1 : ಅರಸ ದಾವೀದನು ಹಣ್ಣುಹಣ್ಣು ಮುದುಕನಾದ; ಎಷ್ಟು ಕಂಬಳಿಗಳನ್ನು ಹೊದಿಸಿದರೂ ಅವನಿಗೆ ಬೆಚ್ಚಗಾಗುತ್ತಿರಲಿಲ್ಲ.
2 : ಆದುದರಿಂದ ಅವನ ಸೇವಕರು, “ಒಡೆಯರೇ, ಅರಸರೇ, ತಮ್ಮ ಸನ್ನಿಧಿಯಲ್ಲಿದ್ದುಕೊಂಡು ತಮಗೆ ಶುಶ್ರೂಷೆ ಮಾಡಲು ಒಬ್ಬ ಕನ್ನಿಕೆಯನ್ನು ಹುಡುಕಬೇಕಾಗಿದೆ. ಆಕೆ ನಮ್ಮ ಒಡೆಯರೂ ಅರಸರೂ ಆದ ತಮ್ಮ ಮಗ್ಗುಲಲ್ಲೇ ಮಲಗಿ ತಮ್ಮನ್ನು ಬೆಚ್ಚಗಿರಿಸುವಳು,” ಎಂದು ಹೇಳಿದರು.
3 : ಅದರಂತೆಯೇ, ಇಸ್ರಯೇಲರ ಪ್ರಾಂತ್ಯಗಳಲೆಲ್ಲಾ ಅತಿ ಸುಂದರಿಯಾದ ಒಬ್ಬ ಹುಡುಗಿಯನ್ನು ಹುಡುಕುವುದಕ್ಕೆ ಹೋದರು. ಶೂನೇಮ್ ಊರಿನ ಅಬೀಷಣ್ ಎಂಬವಳನ್ನು ಕಂಡುಹಿಡಿದು ಆಕೆಯನ್ನು ಅರಸನ ಬಳಿಗೆ ಕರೆದುಕೊಂಡು ಬಂದರು.
4 : ಬಹಳ ಚೆಲುವೆ ಆದ ಆಕೆ ಅರಸನನ್ನು ಶುಶ್ರೂಷೆ ಮಾಡುವ ದಾದಿಯಾದಳು. ಆದರೆ ಅರಸ ಅಬೀಷಗಳನ್ನು ಕೂಡಲಿಲ್ಲ.
5 : ಈಗಾಗಲೇ ಅಬ್ಷಾಲೋಮನು ಸತ್ತು ಹೋಗಿದ್ದನು. ದಾವೀದನಿಗೆ ಹಗ್ಗೀತಳಲ್ಲಿ ಹುಟ್ಟಿದ ಅದೋನಿಯನೇ ಜೀವದಿಂದ ಉಳಿದವರಲ್ಲಿ ಹಿರಿಯ ಮಗ. ಅವನು ಬಹಳ ಸುಂದರನು.
6 : ದಾವೀದನು ಯಾವುದೇ ವಿಷಯದಲ್ಲಿ ಅವನನ್ನು ಎಂದೂ ಗದರಿಸಿರಲಿಲ್ಲ. ತಾನೇ ರಾಜನಾಗಬೇಕೆಂಬ ಆಕಾಂಕ್ಷೆ ಅವನದು. ಎಂದೇ ತನಗೋಸ್ಕರ ರಥ, ರಥಾಶ್ವಗಳನ್ನು ಹಾಗು ಐವತ್ತು ಮಂದಿ ಬೆಂಗಾವಲಿಗರನ್ನು ನೇಮಿಸಿಕೊಂಡಿದ್ದನು.
7 : ಜೆರೂಯಳ ಮಗ ಯೋವಾಬನನ್ನೂ ಯಾಜಕ ಎಬ್ಯಾತಾರನನ್ನೂ ತನ್ನ ಕಡೆಗೆ ಒಲಿಸಿಕೊಂಡಿದ್ದನು. ಇವರು ಅವನಿಗೆ ಬೆಂಬಲ ವ್ಯಕ್ತಪಡಿಸಿದ್ದರು.
