1 : ಆಗ ಸರ್ವೇಶ್ವರಸ್ವಾಮಿ ಹನಾನೀಯನ ಮಗ ಯೇಹುವಿನ ಮುಖಾಂತರ ಬಾಷನಿಗೆ ಹೀಗೆ ಹೇಳಿಸಿದರು:
2 : “ನಾನು ನಿನ್ನನ್ನು ಧೂಳಿನಿಂದ ಎತ್ತಿ ನನ್ನ ಪ್ರಜೆಗಳಾದ ಇಸ್ರಯೇಲರ ನಾಯಕನನ್ನಾಗಿ ಮಾಡಿದೆ. ಆದರೂ ನೀನು ಯಾರೊಬ್ಬಾಮನ ಮಾರ್ಗದಲ್ಲೇ ನಡೆದು, ನನ್ನ ಜನರಾದ ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿದೆ. ಅವರ ಪಾಪದ ಮೂಲಕ ನನಗೆ ಕೋಪವನ್ನೆಬ್ಬಿಸಿದೆ.
3 : ಆದ್ದರಿಂದ ನಿನ್ನನ್ನೂ ನಿನ್ನ ಮನೆಯವರನ್ನೂ ಅಳಿಸಿಬಿಡುವೆನು; ನೆಬಾಟನ ಮಗ ಯಾರೊಬ್ಬಾಮನ ಮನೆಗಾದ ಗತಿ ನಿನ್ನ ಮನೆಗೂ ಆಗುವುದು.
4 : ನಿನ್ನ ಕುಟುಂಬದವರಲ್ಲಿ ಪಟ್ಟಣದೊಳಗೆ ಸಾಯುವವರನ್ನು ನಾಯಿಗಳು ಹಾಗು ಅಡವಿಯಲ್ಲಿ ಸಾಯುವವರನ್ನು ಪಕ್ಷಿಗಳು ತಿಂದುಬಿಡುವುವು”.
5 : ಬಾಷನ ಉಳಿದ ಚರಿತ್ರೆ ಹಾಗು ಅವನ ಪರಾಕ್ರಮ ಸಾಧನೆಗಳು ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
6 : ಅವನು ನಿಧನನಾಗಿ ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ತಿರ್ಚದಲ್ಲಿ ಸಮಾಧಿ ಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ಏಲನು ಅರಸನಾದನು.
7 : ಬಾಷನು ಯಾರೊಬ್ಬಾಮನ ಮನೆಯವರಂತೆ ತನ್ನ ದುಷ್ಕøತ್ಯಗಳಿಂದ ಸರ್ವೇಶ್ವರನನ್ನು ರೇಗಿಸಿ ಅವರ ದೃಷ್ಟಿಯಲ್ಲಿ ದ್ರೋಹಿಯಾದನು. ಆದ್ದರಿಂದಲೂ ಅವನು ಯಾರೊಬ್ಬಾಮನ ಮನೆಯವರನ್ನು ನಿರ್ನಾಮಗೊಳಿಸಿದ್ದರಿಂದಲೂ ಸರ್ವೇಶ್ವರನು ಹನಾನೀಯ ಮಗ ಯೇಹುವಿನ ಮುಖಾಂತರ ಅವನಿಗೂ ಅವನ ಕುಟುಂಬಕ್ಕೂ ಸಂಭವಿಸಲಿರುವ ದುರ್ಗತಿಯನ್ನು ಮುಂತಿಳಿಸಿದ್ದರು.
8 : ಯೆಹೂದ್ಯರ ಅರಸ ಆಸನ ಆಳ್ವಿಕೆಯ ಇಪ್ಪತ್ತಾರನೆಯ ವರ್ಷದಲ್ಲಿ ಬಾಷನ ಮಗ ಏಲನು ತಿರ್ಚದಲ್ಲಿ ಇಸ್ರಯೇಲರ ಅರಸನಾಗಿ ಎರಡು ವರ್ಷ ಆಳಿದನು.
9 : ಅವನ ಸೇವಕನೂ ಅವನ ರಥಬಲದ ಅರ್ಧಭಾಗಕ್ಕೆ ಅಧಿಪತಿಯೂ ಆಗಿದ್ದ ಜಿಮ್ರಿ ಎಂಬವನು ಅವನಿಗೆ ವಿರುದ್ಧ ಒಳಸಂಚು ಮಾಡಿದನು. ಒಮ್ಮೆ ಅರಸನು ತಿರ್ಚದಲ್ಲಿ ತನ್ನ ಮನೆಯ ಉಗ್ರಾಣಿಕನಾದ ಅರ್ಚನೆಂಬವನ ಮನೆಯಲ್ಲಿ ಕುಡಿದು ಮತ್ತನಾಗಿದ್ದನು.
