾದವನ ಮಗ ಬೆನಾಯನನ್ನು ಸೈನ್ಯಾಧಿಪತಿಯನ್ನಾಗಿ ಹಾಗು ಎಬ್ಯಾತಾರನಿಗೆ ಬದಲಾಗಿ ಚಾದೋಕನನ್ನು ಯಾಜಕನನ್ನಾಗಿ ನೇಮಿಸಿದನು.
36 : ತರುವಾಯ ಅರಸನು ಶಿಮ್ಮಿಯನ್ನು ಕರೆಯಿಸಿ, “ನೀನು ಒಂದು ಮನೆಯನ್ನು ಕಟ್ಟಿಸಿ ಕೊಂಡು ಜೆರುಸಲೇಮಿನಲ್ಲೇ ವಾಸಿಸಬೇಕು. ಇದನ್ನು ಬಿಟ್ಟು ಎಲ್ಲಿಗೂ ಹೋಗಬಾರದು.
37 : ನೀನು ಇದನ್ನು ಬಿಟ್ಟು ಕಿದ್ರೋನ್ ಹಳ್ಳದ ಆಚೆಗೆ ಹೋದೆಯಾದರೆ, ಅದೇ ದಿವಸ ನಿನಗೆ ಮರಣ ಶಿಕ್ಷೆಯಾಗುವುದೆಂದು ತಿಳಿದುಕೋ; ಮತ್ತು ಆ ರಕ್ತಾಪರಾಧವು ನಿನ್ನ ತಲೆಯ ಮೇಲೆಯೇ ಇರುವುದು,” ಎಂದು ಹೇಳಿದನು.
38 : ಅದಕ್ಕೆ ಶಿಮ್ಮಿಯು, “ಒಳ್ಳೆಯದು; ನನ್ನ ಒಡೆಯರೂ ಅರಸರೂ ಆದ ನೀವು ಹೇಳಿದಂತೆಯೇ ಸೇವಕನಾದ ನಾನು ಮಾಡುವೆನು,” ಎಂದು ಉತ್ತರ ಕೊಟ್ಟು ಬಹಳ ದಿನಗಳವರೆಗೆ ಜೆರುಸಲೇಮಿನಲ್ಲೇ ವಾಸಿಸುತ್ತಿದ್ದನು.
39 : ಮೂರು ವರ್ಷಗಳಾದನಂತರ ಶಿಮ್ಮಿಯ ಇಬ್ಬರು ಗುಲಾಮರು, ಗತ್ ಊರಿನ ಅರಸನೂ ಮಾಕನ ಮಗನೂ ಆದ ಆಕೀಷನ ಬಳಿಗೆ ಓಡಿ ಹೋದರು. ಗುಲಾಮರು ಗತ್ ಊರಿನಲ್ಲಿ ಇರುವುದು ಶಿಮ್ಮಿಗೆ ಗೊತ್ತಾಯಿತು.
40 : ಅವನು ಕತ್ತೆಗೆ ತಡಿಹಾಕಿಸಿ ತನ್ನ ಗುಲಾಮರನ್ನು ಹುಡುಕುವುದಕ್ಕಾಗಿ ಗತ್ ಊರಿನ ಅರಸನಾದ ಆಕೀಷನ ಬಳಿಗೆ ಹೋಗಿ ಅವರನ್ನು ಗತ್ ಊರಿನಿಂದ ಹಿಡಿದುಕೊಂಡು ಬಂದನು.
41 : ಶಿಮ್ಮಿ ಜೆರುಸಲೇಮಿನಿಂದ ಗತ್ ಊರಿಗೆ ಹೋಗಿ ಬಂದದ್ದು ಅರಸ ಸೊಲೊಮೋನನಿಗೆ ತಿಳಿಯಿತು. ಅವನು ಶಿಮ್ಮಿಯನ್ನು ಕರೆಯಿಸಿ,
42 : “ನೀನು ಈ ಊರನ್ನು ಬಿಟ್ಟು ಎಲ್ಲಿಗಾದರು ಹೋದರೆ ಅದೇ ದಿನದಲ್ಲಿ ನಿನಗೆ ಮರಣ ಶಿಕ್ಷೆಯಾಗುವುದೆಂದು ಖಂಡಿತವಾಗಿ ಹೇಳಿ ಸರ್ವೇಶ್ವರನ ಹೆಸರಿನಲ್ಲಿ ನಿನ್ನಿಂದ ಪ್ರಮಾಣ ತೆಗೆದುಕೊಂಡೆನಲ್ಲವೆ? ಆಗ ನೀನು, ‘ಒಳ್ಳೆಯದು, ಹಾಗೆಯೇ ಮಾಡುತ್ತೇನೆ,’ ಎಂದು ಹೇಳಿದೆಯಲ್ಲವೆ?
43 : ಹಾಗಾದರೆ, ಸರ್ವೇಶ್ವರನ ಹೆಸರಿನಲ್ಲಿ ನೀನು ಮಾಡಿದ ಪ್ರಮಾಣವನ್ನೂ ನಾನು ನಿನಗೆ ಕೊಟ್ಟ ಅಪ್ಪಣೆಯನ್ನೂ ಏಕೆ ಕೈಗೊಳ್ಳಲಿಲ್ಲ?” ಎಂದನು.
44 : ಇದಲ್ಲದೆ, ಅರಸನು ಅವನಿಗೆ, “ನೀನು ನನ್ನ ತಂದೆ ದಾವೀದನಿಗೆ ವಿರುದ್ಧ ಮಾಡಿದ ಪಾಪಕ್ಕೆ ಮನವೇ ಸಾಕ್ಷಿ; ಸರ್ವೇಶ್ವರ ಅದರ ಫಲವನ್ನು ನಿನ್ನ ತಲೆಯ ಮೇಲೆ ಬರಮಾಡುವರು.
45 : ಆದರೆ ಸೊಲೊಮೋನ ರಾಜನಿಗೆ ಆಶೀರ್ವಾದ ಲಭಿಸಲಿ! ದಾವೀದನ ಸಿಂಹಾಸನ ಸರ್ವೇಶ್ವರನ ಸನ್ನಿಧಿಯಲ್ಲಿ ಸದಾ ಕಾಲವೂ ಇರಲಿ!” ಎಂದು ಹೇಳಿದನು.
46 : ಬಳಿಕ ಯೆಹೋಯಾದವನ ಮಗ ಬೆನಾಯನಿಗೆ ಅವನನ್ನು ಸಂಹರಿಸಬೇಕೆಂದು ಆಜ್ಞಾಪಿಸಿದನು. ಅಂತೆಯೇ ಇವನು ಹೊರಗೆ ಹೋಗಿ ಅವನ ಮೇಲೆ ಬಿದ್ದು ಅವನನ್ನು ಕೊಂದುಹಾಕಿದನು. ಹೀಗೆ ಸೊಲೊಮೋನನ ರಾಜ್ಯಾಧಿಕಾರ ಸುಭದ್ರವಾಯಿತು.

· © 2017 kannadacatholicbible.org Privacy Policy