8 : ಆದರೆ ಯಾಜಕ ಚಾದೋಕ್, ಯೆಹೋಯಾದಾವನ ಮಗ ಬೆನಾಯ, ಪ್ರವಾದಿ ನಾತಾನ್, ಶಿಮ್ಮೀ, ರೇಗೀ ಎಂಬವರೂ ದಾವೀದನ ವಿಶೇಷ ಕಾವಲಾಳುಗಳೂ ಅದೋನಿಯನನ್ನು ಬೆಂಬಲಿಸಲಿಲ್ಲ.
9 : ಒಮ್ಮೆ ಅದೋನೀಯನು ರೋಗೆಲ್ ಬುಗ್ಗೆಯ ಬಳಿಯಿರುವ ಜೋಹೆಲೆತ್ ಬಂಡೆಯ ಮೇಲೆ ಕುರಿ, ಹೋರಿ ಮೊದಲಾದ ಕೊಬ್ಬಿದ ಪಶುಗಳನ್ನು ಬಲಿದಾನ ಮಾಡಿಸಿದನು; ಅರಸು ಕುಮಾರರಾದ ತನ್ನ ಸಹೋದರರನ್ನು ಹಾಗು ಆಸ್ಥಾನದ ಎಲ್ಲ ಯೆಹೂದ್ಯ ಅಧಿಕಾರಿಗಳನ್ನು ಔತಣಕ್ಕೆ ಆಮಂತ್ರಿಸಿದನು.
10 : ಆದರೆ, ಪ್ರವಾದಿ ನಾತಾನನನ್ನಾಗಲಿ, ಬೆನಾಯನನ್ನಾಗಲಿ, ವಿಶೇಷ ಕಾವಲಾಳುಗಳನ್ನಾಗಲಿ, ತಮ್ಮನಾದ ಸೊಲೊಮೋನನನ್ನಾಗಲಿ ಕರೆಯಲಿಲ್ಲ.
11 : ಆಗ ನಾತಾನನು ಸೊಲೊಮೋನನ ತಾಯಿಯಾದ ಬತ್ಷೆಬೆಗೆ, “ಹಗ್ಗೀತಳ ಮಗ ಅದೋನೀಯನು, ನಮ್ಮ ಒಡೆಯ ದಾವೀದರಿಗೆ ತಿಳಿಯದೆಯೇ ಅರಸನಾದನೆಂಬುದನ್ನು ನೀನು ಕೇಳಿರಬೇಕಲ್ಲವೆ?
12 : ಈಗ ನಿನ್ನ ಮತ್ತು ನಿನ್ನ ಮಗ ಸೊಲೊಮೋನನ ಜೀವವನ್ನು ಉಳಿಸಿ ಕೊಳ್ಳಬೇಕಾದರೆ ನನ್ನ ಆಲೋಚನೆಯನ್ನು ಕೇಳು:
13 : ನೀನು ಅರಸ ದಾವೀದನ ಬಳಿಗೆ ಹೋಗಿ, ‘ನನ್ನ ಒಡೆಯರಾದ ಅರಸರು ತಮ್ಮ ತರುವಾಯ ನನ್ನ ಮಗನಾದ ಸೊಲೊಮೋನನೇ ಆಳಬೇಕು, ಅವನೇ ತಮ್ಮ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕು ಎಂದು ತಮ್ಮ ದಾಸಿಯಾದ ನನಗೆ ಪ್ರಮಾಣಮಾಡಿ ಹೇಳಿದಿರಲ್ಲವೇ? ಹೀಗಿದ್ದ ಮೇಲೆ ಅದೋನೀಯನು ಅರಸನಾದುದು ಹೇಗೆ?’ ಎಂದು ಕೇಳು.