10 : ಆಗ ಜಿಮ್ರಿ ಅಲ್ಲಿಗೆ ಹೋಗಿ ಅವನನ್ನು ಕೆಡವಿ ಕೊಂದು ಹಾಕಿದನು. ಅವನಿಗೆ ಬದಲಾಗಿ ತಾನೇ ಅರಸನಾದನು. ಇದು ಜುದೇಯದ ಅರಸ ಆಸನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ ನಡೆಯಿತು.
11 : ಇವನು ಸಿಂಹಾಸನದಲ್ಲಿ ಕುಳಿತು ಅಳತೊಡಗಿದ ಕೂಡಲೆ ಬಾಷನ ಮನೆಯವರನ್ನೂ ಅವನ ಬಂಧುಮಿತ್ರರನ್ನೂ ಸಂಹರಿಸಿದನು. ಅವರಲ್ಲಿ ಒಬ್ಬ ಗಂಡಸನ್ನೂ ಉಳಿಸಲಿಲ್ಲ.
12 : ಬಾಷನೂ ಅವನ ಮಗ ಏಲನೂ ತಾವು ಪಾಪಮಾಡಿದ್ದಲ್ಲದೆ ಇಸ್ರಯೇಲರನ್ನೂ ಪಾಪಕ್ಕೆ ಪ್ರಚೋದಿಸಿದರು. ತಮ್ಮ ವಿಗ್ರಹಗಳಿಂದ ಇಸ್ರಯೇಲ್ ದೇವರಾದ ಸರ್ವೇಶ್ವರನನ್ನು ರೇಗಿಸಿದರು.
13 : ಈ ಕಾರಣ ಪ್ರವಾದಿ ಯೇಹುವಿನ ಮುಖಾಂತರ ಸರ್ವೇಶ್ವರ ಬಾಷನ ಮನೆಗೆ ದುರ್ಗತಿಯನ್ನು ಮುಂತಿಳಿಸಿದ್ದರು. ಜಿಮ್ರಿಯು ಬಾಷನ ಮನೆಯವರೆಲ್ಲರನ್ನೂ ನಿರ್ನಾಮಗೊಳಿಸಿದಾಗ ಆ ಮಾತು ನೆರವೇರಿತು.
14 : ಏಲನ ಉಳಿದ ಚರಿತ್ರೆ ಹಾಗು ಅವನ ಕಾರ್ಯ ಕಲಾಪಗಳು ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ.
15 : ಯೆಹೂದ್ಯರ ಅರಸ ಆಸನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ ಜಿಮ್ರಿ ಎಂಬವನು ತಿರ್ಚದಲ್ಲಿ ಇಸ್ರಯೇಲರ ಅರಸನಾಗಿ ಏಳು ದಿವಸ ಆಳಿದನು. ಆ ಸಮಯದಲ್ಲಿ ಇಸ್ರಯೇಲರು ಫಿಲಿಷ್ಟಿಯರ ವಶದಲ್ಲಿದ್ದ ಗಿಬ್ಬೆತೋನ್ ಎಂಬ ಪಟ್ಟಣಕ್ಕೆ ಮುತ್ತಿಗೆ ಹಾಕಿದ್ದರು.
16 : ಜಿಮ್ರಿ, ಅರಸನಿಗೆ ವಿರುದ್ಧ ಒಳಸಂಚುಮಾಡಿ ಅವನನ್ನು ಕೊಂದುಹಾಕಿದನೆಂಬ ಸುದ್ದಿ ಪಾಳೆಯದಲ್ಲಿದ್ದ ಇಸ್ರಯೇಲರಿಗೆ ಮುಟ್ಟಿತು. ಅವರು ಅದೇ ದಿವಸ, ಅಲ್ಲಿಯೇ, ಸೈನ್ಯಾಧಿಪತಿಯಾದ ಒಮ್ರಿಯನ್ನು ತಮ್ಮ ಅರಸನನ್ನಾಗಿ ನೇಮಿಸಿಕೊಂಡರು.
17 : ಇವನೂ ಇವನ ಜೊತೆಯಲ್ಲಿದ್ದ ಇಸ್ರಯೇಲರೆಲ್ಲರೂ ಗಿಬ್ಬೆತೋನನ್ನು ಬಿಟ್ಟುಹೋಗಿ ತಿರ್ಚಕ್ಕೆ ಮುತ್ತಿಗೆ ಹಾಕಿದರು.
