1 : ಸರ್ವೇಶ್ವರನ ನಾಮಮಹತ್ತಿನಿಂದ ಸೊಲೊಮೋನನ ಕೀರ್ತಿ ಹರಡಿತು. ಇದನ್ನು ಕೇಳಿದ ಶೆಬದ ರಾಣಿ ಅವನನ್ನು ಒಗಟುಗಳಿಂದ ಪರೀಕ್ಷಿಸುವುದಕ್ಕೆ ಬಂದಳು.
2 : ಆಕೆ ಸುಗಂಧ ದ್ರವ್ಯ, ಅಪರಿಮಿತವಾದ ಬಂಗಾರ, ರತ್ನ, ಇವುಗಳನ್ನು ಒಂಟೆಗಳ ಮೇಲೆ ಹೇರಿಸಿಕೊಂಡು ಮಹಾ ಪರಿವಾರದೊಡನೆ ಜೆರುಸಲೇಮಿಗೆ ಬಂದಳು. ತನ್ನ ಮನಸ್ಸಿನಲ್ಲಿ ಗೊತ್ತುಮಾಡಿಕೊಂಡಿದ್ದ ಎಲ್ಲಾ ವಿಷಯಗಳನ್ನು ಕುರಿತು ಸೊಲೊಮೋನನೊಡನೆ ಸಂಭಾಷಿಸಿದಳು.
3 : ಸೊಲೊಮೋನನು ಆಕೆಯ ಎಲ್ಲಾ ಪ್ರಶ್ನೆಗಳಿಗೆ ಉತ್ತರಕೊಟ್ಟನು; ಅರಸನಿಗೆ ಬಿಡಿಸಲು ಕ್ಷಿಷ್ಟವಾದ ಒಗಟು ಒಂದೂ ಇರಲಿಲ್ಲ.
4 : ಶೆಬದ ರಾಣಿ ಸೊಲೊಮೋನನ ಹಲವಿಧವಾದ ಜ್ಞಾನೋಕ್ತಿಗಳನ್ನು ಕೇಳಿದಳು;
5 : ಅವನು ಕಟ್ಟಿಸಿದ ಅರಮನೆ, ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ, ಅವರ ಉಡುಪುಗಳು, ಅವನ ಪಾನಕಗಳು ಇವುಗಳನ್ನು ಮತ್ತು ಸರ್ವೇಶ್ವರನ ಆಲಯದಲ್ಲಿ ಅವನು ಸಮರ್ಪಿಸುತ್ತಿದ್ದ ದಹನಬಲಿಗಳನ್ನು ನೋಡಿದಳು. ಇವುಗಳಿಂದ ಆಶ್ಚರ್ಯಚಕಿತಳಾಗಿ,
6 : “ನಾನು ನನ್ನ ದೇಶದಲ್ಲಿ ನಿಮ್ಮ ಜ್ಞಾನವನ್ನೂ ಸಾಧನೆಗಳನ್ನೂ ಕುರಿತು ಕೇಳಿದ್ದು ಸತ್ಯವಾಗಿದೆ.
7 : ನಾನಾಗಿ ಇಲ್ಲಿಗೆ ಬಂದು ಕಣ್ಣಾರೆ ನೋಡುವುದಕ್ಕೆ ಮೊದಲು ಜನರು ಹೇಳಿದ ಸುದ್ದಿಯನ್ನು ನಂಬಲಿಲ್ಲ; ಈಗ ನೋಡಿದರೆ ನಿಮ್ಮ ಜ್ಞಾನ ವೈಭವಗಳು, ನಾನು ಕೇಳಿದ್ದಕ್ಕಿಂತ ಮಿಗಿಲಾಗಿವೆ. ಜನರು ನನಗೆ ಇದರಲ್ಲಿ ಅರ್ಧವನ್ನಾದರೂ ವರದಿ ಮಾಡಿರಲಿಲ್ಲ.
8 : ನಿಮ್ಮ ಪ್ರಜೆಗಳು ಭಾಗ್ಯವಂತರು! ಸದಾ ನಿಮ್ಮ ಸನ್ನಿಧಿಯಲ್ಲಿದ್ದು ನಿಮ್ಮ ಜ್ಞಾನ ವಾಕ್ಯಗಳನ್ನು ಕೇಳುವ ನಿಮ್ಮ ಸೇವಕರು ಧನ್ಯರು!