14 : ನೀನು ಅರಸನೊಡನೆ ಮಾತಾಡುತ್ತಿರುವಾಗ ನಾನೂ ಬಂದು ನಿನ್ನ ಮಾತು ಸತ್ಯವೆಂದು ಅನುಮೋದಿಸುವೆನು,” ಎಂದನು.
15 : ಅರಸನು ಬಹಳ ಮುದುಕನಾvದ್ದರಿಂದ, ಶೂನೇಮ್ಯಳಾದ ಅಬೀಷಗಳಿಂದ ಶುಶ್ರೂಷೆ ಪಡೆಯುತ್ತಾ ಒಳಗಿನ ಕೋಣೆಯಲ್ಲಿಯೇ ಇರುತ್ತ ಇದ್ದನು.
16 : ಬತ್ಷೆಬೆ ಅಲ್ಲಿಗೆ ಹೋಗಿ ಅರಸನಿಗೆ ಬಾಗಿ ನಮಸ್ಕರಿಸಿದಳು. ಅರಸನು, “ಏನು, ನಿನಗೇನು ಬೇಕು?” ಎಂದು ಆಕೆಯನ್ನು ವಿಚಾರಿಸಿದನು.
17 : ಆಗ ಆಕೆ, “ನನ್ನ ಒಡೆಯರು ತಮ್ಮ ದೇವರಾದ ಸರ್ವೇಶ್ವರನ ಮೇಲೆ ಆಣೆಯಿಟ್ಟು ತಮ್ಮ ದಾಸಿಯಾದ ನನಗೆ, ‘ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಅರಸನಾಗಬೇಕು; ನಿಶ್ಚಯವಾಗಿ ಅವನೇ ನನ್ನ ಸಿಂಹಾಸನದ ಮೇಲೆ ಕೂತುಕೊಳ್ಳಬೇಕು,’ ಎಂಬುದಾಗಿ ಹೇಳಿದಿರಲ್ಲವೆ?
18 : ಆದರೆ ಈಗ ಅದೋನೀಯನು ನಮ್ಮ ಒಡೆಯರೂ ಅರಸರೂ ಆದ ನಿಮಗೂ ತಿಳಿಯದೆಯೇ ರಾಜನಾಗಿ ಬಿಟ್ಟಿದ್ದಾನೆ.
19 : ಹೋರಿ, ಕುರಿ ಮೊದಲಾದ ಹಲವು ಕೊಬ್ಬಿದ ಪಶುಗಳನ್ನು ಬಲಿಯಾಗಿ ಅರ್ಪಿಸಿದ್ದಾನೆ; ನಿಮ್ಮ ಸೇವಕ ಸೊಲೊಮೋನನನ್ನು ಬಿಟ್ಟು, ಎಲ್ಲಾ ರಾಜಪುತ್ರರನ್ನು, ಯಾಜಕ ಎಬ್ಯಾತಾರನನ್ನು ಹಾಗು ಸೇನಾಪತಿ ಯೋವಾಬನನ್ನು ಔತಣಕ್ಕೆ ಕರೆದಿದ್ದಾನೆ.
20 : ನನ್ನ ಒಡೆಯರೂ ಅರಸರೂ ಆದ ನಿಮ್ಮ ತರುವಾಯ ಸಿಂಹಾಸನದ ಮೇಲೆ ಕುಳಿತುಕೊಳ್ಳತಕ್ಕವರು ಯಾರೆಂಬುದನ್ನು ತಾವೇ ಗೊತ್ತು ಮಾಡಬೇಕೆಂದು ಇಸ್ರಯೇಲರೆಲ್ಲರು ಕುತೂಹಲದಿಂದ ಕಾದುಕೊಂಡಿದ್ದಾರೆ.