18 : ಪಟ್ಟಣ ಅವರ ವಶವಾದದ್ದನ್ನು ಜಿಮ್ರಿ ಕಂಡು, ಅರಮನೆಯ Uರ್ಭಗೃಹವನ್ನು ಹೊಕ್ಕು ಅರಮನೆಗೆ ಬೆಂಕಿಹೊತ್ತಿಸಿ ಸುಟ್ಟುಕೊಂಡು ಸತ್ತನು.
19 : ಅವನು ಯಾರೊಬ್ಬಾಮನಂತೆ ತಾನು ಪಾಪ ಮಾಡಿದ್ದಲ್ಲದೆ ಇಸ್ರಯೇಲರ ಪಾಪಕ್ಕೆ ಕಾರಣವಾಗಿದ್ದನು. ಹೀಗೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದುದರಿಂದ ಈ ದುರ್ಗತಿ ಸಂಭವಿಸಿತು.
20 : ಜಿಮ್ರಿಯ ಉಳಿದ ಚರಿತ್ರೆ ಹಾಗು ಅವನ ಒಳಸಂಚು ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ.
21 : ಆ ಕಾಲದಲ್ಲಿ ಇಸ್ರಯೇಲರಲ್ಲಿ ಎರಡು ಪಂಗಡಗಳಿದ್ದವು; ಒಂದು ಪಂಗಡದವರು ಗೀನತನ ಮಗನಾದ ತಿಬ್ನಿಯನ್ನು ಹಿಂಬಾಲಿಸಿ ಅರಸನನ್ನಾಗಿ ಮಾಡಿಕೊಳ್ಳಬೇಕೆಂದಿದ್ದರು; ಇನ್ನೊಂದು ಪಂಗಡದವರು ಒಮ್ರಿಯನ್ನು ಹಿಂಬಾಲಿಸಿದರು.
22 : ಆದರೆ ಒಮ್ರಿಯ ಪಂಗಡದವರು ಗೀನತನ ಮಗ ತಿಬ್ನಿಯ ಪಂಗಡದವರನ್ನು ಸೋಲಿಸಿದರು. ತಿಬ್ನಿಯು ಸತ್ತುಹೋದನು; ಒಮ್ರಿಯೇ ಆಳತೊಡಗಿದನು.
23 : ಯೆಹೂದ್ಯರ ಅರಸ ಆಸನ ಆಳ್ವಿಕೆಯ ಮೂವತ್ತೊಂದನೆಯ ವರ್ಷದಲ್ಲಿ ಒಮ್ರಿ ಇಸ್ರಯೇಲರ ಅರಸನಾಗಿ ಹನ್ನೆರಡು ವರ್ಷ ಆಳಿದನು. ಆರು ವರ್ಷಗಳವರೆಗೆ ತಿರ್ಚವೇ ಅವನ ರಾಜಧಾನಿಯಾಗಿತ್ತು.
24 : ಅನಂತರ ಶೆಮೆರ್ ಎಂಬವನಿಗೆ ಆರು ಸಾವಿರ ಬೆಳ್ಳಿನಾಣ್ಯಗಳನ್ನು ಕೊಟ್ಟು ಅವನಿಂದ ಸಮಾರಿಯ ಎಂಬ ಗುಡ್ಡವನ್ನು ಕೊಂಡುಕೊಂಡನು. ಅದರ ಮೆಲೆ ಒಂದು ಪಟ್ಟಣವನ್ನು ಕಟ್ಟಿಸಿ ಅದಕ್ಕೆ ಆ ಭೂಮಿಯ ಒಡೆಯನಾಗಿದ್ದ ಶೆಮೆರನ ಜ್ಞಾಪಕಾರ್ಥವಾಗಿ ಸಮಾರಿಯ ಎಂಬ ಹೆಸರಿಟ್ಟನು.
25 : ನಿನ್ನ ಕುಟುಂಬದವರಲ್ಲಿ ಪಟ್ಟಣದೊಳಗೆ ಸಾಯುವವರನ್ನು ನಾಯಿಗಳು ಹಾಗು ಅಡವಿಯಲ್ಲಿ ಸಾಯುವವರನ್ನು ಪಕ್ಷಿಗಳು ತಿಂದುಬಿಡುವುವು”.
