Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಅರಸು


1 : ಗಿಲ್ಯಾದಿನ ಪ್ರವಾಸಿಗಳಲ್ಲಿ ತಿಷ್ಬೀಯನಾದ ಎಲೀಯ ಎಂಬವನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಯೇಲ್ ದೇವರಾದ ಸರ್ವೇಶ್ವರನಾಣೆ, ನಾನು ಸೂಚಿಸಿದ ಹೊರತು, ಇಂದಿನಿಂದ ಕೆಲವು ವರ್ಷಗಳವರೆಗೆ ಮಳೆಯಾಗಲಿ, ಮಂಜಾಗಲಿ ಬೀಳುವುದಿಲ್ಲ,” ಎಂದನು.
2 : ಸರ್ವೇಶ್ವರಸ್ವಾಮಿ ಎಲೀಯನಿಗೆ, “ನೀನು ಈ ಸ್ಥಳವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋಗು;
3 : ಜೋರ್ಡನ್ ನದಿಯ ಆಚೆಯಿರುವ ಕೆರೀತ್ ಹಳ್ಳದಲ್ಲಿ ಅಡಗಿಕೋ.
4 : ಆ ಹಳ್ಳದ ನೀರು ನಿನಗೆ ಪಾನವಾಗಿರುವುದು; ನಿನಗೆ ಆಹಾರ ತಂದು ಕೊಡಬೇಕೆಂದು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ,” ಎಂದು ಹೇಳಿದರು.
5 : ಸರ್ವೇಶ್ವರನ ಅಪ್ಪಣೆಯಂತೆ ಜೋರ್ಡನಿನ ಪೂರ್ವಕ್ಕಿರುವ ಕೆರೀತ್‍ಹಳ್ಳದಲ್ಲಿ ಅವನು ವಾಸಿಸಿದನು.
6 : ಕಾಗೆಗಳು ಅವನಿಗೆ ಬೆಳಿಗ್ಗೆ ಹಾಗು ಸಂಜೆ ರೊಟ್ಟಿ, ಮಾಂಸ, ಇವುಗಳನ್ನು ತಿನ್ನಲು ತಂದುಕೊಡುತ್ತಿದ್ದವು. ಹಳ್ಳದ ನೀರು ಅವನಿಗೆ ಪಾನವಾಗಿತ್ತು.
7 : ಕೆಲವು ದಿವಸಗಳಾದ ನಂತರ ನಾಡಿನಲ್ಲಿ ಮಳೆಯಿಲ್ಲದ್ದರಿಂದ ಹಳ್ಳವು ಬತ್ತಿಹೋಯಿತು.
8 : ಆಗ ಸರ್ವೇಶ್ವರ ಅವನಿಗೆ: “ನೀನು ಇಲ್ಲಿಂದ ಸಿದೋನ್ಯರ ಸರೆಪ್ತಾ ಊರಿಗೆ ಹೊರಟು ಹೋಗಿ ಅಲ್ಲಿ ವಾಸಿಸು.
9 : ನಿನ್ನನ್ನು ಪೋಷಿಸಬೇಕೆಂದು ಅಲ್ಲಿನ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ,” ಎಂದರು.
10 : ಅವನು ಅಲ್ಲಿಂದ ಹೊರಟು ಸರೆಪ್ತಾದ ಊರು ಬಾಗಿಲಿನ ಸಮೀಪಕ್ಕೆ ಬಂದನು, ಸೌದೆ ಕೂಡಿಸುತ್ತಿದ್ದ ಒಬ್ಬ ವಿಧವೆಯನ್ನು ಕಂಡು ಆಕೆಯನ್ನು ಕರೆದು, “ದಯವಿಟ್ಟು ಕುಡಿಯುವುದಕ್ಕೆ ಒಂದು ತಂಬಿಗೆಯಲ್ಲಿ ನೀರು ತೆಗೆದುಕೊಂಡು ಬಾ,” ಎಂದು ಹೇಳಿದನು.
11 : ಆಕೆ ಹೋಗುತ್ತಿರುವಾಗ ಮತ್ತೆ ಆಕೆಯನ್ನು ಕರೆದು, “ನೀನು ಬರುವಾಗ ನನಗೆ ಒಂದು ತುಂಡುರೊಟ್ಟಿಯನ್ನು ಸಹ ತೆಗೆದುಕೊಂಡು ಬಾ,” ಎಂದನು.
12 : ಆಕೆ, “ನಿನ್ನ ದೇವರಾದ ಸರ್ವೇಶ್ವರನಾಣೆ, ನನ್ನ ಹತ್ತಿರ ರೊಟ್ಟಿಯಿಲ್ಲ. ಮಡಕೆಯಲ್ಲಿ ಒಂದು ಹಿಡಿ ಹಿಟ್ಟು, ಕುಡಿಕೆಯಲ್ಲಿ ಸ್ವಲ್ಪ ಎಣ್ಣೆ, ಇವುಗಳ ಹೊರತು ಬೇರೇನೂ ಇಲ್ಲ. ಈಗ ಸೌದೆ ಆಯ್ದುಕೊಂಡು ಹೋಗಿ ನನಗೂ ನನ್ನ ಮಗನಿಗೂ ರೊಟ್ಟಿ ಮಾಡುತ್ತೇನೆ. ಅದನ್ನು ತಿಂದ ಮೇಲೆ ನಾವು ಸಾಯಬೇಕೇ ಹೊರತು ಬೇರೆ ಗತಿಯಿಲ್ಲ,” ಎಂದು ಉತ್ತರ ಕೊಟ್ಟಳು.