21 : ನನ್ನ ಒಡೆಯರೂ ಅರಸರೂ ಆದ ತಾವು ಹಾಗೆ ಮಾಡದೆ, ಸತ್ತು ಪಿತೃಗಳ ಬಳಿಗೆ ಸೇರಿಕೊಂಡರೆ, ನಾನೂ ನನ್ನ ಮಗನೂ ದೋಷಾರೋಪಣೆಗೆ ಗುರಿಯಾಗುತ್ತೇವೆ,” ಎಂದು ಹೇಳಿದಳು.
22 : ಆಕೆ ಹೀಗೆ ಅರಸನ ಸಂಗಡ ಮಾತಾಡುತ್ತಿರುವಾಗಲೇ ಪ್ರವಾದಿ ನಾತಾನನು ಅಲ್ಲಿಗೆ ಬಂದನು.
23 : ಸೇವಕರು ನಾತಾನನು ಬಂದಿರುವ ಸಂಗತಿಯನ್ನು ಅರಸನಿಗೆ ತಿಳಿಸಿದರು. ನಾತಾನನು ಅರಸನ ಮುಂದೆ ಹೋಗಿ ಸಾಷ್ಟಾಂಗ ನಮಸ್ಕಾರ ಮಾಡಿದನು.
24 : “ನನ್ನ ಒಡೆಯರೂ ಅರಸರೂ ಆದ ನೀವು ಅದೋನೀಯನಿಗೆ ಅರಸನಾಗುವುದಕ್ಕೂ ನಿಮ್ಮ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದಕ್ಕೂ ಅಪ್ಪಣೆಕೊಟ್ಟಿರುವಂತೆ ಕಾಣುತ್ತದೆ.
25 : ಅವನು ಇಲ್ಲಿಂದ ಇಳಿದುಹೋಗಿ ಹೋರಿ, ಕುರಿ ಮುಂತಾದ ಹಲವು ಕೊಬ್ಬಿದ ಪಶುಗಳನ್ನು ಬಲಿಯಾಗಿ ಅರ್ಪಿಸಿದ್ದಾನೆ. ರಾಜಪುತ್ರರೆಲ್ಲರನ್ನು, ಸೇನಾಪತಿಗಳನ್ನು ಹಾಗು ಯಾಜಕ ಎಬ್ಯಾತಾರನನ್ನು ಔತಣಕ್ಕೆ ಕರೆದಿದ್ದಾನೆ. ಅವರು ಅವನ ಪಂಕ್ತಿಯಲ್ಲೇ ಅನ್ನಪಾನಗಳನ್ನು ತೆಗೆದುಕೊಂಡು ‘ಅರಸನಾದ ಅದೋನೀಯನು ಚಿರಂಜೀವಿಯಾಗಿ ಇರಲಿ!’ ಎಂದು ಕೂಗುತ್ತಿದ್ದಾರೆ.
26 : ಆದರೆ ಅವನು ನಿಮ್ಮ ಸೇವಕನಾದ ನನ್ನನ್ನು, ಯಾಜಕ ಚಾದೋಕ್, ಯೆಹೋಯಾದಾವನ ಮಗ ಬೆನಾಯ ಎಂಬವರನ್ನು ಹಾಗು ನಿಮ್ಮ ಸೇವಕ ಸೊಲೊಮೋನನನ್ನು ಔತಣಕ್ಕೆ ಕರೆಯಲಿಲ್ಲ.
27 : ಈ ಕಾರ್ಯ ನಮ್ಮ ಒಡೆಯರೂ ಅರಸರೂ ಆದ ನಿಮ್ಮಿಂದಲೇ ನಡೆದಿರುವುದಾದರೆ, ನಿಮ್ಮ ತರುವಾಯ ಸಿಂಹಾಸನದ ಮೇಲೆ ಕುಳಿತುಕೊಳ್ಳತಕ್ಕವರು ಯಾರೆಂಬುದನ್ನು ನಿಮ್ಮ ಸೇವಕನಾದ ನನಗೆ ತಿಳಿಸಬಾರದಾಗಿತ್ತೇ?” ಎಂದು ಹೇಳಿದನು.