9 : ನಿಮ್ಮನ್ನು ಮೆಚ್ಚಿ ಇಸ್ರಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿಮ್ಮ ದೇವರಾದ ಸರ್ವೇಶ್ವರನಿಗೆ ಸ್ತೋತ್ರವಾಗಲಿ! ಅವರು ಇಸ್ರಯೇಲರನ್ನು ಸದಾ ಪ್ರೀತಿಸುವವರಾಗಿರುವುದರಿಂದ ಆ ಜನರ ನೀತಿನ್ಯಾಯಗಳನ್ನು ಸ್ಥಾಪಿಸುವುದಕ್ಕಾಗಿ ನಿಮ್ಮನ್ನು ಅರಸನನ್ನಾಗಿ ನೇಮಿಸಿದ್ದಾರೆ,” ಎಂದು ಹೇಳಿದಳು.
10 : ಆಕೆ ಅರಸನಿಗೆ ನಾಲ್ಕು ಸಾವಿರ ಕಿಲೋಗ್ರಾಂಗೂ ಹೆಚ್ಚು ಬಂಗಾರವನ್ನು, ಅಪರಿಮಿತ ಸುಗಂಧದ್ರವ್ಯವನ್ನು ಹಾಗು ರತ್ನಗಳನ್ನು ಕೊಟ್ಟಳು. ಶೆಬದ ರಾಣಿ ಅರಸ ಸೊಲೊಮೋನನಿಗೆ ಕೊಟ್ಟಷ್ಟು ಸುಗಂಧದ್ರವ್ಯವನ್ನು ಬೇರೆ ಯಾರೂ ಈ ನಾಡಿಗೆ ಕೊಟ್ಟಿರಲಿಲ್ಲ.
11 : ಹೀರಾಮನ ಹಡಗುಗಳು ಓಫೀರ್ ದೇಶದಿಂದ ಬಂಗಾರ ಮಾತ್ರವಲ್ಲ ಸುಗಂಧದ ಮರವನ್ನೂ ರತ್ನಗಳನ್ನೂ ರಾಶಿರಾಶಿಯಾಗಿ ತಂದವು.
12 : ಅರಸನು ಸುಗಂಧದ ಮರದಿಂದ ದೇವಾಲಯಕ್ಕೆ ಹಾಗು ಅರಮನೆಗಳಿಗೆ ಮೆಟ್ಟಲುಗಳನ್ನು ವಾದ್ಯಗಾರರಿಗಾಗಿ ಕಿನ್ನರಿಗಳನ್ನು ಹಾಗು ಸ್ವರಮಂಡಲಗಳನ್ನು ಮಾಡಿಸಿದನು. ಆಗ ಬಂದಷ್ಟು ಸುಗಂಧಮರ ಇಂದಿನವರೆಗೂ ಬರಲಿಲ್ಲ, ಮತ್ತು ಯಾರೂ ಅಷ್ಟನ್ನು ಕಾಣಲೇ ಇಲ್ಲ.
13 : ಅರಸ ಸೊಲೊಮೋನನು ಶೆಬದ ರಾಣಿಗೆ ತಾನಾಗಿ ರಾಜಮರ್ಯಾದೆಯಿಂದ ಕೊಟ್ಟ ವಸ್ತುಗಳಲ್ಲದೆ, ಆಕೆ ಕೇಳಿದವುಗಳನ್ನೆಲ್ಲಾ ಕೊಟ್ಟು ಬಿಟ್ಟನು. ಅನಂತರ ಆಕೆ ತನ್ನ ಪರಿವಾರದೊಡನೆ ಸ್ವದೇಶಕ್ಕೆ ಹೊರಟುಹೋದಳು.
14 : ಸೊಲೊಮೋನನಿಗೆ ದೇಶಾಂತರ ವ್ಯಾಪಾರಿಗಳು, ವರ್ತಕರು, ಅರೇಬಿಯದ ಅರಸರು ಹಾಗು ಪ್ರದೇಶಾಧಿಪತಿಗಳು ತರುತ್ತಿದ್ದ ಬಂಗಾರವಲ್ಲದೆ
15 : ಪ್ರತಿ ವರ್ಷ ಸುಮಾರು ಇಪ್ಪತ್ತಮೂರು ಸಾವಿರ ಕಿಲೋಗ್ರಾಂ ಬಂಗಾರ ದೊರಕುತ್ತಿತ್ತು.