26 : ಇಸ್ರಯೇಲರು ವಿಗ್ರಹಗಳಿಂದ ತಮ್ಮ ದೇವರಾದ ಸರ್ವೇಶ್ವರನನ್ನು ರೇಗಿಸಿದಂತೆ ಅವರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗ ಯಾರೊಬ್ಬಾಮನ ಮಾರ್ಗದಲ್ಲೇ ಇವನೂ ನಡೆದನು.
27 : ಇವನ ಉಳಿದ ಚರಿತ್ರೆ, ಪರಾಕ್ರಮ ಹಾಗು ಕಾರ್ಯಕಲಾಪಗಳು ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ.
28 : ಒಮ್ರಿ ಸತ್ತು ಪಿತೃಗಳ ಬಳಿಗೆ ಸೇರಿದಾಗ ಇವನ ಶವವನ್ನು ಸಮಾರಿಯ ಪಟ್ಟಣದಲ್ಲಿ ಸಮಾಧಿ ಮಾಡಿದರು. ಇವನ ಸ್ಥಾನದಲ್ಲಿ ಇವನ ಮಗ ಅಹಾಬನು ಅರಸನಾದನು.
29 : ಯೆಹೂದ್ಯರ ಅರಸ ಆಸನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಒಮ್ರಿಯ ಮಗ ಅಹಾಬನು ಇಸ್ರಯೇಲರ ಅರಸನಾದನು; ಸಮಾರಿಯ ಪಟ್ಟಣದಲ್ಲಿ ಇಪ್ಪತ್ತೆರಡು ವರ್ಷ ಆಳಿದನು.
30 : ಇವನು ತನ್ನ ಹಿಂದಿನ ಅಧಿಕಾರಿಗಳೆಲ್ಲರಿಗಿಂತಲೂ ದುಷ್ಟನು. ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿ.
31 : ಇವನು ನೆಬಾಟನ ಮಗ ಯಾರೊಬ್ಬಾಮನ ದುರ್ಮಾರ್ಗದಲ್ಲಿ ನಡೆದದ್ದು ಸಾಲದೆಂದು, ಸಿದೋನ್ಯರ ಅರಸ ಎತ್ವಾಳನ ಮಗಳು ಈಜೆಬೆಲ್ ಎಂಬಾಕೆಯನ್ನು ಮದುವೆ ಮಾಡಿಕೊಂಡು ಬಾಳ್ ದೇವರನ್ನು ಪೂಜಿಸತೊಡಗಿದನು.
32 : ಬಾಳ್‍ದೇವರಿಗಾಗಿ ಸಮಾರಿಯದಲ್ಲಿ ಒಂದು ಗುಡಿ ಕಟ್ಟಿಸಿ, ಅದರಲ್ಲಿ ಬಲಿಪೀಠವನ್ನು ಕಟ್ಟಿಸಿದನು;
33 : ಇದಲ್ಲದೆ, ಅಶೇರ ವಿಗ್ರಹಸ್ತಂಭವನ್ನು ನಿಲ್ಲಿಸಿದನು; ಹೀಗೆ ಇನ್ನು ಎಷ್ಟೋ ಅಧರ್ಮ ಕೆಲಸಗಳನ್ನು ಮಾಡಿ, ಮುಂದೆಯಿದ್ದ ಎಲ್ಲ ಇಸ್ರಯೇಲ್ ರಾಜರಿಗಿಂತಲೂ ಹೆಚ್ಚಾಗಿ ಇಸ್ರಯೇಲ್ ದೇವರಾದ ಸರ್ವೇಶ್ವರನನ್ನು ರೇಗಿಸಿದನು.
34 : ಇವನ ಕಾಲದಲ್ಲೆ ಬೇತೇಲಿನವನಾದ ಹೀಯೇಲನು ಜೆರಿಕೋ ಪಟ್ಟಣವನ್ನು ಕಟ್ಟಿಸಿದನು. ಅವನು ಅದಕ್ಕೆ ಅಸ್ತಿವಾರ ಹಾಕುವಾಗ ಹಿರಿಯ ಮಗನಾದ ಅಬೀರಾಮನನ್ನು ಹಾಗು ಅದಕ್ಕೆ ಬಾಗಿಲುಗಳನ್ನಿಡುವಾಗ ಕಿರಿಯ ಮಗನಾದ ಸೆಗೂಬನನ್ನೂ ಕಳೆದುಕೊಂಡನು. ಹೀಗೆ ಸರ್ವೇಶ್ವರ ನೂನನ ಮಗ ಯೆಹೋಶುವನಿಂದ ಹೇಳಿಸಿದ ಮಾತು ನೆರವೇರಿತು.