28 : ಅರಸ ದಾವೀದನು ಬತ್ಷೆಬೆಯನ್ನು ಕರೆಯಬೇಕೆಂದು ಆಜ್ಞಾಪಿಸಿದನು. ಆಕೆ ಬಂದು ಅರಸನ ಮುಂದೆ ನಿಂತಳು. ಅರಸ ಆಕೆಗೆ,
29 : “ನನ್ನ ಪ್ರಾಣವನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿ ಕಾಪಾಡಿದ ಸರ್ವೇಶ್ವರನಾಣೆ,
30 : ನನ್ನ ತರುವಾಯ ನನ್ನ ಮಗ ಸೊಲೊಮೋನನೇ ಅರಸನಾಗಿ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕು. ನಾನು ನಿನಗೆ ಇಸ್ರಯೇಲ್ ದೇವರಾದ ಸರ್ವೇಶ್ವರನ ಹೆಸರಿನಲ್ಲಿ ಮಾಡಿದ ಈ ಪ್ರಮಾಣವನ್ನು ಈ ದಿನವೇ ನೆರವೇರಿಸುತ್ತೇನೆ,” ಎಂದನು.
31 : ಆಗ ಬತ್ಷೆಬೆ ಅರಸನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದಳು, “ನನ್ನೊಡೆಯರಾದ ದಾವೀದರಸರು ಸುದೀರ್ಘಕಾಲ ಬಾಳಲಿ!” ಎಂದಳು.
32 : ಅನಂತರ ಅರಸ ದಾವೀದನು ತನ್ನ ಸೇವಕರಿಗೆ, “ಯಾಜಕ ಚಾದೋಕ್, ಪ್ರವಾದಿ ನಾತಾನ್ ಹಾಗು ಯೆಹೋಯಾದಾವನ ಮಗ ಬೆನಾಯ ಇವರನ್ನು ಕರೆಯಿರಿ,” ಎಂದು ಆಜ್ಞಾಪಿಸಿದನು.
33 : ಅವರು ಸನ್ನಿಧಿಗೆ ಬರಲು ಅರಸನು ಅವರಿಗೆ, “ನೀವು ನನ್ನ ಸೇವಕರನ್ನು ಕರೆದುಕೊಂಡು, ನನ್ನ ಮಗ ಸೊಲೊಮೋನನನ್ನು ನನ್ನ ಹೇಸರಗತ್ತೆಯ ಮೇಲೆ ಕುಳ್ಳಿರಿಸಿಕೊಂಡು, ಗೀಹೋನ್ ಬಗ್ಗೆಗೆ ಹೋಗಿರಿ.
34 : ಅಲ್ಲಿ ಯಾಜಕ ಚಾದೋಕನು ಹಾಗು ಪ್ರವಾದಿ ನಾತಾನನು ಅವನನ್ನು ಇಸ್ರಯೇಲರ ಅರಸನನ್ನಾಗಿ ಅಭಿಷೇಕಿಸಲಿ. ಅನಂತರ ಕೊಂಬನ್ನೂದಿರಿ. ಎಲ್ಲರು ‘ಅರಸ ಸೊಲೊಮೋನನು ಚಿರಂಜೀವಿಯಾಗಿರಲಿ!’ ಎಂದು ಘೋಷಿಸಲಿ.
35 : ಆಮೇಲೆ ನೀವು ಅವನ ಹಿಂದೆ ಬನ್ನಿ; ಅವನು ಅರಮನೆಯನ್ನು ಪ್ರವೇಶಿಸಿ ನನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ನನಗೆ ಬದಲಾಗಿ ಆಳಬೇಕು. ನಾನು ಇಸ್ರಯೇಲರ ಮತ್ತು ಯೆಹೂದ್ಯರ ಮೇಲೆ ಅವನನ್ನೇ ಅಧಿಪತಿಯನ್ನಾಗಿ ನೇಮಿಸಿದ್ದೇನೆ,” ಎಂದನು.