16 : ಅರಸ ಸೊಲೊಮೋನನು ಬಂಗಾರದ ತಗಡಿನಿಂದ ಇನ್ನೂರು ಗುರಾಣಿಗಳನ್ನು ಮಾಡಿಸಿದನು; ಪ್ರತಿಯೊಂದು ಗುರಾಣಿಗೆ ಸುಮಾರು ಏಳು ಕಿಲೋಗ್ರಾಂ ಬಂಗಾರ ಹಿಡಿಯಿತು.
17 : ಅವನು ಬಂಗಾರದ ತಗಡಿನಿಂದ ಮುನ್ನೂರು ಖೇಡ್ಯಗಳನ್ನೂ ಮಾಡಿಸಿದನು. ಪ್ರತಿಯೊಂದು ಖೇಡ್ಯಕ್ಕೆ ಎರಡು ಕಿಲೋಗ್ರಾಂ ಬಂಗಾರ ಹಿಡಿಯಿತು. ಇವುಗಳನ್ನು ‘ಲೆಬನೋನಿನ ತೋಪು’ ಎನಿಸಿಕೊಳ್ಳುವ ಮಂದಿರದಲ್ಲಿ ಇರಿಸಿದನು.
18 : ಇದಲ್ಲದೆ, ಅರಸನು ದೊಡ್ಡದಾದ ಒಂದು ದಂತಸಿಂಹಾಸನವನ್ನು ಮಾಡಿಸಿ ಅದನ್ನು ಚೊಕ್ಕ ಬಂಗಾರದ ತಗಡಿನಿಂದ ಹೊದಿಸಿದನು;
19 : ಅದಕ್ಕೆ ಆರು ಮೆಟ್ಟಿಲುಗಳಿದ್ದವು. ಅದರ ಹಿಂಭಾಗದ ತುದಿ ಚಕ್ರಾಕಾರವಾಗಿತ್ತು. ಆಸನಕ್ಕೆ ಎರಡು ಕೈಗಳೂ, ಅವುಗಳ ಹತ್ತಿರ ಎರಡು ಸಿಂಹಗಳೂ ಇದ್ದವು.
20 : ಆರು ಮೆಟ್ಟಲುಗಳ ಎರಡು ಕಡೆಗಳಲ್ಲೂ ಒಟ್ಟು ಹನ್ನೆರಡು ಸಿಂಹಗಳು ನಿಂತಿದ್ದವು; ಇಂಥ ಸಿಂಹಾಸನವು ಬೇರೆ ಯಾವ ರಾಜ್ಯದಲ್ಲಿಯೂ ಇರಲಿಲ್ಲ.
21 : ಅರಸ ಸೊಲೊಮೋನನ ಎಲ್ಲಾ ಪಾನ ಪಾತ್ರೆಗಳು ಬಂಗಾರದವುಗಳು; ‘ಲೆಬನೋನಿನ ತೋಪು’ ಎನಿಸಿಕೊಳ್ಳುವ ಮಂದಿರದ ಸಾಮಾನುಗಳು ಚೊಕ್ಕ ಬಂಗಾರದವುಗಳು. ಸೊಲೊಮೋನನ ಕಾಲದಲ್ಲಿ ಬೆಳ್ಳಿಗೆ ಬೆಲೆಯಿರಲಿಲ್ಲ. ಆದುದರಿಂದ ಅವನಲ್ಲಿ ಬೆಳ್ಳಿಯ ಸಾಮಾನು ಒಂದಾದರೂ ಕಾಣಿಸಲಿಲ್ಲ.
22 : ಹೀರಾಮನ ನಾವೆಗಳ ಜೊತೆಯಲ್ಲಿ ಸೊಲೊಮೋನನ ತಾರ್ಷಿಷ್ ಹಡಗುಗಳು ಹೋಗಿ ಮೂರು ವರ್ಷಕ್ಕೊಮ್ಮೆ ಬಂಗಾರ, ಬೆಳ್ಳಿ, ದಂತ, ಕಪಿ, ನವಿಲು ಇವುಗಳನ್ನು ತರುತ್ತಿದ್ದವು.