13 : ಆಗ ಎಲೀಯನು, “ಹೆದರಬೇಡ, ನೀನು ಹೇಳಿದಂತೆ ಮಾಡು; ಆದರೆ ಮೊದಲು ಅದರಿಂದ ನನಗೆ ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ; ತರುವಾಯ ನಿನಗೂ ನಿನ್ನ ಮಗನಿಗೂ ಮಾಡಿಕೋ.
14 : ಇಸ್ರಯೇಲ್ ದೇವರಾದ ಸರ್ವೇಶ್ವರ ನಿನಗೆ, “ನಾನು ನಾಡಿಗೆ ಮಳೆಯನ್ನು ಕಳುಹಿಸುವವರೆಗೆ ನಿನ್ನ ಮಡಕೆಯಲ್ಲಿರುವ ಹಿಟ್ಟು ತೀರುವುದಿಲ್ಲ, ಕುಡಿಕೆಯಲ್ಲಿರುವ ಎಣ್ಣೆ ಮುಗಿದು ಹೋಗುವುದಿಲ್ಲ,” ಎಂದು ಹೇಳುತ್ತಾರೆ ಎಂದನು.
15 : ಆಕೆ ಹೋಗಿ ಅವನು ಹೇಳಿದಂತೆಯೇ ಮಾಡಿದಳು. ಆಕೆಯೂ ಆಕೆಯ ಮನೆಯವರೂ ಎಲೀಯನೂ ಅದನ್ನು ಅನೇಕ ದಿವಸಗಳವರಿಗೆ ಊಟಮಾಡಿದರು.
16 : ಸರ್ವೇಶ್ವರ ಎಲೀಯನ ಮುಖಾಂತರ ಹೇಳಿದಂತೆ ಮಡಕೆಯಲ್ಲಿದ್ದ ಹಿಟ್ಟು ತೀರಲಿಲ್ಲ; ಕುಡಿಕೆಯಲ್ಲಿದ್ದ ಎಣ್ಣೆ ಮುಗಿದು ಹೋಗಲಿಲ್ಲ.
17 : ಕೆಲವು ದಿನಗಳಾದನಂತರ ಆ ಮನೆ ಯಜಮಾನಿಯ ಮಗನು ಅಸ್ವಸ್ಥನಾದನು; ಅವನ ರೋಗ ಹೆಚ್ಚುತ್ತಾ ಕೊನೆಗೆ ಉಸಿರಾಡುವುದು ನಿಂತುಹೋಯಿತು.
18 : ಆಗ ಆಕೆ ಎಲೀಯನಿಗೆ, “ದೈವಪುರುಷನೇ, ನನ್ನ ವಿರುದ್ಧ ನಿನಗೇನಿದೆ? ನೀನು ನನ್ನ ಪಾಪವನ್ನು ನೆನಪಿಗೆ ತಂದು ನನ್ನ ಮಗನನ್ನು ಸಾಯಿಸುವುದಕ್ಕೆ ಬಂದಿಯೋ?” ಎಂದಳು.
19 : ಆದರೆ ಎಲೀಯನು, “ನಿನ್ನ ಮಗನನ್ನು ನನಗೆ ಕೊಡು,” ಎಂದು ಹೇಳಿ ಅವನನ್ನು ಆಕೆಯ ಮಡಿಲಿನಿಂದ ತೆಗೆದುಕೊಂಡು, ತಾನು ವಾಸವಾಗಿದ್ದ ಮೇಲಿನ ಕೋಣೆಗೆ ಹೋಗಿ, ತನ್ನ ಮಂಚದ ಮೇಲೆ ಮಲಗಿಸಿದನು.
20 : ಅನಂತರ ಅವನು, “ನನ್ನ ದೇವರಾದ ಸರ್ವೇಶ್ವರಾ, ನನಗೆ ಆಶ್ರಯವಿತ್ತ ಈ ವಿಧವೆಯ ಮಗನನ್ನು ನೀವು ಸಾಯಿಸಿ ಆಕೆಗೂ ಕೇಡನ್ನುಂಟು ಮಾಡಿದ್ದೇಕೆ?” ಎಂದು
21 : ಹುಡುಗನ ಮೇಲೆ ಮೂರುಸಾರಿ ಬೋರಲು ಬಿದ್ದು, “ನನ್ನ ದೇವರಾದ ಸರ್ವೇಶ್ವರಾ, ಈ ಹುಡುಗನ ಪ್ರಾಣ ತಿರುಗಿ ಬರುವಂತೆ ಮಾಡಿ,” ಎಂದು ಮೊರೆಯಿಟ್ಟನು.
22 : ಸರ್ವೇಶ್ವರ ಅವನ ಪ್ರಾರ್ಥನೆಯನ್ನು ಕೇಳಿದರು. ಹುಡುಗನ ಪ್ರಾಣ ತಿರುಗಿ ಬಂದು ಅವನು ಉಜ್ಜೀವಿಸಿದನು.
23 : ಎಲೀಯನು ಆ ಹುಡುಗನನ್ನು ಅಲ್ಲಿಂದ ಕೆಳಗೆ ತೆಗೆದುಕೊಂಡುಹೋಗಿ ಅವನ ತಾಯಿಗೆ ಒಪ್ಪಿಸಿ, “ಇಗೋ, ನೋಡು; ನಿನ್ನ ಮಗ ಜೀವಂತನಾಗಿದ್ದಾನೆ,” ಎಂದನು.
24 : ಆಗ ಆಕೆ, “ನೀವು ದೈವಪುರುಷರೆಂದೂ ನಿಮ್ಮ ಬಾಯಿಂದ ಬಂದ ಸರ್ವೇಶ್ವರನ ಮಾತು ಸತ್ಯವೆಂದೂ ಈಗ ನನಗೆ ಗೊತ್ತಾಯಿತು,” ಎಂದು ಹೇಳಿದಳು.

· © 2017 kannadacatholicbible.org Privacy Policy