36 : ಯೆಹೋಯಾದಾವನ ಮಗ ಬೆನಾಯನು ಅರಸನಿಗೆ, “ಹಾಗೆಯೇ ಆಗಲಿ; ನನ್ನ ಒಡೆಯರ ಹಾಗು ಅರಸರ ದೇವರಾದ ಸರ್ವೇಶ್ವರ ಇದನ್ನು ಸ್ಥಿರಪಡಿಸಲಿ
37 : ಸರ್ವೇಶ್ವರಸ್ವಾಮಿ ನನ್ನ ಒಡೆಯರೂ ಅರಸರೂ ಆದ ನಿಮ್ಮ ಸಂಗಡ ಇದ್ದ ಹಾಗೆ ಸೊಲೊಮೋನನ ಸಂಗಡವೂ ಇದ್ದು, ರಾಜ್ಯವನ್ನು ನನ್ನ ಒಡೆಯರೂ ಅರಸರೂ ಆದ ನಿಮ್ಮ ಕಾಲದಲ್ಲಿ ಇದ್ದುದಕ್ಕಿಂತ ಹೆಚ್ಚು ಅಭಿವೃದ್ಧಿ ಮಾಡಲಿ!” ಎಂದು ನುಡಿದನು.
38 : ಆಗ ಯಾಜಕ ಚಾದೋಕ್, ಪ್ರವಾದಿ ನಾತಾನ್ ಹಾಗು ಯೆಹೋಯಾದಾವನ ಮಗ ಬೆನಾಯ ಎಂಬವರು ‘ಕೆರೇತ್ಯ’, ‘ಪೆಲೇತ್ಯ’ ಎಂಬ ಕಾವಲು ದಂಡುಗಳನ್ನು ತೆಗೆದುಕೊಂಡು, ಸೊಲೊಮೋನನನ್ನು ಅರಸ ದಾವೀದನ ಹೇಸರಗತ್ತೆಯ ಮೇಲೆ ಕುಳ್ಳಿರಿಸಿ, ಗೀಹೋನಿಗೆ ಕರೆದು ಕೊಂಡು ಹೋದರು.
39 : ಯಾಜಕ ಚಾದೋಕನು ದೇವದರ್ಶನದ ಗುಡಾರದಲ್ಲಿದ್ದ ಎಣ್ಣೆಯ ಕೊಂಬನ್ನು ತೆಗೆದುಕೊಂಡು ಸೊಲೊಮೋನನನ್ನು ಅಭಿಷೇಕಿಸಿದನು. ಕೂಡಲೆ ಕೊಂಬನ್ನೂದುತ್ತಾ ಜನರೆಲ್ಲರು, “ಅರಸನಾದ ಸೊಲೊಮೋನನು ಚಿರಂಜೀವಿಯಾಗಿರಲಿ!” ಎಂದು ಘೋಷಿಸಿದರು.
40 : ತರುವಾಯ ಅವರೆಲ್ಲರು ಅವನನ್ನು ಹಿಂಬಾಲಿಸಿ, ಕೊಳಲೂದುತ್ತಾ ಹರ್ಷಾನಂದದಿಂದ ಆರ್ಭಟಿಸುತ್ತಾ, ಹಿಂದಿರುಗಿ ಬಂದರು. ಅವರ ಜಯಕಾರದ ಕೂಗು ಭೂಮಿಯನ್ನೇ ನಡುಗಿಸುವಂತಿತ್ತು!