23 : ಈ ಪ್ರಕಾರ ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ ಜ್ಞಾನದಲ್ಲಿಯೂ ಭೂಲೋಕದ ಎಲ್ಲಾ ಅರಸರಿಗಿಂತ ಮಿಗಿಲಾಗಿ ಇದ್ದನು.
24 : ಭೂಲೋಕದವರೆಲ್ಲರೂ, ದೇವರು ಅವನಿಗೆ ಅನುಗ್ರಹಿಸಿದ್ದ ಜ್ಞಾನವಾಕ್ಯಗಳನ್ನು ಕೇಳುವುದಕ್ಕಾಗಿ ಅವನ ದರ್ಶನಕ್ಕೆ ಬರುತ್ತಿದ್ದರು.
25 : ಅವರೆಲ್ಲರೂ ಅವನಿಗೆ ವರ್ಷ ವರ್ಷ ಬೆಳ್ಳಿ ಬಂಗಾರದ ಸಾಮಾನು, ಉಡುಪು, ಯುದ್ಧಾಯುಧ, ಸುಗಂಧದ್ರವ್ಯ, ಕುದುರೆ, ಹೇಸರಗತ್ತೆ ಇವುಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದರು.
26 : ಸೊಲೊಮೋನನು ರಥಗಳನ್ನೂ ರಾಹುತರನ್ನೂ ಸಂಗ್ರಹಿಸುತ್ತಿದ್ದನು. ಅವನ ರಥಗಳು ಸಾವಿರದ ನಾನೂರು; ರಾಹುತರು ಹನ್ನೆರಡು ಸಾವಿರ. ಇವುಗಳಲ್ಲಿ ಕೆಲವನ್ನು ಜೆರುಸಲೇಮಿನಲ್ಲಿ ತನ್ನ ಬಳಿಯಲ್ಲೇ ಇರಿಸಿದ್ದನು; ಉಳಿದವುಗಳನ್ನು ರಥಗಳಿಗಾಗಿಯೇ ನೇಮಿಸಿದ್ದ ಪಟ್ಟಣಗಳಲ್ಲಿ ಇರಿಸಿದ್ದನು.
27 : ಅವನ ಕಾಲದಲ್ಲಿ ಜೆರುಸಲೇಮಿನಲ್ಲಿ ಬೆಳ್ಳಿಯು ಕಲ್ಲಿನಂತೆ ಹಾಗು ದೇವದಾರು ಮರಗಳು ಇಳಕಲ್ಲಿನ ಪ್ರದೇಶದಲ್ಲಿ ಬೆಳೆಯುವ ಅತ್ತಿಮರಗಳಂತೆ ವಿಫುಲವಾಗಿದ್ದವು.
28 : ಅರಸ ಸೊಲೊಮೋನನ ಕುದುರೆಗಳು ಈಜಿಪ್ಟ್ ದೇಶದವುಗಳು; ಅವನ ವರ್ತಕರು ಅವುಗಳನ್ನು ಹಿಂಡುಗಟ್ಟಳೆಯಾಗಿ ಕೊಂಡುಕೊಂಡು ಬರುತ್ತಿದ್ದರು.
29 : ಈಜಿಪ್ಟ್ ದೇಶದಿಂದ ರಥಗಳನ್ನೂ ಕುದುರೆಗಳನ್ನೂ ತರಿಸಬೇಕಾದರೆ ಪ್ರತಿಯೊಂದು ರಥಕ್ಕೆ ಆರುನೂರು ಬೆಳ್ಳಿನಾಣ್ಯಗಳನ್ನೂ ಕುದುರೆಗೆ ನೂರೈವತ್ತು ಬೆಳ್ಳಿನಾಣ್ಯಗಳನ್ನೂ ಕೊಡಬೇಕಾಗಿತ್ತು. ಅವು ಹಿತ್ತಿಯರ ಮತ್ತು ಸಿರಿಯಾದವರ ಎಲ್ಲಾ ಅರಸರಿಗೆ ಇವರ ಮುಖಾಂತರವೇ ಮಾರಾಟವಾಗುತ್ತಿದ್ದವು.