41 : ಅದೋನೀಯನೂ ಅವನ ಸಂಗಡ ಇದ್ದ ಅತಿಥಿಗಳೂ ಭೋಜನವನ್ನು ಮುಗಿಸುವಷ್ಟರಲ್ಲೇ ಅವರಿಗೆ ಈ ಆರ್ಭಟ ಕೇಳಿಸಿತು. ಕೊಂಬಿನ ಧ್ವನಿ ಕೇಳಿದಾಗ ಯೋವಾಬನು, “ಪಟ್ಟಣದಲ್ಲಿ ಇಂಥ ಗದ್ದಲವೇಕೆ?” ಎಂದು ವಿಚಾರಿಸುತ್ತಿರುವಾಗಲೇ
42 : ಯಾಜಕ ಎಬ್ಯಾತಾರನ ಮಗ ಯೋನಾತಾನನು ಅಲ್ಲಿಗೆ ಬಂದನು. ಅದೋನೀಯನು ಅವನಿಗೆ, “ನಿನ್ನಂಥ ಯೋಗ್ಯಪುರುಷ ಶುಭಸಮಾಚಾರವನ್ನೇ ತಂದಿರಬೇಕು, ಒಳಗೆ ಬಾ,” ಎಂದನು.
43 : ಯೋನಾತಾನನು, “ಶುಭಸಮಾಚಾರವಲ್ಲ! ನವ್ರ್ಮೆಡೆಯನೂ ಅರಸನೂ ಆದ ದಾವೀದನು ಸೊಲೊಮೋನನನ್ನು ಅರಸನನ್ನಾಗಿ ಮಾಡಿದ್ದಾನೆ.
44 : ಯಾಜಕ ಚಾದೋಕ್, ಪ್ರವಾದಿ ನಾತಾನ್ ಹಾಗು ಯೆಹೋಯಾದಾವನ ಮಗ ಬೆನಾಯ ಇವರನ್ನೂ ಕೆರೇತ್ಯ-ಪೆಲೇತ್ಯರನ್ನೂ ಅರಸರು ಅವನ ಜೊತೆಯಲ್ಲಿ ಕಳುಹಿಸಿದ್ದಾರೆ. ಅವರು ಅವನನ್ನು ಅರಸನ ಹೇಸರಗತ್ತೆಯ ಮೇಲೆ ಕುಳ್ಳಿರಿಸಿದ್ದಾರೆ
45 : ಯಾಜಕ ಚಾದೋಕನೂ ಪ್ರವಾದಿ ನಾತಾನನೂ ಗೀಹೋನಿನ ಬಳಿಯಲ್ಲಿ ಅವನಿಗೆ ರಾಜಾಭಿಷೇಕ ಮಾಡಿದ್ದಾರೆ. ಅಲ್ಲಿಂದ ಅವರು ಹರ್ಷಾನಂದದಿಂದ ಆರ್ಭಟಿಸುತ್ತಾ ಪಟ್ಟಣಕ್ಕೆ ಬಂದಿದ್ದಾರೆ. ಇದರಿಂದಲೇ ಪಟ್ಟಣದಲ್ಲಿ ಗದ್ದಲವುಂಟಾಗಿದೆ; ನೀವು ಕೇಳಿದ ಆರ್ಭಟವು ಇದೇ.
46 : ಇದಲ್ಲದೆ, ಸೊಲೊಮೋನನು ರಾಜಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ.
47 : ಅರಸ ದಾವೀದನ ಸೇವಕರು ನಮ್ಮ ಒಡೆಯನೂ ಅರಸನೂ ಆದ ದಾವೀದನ ಮುಂದೆ ಬಂದು, ‘ನಿಮ್ಮ ದೇವರು ನಿಮ್ಮ ಹೆಸರಿಗಿಂತಲೂ ಸೊಲೊಮೋನನ ಹೆಸರನ್ನು ಪ್ರಸಿದ್ಧಿಗೆ ತರಲಿ! ರಾಜ್ಯವನ್ನು ನಿಮ್ಮ ಕಾಲದಲ್ಲಿ ಇದ್ದುದಕ್ಕಿಂತ ಅವನ ಕಾಲದಲ್ಲಿ ಹೆಚ್ಚು ಅಭಿವೃದ್ಧಿಗೊಳಿಸಲಿ!’ ಎಂದು ಅವನನ್ನು ಹರಸಿದ್ದಾರೆ. ಅರಸನು ತನ್ನ ಹಾಸಿಗೆಯ ಮೇಲೆ ಬಿದ್ದುಕೊಂಡು,
48 : ‘ನಾನು ಕಣ್ಣಾರೆ ಕಾಣುವಂತೆ ಇಂದು ನನ್ನ ಸಿಂಹಾಸನಕ್ಕೆ ಒಬ್ಬ ಉತ್ತರಾಧಿಕಾರಿಯನ್ನು ದಯಪಾಲಿಸಿದ ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ ಸ್ತೋತ್ರವಾಗಲಿ!’ ಎಂದು ಹೇಳಿದ್ದಾನೆ,” ಎಂದನು.
49 : ಆಗ ಅದೋನೀಯನಿಂದ ಔತಣಕ್ಕೆ ಆಮಂತ್ರಿತರಾಗಿದ್ದವರೆಲ್ಲರು ಭಯಪಟ್ಟು ತಮ್ಮ ತಮ್ಮ ಮನೆಗಳಿಗೆ ಹೊರಟು ಹೋದರು.
50 : ಅದೋನೀಯನು ಸೊಲೊಮೋನನಿಗೆ ಹೆದರಿ, ಓಡಿಹೋಗಿ ಬಲಿಪೀಠದ ಕೊಂಬುಗಳನ್ನು ಹಿಡಿದನು.
51 : ದೂತರು ಬಂದು ಸೊಲೊಮೋನನಿಗೆ, “ಅದೋನೀಯನು ನಿನಗೆ ಹೆದರಿ ಬಲಿಪೀಠದ ಕೊಂಬುಗಳನ್ನು ಹಿಡಿದುಕೊಂಡಿದ್ದಾನೆ. ಅರಸ ಸೊಲೊಮೋನನು ನನ್ನನ್ನು ಕತ್ತಿಯಿಂದ ಸಂಹರಿಸುವುದಿಲ್ಲವೆಂದು ಈ ದಿನ ನನಗೆ ಪ್ರಮಾಣ ಮಾಡಬೇಕೆಂದು ಬೇಡಿಕೊಳ್ಳುತ್ತಾನೆ,” ಎಂದು ತಿಳಿಸಿದರು.
52 : ಆಗ ಸೊಲೊಮೋನನು, “ಅದೋನೀಯನು ಸತ್ಪುರುಷನಾಗಿ ನಡೆಯುವುದಾದರೆ ಅವನ ಕೂದಲುಗಳಲ್ಲಿ ಒಂದನ್ನೂ ನೆಲಕ್ಕೆ ಬೀಳಗೊಡುವುದಿಲ್ಲ; ಆದರೆ ಅವನಲ್ಲಿ ಕೆಟ್ಟತನ ಕಂಡುಬರುವುದಾದರೆ, ಅವನು ಖಂಡಿತವಾಗಿ ಸಾಯುವನು,” ಎಂದು ಹೇಳಿದನು.
53 : ಆಳುಗಳನ್ನು ಕಳುಹಿಸಿ ಅವನನ್ನು ಬಲಿಪೀಠದ ಬಳಿಯಿಂದ ಕರೆದುತರುವಂತೆ ಮಾಡಿದನು. ಅವನು ಬಂದು, ಅರಸ ಸೊಲೊಮೋನನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಸೊಲೊಮೋನನು ಅವನಿಗೆ ಮನೆಗೆ ಹೋಗಲು ಅಪ್ಪಣೆಕೊಟ್ಟನು.